ಪ್ರತಿದಿನದ ಆರೋಪ-ಪ್ರತ್ಯಾರೋಪಗಳ ನಡುವೆ ಸರ್ಕಾರದ ಕೆಲಸ ಹಳಿಯ ಮೇಲೆ ಸಾಗುತ್ತಿದೆ ಎಂಬುದಕ್ಕೆ ಅವೆಲ್ಲವೂ ಸಾಕ್ಷಿ ಒದಗಿಸಬಹುದು. ಆದರೆ, ಒಟ್ಟು ಕರ್ನಾಟಕಕ್ಕೆ ಅಗತ್ಯವಿರುವ ಮುನ್ನೋಟ, ಪ್ರತಿ ಇಲಾಖೆಯೂ ಜನರ ಪರವಾಗಿ ಕೆಲಸ ಮಾಡುವ ವಿಚಾರದಲ್ಲಿ ಮುಂದಿಡಬೇಕಾದ ಮುನ್ನೋಟಗಳು ಎದ್ದು ಕಾಣುತ್ತಿಲ್ಲ.
ಉಪಚುನಾವಣೆಯ ಗೆಲುವಿನ ಸುತ್ತಮುತ್ತ ಕರ್ನಾಟಕ ಸರ್ಕಾರ ಮತ್ತು ರಾಜ್ಯದ ಕಾಂಗ್ರೆಸ್ ಪಕ್ಷ ಸಂಘಟನೆ ಚುರುಕುಗೊಂಡಂತೆ ಕಾಣುತ್ತಿದೆ. 135 ಶಾಸಕರಿರುವ ಪಕ್ಷದಲ್ಲಿ ಭಿನ್ನಮತ ಹೆಚ್ಚಾಗಬೇಕಿತ್ತು; ಕೇಂದ್ರದಲ್ಲಿ ಅಧಿಕಾರದಲ್ಲಿದ್ದು, ಪ್ರಬಲ ಹೈಕಮಾಂಡ್ ಹೊಂದಿದ್ದು, ರಾಜ್ಯದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿಯಲ್ಲಿ ಒಗ್ಗಟ್ಟಿನ ಹೋರಾಟ ಕಾಣಬೇಕಿತ್ತು. ಆದರೆ, ಇಲ್ಲಿ ಎರಡೂ ತಿರುವು ಮುರುವು ಆಗಿವೆ. ಅದರ ನಡುವೆ, ಕರ್ನಾಟಕ ಸರ್ಕಾರದ ವತಿಯಿಂದ ಆಡಳಿತದ ಮೇಲೆ ಗಮನ ಕೊಟ್ಟು ಹಳಿಯ ಮೇಲೆ ಸಾಗಲು ಹೊರಟಿರುವ ಬೆಳವಣಿಗೆಯೂ ಎದ್ದು ಕಾಣುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷವು ಇದನ್ನು ದೀರ್ಘಕಾಲಿಕವಾಗಿ ಕಾಯ್ದುಕೊಳ್ಳಬೇಕು ಮತ್ತು ಒಳ್ಳೆಯ ಪ್ರಜಾತಂತ್ರದಲ್ಲಿ ವಿರೋಧ ಪಕ್ಷವೂ ಜನಸಾಮಾನ್ಯರ ಬದುಕಿನ ಹಾಗೂ ಅಭಿವೃದ್ಧಿಯ ಸುತ್ತ ಕೇಂದ್ರೀಕರಿಸಬೇಕು.
ಸಿದ್ದರಾಮಯ್ಯನವರ ನೇತೃತ್ವದ ಎರಡನೇ ಅವಧಿಯ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಬಹುಮತವಿತ್ತು. ಆದರೆ, ಆರಂಭದಿಂದಲೂ ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತಿತ್ತು. ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲು ಎರಡನೇ ಅಧಿವೇಶನದವರೆಗೆ ಬಿಜೆಪಿ ಕೂಡ ಎಳೆದಾಡಿತು. ಕಾಂಗ್ರೆಸ್ ಘೋಷಿಸಿ ಜಾರಿಗೆ ತಂದ ಗ್ಯಾರಂಟಿ ಕಲ್ಯಾಣ ಕಾರ್ಯಕ್ರಮಗಳು ಅಭೂತಪೂರ್ವವಾಗಿದ್ದವು. ಎಷ್ಟೇ ಆರ್ಥಿಕ ಹೊರೆ ಎನಿಸಿದರೂ ಗ್ಯಾರಂಟಿ ಕಾರ್ಯಕ್ರಮಗಳು ಮಧ್ಯಮಾವಧಿಯಲ್ಲಿ ರಾಜ್ಯದ ಆರ್ಥಿಕತೆಗೆ ಚೇತರಿಕೆ ತರಲಿದೆ ಮತ್ತು ಜನರಲ್ಲಿ ಫೀಲ್ ಗುಡ್ ಎನಿಸಲಿದೆ ಎಂಬುದರ ಸೂಚನೆ ಇತ್ತು. ಅದು ಮೊದಲ ವರ್ಷದ ಭೀಕರ ಬರ ಮತ್ತು ನಂತರದ ಅತಿವೃಷ್ಟಿಯ ನಡುವೆಯೂ ರಾಜ್ಯದಲ್ಲಿ ಬಿಕ್ಕಟ್ಟು ತಲೆದೋರದಿರಲು ಕಾರಣವಾಗಿತ್ತು. ಹೀಗಿದ್ದೂ, ಲೋಕಸಭಾ ಚುನಾವಣೆಯ ಸಂದರ್ಭದಲ್ಲಾಗಲೀ, ನಂತರದಲ್ಲಾಗಲೀ ಕಾಂಗ್ರೆಸ್ ಒಳಗೇ ಆ ಫೀಲ್ ಗುಡ್ ಇರಲಿಲ್ಲ ಮತ್ತು ಒಟ್ಟಾರೆ ಸರ್ಕಾರಿ ವ್ಯವಸ್ಥೆಯ ಬಗ್ಗೆ ಜನರಲ್ಲಿ ಸದಾಭಿಪ್ರಾಯ ಮೂಡಲಿಲ್ಲ.
ಇದಕ್ಕೆ ಮುಖ್ಯವಾಗಿ ಮೂರು ಕಾರಣಗಳಿವೆ. ಒಂದು, ದುರಾಡಳಿತ ಮತ್ತು ಭ್ರಷ್ಟಾಚಾರದ ಕಾರಣದಿಂದ ಬಿಜೆಪಿಯನ್ನು ದೊಡ್ಡ ಪ್ರಮಾಣದಲ್ಲಿ ಜನರು ತಿರಸ್ಕರಿಸಿದ್ದರು. ಆ ಅಲೆಯಲ್ಲಿ ದೊಡ್ಡ ಬಹುಮತ ಪಡೆದುಕೊಂಡ ರಾಜ್ಯ ಸರ್ಕಾರವು ಒಳ್ಳೆಯ ಆಡಳಿತ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸ್ಪಷ್ಟ ಮುನ್ನೋಟ, ಯೋಜನೆ ಹಾಗೂ ದೃಢತೆ ಹೊಂದಿರಲಿಲ್ಲ. ಈ ವಿಚಾರದ ಹೊಣೆಯನ್ನಂತೂ ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟವೇ ಹೊರಬೇಕು. ಅದರಲ್ಲೂ ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಭ್ರಷ್ಟಾಚಾರವಿದ್ದರೆ ಅಂತಹ ಒಂದು ಸರ್ಕಾರ ಚುರುಕಾಗಿ, ಜನಪರವಾಗಿ ಕೆಲಸ ಮಾಡುವುದು ಬಹಳ ಕಷ್ಟ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | 1991ರ ಕಾನೂನನ್ನು ಕಡೆಗಣಿಸುತ್ತವೆ ಧಾರ್ಮಿಕ ಸ್ಥಳಗಳ ಸಮೀಕ್ಷೆ ಮತ್ತು ದಾವೆಗಳು
ಎರಡು, ಗ್ಯಾರಂಟಿ ಕಾರ್ಯಕ್ರಮಗಳನ್ನು ಸಮರ್ಥವಾಗಿ, ಪರಿಣಾಮಕಾರಿಯಾಗಿ ಮತ್ತು ಎಲ್ಲರಿಗೂ ಮನವರಿಕೆ ಮಾಡಿಕೊಡುವ ರೀತಿಯಲ್ಲಿ ಪ್ರಚಾರಕ್ಕೆ ತೆಗೆದುಕೊಂಡು ಹೋಗಲಿಲ್ಲ. ಕರ್ನಾಟಕದಂತಹ ಒಂದು ಸರ್ಕಾರ 50 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಯಾವುದಾದರೂ ಒಂದು ಯೋಜನೆಗೆ ಖರ್ಚು ಮಾಡಬಾರದು. ಮಾಡಿದ ಮೇಲೆ ಅದರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅನುಕೂಲ ರಾಜ್ಯಕ್ಕೆ ಸಿಗಬೇಕು. ಈ ವಿಚಾರದಲ್ಲೂ ಅರೆಬರೆ ಪ್ರಯತ್ನವೇ ಇತ್ತು.
ಮೂರು, ರಾಜ್ಯದ ಜನರನ್ನು ಅಸಲಿ ವಿಚಾರಗಳಿಂದ ದಿಕ್ಕುತಪ್ಪಿಸಿ ಸುಮಾರು ಆರು ತಿಂಗಳ ಕಾಲ ಅನಗತ್ಯ ಸಂಗತಿಗಳ ಕಡೆ ಬಿಜೆಪಿ ಹಾಗೂ ಅದರ ಮಾಧ್ಯಮ ಯಂತ್ರಾಂಗ ಸುತ್ತಿಸಿತು. ಬಿಜೆಪಿಯ ಪ್ರೊಪಗಾಂಡಾವನ್ನು ಎದುರಿಸುವಲ್ಲಿ ಕಾಂಗ್ರೆಸ್‌ಗಿರುವ ದೌರ್ಬಲ್ಯ ಮತ್ತೊಮ್ಮೆ ಸಾಬೀತಾಯಿತು. ವಕ್ಫ್ ವಿಚಾರದಲ್ಲಾಗಲೀ, ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವುದರಲ್ಲಾಗಲೀ, ಅದಕ್ಕೂ ಮುಂಚೆ ಮುಜರಾಯಿ ಇಲಾಖೆಯಲ್ಲಿ ಬದಲಾವಣೆ ತರುವ ವಿಚಾರದಲ್ಲಿರಲೀ– ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲಿಲ್ಲ. ಬದಲಿಗೆ ಹಿಂಜರಿಯುವ ಸಮಸ್ಯೆ ಕಾಂಗ್ರೆಸ್ ಕಡೆಯಿಂದ ಮತ್ತೊಮ್ಮೆ ಕಂಡುಬಂದಿತು. ತಾನು ಸಾಮಾಜಿಕ ನ್ಯಾಯದ, ಸೌಹಾರ್ದದ, ಸಂವಿಧಾನದ ಆಶಯಗಳ ಪರ ಎನ್ನುವುದನ್ನು ಬಲವಾಗಿ ಮುಂದಿಡುವ ವಿಚಾರದಲ್ಲಿ ದೀರ್ಘಕಾಲಿಕ ಕಾರ್ಯಕ್ರಮ ಹೊಂದಿಲ್ಲದಿರುವುದೂ ಇದಕ್ಕೆ ಕಾರಣ ಎಂದು ಕಾಂಗ್ರೆಸ್ ಅರಿತಂತಿಲ್ಲ.
ಇದೇ ಅವಧಿಯಲ್ಲಿ ವಿರೋಧ ಪಕ್ಷಗಳ ಕಡೆಗೆ ನೋಡಿದರೆ ನಿರಾಶೆಯೇ ಎದ್ದು ಕಾಣುತ್ತದೆ. ಕೆಲವು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಸಕ್ರಿಯವಾಗಿ ಪ್ರಶ್ನೆಯೆತ್ತಿದ್ದು ಸಕಾರಾತ್ಮಕವಾದರೂ, ಉಳಿದಂತೆ ಎತ್ತು ಈಯಿತು ಎಂದರೆ ಕೊಟ್ಟಿಗೆಗೆ ಕಟ್ಟು ಎನ್ನುವ ರೀತಿಯಲ್ಲೇ ಪ್ರತಿಕ್ರಿಯಿಸಿವೆ. ಏನೇ ನಡೆದರೂ, ಮಂತ್ರಿ ರಾಜೀನಾಮೆ ನೀಡಲಿ ಎಂಬ ನಾಲ್ಕು ಸಾಲಿನ ಪ್ರತಿಕ್ರಿಯೆಯಿಂದ ಯಾವ ರಚನಾತ್ಮಕ ವಿರೋಧವೂ ಸಾಧ್ಯವಿಲ್ಲ. ಅದರಲ್ಲೂ ಕೋಮುವಾದಿ ಅಜೆಂಡಾದ ಹೊರತಾಗಿ ಬೇರಿನ್ನೇನೂ ಇಲ್ಲವೆಂಬಂತೆ ವರ್ತಿಸುವ ಬಿಜೆಪಿಗೆ ಈಗ ಜೆಡಿಎಸ್ ಸಹ ತಾಳ ಹಾಕುತ್ತಿದೆ.
ಈ ಎಲ್ಲ ವಿಚಾರಗಳಿಗೂ ತಿರುವು ಬಂದಿದ್ದು ಉಪಚುನಾವಣೆಯ ಫಲಿತಾಂಶದಿಂದ. ಆಡಳಿತ ಪಕ್ಷಕ್ಕೆ ಉಪಚುನಾವಣೆಗಳಲ್ಲಿ ಜಯ ಸಾಮಾನ್ಯವಾದರೂ– ಇಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರಗಳಲ್ಲಿ ದೊಡ್ಡ ಜಯ ಸಾಧಿಸಿದ್ದು ವಿಶೇಷವಾಗಿತ್ತು. ಈ ಜಯಗಳು ಗ್ಯಾರಂಟಿಗಳ ಫಲ, ಕಾಂಗ್ರೆಸ್ ಪ್ರತಿನಿಧಿಸುವ ಸಾಮಾಜಿಕ ಸಮೀಕರಣಕ್ಕೆ ಸಿಕ್ಕ ಗೆಲುವು. ಹಾಗೆಯೇ ಕೋಮುವಾದಕ್ಕಿನ್ನೂ ಪೂರ್ಣ ನೆಲೆ ಕರ್ನಾಟಕದಲ್ಲಿ ಸಿಕ್ಕಿಲ್ಲ ಎಂಬುದರ ಪ್ರತಿಫಲನವಾಗಿಯೂ ಇದ್ದವು ಎಂಬುದನ್ನು ಗಮನಿಸಬೇಕು. ವಾಸ್ತವದಲ್ಲಿ, ಇವೆಲ್ಲವೂ ಕಾಂಗ್ರೆಸ್‌ನ ಮೂಲ ರಾಜಕಾರಣಕ್ಕೆ ಪೂರಕವಾಗಿದ್ದವು.
ಆದರೆ, ಈ ಗೆಲುವುಗಳು ಎಷ್ಟರಮಟ್ಟಿಗೆ ಕರ್ನಾಟಕಕ್ಕೆ ಒಳ್ಳೆಯದು ಮಾಡುತ್ತದೆ ಎಂಬುದು– ಕಾಂಗ್ರೆಸ್ ಎಷ್ಟರಮಟ್ಟಿಗೆ ಆತ್ಮವಿಶ್ವಾಸ ಪಡೆದುಕೊಂಡು ಒಳ್ಳೆಯ ಆಡಳಿತ ಮತ್ತು ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯ ಕಡೆಗೆ ಗಮನ ಹರಿಸುತ್ತದೆ ಎಂಬುದರ ಮೇಲೆ ನಿಂತಿದೆ. ಹಾಗೆ ನೋಡಿದರೆ, ಈ ಸರ್ಕಾರದಲ್ಲಿ ಹಲವಾರು ಸಂಗತಿಗಳು ಸಕಾರಾತ್ಮಕ ದಿಕ್ಕಿನಲ್ಲೇ ಚಲಿಸಿವೆ. ಅಂತಹ ದೊಡ್ಡ ಪಟ್ಟಿಯನ್ನೇ ನೀಡಬಹುದು.
ಈಗಲೂ ಇಡೀ ದೇಶಕ್ಕಿಂತ ಆರ್ಥಿಕ ಅಭಿವೃದ್ಧಿಯ ವಿಚಾರದಲ್ಲಿ ಕರ್ನಾಟಕವು ಮುನ್ನಡೆಯನ್ನೇ ಸಾಧಿಸಿದೆ. ಮುಖ್ಯಮಂತ್ರಿಗಳು ಆಗಿಂದಾಗ್ಗೆ ಆದಾಯ ತರುವ ಇಲಾಖೆಯ ಸಭೆಗಳನ್ನು ನಡೆಸುತ್ತಲೇ ಇರುವುದು ಅವರ ದೈನಂದಿನ ಕಾರ್ಯಕ್ರಮ ಪಟ್ಟಿಯನ್ನು ನೋಡಿದರೆ ತಿಳಿಯುತ್ತದೆ. ನೇಮಕಾತಿಯ ವಿಚಾರದಲ್ಲಿ 542 ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಪತ್ರ ವಿತರಿಸುವ ಹಂತ ತಲುಪಿರುವುದು ಮತ್ತು 1,200 ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಪೂರ್ಣವಾಗಿರುವುದು ಒಳ್ಳೆಯದು ಮತ್ತು ಇದುವರೆಗೆ ಅದರಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿಲ್ಲ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ಐತಿಹಾಸಿಕ ಮಹತ್ವದ್ದಾಗಿದ್ದವು. ಕೇಂದ್ರ ಸರ್ಕಾರದ ವತಿಯಿಂದ ಇರುವ ಸಂಪೂರ್ಣ ತಾರತಮ್ಯದ ಹೊರತಾಗಿಯೂ ಘೋಷಿಸಿದ ಯೋಜನೆಗಳ ಅನುಷ್ಠಾನ ಆಗುತ್ತಿರುವುದು ವಿಶೇಷ. ಮಳೆಯಿಂದ ಉಂಟಾಗಿದ್ದ ಹಾನಿಗೆ ಪರಿಹಾರ ವಿತರಣೆ ಕೊನೆಯ ಹಂತ ತಲುಪಿದಂತೆ ಕಾಣುತ್ತಿದೆ. ಈ ಸಾರಿಯ ಮಳೆಗಾಲದಲ್ಲಿ ಕಂದಾಯ ಇಲಾಖೆ ಸಮರ್ಥವಾಗಿ ಕೆಲಸ ಮಾಡಿದೆ. ಕಂದಾಯ ಇಲಾಖೆಯಲ್ಲಿ ಬಹುದಿನಗಳಿಂದ ರೈತರ ನಿದ್ದೆ ಕೆಡಿಸುತ್ತಿದ್ದ ಪೋಡಿ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ರೂಪಿಸಿರುವ ಯೋಜನೆಯ ಕಾರ್ಯಾನುಷ್ಠಾನ ಪ್ರಾರಂಭವಾಗಿದೆ. ಬಗರ್ ಹುಕುಂ ಮಂಜೂರಾತಿ ಸೇರಿದಂತೆ ಹಲವಾರು ವಿಚಾರಗಳಲ್ಲಿ ಕಂದಾಯ ಸಚಿವರು, ದಕ್ಷ ಅಧಿಕಾರಿಯ ರೀತಿಯಲ್ಲಿ ಬೆನ್ನು ಬಿದ್ದಿರುವುದು ಎದ್ದು ಕಾಣುತ್ತದೆ. ಆ ಇಲಾಖೆಗೆ ದೂರಗಾಮಿ ದೃಷ್ಟಿಯಿಂದ ಕಾಯಕಲ್ಪ ಕಲ್ಪಿಸುವ ನಿಟ್ಟಿನಲ್ಲಿ ಏನಾಗುತ್ತಿದೆ ಎಂಬುದು ಗೊತ್ತಾಗಬೇಕಿದೆ.
ಜಾಗತಿಕ ಹೂಡಿಕೆದಾರರ ಸಮ್ಮೇಳನದ ಪೂರ್ವ ತಯಾರಿ ನಡೆಯುತ್ತಿದ್ದು, ಇದರಿಂದ ಹೂಡಿಕೆದಾರರಿಗಷ್ಟೇ ಅಲ್ಲದೇ, ಕರ್ನಾಟಕದ ಜನರಿಗೆ ಯಾವ ಬಗೆಯ ಲಾಭವಾಗಲಿದೆ, ನಷ್ಟ ಎಷ್ಟು ಕಡಿಮೆ ಆಗಲಿದೆ ಎಂಬುದನ್ನು ಇಲಾಖೆ ಘೋಷಿಸಬೇಕು. ತಂತ್ರಜ್ಞಾನ ಮತ್ತು ನಾವೀನ್ಯತೆಗಳ ವಿಚಾರದಲ್ಲಿ ಐಟಿ-ಬಿಟಿ ಇಲಾಖೆಯ ಕೆಲಸ ಸದ್ದಿಲ್ಲದೇ ನಡೆಯುತ್ತಿದೆ. ಕರ್ನಾಟಕದ ಹೆಮ್ಮೆಯ ನಂದಿನಿಯನ್ನು ನುಂಗಲು ಅಮುಲ್ ಹೊಂಚು ಹಾಕುತ್ತಿದೆಯೆಂಬ ಆತಂಕದ ನಡುವೆಯೂ, ನಂದಿನಿಯನ್ನು ದೆಹಲಿಗೆ ತೆಗೆದುಕೊಂಡು ಹೋಗಲಾಗಿದೆ. ಉದ್ಘಾಟನೆ ಮಾಡಿದ ಕೆಲವೇ ದಿನಗಳಲ್ಲಿ ದಿನವೊಂದಕ್ಕೆ 11 ಸಾವಿರ ಲೀಟರುಗಳಷ್ಟು ನಂದಿನಿ ಹಾಲನ್ನು ದೆಹಲಿಯಲ್ಲಿ ಮಾರಾಟ ಮಾಡಲಾಗುತ್ತಿದೆ.
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಅನುಷ್ಠಾನದ ಕುರಿತ ಸಿದ್ಧತೆಗಳು ಪ್ರಾರಂಭವಾಗಿವೆ; ಬಹಳ ಮುಖ್ಯವಾಗಿ ಅದು ಬಗೆಹರಿಯುವ ತನಕ ಹೊಸ ನೇಮಕಾತಿಯಿಲ್ಲ ಎಂಬ ಸ್ಪಷ್ಟನೆ ಸಿಕ್ಕಿರುವುದು ಸಮುದಾಯಗಳಲ್ಲಿ ವಿಶ್ವಾಸ ಮೂಡಿಸಿದೆ. ಪ. ಜಾತಿ/ ಪ.ಪಂಗಡಗಳಂತೆ ಹಿಂದುಳಿದ ಪ್ರವರ್ಗ-1 ಮತ್ತು ಪ್ರವರ್ಗ-2 ರಲ್ಲಿನ ಸಮುದಾಯಗಳಿಗೆ ಗುತ್ತಿಗೆಯಲ್ಲಿ ಮೀಸಲಾತಿ ಅನುಷ್ಠಾನ ಪ್ರಾರಂಭವಾಗಿದೆ. ಅಲ್ಪಸಂಖ್ಯಾತರಿಗೂ ಅದನ್ನು ವಿಸ್ತರಿಸುವ ಅಗತ್ಯವಿದೆ.
ಆರೋಗ್ಯ ಇಲಾಖೆಯಲ್ಲಿ ರೂಪಿಸಿರುವ ಹಬ್ ಮತ್ತು ಸ್ಪೋಕ್ ಹಾಗೂ ಮನೆ ಬಾಗಿಲಿಗೇ ಸೇವೆಯಂತಹ ಕಾರ್ಯಕ್ರಮಗಳು ಜನರನ್ನು ತಲುಪುತ್ತಿವೆ. ಬಳ್ಳಾರಿ ಬಾಣಂತಿಯರ ಸಾವುಗಳ ವಿಚಾರದಲ್ಲಿ ವಿರೋಧ ಪಕ್ಷಕ್ಕಿಂತ ಮುಂಚೆ ಸರ್ಕಾರವೇ ಎಚ್ಚೆತ್ತುಕೊಂಡಿದೆ. ಮಹಿಳೆಯರಿಗೆ ಮುಟ್ಟಿನ ರಜೆಯಂತಹ ಕ್ರಮಗಳಿಗೆ ಕಾರ್ಮಿಕ ಇಲಾಖೆ ಮುಂದಾಗಿದೆ.
ಇದನ್ನು ಓದಿದ್ದೀರಾ?: ಸಂಸತ್ ಪ್ರವೇಶಿಸಿದ ಪ್ರಿಯಾಂಕಾ ಎಂಬ ಕೋಲ್ಮಿಂಚು: ಬದಲಾಗುವುದೇ ಭಾರತ ರಾಜಕಾರಣ?
ಇಂತಹ ಹಲವಾರು ಸಂಗತಿಗಳ ಪಟ್ಟಿಯನ್ನು ನೀಡಬಹುದು. ಪ್ರತಿದಿನದ ಆರೋಪ-ಪ್ರತ್ಯಾರೋಪಗಳ ನಡುವೆ ಸರ್ಕಾರದ ಕೆಲಸ ಹಳಿಯ ಮೇಲೆ ಸಾಗುತ್ತಿದೆ ಎಂಬುದಕ್ಕೆ ಅವೆಲ್ಲವೂ ಸಾಕ್ಷಿ ಒದಗಿಸಬಹುದು. ಆದರೆ, ಒಟ್ಟು ಕರ್ನಾಟಕಕ್ಕೆ ಅಗತ್ಯವಿರುವ ಮುನ್ನೋಟ, ಪ್ರತಿ ಇಲಾಖೆಯೂ ಜನರ ಪರವಾಗಿ ಕೆಲಸ ಮಾಡುವ ವಿಚಾರದಲ್ಲಿ ಮುಂದಿಡಬೇಕಾದ ಮುನ್ನೋಟಗಳು ಎದ್ದು ಕಾಣುತ್ತಿಲ್ಲ. ಮುಡಾ, ವಕ್ಫ್ ಇತ್ಯಾದಿ ಸಂಗತಿಗಳ ನಡುವೆ– ಇವಕ್ಕೆ ಕೇಂದ್ರೀಕರಿಸುವುದು ಸರ್ಕಾರದ, ಸಚಿವ ಸಂಪುಟದ ಕರ್ತವ್ಯವಾಗಿತ್ತು. ಆಗ ಮಾತ್ರ ಮುಖ್ಯಮಂತ್ರಿಗಳು ಘೋಷಿಸಿರುವ ‘ಕರ್ನಾಟಕವನ್ನು ನಂ.1 ಮಾಡುವ ಗುರಿ’ ತಲುಪಲು ಸಾಧ್ಯ.
ನಂ.1 ಆಗುವುದು ಆರ್ಥಿಕತೆಯಲ್ಲಿ ಮಹಾರಾಷ್ಟ್ರವನ್ನು ಹಿಂದಿಕ್ಕುವುದರಲ್ಲಿ ಮಾತ್ರ ಆಗಬಾರದು. ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದರಲ್ಲೂ ಕರ್ನಾಟಕ ಮುಂದಡಿಯಿಡಬೇಕು. ಆಡಳಿತದ ನಂತರ ಆ ವಿಚಾರಗಳಲ್ಲಿ ಕರ್ನಾಟಕ ಮುಂದಡಿಯಿಡುವ ಎಲ್ಲಾ ಸಾಮರ್ಥ್ಯ ಹೊಂದಿದೆ. ಅದನ್ನು ದುಡಿಸಿಕೊಳ್ಳುವುದು ಆಡಳಿತದ ಚುಕ್ಕಾಣಿ ಹಿಡಿದವರಿಗೆ ಸಾಧ್ಯವಾಗಬೇಕು ಅಷ್ಟೇ. ಮುಂದಿನ ಆರು ತಿಂಗಳಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸಂಪುಟ ಯಾವ ದಿಕ್ಕು ಹಿಡಿಯುತ್ತದೆ ಎಂಬುದರ ಮೇಲೆ ಎಲ್ಲವೂ ನಿರ್ಧಾರವಾಗಲಿದೆ.
