ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ದಿನಕಳೆಂದು ಮತ್ತೊಂದು ಮಗದೊಂದು ಆರೋಪಗಳು ಕೇಳಿಬರುತ್ತಿವೆ. ಜಾತಿ ನಿಂದನೆ, ಹನಿಟ್ರ್ಯಾಪ್, ಎಚ್‌ಐವಿ ಸೋಂಕಿತ ರಕ್ತ ಚುಚ್ಚಲು ಸಂಚು ಸೇರಿದಂತೆ ನಾನಾ ಪ್ರಕರಣಗಳಲ್ಲಿ ಆರೋಪಿಯಾಗಿರುವ ಮುನಿರತ್ನ ವಿರುದ್ಧ ಇದೀಗ ಮತ್ತೊಂದು ಆರೋಪ ಕೇಳಿಬಂದಿದೆ. ಬಿಬಿಎಂಪಿಯ ಮಾಜಿ ಸದಸ್ಯೆ (ಕಾರ್ಪೋರೇಟರ್) ಬೆಡ್‌ರೂಮ್‌ನಲ್ಲಿ ಕ್ಯಾಮೆರಾ ಇಡಲು ಯತ್ನಿಸಿದ್ದರು ಎಂದು ಸಂತ್ರಸ್ತೆಯ ಪತಿ ಆರೋಪಿಸಿದ್ದಾರೆ. ಎಸ್‌ಐಟಿ ಮುಂದೆ ದಾಖಲೆ ಸಲ್ಲಿಸಲು ಸಜ್ಜಾಗಿದ್ದಾರೆ.
ತಮ್ಮನ್ನು ಕೊಲೆ ಮಾಡಲು ಮುನಿರತ್ನ ಸಂಚು ಹೂಡಿದ್ದರು. ಕೊಲೆಗೆ ಸುಪಾರಿ ಕೊಟ್ಟಿದ್ದರು ಎಂದು ಆರೋಪಿಸಿ ಶನಿವಾರ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಲಗ್ಗೆರೆಯ ಮಾಜಿ ಕಾರ್ಪೋರೇಟರ್ ಮಂಜುಳಾ ಮತ್ತು ಅವರ ಪತಿ ನಾರಾಯಣಸ್ವಾಮಿ ದೂರು ದಾಖಲಿಸಿದ್ದರು. ಇದೀಗ, ಹನಿಟ್ರ್ಯಾಪ್ ಮಾಡಲು ತಮ್ಮ ಬೆಡ್‌ರೂಮ್‌ನಲ್ಲಿ ಕ್ಯಾಮೆರಾ ಇಡಲು ಮುನಿರತ್ನ ಯತ್ನಿಸಿದ್ದರು ಎಂದು ಮತ್ತೊಂದು ಆರೋಪ ಮಾಡಿದ್ದಾರೆ.
ನಾರಾಯಣಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿದ್ದು, “ನಮ್ಮ ವಿರುದ್ಧ ಮುನಿರತ್ನ ಷಡ್ಯಂತ್ರ ನಡೆಸಿದ್ದಾರೆ. ಅವರ ಷಡ್ಯಂತ್ರಗಳ ವಿಡಿಯೋ ಮತ್ತು ಆಡಿಯೋ ದಾಖಲೆಗಳು ನಮ್ಮ ಬಳಿಯಿವೆ. ನನ್ನ ಪತ್ನಿಯ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಲು ಮುನಿರತ್ನ ಯತ್ನಿಸಿದ್ದರು. ನಮ್ಮ ಬೆಡ್‌ರೂಮ್‌ನಲ್ಲಿ ಕ್ಯಾಮೆರಾ ಇಡಲು ಪ್ರಯತ್ನಿಸಿದ್ದರು” ಎಂದು ಆರೋಪಿಸಿದ್ದಾರೆ.
“ನಮ್ಮ ಮನೆ ಕೆಲಸದವರಿಗೆ ಕೋಟಿ ರೂಪಾಯಿ ಆಫರ್ ಕೊಟ್ಟು ಬೆಡ್ ರೂಂನಲ್ಲಿ ಕ್ಯಾಮರಾ ಇಡಲು ಯತ್ನಿಸಿದ್ದರು. ರಮೇಶ್ ಜಾರಕಿಹೊಳಿ ವಿಡಿಯೋ ಹೊರಬಂದ ಸಮಯದಲ್ಲೇ ನಮ್ಮ ಖಾಸಗಿ ವಿಡಿಯೋಗಳನ್ನು ಚಿತ್ರಸಿಲು ಯತ್ನಿಸಿದ್ದರು. ಇದೇ ರೀತಿ ಹಲವರ ವಿಡಿಯೋ ಮಾಡಿಕೊಂಡು ದೊಡ್ಡ ದೊಡ್ಡವರನ್ನೇ ಮುನಿರತ್ನ ಬ್ಲಾಕ್‌ಮೇಲ್ ಮಾಡಿದ್ದಾರೆ. ನಮ್ಮ ವಿರುದ್ಧದ ಪಿತೂರಿಯ ಎಲ್ಲ ದಾಖಲೆಗಳನ್ನು ಎಸ್‌ಐಟಿಗೆ ಒದಗಿಸುತ್ತೇವೆ” ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.