ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತ, ದ್ವೇಷ ಭಾಷಣ ಮಾಡುತ್ತ ಸಮಾಜದ ಸ್ವಾಸ್ಥ್ಯ ಹಾಳುಗೆಡುವುತ್ತಿರುವಂತಹ ಮನಸುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತರಪರ, ಪ್ರಗತಿಪರ, ಬಸವಪರ, ಸಂವಿಧಾನಪರ ಸಂಘಟನೆಗಳು ಹಾಗೂ ಕಾರ್ಯಕರ್ತರು ವಿಜಯಪುರ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.
“ಬೆಂಗಳೂರಿನಲ್ಲಿ ನವೆಂಬರ್ 23ರಂದು ನಡೆದ ವಿಶ್ವ ಹಿಂದೂ ಪರಿಷತ್ತಿನ ಸಂತರ ಸಭೆಯಲ್ಲಿ ವಿಶ್ವ ಒಕ್ಕಲಿಗರ ಪೀಠದ ಚಂದ್ರಶೇಖರನಾಥ ಸ್ವಾಮಿ, ʼದೇಶದಲ್ಲಿರುವ ಮುಸ್ಲಿಮರ ಮತದಾನದ ಹಕ್ಕನ್ನು ಕಿತ್ತುಕೊಳ್ಳಬೇಕುʼ ಅಂತ ಹೇಳುತ್ತಾರೆ. ಅದರಂತೆ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಕೂಡಾ, ʼಮುಸ್ಲಿಮರು ಭಾರತ ದೇಶದ ಅವಿಭಾಜ್ಯ ಅಂಗವಾಗಿದ್ದಾರೆʼ ಅನ್ನುವ ಮೂಲಕ ಸೌಹಾರ್ದತೆ ಕೆಡಿಸುವ ಮಾತನಾಡಿದ್ದಾರೆ. ಭಾರತದ ಮೂಲ ನಿವಾಸಿಗಳಾದ ಮುಸ್ಲಿಮರು ಸ್ವಾತಂತ್ರ್ಯ ಹೋರಾಟ ಕಾಲದಿಂದ ಇಂದಿನವರೆಗೆ ದೇಶದ ಅಭಿವೃದ್ಧಿಯ ಸಲುವಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆಂಬುದು ಸ್ವಾಮೀಜಿಯವರ ಪ್ರಶ್ನೆಗೆ ಬಂದಿಲ್ಲವೆಂದ ಮೇಲೆ ಅವರು ಯಾವ ಲೋಕದಲ್ಲಿ ಬಾಳುತ್ತಿದ್ದಾರೆ” ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
“ಇದೇ ಸಂತ ಸಮಾವೇಶದಲ್ಲಿ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮಿ, ʼನಮಗೆ ಗೌರವ ಕೊಡುವ ಸಂವಿಧಾನ ಬೇಕು. ಈ ಸಂವಿಧಾನ ಹಿಂದೂಗಳ ಪರವಾಗಿಲ್ಲʼ ಎನ್ನುವ ಸಂವಿಧಾನ ವಿರೋಧಿ ಹಾಗೂ ಉದ್ದಟತನದ ಹೇಳಿಕೆ ನೀಡಿದ್ದಾರೆ. ವಕ್ಫ್ ಹೋರಾಟದ ನೆಪದಲ್ಲಿ ಬೀದರ್‌ನಲ್ಲಿ ನಡೆದ ಸಭೆಯೊಂದರಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟಿಲ್ ಯತ್ನಾಳ್, ʼಬಸವಣ್ಣನವರು ಹೊಳೆಗೆ ಹಾರಿ ಸತ್ತಂಗೆ ಸಾಯಬೇಕಾಗುತ್ತದೆʼ ಎಂಬ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಇದು ಅಸಂಖ್ಯಾತ ಬಸವಾನುಯಾಯಿಗಳ ಮನಸ್ಸನ್ನು ನೋಯಿಸಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಹಲವು ಧರ್ಮಗಳು, ಹಲವು ಭಾಷೆಗಳು, ಸಾವಿರಾರು ಜಾತಿಗಳು ಮತ್ತು ಸಂಸ್ಕೃತಿಯನ್ನು ಹೊಂದಿರುವ ಭಾರತ ದೇಶವನ್ನು ಒಂದಾಗಿ ಬೆಸೆಯುವ ದಿಸೆಯಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ವಿಶಿಷ್ಟವಾದ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನದ ಕಾರಣದಿಂದಾಗಿಯೇ ಎಲ್ಲರಿಗೂ ಸಮಾನ ಹಕ್ಕುಗಳು ದೊರೆತಿವೆ. ಜಗತ್ತಿನಲ್ಲೇ ಶ್ರೇಷ್ಠವೆನಿಸಿಕೊಂಡ ಭಾರತದ ಸಂವಿಧಾನದ ಮೇಲೆ ಮನುವಾದಿಗಳು ನಿರಂತರವಾಗಿ ಆಕ್ರಮಣ ನಡೆಸಿದ್ದಾರೆ. ಈ ಆಕ್ರಮಣದ ಭಾಗವಾಗಿಯೇ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮಿ, ಒಕ್ಕಲಿಗರ ಪೀಠದ ಚಂದ್ರಶೇಖರ ಸ್ವಾಮಿ ಮತ್ತು ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಗಳು ಸಂವಿಧಾನ ವಿರೋಧಿ ಹಾಗೂ ದೇಶದ್ರೋಹಿ ಹೇಳಿಕೆ ನೀಡಿರುವುದು ಖಂಡನೀಯ” ಎಂದರು.
“ಕರ್ನಾಟದ ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ಸರ್ಕಾರವೇ ಘೋಷಿಸಿರುವ ವಿಶ್ವಗುರು ಬಸವಣ್ಣನವರ ಕುರಿತಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟಿಲ್ ಯತ್ನಾಳ್ ಅವರು ಅವಹೇಳನಕಾರಿ ಹೇಳಿಕೆ ನೀಡಿರುವುದೂ ಕೂಡಾ ಖಂಡನೀಯ. ಸಂವಿಧಾನವಿರೋಧಿ ಶಕ್ತಿಗಳು ಮತ್ತು ಬಸವವಿರೋಧಿ ಮನಸ್ಥಿತಿಯ ಈ ವ್ಯಕ್ತಿಗಳನ್ನು ಅದೇ ಮನಸ್ಥಿತಿಯ ಹಲವು ಸ್ವಾಮಿಗಳು ಮತ್ತು ರಾಜಕೀಯ ಮುಖಂಡರು ಬೆಂಬಲಿರುವುದೂ ಕೂಡ ಖಂಡನಾರ್ಹವಾಗಿದೆ. ಇಂಥಹ ಸಂವಿಧಾನ ಮತ್ತು ಸಮಾನತೆ ವಿರೋಧಿ ವ್ಯಕ್ತಿಗಳ ವಿರುದ್ಧ ಕರ್ನಾಟಕ ಸರ್ಕಾರವು ಸ್ವಯಂ ಪ್ರೇರಣೆಯಿಂದ ದೇಶದ್ರೋಹಿ ಎಂದು ಪ್ರಕರಣ ದಾಖಲಿಸಬೇಕಿತ್ತು. ಆದರೆ ಸರಕಾರವೂ ಮೌನವಾಗಿರುವುದು, ವಿರೋಧ ಮನಸುಗಳ ಪರವಾಗಿದೆಯೆಂಬ ಭಾವನೆ ಸಾರ್ವಜನಿಕರಲ್ಲಿ ಮೂಡುತ್ತಿದೆ” ಎಂದು ಸರ್ಕಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ತಲಾದಾಯ ಹೆಚ್ಚಳದಲ್ಲಿ ರಾಜ್ಯ ನಂಬರ್ ಒನ್ : ಮುಖ್ಯಮಂತ್ರಿ ಸಿದ್ದರಾಮಯ್ಯ
“ಕಾರಣ ಸರ್ಕಾರವು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ, ಚಂದ್ರಶೇಖರನಾಥ ಸ್ವಾಮಿ, ಶಾಸಕ ಬಸನಗೌಡ ಪಾಟಿಲ್ ಯತ್ನಾಳ್ ಹಾಗೂ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಗಳ ವಿರುದ್ಧ ಕೇಸು ದಾಖಲಿಸಿ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧವೇ ತೀವ್ರವಾದ ಹೋರಾಟ ಮಾಡಬೇಕಾಗುತ್ತದೆ” ಎಂದು ಪ್ರತಿಭಟನಾಕರಾರು ಸರ್ಕಾರವನ್ನು ಎಚ್ಚರಿಸಿದರು.
ಮನಗೂಳಿ ವಿರಕ್ತಮಠದ ವೀರತೀಶಾನಂದ ಸ್ವಾಮೀಜಿ, ಬಸವಕಲ್ಯಾಣ ಬೇಲೂರು ಮಠದ ಸಂಗನ ಬಸವ ಸ್ವಾಮೀಜಿ, ಆರಾಮೇಲ ವಿರಕ್ತಮಠದ ಜಯದೇವ ಮಲ್ಲಿ ಬಮ್ಮ ಸ್ವಾಮೀಜಿ, ಮನಗೂಳಿ ರೇವಣಸಿದ್ದೇಶ್ವರ ಮಠದ ಸೇರ್ಪಯ್ಯ ಸ್ವಾಮೀಜಿ, ಪ್ರಗತಿಪರ ಮುಖಂಡರಾದ ಅನಿಲ ಹೊಸಮನಿ, ಜೆ.ಎಸ್.ಪಾಟೀಲ, ಪ್ರಭುಗೌಡ ಪಾಟೀಲ, ಚೆನ್ನು ಕಟ್ಟಿಮನಿ, ಬಿ.ಎಸ್.ಗಸ್ತಿ ರಾಜಶೇಖರ ಯಾರನಾಳ, ಚಂದ್ರಶೇಖರ ಘಂಟೆಪ್ಪಗೋಳ, ಡಾ.ರವಿ ಬಿರಾದಾರ, ರಮೇಶ ಕವಲಗಿ, ಸಂಜು ಕಾಂಬೊಗಿ, ಶಾಸ್ತ್ರಿ ಹೊಸಮನಿ ಸೇರಿದಂತೆ ಇತರರು ಇದ್ದರು.