ಮೈಸೂರು | ಘೋಷಣೆಯಾಗೇ ಉಳಿದ ನೈಟ್ ಲೈಫ್; ಜಾರಿ ಮಾಡುವುದನ್ನು ಮರೆತ ಸರ್ಕಾರ

Date:

Advertisements

ರಾಜ್ಯ ಸರ್ಕಾರ ಕಳೆದ ಬಜೆಟ್ ಮಂಡನೆಯಲ್ಲಿ ಮೈಸೂರು ನಗರದ ಪ್ರವಾಸೋಧ್ಯಮ, ವ್ಯಾಪಾರ, ವಹಿವಾಟನ್ನು ಗಮನದಲ್ಲಿರಿಸಿ ‘ನೈಟ್ ಲೈಫ್’ ಜಾರಿ ಮಾಡುವುದಾಗಿ ಹೇಳಿತ್ತು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೆಳೆಯುತ್ತಿರುವ ನಗರ ಮೈಸೂರು ಪ್ರವಾಸಿಗರ ಸ್ವರ್ಗ ಎನಿಸಿರುವ ಮೈಸೂರಿನ ವಹಿವಾಟಿಗೆ ಪೂರಕವಾಗಿ ತಡರಾತ್ರಿ 1ರವರೆಗೆ ವ್ಯಾಪಾರ ವಹಿವಾಟು ನಡೆಸಲು, ಬಾರ್, ರೆಸ್ಟೋರೆಂಟ್ ನಡೆಸಲು ಅನುಮತಿ ನೀಡಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು 24-25ನೇ ರಾಜ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು.

ಬರೋಬ್ಬರಿ ಒಂಬತ್ತು ತಿಂಗಳು ಕಳೆಯುತ್ತ ಬಂದಿದೆ. ಆದರೆ ಸರ್ಕಾರದ ಬಜೆಟ್ ಘೋಷಣೆಯ ಯೋಜನೆ ಜಾರಿಯಾಗಲಿಲ್ಲ ‘ನೈಟ್ ಲೈಫ್’ ಕಲ್ಪನೆ ಪ್ರವಾಸಿಗರಿಗೆ ಅನುವು ಮಾಡುವಲ್ಲಿ ವಿಫಲವಾಗಿದೆ. ಒಂದು ವೇಳೆ ಸರ್ಕಾರ ಹೇಳಿದಂತೆ ನೈಟ್ ಲೈಫ್ ಜಾರಿಯಾಗಿದ್ದೇ ಆಗಿದ್ದಲ್ಲಿ ಮಧ್ಯರಾತ್ರಿ ಒಂದು ಗಂಟೆಯವರೆಗೆ ವ್ಯಾಪಾರ, ವಹಿವಾಟು, ಬಾರ್ ಅಂ‌ಡ್‌ ರೆಸ್ಟೋರೆಂಟ್ ತೆರೆದು ಜನ ಓಡಾಟಕ್ಕೆ ಅವಕಾಶ ಇರುತಿತ್ತು. ಇದರಿಂದ ಪ್ರವಾಸಿಗರು, ಮೈಸೂರಿನ ಚೆಲುವನ್ನು ಆರಾಧಿಸುವ, ಆನಂದಿಸುವ ಜನರಿಗೆ ತಡರಾತ್ರಿವರೆಗೆ ಓಡಾಟಕ್ಕೆ ಮುಕ್ತ ಅವಕಾಶ ಕಲ್ಪಿಸಿದಂತೆ ಆಗುತಿತ್ತು.‌

Advertisements
ಮಹಿಷಾ

ಮೈಸೂರು ಹೇಳಿಕೇಳಿ ಎಲ್ಲರೂ ಇಚ್ಛಿಸುವ, ಬಯಸುವ, ಕೈಬೀಸಿ ತನ್ನತ್ತ ಸೆಳೆಯುವ ಸಾಂಸ್ಕೃತಿಕ ನಗರಿ. ಜತೆಗೆ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವುದು ಅಷ್ಟೇ ಅಲ್ಲ, ಮೈಸೂರಿನ ಮಾರ್ಗಗಳಲ್ಲಿ ಓಡಾಡುವುದೂ ಕೂಡಾ ಪ್ರವಾಸೋದ್ಯಮದ ಭಾಗವಾಗಿದೆ. ಮೈಸೂರಿನಲ್ಲಿ ಸುತ್ತಾಡುವುದು ಆಹ್ಲಾದಕರ ಅನುಭವ. ಯಾರಿಗೂ ಕಿರಿಕಿರಿ ಉಂಟುಮಾಡದೆ, ಮತ್ತೆ ಮತ್ತೆ ಅಡ್ಡಾಡಬೇಕು. ಅದರಲ್ಲೂ ಸರಿಹೊತ್ತಿನಲ್ಲಿ ಚುಮುಚುಮು ಚಳಿಯ ನಡುವೆ ಕುರುಕು ತಿಂಡಿ ಮೆಯ್ಯುತ್ತಾ ಓಡಾಡುವ ಹಿತಾನುಭವ ಅನುಭವಿಸಲು ಬಯಸುತ್ತಾರೆ.

ಇನ್ನೂ ಒಂದೆಜ್ಜೆ ಮುಂದು ಅನ್ನುವಂತೆ ಪ್ರವಾಸಿಗರಿಗೆ, ಮಧ್ಯರಾತ್ರಿಯವರೆಗೆ ನೈಟ್ ಲೈಫ್ ಕಲ್ಪಿಸಿದ್ದೆ ಆಗಿದ್ದರೆ, ಹೋಟೆಲ್, ರೆಸ್ಟೋರೆಂಟ್, ಪ್ರವಾಸೋದ್ಯಮಕ್ಕೆ ಅನುಕೂಲ ವಾತಾವರಣ. ಬೇರೆ ಕಡೆಯಿಂದ ಪ್ರಯಾಣ ಬರುವ ಜನರಿಗೂ ಇದರಿಂದ ಅನುಕೂಲ, ರಾತ್ರಿ ಯಾವುದರ ಲಭ್ಯತೆ ಇಲ್ಲ ಅನ್ನುವ ಕೊರಗಿನಿಂದ ಹೊರಬಂದು ಮಧ್ಯರಾತ್ರಿಯವರೆಗೆ ನಿರಾಳವಾಗಿ ಓಡಾಟ ಮಾಡಬಹುದು.

ಜಿರಾಫೆ

ರಾಜ್ಯ ಸರ್ಕಾರ ʼನೈಟ್ ಲೈಫ್ʼ ಘೋಷಣೆ ಮಾಡಿತು ಜಾರಿ ಮಾಡುವುದಾಗಿ, ಆದರೆ ಈವರೆಗೆ ಆಗಲಿಲ್ಲ. ಪ್ರವಾಸೋದ್ಯಮ ವಿಸ್ತರಣೆಗೂ ಅಡ್ಡಿಯಾಗಿದೆ. ವ್ಯವಹಾರ, ವಹಿವಾಟಿಗೆ ತಡೆಯೊಡ್ಡಿದಂತಾಗಿದೆ. ನೈಟ್ ಲೈಫ್ ಜಾರಿ ಮಾಡುವ ವಿಚಾರದಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿರುವುದರಿಂದ ಪ್ರವಾಸೋದ್ಯಮ ಅವಕಾಶ ಹೆಚ್ಚಿಸಿ, ನಗರದ ಬೆಳವಣಿಗೆ ವಾಣಿಜ್ಯ ಚಟುವಟಿಕೆ, ಪ್ರವಾಸೋದ್ಯಮ ಉತ್ತೇಜನಕ್ಕೆ ಬೇಕೆಂತಲೇ ಅಡ್ಡಿ ಮಾಡುತ್ತಿದ್ದಾರೆ ಅನ್ನುವ ಆರೋಪಗಳೂ ಕೂಡಾ ಎದುರಾಗುತ್ತಿವೆ.

ಮೈಸೂರು ಹೇಳಿ ಕೇಳಿ ಶಾಂತಿ, ಸೌಹಾರ್ದತೆಯ ನಗರ. ಇಲ್ಲಿ ಅಹಿತಕರ ಘಟನೆಗೆ ಅವಕಾಶವಿಲ್ಲ. ಇಲ್ಲಿ ಬರುವವರು ಸಾಂಸ್ಕೃತ ನಗರಿಯ ಆಹ್ಲಾದ ಅನುಭವ ಪಡೆಯಲು, ಮನಸ್ಸಿಗೆ ಮುದಗೊಳ್ಳುವ ರೀತಿಯಲ್ಲಿ ಅವರ ಮನಸ್ಸು ಪಕ್ವತೆಯಿಂದ ಕೂಡಿರುವಾಗ ಜನರ ಓಡಾಟಕ್ಕೆ ಹೆಚ್ಚಿನ ಸಮಯ ನೀಡಬಹುದಿತ್ತು. ಸ್ಥಳೀಯ ಆಡಳಿತದ ಮಾಹಿತಿ ಪಡೆದು ಅಗತ್ಯವಿದ್ದರೆ ಅದಕ್ಕೆ ಕಮಿಟಿ ರಚಿಸಿ, ರಾತ್ರಿ ಸಂಚಾರ, ಓಡಾಟ, ಪ್ರವಾಸೋದ್ಯಮ, ಹೋಟೆಲ್ ಸ್ಥಿತಿಗತಿ ಅವಲೋಕನ ಮಾಡಿ ಜಾರಿ ಮಾಡಬಹುದಿತ್ತು. ಆದರೆ ಅಂತಹ ಕೆಲಸವನ್ನು ಈವರೆಗೆ ರಾಜ್ಯ ಸರ್ಕಾರ ಮಾಡಲೇ ಇಲ್ಲ. ಘೋಷಣೆ ಮಾಡಿ ಕೈಕಟ್ಟಿ ಕುಳಿತಿದೆ.

ಮೈಸೂರು ನೈಟ್‌ ಲೈಫ್‌

ಮೈಸೂರಿನಲ್ಲಿ ಸದ್ಯದ ಮಟ್ಟಿಗೆ ರಾತ್ರಿ 11ರವರೆಗೆ ವಾಣಿಜ್ಯ ವಹಿವಾಟು, ವ್ಯಾಪಾರಕ್ಕೆ ಅನುವು ಮಾಡಲಾಗಿದೆ. ವ್ಯಾಪಾರಿಗಳು,
ಪ್ರವಾಸೋದ್ಯಮದ ಬಹುದಿನದ ಬೇಡಿಕೆಗೆ ಈವರೆಗೆ ಸ್ಪಂದನೆ ಸಿಗಲಿಲ್ಲ. ನೈಟ್ ಲೈಫ್ ಜಾರಿಯಾದರೆ ಮಧ್ಯರಾತ್ರಿ 1ರವರೆಗೂ ಪಬ್, ಬಾರ್ ಮತ್ತು ರೆಸ್ಟೋರೆಂಟ್, ಸ್ಟಾರ್ ಹೋಟೆಲ್ ಸೇರಿದಂತೆ ವಾಣಿಜ್ಯ ಮತ್ತು ವ್ಯಾಪಾರ ನಡೆಸಲು ಅವಕಾಶ ಸಿಗಲಿದೆ. ಇದರಿಂದ ಆರ್ಥಿಕ ಚಟುವಟಿಕೆಗೆ ಉತ್ತೇಜನ ಸಿಗುತ್ತದೆ ಎನ್ನುವುದು ಬಲ್ಲವರ ವಾದ. ಸರ್ಕಾರ ಈ ಹಿನ್ನಲೆಯಲ್ಲಿ ಬಜೆಟ್ ಸಮಯದಲ್ಲಿ ಕೂಡ ಘೋಷಣೆ ಮಾಡಿತ್ತು.

ಹೆಚ್ಚಿನ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ, ಉದ್ಯೋಗಗಳ ಸೃಷ್ಟಿ, ಪ್ರವಾಸಿಗರ ಓಡಾಟ, ಮಧ್ಯರಾತ್ರಿ ಜನಗಳಿಗೆ ಅಗತ್ಯತೆಗೆ ಯಾವುದೇ ತೊಂದರೆಯಗದಂತೆ ವ್ಯವಸ್ಥೆ ಕಲ್ಪಿಸುವ ನಿಲುವು ಅನುಷ್ಠಾನವಾಗದೆ ಭರವಸೆಯಾಗಿ ಉಳಿದುಕೊಂಡಿದೆ.

ಕಾರಂಜಿಕೆರೆ

ಮೈಸೂರಿನಲ್ಲಿ ಸಧ್ಯದ ಪರಿಸ್ಥಿತಿ ರಾತ್ರಿ 11ರವರೆಗೆ ಯಾವುದೇ ಸಮಸ್ಯೆಯಿಲ್ಲ. ಒಂದು ವೇಳೆ ಸಮಯ ಮೀರಿದಾಗ ಪ್ರವಾಸಿಗರಿಗೆ, ಮೈಸೂರಿಗೆ ಬರುವವರಿಗೆ ಊಟಕ್ಕೆ, ಓಡಾಟಕ್ಕೆ ಸಹಜ ವ್ಯವಸ್ಥೆ ಇರದೆ ತೊಂದರೆಗೆ ಸಿಲುಕುತಿದ್ದಾರೆ. ದುಬಾರಿ ಬೆಲೆ ತೆತ್ತು, ಮನ ಬಂದಂತೆ ಸುಲಿಯುವವರ ಪಾಲಿಗೆ ಆಹಾರವಾಗುತ್ತಿರುವುದಂತೂ ಸತ್ಯ. ಇದನ್ನು ತಡೆಯುವ ನಿಟ್ಟಿನಲ್ಲಿ ನೈಟ್ ಲೈಫ್ ಜಾರಿಯಾಗಬೇಕಿತ್ತು ಅನ್ನುತ್ತಾರೆ ಪ್ರವಾಸಿಗರು.

ಹೋಟೆಲ್ ಮಾಲೀಕ ಹರ್ಷರಾಜ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮೈಸೂರಿಗೆ ದೇಶ ವಿದೇಶಗಳಿಂದ ಪ್ರವಾಸಿಗರು ಬರುವುದರಿಂದ ಸ್ಥಳೀಯವಾಗಿ ವಹಿವಾಟಿನ ಉತ್ತೇಜನಕ್ಕೆ ಅವಕಾಶವಾಗುವ ನಿಟ್ಟಿನಲ್ಲಿ ಜಾರಿಯಾಗಬೇಕಿದ್ದ ನೈಟ್ ಲೈಫ್ ನನೆಗುದಿಗೆ ಬಿದ್ದಿದೆ. ಸರ್ಕಾರ ಕಳೆದ ಬಜೆಟ್‌ನಲ್ಲಿ ಮೈಸೂರಿನಲ್ಲಿ ನೈಟ್ ಲೈಫ್ ಜಾರಿ ಮಾಡುವ ಕುರಿತು ಘೋಷಣೆ ಮಾಡಿತ್ತು. ಆದರೆ ಅದನ್ನು ಸರ್ಕಾರ ತೀರ್ಮಾನ ಕೈಗೊಳ್ಳಬೇಕು. ಮೈಸೂರಿನ ಹಿತ ದೃಷ್ಟಿಯಿಂದ ಉದ್ಯಮಗಳ ಬೆಳವಣಿಗೆ, ಅಗತ್ಯತೆಗೆ ಬೆಲೆ ಕೊಟ್ಟು ನಿರ್ಧಾರ ಕೈಗೊಳ್ಳಬೇಕಿತ್ತು” ಎನ್ನುತ್ತಾರೆ.

ಅರಮನೆಯ ಒಳಭಾಗ

“ಮೈಸೂರು ನಗರ ವ್ಯಾಪ್ತಿಯಲ್ಲಿ ರಾತ್ರಿ 1ರವರೆಗೆ ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಬೇಕು. ಇದರಿಂದ ವಾಹನ ಚಾಲಕರಿಗೆ ಅನುಕೂಲವಾಗುತ್ತದೆ. ಮೈಸೂರಿಗೆ ಬರುವ ಪ್ರಯಾಣಿಕರಿಗೂ ಸಾರಿಗೆ ತೊಂದರೆಯಾಗುವುದಿಲ್ಲ. ದುಪ್ಪಟ್ಟು ಸುಲಿಗೆ ಮಾಡುವುದನ್ನು ತಡೆಯಬಹುದು. ಇದರಿಂದ ಆಟೋ ಚಾಲಕರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು” ಎನ್ನುತ್ತಾರೆ ಆಟೋ ಚಾಲಕ ದೀಪು.

“ಮೈಸೂರಿನಲ್ಲಿ ತಡ ರಾತ್ರಿ ಆದರೂ ಸಹ ಪ್ರಯಾಣಿಕರು,ಪ್ರವಾಸಿಗರು ಬರುವುದರಿಂದ ರಾತ್ರಿ 11 ಗಂಟೆಯ ನಂತರ ಊಟಕ್ಕೆ ಓಡಾಟಕ್ಕೆ ಕಷ್ಟವಾಗುತ್ತದೆ. ಇದನ್ನ ಗಮನದಲ್ಲಿಟ್ಟುಕೊಂಡು ಮೈಸೂರಿನ ಅಭಿವೃದ್ಧಿಗೆ ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾಗಿ ನೈಟ್ ಲೈಫ್ ಜಾರಿ ಮಾಡಬೇಕು” ಎಂದು ಟ್ರಾವೆಲ್ಸ್ ಮಾಲೀಕ ಅಲ್ತಾಫ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

“ಮೈಸೂರಿನ ಸೊಬಗನ್ನು ಕಣ್ತುಂಬಿಕೊಳ್ಳುವ ಸಮಯದಲ್ಲಿ ಜನ ಓಡಾಟ ಮಾಡುತ್ತಿರುವ ಸಮಯದಲ್ಲಿ ರಾತ್ರಿಯಾದರೆ ಸಾಕು ಬೀದಿಬದಿ ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳಿಗೆ, ಚಿಕ್ಕಪುಟ್ಟ ಅಂಗಡಿ ಮುಂಗಟ್ಟುಗಳಿಗೆ ಬಂದ್ ಮಾಡುವಂತೆ ಹೇಳ್ತಾರೆ. ಇದರಂತೆ ವ್ಯಾಪಾರ ಮಾಡುವ ಹೊತ್ತಲ್ಲಿ ನಾವು ಮನೆಗೆ ಹೋಗಬೇಕು. ಇದರಿಂದ ನಮ್ಮ ಹೊಟ್ಟೆ ಮೇಲೆ ಹೊಡೆದಂಗೆ ಅಲ್ವಾ” ಎನ್ನುತ್ತಾರೆ ಬೀದಿ ಬದಿ ವ್ಯಾಪಾರಿ ಅನುಸೂಯಮ್ಮ.

ಕಾರಂಜಿ

ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ಸೂರಜ್ ಮಾತನಾಡಿ, “ನಾವು ಕಂಪನಿ ಕೆಲಸ ಮುಗಿಸಿ ರಾತ್ರಿ ಸಮಯ ಹೊರಗೆ ಬರ್ತೀವಿ, ಕೆಲಸ ಮಾಡಿ ಸಕಾಗಿರುತ್ತದೆ. ಏನಾದ್ರೂ ತಿನ್ನಬೇಕು, ಸ್ವಲ್ಪ ಸಮಯ ಕಳೆಯಬೇಕು, ಇಲ್ಲ ಮನೆ ತಲುಪಲು ವಾಹನ ಹುಡುಕುವ ಸಮಸ್ಯೆ ಎದುರಾಗುತ್ತದೆ. ನಮ್ಮದೇ ವಾಹನ ಇದ್ದೆ ಪರ್ವಾಗಿಲ್ಲ, ಇಲ್ಲಾಂದ್ರೆ ಓಡಾಟಕ್ಕೂ ರಾತ್ರಿ ಸಮಯ ಅನಾನುಕೂಲವಾಗುತ್ತೆ. ನೈಟ್ ಲೈಫ್ ಜಾರಿಯಾದರೆ, ನಮಗೂ ನಿರಾಳ. ಸ್ವಲ್ಪ ಸಮಯವಾದರೂ ಮೈಸೂರಿನ ಓಡಾಟ ಖುಷಿ ಕೊಡುತ್ತೆ. ಇದರ ಬಗ್ಗೆ ಆದಷ್ಟು ಬೇಗ ಸರ್ಕಾರ ತೀರ್ಮಾನ ಮಾಡಲಿ” ಎಂದರು.

ರಾಜ್ಯದಲ್ಲಿ ಮೊಟ್ಟ ಮೊದಲಿಗೆ ನೈಟ್ ಲೈಫ್ ಜಾರಿಯಾಗಿರುವುದು ಬೆಂಗಳೂರಿನಲ್ಲಿ. ಅದರಲ್ಲೂ ಕೋಟ್ಯಂತರ ಜನ ವಾಸಿಸುವ, ಓಡಾಟ ನಡೆಸುವ ಮಹಾನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಬಂದಿಲ್ಲ. ಅದರ ಸದುಪಯೋಗವಾಗುತ್ತಿದೆ. ರಾತ್ರಿ ಪ್ರಯಾಣಿಕರಿಗೆ ನೈಟ್ ಲೈಫ್ ಅನುಕೂಲವಾಗಿದೆಯೇ ಹೊರತು, ಅದರಿಂದ ತೊಂದರೆಯಾಗಿಲ್ಲ. ಓಡಾಟಕ್ಕೆ ವಾಹನಗಳು, ಹೋಟೆಲ್ ಲಭ್ಯ ಇರುವುದರಿಂದ ಜನರಿಗೂ ಭಯವಿಲ್ಲ, ಓಡಾಟವೂ ಕಷ್ಟವೆನಿಸಿಲ್ಲ. ಮೈಸೂರು ಮಹಾನಗರ ಆದರೂ ಕೂಡಾ ಕೋಟಿಗಟ್ಟಲೆ ಸಂಖ್ಯೆಯಲ್ಲಿ ಜನಸಂಖ್ಯೆಯಿಲ್ಲ. ಇರುವುದು ಲಕ್ಷಗಟ್ಟಲೆ ಸಂಖ್ಯೆಯಲ್ಲಿ. ಇನ್ನ ಬೆಂಗಳೂರಿನಂತೆ ದೊಡ್ಡ ಮಟ್ಟದ ಟ್ರಾಫಿಕ್, ವಾಹನದ ಕಿರಿಕಿರಿ ಸಧ್ಯಕ್ಕೆ ಇಲ್ಲ. ಇಲ್ಲಿ ನೈಟ್ ಲೈಫ್ ಜಾರಿ ಮಾಡಿದರೆ ನಿರ್ವಹಣೆಯು ಸರಾಗ, ಬರುವ ಪ್ರಯಾಣಿಕರಿಗೆ, ಪ್ರವಾಸಿಗರಿಗೆ ವಹಿವಾಟು, ಉದ್ಯಮಕ್ಕೆ ಉತ್ತೇಜನ ಸಿಗುತ್ತೆ.

ಈ ಸುದ್ದಿ ಓದಿದ್ದೀರಾ? ಧಾರವಾಡ | ಡಿ. 17ರಂದು ಒಳಮೀಸಲಾತಿ ವಿಂಗಡಣೆ ವಿರೋಧಿಸಿ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ

ಕಾನೂನು ಸುವ್ಯವಸ್ಥೆ ಮೈಸೂರಿನಲ್ಲಿ ನಿರ್ವಹಣೆ ಹೇಗೆ ಇರಬೇಕು ಎನ್ನುವುದನ್ನು ಪೊಲೀಸ್ ಇಲಾಖೆ ಅಧಿಕಾರಿಗಳ ಜತೆ, ಸರ್ಕಾರ ಚರ್ಚೆ ನಡೆಸಿ ತೀರ್ಮಾನ ಮಾಡಬಹುದು. ಸರ್ಕಾರ ನೈಟ್ ಲೈಫ್ ಜಾರಿ ಮಾಡುವ ಘೋಷಣೆ ಮಾಡಿ, ಇನ್ನೂ ಅನುಷ್ಠಾನ ಮಾಡದೇ ಇರುವುದು ನನೆಗುದಿಗೆ ಬಿದ್ದಂತೆ ಭಾಸವಾಗುತ್ತಿದೆ. ಈಗಲಾದರು ಸರ್ಕಾರ ಹೇಳಿದಂತೆ ನೈಟ್ ಲೈಫ್ ಮೈಸೂರಿನಲ್ಲಿ ಜಾರಿ ಮಾಡುವುದೇ ಎಂಬುದನ್ನು ಕಾದುನೋಡಬೇಕು.

WhatsApp Image 2023 09 02 at 8.42.26 PM
ಮೋಹನ್ ಜಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X