ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಬಗ್ಗೆ ವಿಜಯಪುರದ ಶಾಸಕ ಬಸನಗೌಡ ಪಾಟಿಲ್ ಯತ್ನಾಳ್ ಅವಹೇಳನಕಾರಿಯಾಗಿ ಮಾತನಾಡಿರುವುದರಿಂದ ಕೂಡಲೇ ಶಾಸಕ ಸ್ಥಾನದಿಂದ ವಜಾಗೊಳಿಸಿ, ಶಿಸ್ತು ಕಾನೂನು ಕ್ರಮ ಜರುಗಿಸಬೇಕು ಎಂದು ಬಸವದಳ ಸಂಘಟನೆಯಿಂದ ಪ್ರತಿಭಟನೆ ನಡೆಸಿದರು.
ಗಂಗಾವತಿ ನಗರದ ಬಸ್ ನಿಲ್ದಾಣದ ಸರ್ಕಲ್‌ನಲ್ಲಿ ಯತ್ನಾಳ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕುವ ಮೂಲಕ ಘೋಷಣೆ ಕೂಗಿ ಖಂಡಿಸಿದರು.
“ವಿಜಯಪುರದ ಶಾಸಕ ಬಸನಗೌಡ ಪಾಟಿಲ್ ಯತ್ನಾಳ್ ಇತ್ತೀಚೆಗೆ ತಮ್ಮ ಪಕ್ಷದ ವತಿಯಿಂದ ಬೀದರ್‌ನಲ್ಲಿ ವಕ್ಫ್ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡುತ್ತ, ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಲಿಂಗೈಕ್ಯದ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿ, ಬಸವಣ್ಣನವರಿಗೆ ಅಪಮಾನವೆಸಗಿದ್ದಾರೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಘೋಷಣೆಯಾಗೇ ಉಳಿದ ನೈಟ್ ಲೈಫ್; ಜಾರಿ ಮಾಡುವುದನ್ನು ಮರೆತ ಸರ್ಕಾರ
“ಬಸನಗೌಡ ಪಾಟೀಲ್ ಯತ್ನಾಳ್ ವಕ್ಫ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು, ಎಲ್ಲರೂ ದಂಗೆ ಏಳಬೇಕು. ಇಲ್ಲದಿದ್ದರೆ ಬಸವಣ್ಣ ಹೊಳೆಗೆ ಹಾರಿದಂತೆ ಹಾರಬೇಕಾಗುತ್ತದೆ, ಇಲ್ಲವೇ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಬೇಕಾಗುತ್ತದೆಂದು ವಿವಾದಾತ್ಮಕ ಹೇಳಿಕೆ ನೀಡಿರುವುದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಯತ್ನಾಳ್ ಹೇಳಿಕೆಯು ಬಸವಣ್ಣನವರ ಬಗ್ಗೆ ಹಗುರವಾಗಿ ಕೆಳಮಟ್ಟದ ವ್ಯಕ್ತಿತ್ವವನ್ನು ತೋರಿಸಿದ್ದು, ಇವರ ವಿರುದ್ಧ ಶಿಸ್ತು ಕಾನೂನು ಕ್ರಮ ಕೈಗೊಂಡು, ಇವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು” ಎಂದು ಆಗ್ರಹಿಸಿದರು.
ಈ ವೇಳೆ ದಿಲೀಪ ಕುಮಾರ್ , ವೀರೇಶ್ ಆಸರೆಡ್ಡಿ , ಕೆ ವೀರೇಶಪ್ಪ , ಹೆಚ್ ಮಲ್ಲಿಕಾರ್ಜುನ ಇನ್ನಿತರರು ಉಪಸ್ಥಿತರಿದ್ದರು
