ಸಂವಿಧಾನದ ಬಗ್ಗೆ ತಾವು ನೀಡಿರುವ ಹೇಳಿಕೆಯು ವಿವಾದವಾಗುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೇಜಾವರ ಸ್ವಾಮಿ ವಿಶ್ವಪ್ರಸನ್ನ ತೀರ್ಥರು “ಮಾಧ್ಯಮಗಳು ಸಮಾಜ ಒಡೆಯುವ, ಕಲಹ ಸೃಷ್ಟಿಸುವ ಕೆಲಸ ಮಾಡಬಾರದು” ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸುಳ್ಳು ಹೇಳಿಕೆಯಿಂದಾಗಿ ಈ ವಿವಾದ ಉಂಟಾಗಿದೆ ಎಂದು ಆರೋಪಿಸಿದರು.
ವಕ್ಪ್ ಮಂಡಳಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸನಾತನ ಮಂಡಳಿ ರಚನೆ ಆಗಬೇಕು. ನಮಗೆ ಗೌರವ ತರುವ ಸಂವಿಧಾನ ಜಾರಿಯಾಗಬೇಕು ಎಂದು ಪೇಜಾವರ ಸ್ವಾಮಿ ರಾಜ್ಯಪಾಲರಿಗೆ ಮನವಿ ಮಾಡಿದ್ದರು.
ಈ ಬಗ್ಗೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, “ಪೇಜಾವರ ಶ್ರೀಗಳು ಕೂಡಾ ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡಿದ್ದಾರೆ. ನಮ್ಮ ಸರ್ಕಾರ ಸಂವಿಧಾನ ರಕ್ಷಿಸುವ ಕಾರ್ಯ ಮಾಡುತ್ತಿದೆ. ಸಂವಿಧಾನದ ಬಗ್ಗೆ ಉಡುಪಿಯ ಪೇಜಾವರ ಸ್ವಾಮೀಜಿ ಹೇಳಿಕೆ ನೀಡುವ ಅಗತ್ಯವೇನಿತ್ತು? ಅವರು ಮನುಸ್ಮೃತಿ ಪ್ರತಿಪಾದನೆ ಮಾಡುತ್ತಾರೆ” ಎಂದು ಮುಖ್ಯಮಂತ್ರಿ ಹೇಳಿದ್ದರು.
ಇದನ್ನು ಓದಿದ್ದೀರಾ? ರಾಯಚೂರು | ಪೇಜಾವರ ಸ್ವಾಮಿ ಸಂವಿಧಾನಕ್ಕೆ ಅಗೌರವ; ದೇಶದ್ರೋಹ ಪ್ರಕರಣ ದಾಖಲಿಸಲು ಬಿಎಸ್‌ಪಿ ಆಗ್ರಹ
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪೇಜಾವರ ಸ್ವಾಮಿ “ಜನಗಣತಿಯೇ ಹೇಳುವಂತೆ ಭಾರತ, ಹಿಂದೂಸ್ತಾನ ಹಿಂದೂಗಳು ಬಹುಸಂಖ್ಯಾತರು ಆಗಿರುವ ದೇಶ. ಇಲ್ಲಿ ಹಿಂದೂಗಳ ಭಾವನೆಗಳಿಗೆ ಬೆಲೆ ಕೊಡುವ ಸರ್ಕಾರವನ್ನು ನಾವು ತರಬೇಕು ಎಂದು ಹೇಳಿರುವುದು ನಿಜ. ಆದರೆ ಸಂವಿಧಾನ ಬದಲಾಯಿಸಬೇಕು ಅಥವಾ ಸಂವಿಧಾನ ತಿದ್ದುಪಡಿ ಮಾಡಬೇಕು ಎಂದು ನಾವು ಹೇಳಿಲ್ಲ. ಹಾಗಾಗಿ ಈ ರೀತಿ ಹೇಳಿಕೆ ನೀಡುವುದು (ಸಿಎಂ ಹೇಳಿಕೆ) ಸರಿಯಲ್ಲ” ಎಂದು ಹೇಳಿದರು.
“ಒಂದು ಮತೀಯರನ್ನು ಓಲೈಸುವ ಪ್ರವೃತ್ತಿಯನ್ನು ನಾವು ಅಲ್ಲಲ್ಲಿ ಕಾಣುತ್ತಿದ್ದೇವೆ ಅದು ನಿಲ್ಲಬೇಕು. ಇತರ ಮತೀಯರ ಶ್ರದ್ಧಾ ಕೇಂದ್ರಗಳನ್ನು ಸ್ವತಂತ್ರವಾಗಿ ಬಿಡಲಾಗಿದೆ. ಹಿಂದೂಗಳ ಶ್ರದ್ಧಾ ಕೇಂದ್ರಗಳನ್ನು ತಮ್ಮ ಮುಷ್ಟಿಯಲ್ಲಿ ಇಟ್ಟುಕೊಳ್ಳಲಾಗಿದೆ. ಪೂಜಾರಿಗಳಿಗೆ ಸರಿಯಾದ ವೇತನವಿಲ್ಲ. ನಾನಾ ಕಾರಣಗಳಿಂದ ದೇವಾಲಯದ ಭೂಮಿ ಸರ್ಕಾರದ ಭೂಮಿಯಾಗಿ ಬದಲಾಗುತ್ತಿದೆ. ಇಂತಹ ದ್ವಿಮುಖ ನೀತಿ ಯಾಕೆ” ಎಂದು ಪ್ರಶ್ನಿಸಿದರು.
“ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಂತ ಸಮಾವೇಶ ನಡೆದಿತ್ತು. ಸಂತರು ಸೇರಿ ಲಿಖಿತ ರೂಪದ ನಿರ್ಣಯ ಕೈಗೊಂಡಿದ್ದೆವು. ರಾಜ್ಯಪಾಲರಿಗೆ ನೀಡಿದ ಪ್ರತಿಯಲ್ಲಿ ಸಂವಿಧಾನ ಕುರಿತ ಯಾವುದೇ ಮಾತು ಉಲ್ಲೇಖವಾಗಿಲ್ಲ. ನಾವು ಹೇಳದಿರುವ ಮಾತನ್ನು ಹಬ್ಬಿಸಿ ಜನರು ದಂಗೆ ಎದ್ದಂತೆ ವರ್ತಿಸುತ್ತಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಸಿಎಂ ಈ ರೀತಿ ನಿರಾಧಾರ ಆರೋಪ ಮಾಡಬಾರದು. ಆ ಕುರಿತ ವಿಡಿಯೋ ಕ್ಲಿಪ್ಪಿಂಗ್ ಹಾಗೂ ಲಿಖಿತ ರೂಪದ ಪತ್ರವನ್ನು ಪರಿಶೀಲಿಸಬಹುದು” ಎಂದು ಸ್ಪಷ್ಟನೆ ನೀಡಿದರು.

ಮಾಧ್ಯಮಗಳು ಮತ್ತು ಅಲ್ಲಿರುವವರು ಬಹುತೇಕರು ತಮ್ಮ ಗರ್ಭಗುಡಿಯ ಭಕ್ತರು ಅಲ್ವಾ ಗುರುಗಳೇ ,,ಕಳೆದ ವರ್ಷಗಳಿಂದ ಸಮಾಜದಲ್ಲಿ ಜನರ ಮಧ್ಯೆ ಕಡ್ಡಿಗೀರಿದ ಹಲವಾರು ನಿದರ್ಶನಗಳಿವೆ ಆಗ ತಾವು ಅವರಿಗೆ ಬುದ್ಧಿ ಹೇಳಲೇ ಯಿಲ್ಲ
Neevu Samaja odeyuva kelsa madabaradu swami jiggle….modalu nimma matadalli nadeyuva PANKTHI BEDHA nillisi.