ಬಾಣಂತಿಯರ ಸಾವು | ವ್ಯವಸ್ಥೆಯೇ ಮಾಡಿದ ಕೊಲೆ; ಸರ್ಕಾರ ಹೊರುವುದೇ ಹೊಣೆ?

Date:

Advertisements

ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಏಳು ಮಂದಿ ಬಾಣಂತಿಯರಿಗೆ ನೀಡಿದ ರಿಂಗರ್‌ ಲ್ಯಾಕ್ಟೇಟ್‌ ದ್ರಾವಣ ಐವರ ಜೀವಕ್ಕೆ ಆಪತ್ತು ತಂದಿದೆ ಎಂದು ಆಂತರಿಕ ತನಿಖಾ ವರದಿ ಹೇಳಿದೆ. ಸಿಸೇರಿಯನ್‌ ಮಾಡುವಾಗ ನೀಡಿದ ಔಷಧಿ ಅವರ ಜೀವವನ್ನೇ ಬಲಿ ಪಡೆದಿದೆ. ಆಗ ತಾನೇ ಜನಿಸಿದ ಮಗು ಅಮ್ಮನ ಲಾಲನೆ- ಪಾಲನೆ, ಪ್ರೀತಿಯ ಬಿಸಿಯಪ್ಪುಗೆ ಇವೆಲ್ಲದರಿಂದಲೂ ವಂಚಿತವಾಗಿದೆ. ಇದಕ್ಕೆ ಯಾರು ಹೊಣೆ?

ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೇವಲ 15 ದಿನಗಳ ಅಂತರದಲ್ಲಿ ಐವರು ಬಾಣಂತಿಯರು ಸಾವಿನ ಮನೆ ಸೇರಿದ್ದಾರೆ. ಇದಕ್ಕೆ ಕಾರಣವೇನು ಎಂದು ತನಿಖೆ ನಡೆಸಿದ ಆಂತರಿಕ ಸಮಿತಿಯ ವರದಿಯಲ್ಲಿ ಆಘಾತಕಾರಿ ಅಂಶವೊಂದು ಹೊರಬಿದ್ದಿದೆ. ಬಾಣಂತಿಯರ ಆರೋಗ್ಯ ಸುಧಾರಣೆಗಾಗಿ ಕೊಟ್ಟ ಔಷಧಿಯೇ ಅವರ ಪಾಲಿಗೆ ವಿಷವಾಗಿದೆ. ಔಷಧಿಯಿಂದ ಸಾಯೋದಂದ್ರೆ ಅದು ಕೊಲೆಗೆ ಸಮ. ಇದು ಕರ್ನಾಟಕದಂತಹ ಮುಂದುವರಿದ ರಾಜ್ಯದಲ್ಲಿ ಆಗಿರೋದು ಆತಂಕಪಡುವ ಸಂಗತಿ. ನಮ್ಮ ಸರ್ಕಾರಗಳಿಗೆ ಆರೋಗ್ಯ ಕ್ಷೇತ್ರದ ಬಗ್ಗೆ ಇರುವ ನಿರ್ಲಕ್ಷ್ಯವನ್ನು ಈ ಪ್ರಕರಣ ಎತ್ತಿ ತೋರಿಸುತ್ತಿದೆ.

ಬಳ್ಳಾರಿ ಆಸ್ಪತ್ರೆಯಲ್ಲಿ ನವೆಂಬರ್‌ 7ರಿಂದ 11ರವರೆಗೆ ಸಿಸೇರಿಯನ್‌ಗೆ ಒಳಗಾದ ಏಳು ಮಂದಿ ಬಾಣಂತಿಯರಿಗೆ ನೀಡಿದ ರಿಂಗರ್‌ ಲ್ಯಾಕ್ಟೇಟ್‌ ದ್ರಾವಣ ಐವರ ಜೀವಕ್ಕೆ ಆಪತ್ತು ತಂದಿದೆ ಎಂದು ಆಂತರಿಕ ವರದಿ ಹೇಳಿದೆ. ಬಸಿರು, ಬಾಣಂತನ ಕಾಯಿಲೆಯಲ್ಲ, ಆದರೆ ದೇಹ ಅತ್ಯಂತ ಸೂಕ್ಷ್ಮ ಪರಿಸ್ಥಿತಿಯಲ್ಲಿರುವ ಸಮಯವದು. ಅದಕ್ಕೆ ʼಬಸುರಿ-ಬಾಣಂತಿಯರ ಆರೈಕೆ’ ಅನ್ನೋದು. ಆರೈಕೆಯ ಸಮಯದಲ್ಲಿ ಸಣ್ಣದೊಂದು ಎಡವಟ್ಟು ನಡೆದರೂ ದೇಹ ಅದನ್ನು ಸ್ವೀಕರಿಸಲು ಅಥವಾ ಸಹಿಸಲು ಶಕ್ತವಾಗಿರುವುದಿಲ್ಲ. ಅಂಥದ್ದರಲ್ಲಿ ಸಿಸೇರಿಯನ್‌ ಮಾಡುವಾಗ ನೀಡಿದ ಔಷಧಿ ಅವರ ಜೀವವನ್ನೇ ಬಲಿ ಪಡೆದರೆ ಅದಕ್ಕಿಂತ ದೊಡ್ಡ ನಿರ್ಲಕ್ಷ್ಯದ ಉದಾಹರಣೆ ಬೇರೆ ಸಿಗಲಾರದು. ಅಮ್ಮನ ಹೊಟ್ಟೆಯಿಂದ ಹೊರ ಬಂದ ಮಗು ಅಮ್ಮನ ಆರೈಕೆ, ಪೋಷಣೆ, ಪ್ರೀತಿಯ ಬಿಸಿಯಪ್ಪುಗೆ ಎಲ್ಲದರಿಂದಲೂ ವಂಚಿತವಾಗಿದೆ. ಇದಕ್ಕೆ ಯಾರು ಹೊಣೆ?

Advertisements
ಬಳ್ಳಾರಿ ಜಿಲ್ಲಾಸ್ಪತ್ರೆ 1

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ತವ್ಯಲೋಪ ಎಸಗಿದ್ದಕ್ಕಾಗಿ ಡ್ರಗ್ ಕಂಟ್ರೋಲರ್ ಉಮೇಶ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಬಾಣಂತಿಯರ ಸಾವಿನ ಕುರಿತಾಗಿ ನಡೆದ ಉನ್ನತ ಸಭೆಯಲ್ಲಿ ರಿಂಗರ್‌ ಲ್ಯಾಕ್ಟೇಟ್‌ ದ್ರಾವಣ ಪೂರೈಸಿರುವ ಪಶ್ಚಿಮ ಬಂಗಾಳದ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಕಂಪೆನಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಇಷ್ಟು ಮಾಡಿದರೆ ಸಾಕೇ? ಎಂದೆಂದಿಗೂ ಇಂತಹ ದುರ್ಘಟನೆ ಆಗದಂತೆ ತಡೆಯಲು ಸರ್ಕಾರದ ಮುಂದೆ ಯಾವ ಪರಿಣಾಮಕಾರಿ ಕಾರ್ಯಯೋಜನೆಯಿದೆ? ಇದು ಯುದ್ಧಕಾಲದ ಶಸ್ತ್ರಭ್ಯಾಸದಂತೆ ಆಗಬಾರದು, ನಿರಂತರವಾಗಿ ಇಡೀ ಆರೋಗ್ಯ ವ್ಯವಸ್ಥೆಯ ಮೇಲೆ ನಿಗಾ ಇಡಬೇಕಾದ ಜವಾಬ್ದಾರಿಯನ್ನು ಸರ್ಕಾರ ಹೊರಬೇಕು.

ಏನಿದು ರಿಂಗರ್‌ ಲ್ಯಾಕ್ಟೇಟ್ ಸಲ್ಯೂಷನ್ ?: ಆಪರೇಷನ್‌ ವೇಳೆ ರೋಗಿಗಳ ದೇಹದಲ್ಲಿ ದ್ರಾವಣದ ಕೊರತೆ ಉಂಟಾದಾಗ ಸರಿಯಾದ ರಕ್ತ ಪರಿಚಲನೆ ಮತ್ತು ರಕ್ತದೊತ್ತಡ ನಿರ್ವಹಣೆಗಾಗಿ ರಿಂಗರ್‌ ಲ್ಯಾಕ್ಟೇಟ್ ಸಲ್ಯೂಷನ್ ನೀಡಲಾಗುತ್ತದೆ.

ಔಷಧಿ ಮಾಫಿಯಾ ಶಂಕೆ
ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣವನ್ನು ಪಶ್ಚಿಮ ಬಂಗಾಳದ M/s Paschim Banga Pharmaceutical, (Farista Vanijya) ಕಂಪನಿ ತಯಾರಿಸಿ ರಾಜ್ಯಕ್ಕೆ ಪೂರೈಸುತ್ತಿದೆ. ಕಂಪನಿ ಒಟ್ಟು 192 ಬ್ಯಾಚ್​ಗಳಲ್ಲಿ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣವನ್ನು ಪೂರೈಸಿತ್ತು. ಪೂರೈಕೆಯಾದ 192 ಬ್ಯಾಚ್​ಗಳಲ್ಲಿ 22 ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣವನ್ನು ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್‌ಹೌಸಿಂಗ್ ​ಐದು ತಿಂಗಳ ಹಿಂದೆಯೇ ​ಪರೀಕ್ಷೆಗೆ ಒಳಪಡಿಸಿದೆ. ಆಗ, ಈ ದ್ರಾವಣ ಉತ್ತಮ ಗುಣಮಟ್ಟ ಹೊಂದಿಲ್ಲ ಎಂದು ವರದಿ ನೀಡಿದೆ.‌

ಕೂಡಲೇ ಆರೋಗ್ಯ ಇಲಾಖೆ ಈ ದ್ರಾವಣವನ್ನು ಬಳಸದಂತೆ ಸುತ್ತೋಲೆ ಹೊರಡಿಸಿದೆ ಮತ್ತು 192 ಬ್ಯಾಚ್​ಗಳನ್ನು ತಡೆ ಹಿಡಿದು, ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿತ್ತು. ಕಪ್ಪು ಪಟ್ಟಿಗೆ ಸೇರಿಸುತ್ತಿದ್ದಂತೆ, ಕಂಪನಿ ಚಿತ್ರದುರ್ಗದ ಜೆಎಂಎಫ್​ಸಿ ನ್ಯಾಯಾಲಯದ ಮೆಟ್ಟಿಲೇರುತ್ತದೆ. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವ ಸೆಂಟ್ರಲ್ ಡ್ರಗ್ ಲ್ಯಾಬ್​ (CDL)ದ್ರಾವಣ ಉತ್ತಮ ಗುಣಮಟ್ಟದಿಂದ ಕೂಡಿದ್ದು, ಬಳಕೆಗೆ ಯೋಗ್ಯವಾಗಿದೆ ಎಂದು ನೀಡಿರುವ ವರದಿಯನ್ನು ಕಂಪನಿ ಸಲ್ಲಿಸುತ್ತದೆ.

ಇದೇ ವರದಿಯನ್ನು ಕಂಪನಿ ಕರ್ನಾಟಕ ಔಷಧ ನಿಗಮದ ಮುಂದಿಟ್ಟಿತು. ಕೇಂದ್ರ ಸರ್ಕಾರದ ಸೆಂಟ್ರಲ್ ಡ್ರಗ್ ಲ್ಯಾಬ್​ನ ಪಾಸಿಟಿವ್ ವರದಿ ನೀಡಿದ ಮೇಲೆ ರಾಜ್ಯ ಔಷಧಿ ಸರಬರಾಜು ನಿಗಮ ನಿರಾಕರಿಸುವಂತಿರಲಿಲ್ಲ. ಆದರೂ, ಮುಂಜಾಗ್ರತೆ ದೃಷ್ಟಿಯಿಂದ ನೆಗೆಟಿವ್ ರಿಪೋರ್ಟ್ ಇದ್ದ 22 ಬ್ಯಾಚ್​ಗಳನ್ನ ಬಿಟ್ಟು ಉಳಿದ ಕೆಲವು ಬ್ಯಾಚ್​ಗಳ ದ್ರಾವಣವನ್ನು ಔಷಧಿ ಸರಬರಾಜು ನಿಗಮ ಆಸ್ಪತ್ರೆಗಳಿಗೆ ಪೂರೈಸಿತ್ತು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಕೆಳಹಂತದ ಕೋರ್ಟ್‌ಗಳು ನೀಡುವ ಆದೇಶವನ್ನು ಹೈಕೋರ್ಟ್‌, ಸುಪ್ರೀಂ ಕೋರ್ಟ್‌ಗಳು ತಡೆ ಹಿಡಿಯೋದು, ರದ್ದುಪಡಿಸೋದು ಮಾಡಿದಂತೆ ಇಲ್ಲೂ, ಒಂದು ಪ್ರಯೋಗಾಲಯ ಕಳಪೆ ಎಂದ ಔಷಧಿಯನ್ನು ಮತ್ತೊಂದು ಪ್ರಯೋಗಾಲಯ ಕಳಪೆಯಲ್ಲ ಎಂದು ಪ್ರಮಾಣಪತ್ರ ನೀಡಿದೆ. ಇದು ಕೊಲೆಗೆ ಪರವಾನಗಿ ನೀಡಿದಂತೆ. ಸರ್ಕಾರಿ ಪ್ರಾಯೋಜಿತ ಕೊಲೆಯಿದು. ಕೇಂದ್ರ ಸರ್ಕಾರ ಈ ಸಾವಿನ ಹೊಣೆ ಹೊರುತ್ತದೆಯೇ?

ಈ ಪ್ರಕರಣದ ಕುರಿತು ಈ ದಿನ.ಕಾಮ್‌ ಜೊತೆಗೆ ಮಾತನಾಡಿದ ಜನಾರೋಗ್ಯ ಚಳವಳಿಯ ಡಾ. ಅಖಿಲಾ ವಾಸನ್‌, “ಇದು ಹಳೇ ವಿಷಯ. ಹೊಸ ಉಪಾಯಗಳು ಬೇಕಿಲ್ಲ. ಇರುವ ವ್ಯವಸ್ಥೆಯಲ್ಲಿ ಅಗತ್ಯ ಇರುವ ಹಣವನ್ನು ಸದ್ಬಳಕೆ ಮಾಡಿದ್ರೆ ಸಾಕು. ಆದರೆ ನ್ಯಾಷನಲ್‌ ಹೆಲ್ತ್‌ ಮಿಷನ್‌ಗೆ ಬರಬೇಕಿರುವ ಅನುದಾನ ಕಡಿತ ಮಾಡುತ್ತಿರುವುದರ ಪರಿಣಾಮ ಈಗ ನಾವು ಕಾಣುತ್ತಿದ್ದೇವೆ. ನರೇಂದ್ರ ಮೋದಿಯವರ ಸರ್ಕಾರ ಪ್ರತಿವರ್ಷವೂ ಅನುದಾನ ಕಡಿತಗೊಳಿಸುತ್ತಿದೆ. ಹೈದರಾಬಾದ್‌ ಕರ್ನಾಟಕದಲ್ಲಿ ಆರೋಗ್ಯ ಪರಿಸ್ಥಿತಿ ಗಂಭೀರವಾಗಿಯೇ ಇದೆ. ಕರ್ನಾಟಕದಲ್ಲಿ ಶಿಶು-ಬಾಣಂತಿಯರ ಮರಣ ಪ್ರಮಾಣ (Metarnal death Rate) ಕಡಿಮೆಯಾಗಿದೆ ಎಂದು ಅಂಕಿಅಂಶಗಳು ತೋರಿಸುತ್ತಿವೆ. ಅದನ್ನು ನಂಬಲಾರದ ಸ್ಥಿತಿ ಬಂದಿದೆ. ಎಲ್ಲವೂ ವ್ಯಾಪಾರೀಕರಣಗೊಂಡಿದೆ. ಹಣ ಎಲ್ಲಿದೆ ಅಲ್ಲಿ ಖಾಸಗಿಯವರು ಇರುತ್ತಾರೆ. ಹೆಲ್ತ್‌ ಅಂಡ್‌ ವೆಲ್‌ನೆಸ್‌ ಕ್ಷೇತ್ರವನ್ನು ಖಾಸಗೀಕರಣ ಮಾಡಿದ್ರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸಂಪೂರ್ಣವಾಗಿ ನಾಶ ಮಾಡಿದಂತಾಗುತ್ತದೆ. ಮತ್ತೆ ಈ ವ್ಯವಸ್ಥೆಯನ್ನು ಬಲಗೊಳಿಸಬೇಕಾದರೆ ಇದಕ್ಕೆ ಕ್ರಾಂತಿಯೇ ಆಗಬೇಕು”. ಎಂದು ಹೇಳುತ್ತಾರೆ.

ಅಖಿಲಾ ವಾಸನ್ 1
ಡಾ ಅಖಿಲಾ ವಾಸನ್‌

“ಸಾಮಾನ್ಯ ನೀತಿಯಲ್ಲಿ ಬದಲಾವಣೆ ತಂದು ನಿಭಾಯಿಸುವುದು ಆಗದ ಮಾತು. ಸರ್ಕಾರವನ್ನು ಬೀಳಿಸುವ ಮಟ್ಟಿಗೂ ಮೆಡಿಕಲ್‌ ಮಾಫಿಯಾ ಬೆಳೆದಿದೆ. ವೈದ್ಯರ ಲಾಬಿಯನ್ನೇ ನೋಡಿದ್ದೇವೆ. ಧರಣಿ ನಡೆಸಿ ಸರ್ಕಾರವನ್ನು ಬಗ್ಗುವಂತೆ ಮಾಡುತ್ತಾರೆ. ಶಾಸಕಾಂಗದಲ್ಲಿ ಒಪ್ಪಿಗೆಯಾಗಿ ಬಂದ ತಿದ್ದುಪಡಿಯನ್ನೂ ವಾಪಸ್‌ ಪಡೆಯುವಂತೆ ಮಾಡಿದ್ದಾರೆ. ಹೈದರಾಬಾದ್‌ ಕರ್ನಾಟಕದಲ್ಲಿ ರಕ್ತಹೀನತೆ ಬಹಳ ದೊಡ್ಡ ಸಮಸ್ಯೆ. 7ಗ್ರಾಂ, 6 ಗ್ರಾಂ ಇರುವುದು ಸರ್ವೇಸಾಮಾನ್ಯ. ನಾವು ಇನ್‌ಸ್ಟಿಟ್ಯೂಷನಲ್‌ ಡೆಲಿವರಿ ಅಂತ ಆಸ್ಪತ್ರೆಗಳಿಗೆ ಕಳಿಸುತ್ತೇವೆ. ಅಲ್ಲಿ ಸರಿಯಾದ ವ್ಯವಸ್ಥೆಯೇ ಇರಲ್ಲ. ವೈದ್ಯರು ಖಾಸಗಿ ಕ್ಲಿನಿಕ್‌ನಲ್ಲಿ ಕೂತಿರ್ತಾರೆ, ತರಬೇತಿನಿರತ ವೈದ್ಯರೇ ರೋಗಿಗಳನ್ನು ನೋಡುತ್ತಾರೆ. ಬ್ಲಡ್‌ ಬ್ಯಾಂಕ್‌ ಕತೆ ಕೇಳೋದೇ ಬೇಡ. ತುರ್ತು ಸಂದರ್ಭದಲ್ಲಿ ಕೈ ಎತ್ತುತ್ತಾರೆ. ಸರ್ಕಾರಿ ಆಸ್ಪತ್ರೆಯ ಈ ಅವ್ಯವಸ್ಥೆ ಖಾಸಗಿ ಆಸ್ಪತ್ರೆಗಳ ಬಗ್ಗೆ ಪಾಸಿಟಿವ್‌ ನರೇಟಿವ್‌ ಬಿಲ್ಡ್‌ ಮಾಡುತ್ತೆ. ಸಹಜವಾಗಿಯೇ ಜನ ಖಾಸಗಿ ಆಸ್ಪತ್ರೆಗಳ ಕಡೆ ಹೋಗುತ್ತಾರೆ” ಎನ್ನುತ್ತಾರೆ ಅವರು.

ಕರ್ನಾಟಕದ ಔಷಧಿ ಪಾಲಿಸಿಯಲ್ಲೇ ಸಮಸ್ಯೆ ಇದೆ: ವಿಜಯ್‌ ಸೀತಪ್ಪ

ಜನಾರೋಗ್ಯ ಚಳವಳಿಯ ವಿಜಯ್‌ ಕುಮಾರ್‌ ಸೀತಪ್ಪ ಮಾತನಾಡಿ, “ಕರ್ನಾಟಕದ ಡ್ರಗ್ ಪಾಲಿಸಿಯಲ್ಲೇ ಸಮಸ್ಯೆ ಇದೆ. ಕರ್ನಾಟಕದಲ್ಲಿ ಮೂರು ಪ್ರದೇಶಗಳಿವೆ. ಕರಾವಳಿ, ಮಲೆನಾಡು, ಬಯಲುಸೀಮೆ. ಮಂಗಳೂರಿಗೆ ಪೂರೈಕೆ ಮಾಡುವ ಔಷಧಿಯನ್ನೇ ಬಳ್ಳಾರಿಗೂ ಪೂರೈಕೆ ಮಾಡ್ತಾರೆ. ಒಂದು ಕಡೆ ಡೆಂಗಿ ಜಾಸ್ತಿ ಇರುತ್ತೆ, ಬೇರೆ ಕಡೆ ಡೆಂಗಿ ಇರಲ್ಲ. ಆದರೆ ಆ ಔಷಧಿ ಎಲ್ಲ ಕಡೆಗೂ ಹೋಗುತ್ತದೆ. ಇದು ರೇಷನ್‌ ತರ ಅಲ್ಲ. ಬಳ್ಳಾರಿಯ ಕಾಯಿಲೆಗಳೇ ಬೇರೆ ಇರುತ್ತದೆ. ತಮಿಳುನಾಡಿನಲ್ಲಿ ಆಯಾ ಪ್ರದೇಶಕ್ಕೆ ಸೂಕ್ತವಾದ ಔಷಧಿ ಪೂರೈಸುವ ವ್ಯವಸ್ಥೆ ಇದೆ.

ಔಷಧಿಯಿಂದ ಸಾಯೋದಂದ್ರೆ, ಅದೂ ಕರ್ನಾಟಕದಲ್ಲಿ ನಾಚಿಕೆಗೇಡಿನ ವಿಚಾರ. ಯಾಕಂದ್ರೆ ನಮ್ಮ ಆರೋಗ್ಯ ವ್ಯವಸ್ಥೆ ಹೆಚ್ಚು ಫಂಕ್ಷನಿಂಗ್‌ ಆಗಿದೆ. ಅಷ್ಟೊಂದು ಕಳಪೆಯಲ್ಲ. ಬಳ್ಳಾರಿಯ ಪ್ರಕರಣದಲ್ಲಿ ಅಧಿಕಾರಿಯ ಅಮಾನತು ಮಾಡಿದ್ರೆ ಸಾಲದು. ಅದು ಪರಿಹಾರವಲ್ಲ. ತಮಿಳುನಾಡಿನ ಮಾದರಿ ಅನುಸರಿಸಬೇಕು. ಅಲ್ಲಿ ಔಷಧಿ ಪೂರೈಕೆ ಮಾಹಿತಿ ವೀಕ್ಲಿ ಅಪ್‌ಡೇಟ್‌ ಆಗುತ್ತದೆ. ಇಲ್ಲಿ ಅಷ್ಟು ಅಪ್‌ಡೇಟ್‌ ಆಗಿಲ್ಲ. ಇದು ವ್ಯವಸ್ಥೆಯೇ ಮಾಡಿದ ಕೊಲೆ. ತಾಯಿ ಮಗು ಸಾಯೋದು ಅದರಲ್ಲೂ, ಐದು ವರ್ಷದೊಳಗಿನ ಮಗು ಸಾಯೋದು ತುಂಬಾ ನಾಚಿಕೆಗೇಡಿನ ಸಂಗತಿ. ಪ್ರಗ್ನೆನ್ಸಿ ಅಂದ್ರೆ ಕಾಯಿಲೆ ಅಲ್ಲ, ಆಗ ಸಾಯುತ್ತಾರೆ ಎಂದ್ರೆ ನಮ್ಮ ರಾಜ್ಯ ತಾಯಿ ಮಗುವನ್ನು ರಕ್ಷಣೆ ಮಾಡಲಾಗದಷ್ಟು ದುರ್ಬಲವೇ ಎಂಬ ಪ್ರಶ್ನೆ ಮೂಡುತ್ತದೆ. ಬಳ್ಳಾರಿ ಪ್ರಕರಣದಲ್ಲಿ ಔಷಧಿ ಪೂರೈಕೆದಾರರು ಮಾತ್ರ ಹೊಣೆಯಲ್ಲ, ಆಸ್ಪತ್ರೆಯ ನಿರ್ವಹಣೆಯ ಹೊಣೆ ಹೊತ್ತವರೂ ಜವಾಬ್ದಾರರು. ಹೆರಿಗೆಯ ಸಮಯದಲ್ಲಿ ಒಬ್ಬ ತಾಯಿ ಮೃತಪಟ್ಟರೂ ಅದು ನಾವು ತಾಯಿಯ ಆರೋಗ್ಯ ರಕ್ಷಣೆಯಲ್ಲಿ ವಿಫಲವಾಗಿದ್ದೇವೆ ಎಂದೇ ಅರ್ಥ. ಸರ್ಕಾರ ಈ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು” ಎಂದು ಅವರು ಆಗ್ರಹಿಸಿದರು.

Metarnal mortality

ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರದಲ್ಲಿರುವ ಮೋದಿ ಸರ್ಕಾರ ನ್ಯಾಷನಲ್‌ ಹೆಲ್ತ್‌ ಮಿಷನ್‌, ಶಿಶು ಅಭಿವೃದ್ಧಿ ಯೋಜನೆ(ಅಂಗನವಾಡಿ)ಗಳಿಗೆ ನೀಡುವ ತನ್ನ ಪಾಲಿನ ಅನುದಾನವನ್ನು ವರ್ಷದಿಂದ ವರ್ಷಕ್ಕೆ ಕಡಿಮೆಗೊಳಿಸುತ್ತಿದೆ. ಆ ಹೊರೆ ರಾಜ್ಯಗಳ ಮೇಲೆ ಬೀಳುತ್ತಿದೆ. ಪೌಷ್ಟಿಕ ಆಹಾರ ಪೂರೈಕೆ, ಆರೋಗ್ಯ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಮಾಸಿಕ ಗೌರವ ಧನ ನೀಡುವುದು ಕೂಡಾ ರಾಜ್ಯಗಳಿಗೆ ಕಷ್ಟವಾಗಿದೆ. ಆದರೂ ಅಂಕಿಅಂಶಗಳ ಚಾರ್ಟ್‌ನಲ್ಲಿ ಮಾತ್ರ ನಾಲ್ಕೈದು ಸಂಖ್ಯೆಯ ಮರಣ ಪ್ರಮಾಣ ಇಳಿಕೆಯಾಗಿರುವುದನ್ನೇ ತಮ್ಮ ಸಾಧನೆ ಎಂದು ತೋರಿಸಲು ಪ್ರಧಾನಿ ಮೋದಿಯವರ ಫೋಟೋ ಹಾಕಿ ಪ್ರಚಾರ ನಡೆಸುತ್ತಿದೆ. ಹೆರಿಗೆಯ ಸಂದರ್ಭದ ಸಾವುಗಳ ಪ್ರಮಾಣದಲ್ಲಿ ಭಾರೀ ಇಳಿಮುಖವಾಗಿದೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಆದರೆ ಒಕ್ಕೂಟ ಸರ್ಕಾರ ಪ್ರತಿ ಬಜೆಟ್‌ನಲ್ಲೂ ರಾಜ್ಯಗಳಿಗೆ ಎನ್‌ಎಚ್‌ಎಂ ಅಡಿ ನೀಡುವ ಅನುದಾನವನ್ನು ಕಡಿತಗೊಳಿಸುತ್ತಿದೆ. ಹಾಗೊಂದು ವೇಳೆ ಸುಧಾರಣೆಯಾಗಿದ್ದರೆ ಆ ಹೆಗ್ಗಳಿಕೆ ರಾಜ್ಯಗಳದ್ದು.

ಬಾಣಂತಿಯರ ಸಾವಿನ ಪ್ರಮಾಣವು ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲೇ ಹೆಚ್ಚು. ಅದರಲ್ಲೂ ಹಿಂದುಳಿದ ಪ್ರದೇಶವಾದ ಹೈದರಾಬಾದ್‌ ಕರ್ನಾಟಕದಲ್ಲಿ ಅತಿಹೆಚ್ಚು. ರಕ್ತಹೀನತೆ, ಶುಚಿತ್ವದ ಕೊರತೆ, ಮೌಢ್ಯ, ಅಪೌಷ್ಟಿಕತೆಯ ಕಾರಣದಿಂದಾಗಿ ತಾಯಂದಿರು ಮರಣವನ್ನಪ್ಪುತ್ತಿದ್ದಾರೆ. ಪ್ರಸವದ ನಂತರ ರಕ್ತಹೀನತೆ, ಹೆಚ್ಚು ರಕ್ತಸ್ರಾವ, ರಕ್ತದೊತ್ತಡ, ಸೋಂಕು ಮುಂತಾದ ಸಮಸ್ಯೆ ಎದುರಾಗುತ್ತಿದೆ. ಆಸ್ಪತ್ರೆಗಳಲ್ಲಿಯೂ ಬೆಡ್‌ ಸೇರಿದಂತೆ ಮೂಲಭೂತ ಸೌಕರ್ಯಗಳ ಸಮಸ್ಯೆಯಿಂದ ಹೆರಿಗೆಯ ಎರಡು, ಮೂರನೇ ಹಂತದ ಆರೈಕೆಗೂ ಮುನ್ನ ಮನೆಗೆ ಕಳಿಸುವ ಕಾರಣ ಸಾವುಗಳ ಪ್ರಮಾಣ ಹೆಚ್ಚುತ್ತಿದೆ ಎಂದು ಆರೋಗ್ಯ ಕಾರ್ಯಕರ್ತರು ಹೇಳುತ್ತಾರೆ. ಸರ್ಕಾರ ಅಂಗನವಾಡಿಗಳ ಮೂಲಕ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರವಾದ ಹಾಲಿನಪುಡಿ, ಮೊಟ್ಟೆ, ಬೇಳೆ, ಅಕ್ಕಿ ನೀಡುತ್ತಿದೆ. ಅಂಗನವಾಡಿಗಳಲ್ಲಿ ಬಿಸಿಯೂಟ ನೀಡಲಾಗುತ್ತಿದೆ. ಆದರೂ ತಾಯಂದಿರು ರಕ್ತಹೀನತೆ, ನಿಶ್ಯಕ್ತಿಯಿಂದ ಬಳಲುತ್ತಿದ್ದಾರೆ ಎಂಬುದು ಗಂಭೀರ ವಿಚಾರ. ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರದತ್ತ ಹೆಚ್ಚು ಕೆಲಸ ಮಾಡಬೇಕಿದೆ.

ದಾವಣಗೆರೆಯ ಜಿಲ್ಲಾ ಆಸ್ಪತ್ರೆಯಲ್ಲೂ 8 ತಿಂಗಳ ಅವಧಿಯಲ್ಲಿ 23 ಮತ್ತು ಖಾಸಗಿ ಆಸ್ಪತ್ರೆಯಲ್ಲಿ 5 ಬಾಣಂತಿಯರು ಮೃತಪಟ್ಟಿದ್ದಾರೆ. ಜನವರಿಯಿಂದ ನವೆಂಬರ್ ತನಕ 83 ನವಜಾತ ಶಿಶುಗಳು ಆಸ್ಪತ್ರೆಯಲ್ಲಿ ಮೃತಪಟ್ಟಿವೆ ಎಂದು ವರದಿಯಾಗಿದೆ. ಬಳ್ಳಾರಿಯ ಪ್ರಕರಣ ಒಂದೇ ಅಲ್ಲ, ಇಂಥವು ದಿನವೂ ಆಗುತ್ತಲೇ ಇದೆ. ಆದರೆ, ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ. ‌

ಸರ್ಕಾರ ನೀಡುವ ಅಂಕಿಅಂಶಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿ ಮರಣಹೊಂದಿದವರ ವಿವರಗಳಷ್ಟೇ ಇರುತ್ತವೆ. ಸಣ್ಣಪುಟ್ಟ ಖಾಸಗಿ ನರ್ಸಿಂಗ್‌ಹೋಂ/ ಆಸ್ಪತ್ರೆಗಳಲ್ಲಿ ಸಾಯುತ್ತಿರುವ ಬಾಣಂತಿಯರ, ಹಸುಗೂಸುಗಳ ಲೆಕ್ಕವನ್ನೂ ಸರ್ಕಾರ ಪಡೆಯಲು ವ್ಯವಸ್ಥೆ ಇದೆ. ಆದರೆ ಅದನ್ನು ಮರೆ ಮಾಚಲಾಗುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ವಿದೇಶದ ಪ್ರಜೆಗಳೂ ಹೃದಯ, ಕಿಡ್ನಿ ಸಂಬಂಧಿಸಿದ ಚಿಕಿತ್ಸೆಗೆ ಕರ್ನಾಟಕಕ್ಕೆ ಬರುತ್ತಿದ್ದಾರೆ. ಹೆಲ್ತ್‌ ಟೂರೀಸಂನಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಇಂತಹ ರಾಜ್ಯದಲ್ಲಿ ತಾಯಿ -ಮಕ್ಕಳ ಸಾವುಗಳನ್ನು ತಡೆಯಲು ಸಾಧ್ಯವಾಗದಿದ್ದರೆ ನಾಚಿಕೆಗೇಡು ಅಲ್ಲವೇ? ಔಷಧಿ, ವೈದ್ಯರ ನಿರ್ಲಕ್ಷ್ಯ ಮುಂತಾದ ಕಾರಣಕ್ಕೆ ಪ್ರಾಣಗಳು ಅಗ್ಗವಾಗಬಾರದು. ಅದು ರಾಜ್ಯದ ಬೆಳವಣಿಗೆಯ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ.
****
ಬಾಣಂತಿಯರ ಸಾವಿನ ಪ್ರಕರಣದ ಬಗ್ಗೆ ಬಳ್ಳಾರಿ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ ಬಸವರೆಡ್ಡಿ ಅವರಿಂದ ಪ್ರತಿಕ್ರಿಯೆ ಪಡೆಯಲು ಈ ದಿನ.ಕಾಮ್‌ ಪ್ರಯತ್ನಿಸಿತ್ತು. ಮೊಬೈಲ್‌ ಸಂಪರ್ಕಕ್ಕೆ ಸಿಕ್ಕರೂ ಮಾತನಾಡಲು ನಿರಾಕರಿಸಿದರು. ತುರ್ತುಸಭೆಯ ಕಾರಣ ಹೇಳಿ ಮತ್ತೆ ಸಂಪರ್ಕಿಸುವಂತೆ ತಿಳಿಸಿದ್ದರು. ಆದರೆ ಮತ್ತೆ ಎಷ್ಟೇ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿಲ್ಲ. ಅವರ ಮೊಬೈಲ್‌ ಸಂಖ್ಯೆ Sri Maruthi clinic ಎಂಬ ಹೆಸರು ತೋರಿಸುತ್ತಿದೆ. ತಾವೇ ಸ್ವಂತ ಕ್ಲಿನಿಕ್‌ ಇಟ್ಟುಕೊಂಡು ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಅಲ್ಲಿಗೆ ಕರೆಸಿಕೊಂಡು ಚಿಕಿತ್ಸೆ ನೀಡುತ್ತಾರೆ ಎಂಬುದು ಸರ್ಕಾರಿ ವೈದ್ಯರುಗಳ ಮೇಲಿನ ಆರೋಪವಷ್ಟೇ ಅಲ್ಲ ವಾಸ್ತವ. ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ರೋಗಿಗಳು, ಇಡೀ ಆಸ್ಪತ್ರೆಯ ಕಾರ್ಯಕ್ಷಮತೆಯ ಮೇಲೆ ನಿಗಾ ಇರಿಸಬೇಕಾದ ಜವಾಬ್ದಾಯುತ ಸ್ಥಾನದಲ್ಲಿರುವ ವೈದ್ಯರು ಕ್ಲಿನಿಕ್‌ ನಡೆಸುತ್ತಿದ್ದಾರೆ ಎಂಬುದನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ.

ಇದನ್ನೂ ಓದಿ ಈ ದಿನ ಸಂಪಾದಕೀಯ | ಒಬ್ಬರು ಕರೆ ಕೊಡುವುದು, ಇನ್ನೊಬ್ಬರು ಗೇಲಿ ಮಾಡುವುದು, ಏನಿದು ಮಕ್ಕಳಾಟ?

ಸರ್ಕಾರಿ ಆರೋಗ್ಯ ವ್ಯವಸ್ಥೆ ಅಂತಲ್ಲ, ಹಾಸ್ಟೆಲ್‌, ಶಾಲೆ, ಕಾಲೇಜು, ಸಾರಿಗೆ… ಹೀಗೆ ಎಲ್ಲೇ ಏನಾದರೊಂದು ದುರಂತ ಸಂಭವಿಸಿದರೆ ತಕ್ಷಣ ದೊಡ್ಡ ಸುದ್ದಿಯಾಗಿ, ಸರ್ಕಾರ ಸಂಬಂಧಪಟ್ಟ ಅಧಿಕಾರಿಯನ್ನೋ, ವೈದ್ಯ, ವಾರ್ಡನ್‌, ಶಿಕ್ಷಕರನ್ನೋ ಅಮಾನತು ಮಾಡಿ ಅವರ ಮೇಲೆ ತನಿಖೆಗೆ ಆದೇಶ ನೀಡೋದು ಮಾಮೂಲಿ ಪ್ರಕ್ರಿಯೆಯಾಗಿದೆ. ಇದು ಮಾಡಲೇ ಬೇಕಿರುವ ಪ್ರಾಥಮಿಕ ಕೆಲಸ. ಆದರೆ, ಆ ನಂತರ ಏನಾಯಿತು? ಮತ್ತೆ ಅಂತಹದ್ದೇ ದುರಂತ ಮರುಕಳಿಸುತ್ತದೆ. ಮತ್ತೆ ಅದೇ ಕ್ರಮ. ಸರ್ಕಾರಿ ಆಸ್ಪತ್ರೆಗಳ ಕಳಪೆ ನಿರ್ವಹಣೆ, ಅವ್ಯವಸ್ಥೆ, ಲಂಚಗುಳಿತನ, ವೈದ್ಯರ ಬೇಜವಾಬ್ದಾರಿತನ, ಹಣ ದುರುಪಯೋಗ ಇದು ಇಂದಿನ ಕತೆಯಲ್ಲ. ಇಂದಿಗೆ ಕೊನೆಯಾಗುವ ಕತೆಯೂ ಅಲ್ಲ. ಆದರೆ ಇದಕ್ಕೆ ಬಲಿಯಾಗುವುದು ಮಾತ್ರ ಬಹುತೇಕ ಬಡವರು.

ಯಾರದ್ದೇ ಆಗಲಿ ಜೀವದ ಜೊತೆಗೆ ಚೆಲ್ಲಾಟವಾಡುವುದು ಅಕ್ಷಮ್ಯ. ಪರಮ ಪಾಪದ ಕೆಲಸ. ಬಳ್ಳಾರಿಯ ಪ್ರಕರಣವನ್ನು ಸರ್ಕಾರ ಸವಾಲಾಗಿ ಸ್ವೀಕರಿಸಬೇಕು. ಬಡವರ ಜೀವ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಬಲಿಯಾಗದಂತೆ ತಡೆಯುವ ಗ್ಯಾರಂಟಿಯನ್ನು ಸಿದ್ದರಾಮಯ್ಯ ಸರ್ಕಾರ ನೀಡಬೇಕಿದೆ.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X