ಮುಸ್ಲಿಂ ಪಕ್ಷಪಾತಿ ಎಂಬ ಆಪಾದನೆಗೆ ಗುರಿಯಾಗಿರುವ ಕಾಂಗ್ರೆಸ್, ಅಧಿಕಾರದಲ್ಲಿದ್ದಾಗ ಮುಸ್ಲಿಂ ಸಮುದಾಯದ ಸಮಗ್ರ ಅಭಿವೃದ್ಧಿಗೆ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿರುವುದು ತೀರಾ ವಿರಳ. ಅದರಲ್ಲೂ ಮುಸ್ಲಿಂ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ, ಶಿಕ್ಷಣ ಹಾಗೂ ಔದ್ಯೋಗಿಕ ವಲಯದಲ್ಲಿ ಸೂಕ್ತ ಪ್ರಾತಿನಿಧ್ಯದ ಒದಗಿಸಲು ಯಾವುದೇ ದೃಢ ನಿರ್ಧಾರ ಕೈಗೊಂಡಿರುವ ಇತಿಹಾಸವೇ ಇಲ್ಲ.
”ಎಲ್ಲ ಸಾಮಾಜಿಕ ಪ್ರಗತಿಗೆ ರಾಜಕೀಯ ಅಧಿಕಾರವೇ ಕೀಲಿ ಕೈ”
-ಡಾ. ಬಿ.ಆರ್.ಅಂಬೇಡ್ಕರ್
ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಮೂರೂ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಕಾಂಗ್ರೆಸ್ ಪರಾಭವಗೊಳ್ಳಬಹುದು ಎಂದು ಅಂದಾಜಿಸಲಾಗಿದ್ದ ಚನ್ನಪಟ್ಟಣ ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳಲ್ಲೂ ಆಡಳಿತಾರೂಢ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ.
ಚುನಾವಣೋತ್ತರ ವಿಶ್ಲೇಷಣೆಯ ಪ್ರಕಾರ, ಕಾಂಗ್ರೆಸ್ ಪಕ್ಷದ ಈ ಅಭೂತಪೂರ್ವ ಗೆಲುವಿಗೆ ದಲಿತರು ಹಾಗೂ ಮುಸ್ಲಿಮರು ದೊಡ್ಡ ಕೊಡುಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲೂ ಚನ್ನಪಟ್ಟಣ ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಮರು ಬಹುತೇಕ ಶೇ. 100ರಷ್ಟು ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಸೋಲಬಹುದು ಎಂದು ನಿರೀಕ್ಷಿಸಲಾಗಿದ್ದ ಚನ್ನಪಟ್ಟಣ ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ ಎಂಬುದು ಚುನಾವಣಾ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಕಾಂಗ್ರೆಸ್ ಮೊದಲಿನಿಂದಲೂ ಮುಸ್ಲಿಮರ ತುಷ್ಟೀಕರಣದ ಆರೋಪಕ್ಕೆ ತುತ್ತಾಗಿದೆ. ಸದ್ಯ ಕೇಂದ್ರದಲ್ಲಿ ಆಡಳಿತ ಪಕ್ಷವಾದ ಬಿಜೆಪಿಯಂತೂ, ಇದನ್ನೇ ಅಸ್ತ್ರವಾಗಿಸಿಕೊಂಡು ಸತತ ಮೂರನೆಯ ಬಾರಿ ಅಧಿಕಾರಕ್ಕೆ ಮರಳಿದೆ. ಹಾಗಾದರೆ, ಕಾಂಗ್ರೆಸ್ ಪಕ್ಷ ಮುಸ್ಲಿಮರ ತುಷ್ಟೀಕರಣದಲ್ಲಿ ಮುಳುಗಿದೆಯೆ ಎಂದು ಪರಿಶೀಲಿಸಲು ಹೋದರೆ, ನಿರಾಶಾದಾಯಕ ಉತ್ತರ ಮಾತ್ರ ದೊರೆಯುತ್ತದೆ.
ಭಾರತದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು 20 ಕೋಟಿಯಷ್ಟಿರುವ ಮುಸ್ಲಿಂ ಸಮುದಾಯ, ದೇಶದ ಜನಸಂಖ್ಯೆಯಲ್ಲಿ ಶೇ. 14.61ರಷ್ಟಿದೆ. ಹಾಗೆಯೇ ಕರ್ನಾಟಕದಲ್ಲಿ ಒಟ್ಟು ಜನಸಂಖ್ಯೆಯಲ್ಲಿ 78.93 ಲಕ್ಷದಷ್ಟಿದ್ದು, ಶೇ. 12.92ರಷ್ಟು ಜನಸಂಖ್ಯೆ ಹೊಂದಿದೆ. ಹೀಗಿದ್ದೂ, ರಾಜಕೀಯ ಮತ್ತು ಉದ್ಯೋಗ ಪ್ರಾತಿನಿಧ್ಯದಲ್ಲಿ ಈಗಲೂ ಹಿಂದುಳಿದಿದೆ. ಹಾಗೆಯೆ ಶಿಕ್ಷಣ ಕ್ಷೇತ್ರದಲ್ಲೂ ಕಳಪೆ ಪ್ರಗತಿ ಸಾಧಿಸಿದೆ. ಇದನ್ನು ಮನಗಂಡ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ 2005ರಲ್ಲಿ ಮುಸ್ಲಿಮರ ಸಾಮಾಜಿಕ ಸ್ಥಿತಿಗತಿಯ ಅಧ್ಯಯನ ನಡೆಸಲು ಸಾಚಾರ್ ಸಮಿತಿಯನ್ನು ನೇಮಿಸಿತ್ತು. ಈ ಸಮಿತಿ ನೀಡಿದ ವರದಿಯಲ್ಲಿ ಮುಸ್ಲಿಮರು ಈಗಾಗಲೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಹಿಂದುಳಿದಿರುವ ಆಘಾತಕಾರಿ ಅಂಶಗಳು ಬಯಲಾಗಿದ್ದವು.

ಮುಸ್ಲಿಮರ ಸಮಗ್ರ ಸಾಮಾಜಿಕ ಅಭಿವೃದ್ಧಿಗಾಗಿ ಸಾಚಾರ್ ಸಮಿತಿ ಐದು ಪ್ರಮುಖ ಶಿಫಾರಸುಗಳನ್ನು ಮಾಡಿತ್ತು:
- ಔದ್ಯೋಗಿಕ ವಲಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಸಮಾನ ಅವಕಾಶ ಒದಗಿಸಲು ಸಮಾನ ಅವಕಾಶ ಆಯೋಗವನ್ನು ಸ್ಥಾಪಿಸಬೇಕು.
- ಸ್ಥಳೀಯ ಸಂಸ್ಥೆಗಳಲ್ಲಿ ಮುಸ್ಲಿಂ ಸಮುದಾಯದ ಪ್ರಾತಿನಿಧ್ಯವನ್ನು ಹೆಚ್ಚಿಸಲು ನಾಮನಿರ್ದೇಶನ ವಿಧಾನವನ್ನು ಜಾರಿಗೆ ತರಬೇಕು.
- ಸಾರ್ವಜನಿಕ ಉದ್ಯಮಗಳಲ್ಲಿ ಮುಸ್ಲಿಂ ಸಮುದಾಯದ ಪಾಲನ್ನು ಹೆಚ್ಚಳ ಮಾಡಬೇಕು.
- ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಿದ್ದರೆ, ಕ್ಷೇತ್ರ ಪುನರ್ವಿಂಗಡಣೆ ವಿಧಾನ ಅನುಸರಿಸಬೇಕು.
- ಮದ್ರಸಾಗಳಿಂದ ಪದವಿ ಪಡೆದಿರುವ ಮುಸ್ಲಿಂ ಅಭ್ಯರ್ಥಿಗಳನ್ನು ರಕ್ಷಣೆ, ನಾಗರಿಕ ಮತ್ತು ಬ್ಯಾಂಕಿಂಗ್ ಪರೀಕ್ಷೆಗಳಿಗೆ ಪರಿಗಣಿಸಬೇಕು.
ಸಾಚಾರ್ ಸಮಿತಿ ಈ ಶಿಫಾರಸುಗಳನ್ನು ಮಾಡಿ ಎರಡು ದಶಕವೇ ಕಳೆಯುತ್ತಾ ಬಂದಿದ್ದರೂ, ಈ ಪೈಕಿ ಒಂದು ಶಿಫಾರಸು ಕೂಡಾ ಜಾರಿಗೆ ಬಂದಿಲ್ಲ. ಬದಲಿಗೆ ರಾಷ್ಟ್ರ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಮುಸ್ಲಿಂ ಸಮುದಾಯದ ರಾಜಕೀಯ ಪ್ರಾತಿನಿಧ್ಯ ಕುಸಿಯುತ್ತಲೇ ಸಾಗಿದೆ. ಮುಸ್ಲಿಂ ಪಕ್ಷಪಾತಿ ಎಂಬ ಆರೋಪಕ್ಕೆ ತುತ್ತಾಗಿರುವ ಕಾಂಗ್ರೆಸ್ ಪಕ್ಷವೇ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ನೀಡುತ್ತಿದ್ದ ಪ್ರಾತಿನಿಧ್ಯವನ್ನು ಕಡಿತಗೊಳಿಸುತ್ತಾ ಸಾಗಿದೆ. ಅದಕ್ಕೆ ಕಾರಣ: ತನ್ನ ಮೇಲೆ ಬಂದಿರುವ ಮುಸ್ಲಿಂ ಪಕ್ಷಪಾತಿ ಆರೋಪವನ್ನು ತೊಡೆದುಕೊಳ್ಳಲು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಕರ್ನಾಟಕದ ಮಟ್ಟಿಗೇ ಹೇಳುವುದಾದರೆ, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 12.92ರಷ್ಟಿರುವ ಮುಸ್ಲಿಂ ಸಮುದಾಯದ ಕೇವಲ ಒಂಬತ್ತು ಮಂದಿ ಮಾತ್ರ 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ ಕೇವಲ ಇಬ್ಬರು ಶಾಸಕರು ಮಾತ್ರ ಸಚಿವರಾಗಿದ್ದಾರೆ. (ಸಿದ್ದರಾಮಯ್ಯನವರಿಗೆ ಆಪ್ತ ಹಾಗೂ ಮೂಲತಃ ಜನತಾ ಪರಿವಾರದ ನಾಯಕ ಎಂಬ ಕಾರಣಕ್ಕೆ ಸಚಿವರಾಗಿರುವ ಝಮೀರ್ ಅಹ್ಮದ್ ಖಾನ್ ಹಾಗೂ ಮಲ್ಲಿಕಾರ್ಜುನ ಖರ್ಗೆಯವರ ಶಿಫಾರಸ್ಸಿನಿಂದ ರಹೀಂ ಖಾನ್). ಇದಕ್ಕೂ ಮುನ್ನ, 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 10 ಮಂದಿ ಶಾಸಕರು ಆಯ್ಕೆಯಾಗಿದ್ದರು. ಈ ಪೈಕಿ ಯು.ಟಿ.ಖಾದರ್ ಮತ್ತು ತನ್ವೀರ್ ಸೇಠ್ ಮಾತ್ರ ಸಚಿವರಾಗಿದ್ದರು.
ಶಿಕ್ಷಣ ಕ್ಷೇತ್ರದಲ್ಲೂ ತೀರಾ ಹಿಂದುಳಿದಿರುವ ಮುಸ್ಲಿಂ ಸಮುದಾಯದ ಸಾಕ್ಷರತಾ ಪ್ರಮಾಣ ಕೇವಲ ಶೇ. 59.1ರಷ್ಟಿದೆ. ಇದರ ನೇರ ಪರಿಣಾಮವಾಗಿರುವುದು ಉದ್ಯೋಗ ನೇಮಕಾತಿಯ ಮೇಲೆ. ಸಾರ್ವಜನಿಕ ಉದ್ಯಮಗಳು ಹಾಗೂ ಬೃಹತ್ ಖಾಸಗಿ ಉದ್ಯಮಗಳಲ್ಲಿ ವೇತನದಾರ ಮುಸ್ಲಿಂ ಉದ್ಯೋಗಿಗಳ ಪ್ರಮಾಣ ಶೇ. 23.7ರಷ್ಟು ಮಾತ್ರವಿದೆ. ಇದರರ್ಥ, ಇನ್ನೂ ಶೇ. 76ರಷ್ಟು ಮುಸ್ಲಿಮರು ಈಗಲೂ ಅಸಂಘಟಿತ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು.
ಇದನ್ನು ಓದಿದ್ದೀರಾ?: ಸಂಭಲ್ ವಿವಾದ ಮತ್ತು ರಾಜಕೀಯ ನಾಯಕರ ದ್ವೇಷ ರಾಜಕಾರಣ
ರಾಜಕೀಯ, ಶಿಕ್ಷಣ ಹಾಗೂ ಔದ್ಯೋಗಿಕ ವಲಯಗಳಲ್ಲಿ ಸೂಕ್ತ ಪ್ರಾತಿನಿಧ್ಯದಿಂದ ಮುಸ್ಲಿಂ ಸಮುದಾಯ ವಂಚಿತವಾಗಿರುವುದರಿಂದಲೇ, ಆ ಸಮುದಾಯದಲ್ಲಿನ ಬಡತನದ ಪ್ರಮಾಣವೂ ಗಣನೀಯವಾಗಿದೆ. ಹೀಗಿದ್ದೂ, ಮುಸ್ಲಿಂ ಪಕ್ಷಪಾತಿ ಎಂಬ ಆಪಾದನೆಗೆ ಗುರಿಯಾಗಿರುವ ಕಾಂಗ್ರೆಸ್, ಅಧಿಕಾರದಲ್ಲಿದ್ದಾಗ ಮುಸ್ಲಿಂ ಸಮುದಾಯದ ಸಮಗ್ರ ಅಭಿವೃದ್ಧಿಗೆ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿರುವುದು ತೀರಾ ವಿರಳ. ಅದರಲ್ಲೂ ಮುಸ್ಲಿಂ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ, ಶಿಕ್ಷಣ ಹಾಗೂ ಔದ್ಯೋಗಿಕ ವಲಯದಲ್ಲಿ ಸೂಕ್ತ ಪ್ರಾತಿನಿಧ್ಯದ ಒದಗಿಸಲು ಯಾವುದೇ ದೃಢ ನಿರ್ಧಾರ ಕೈಗೊಂಡಿರುವ ಇತಿಹಾಸವೇ ಇಲ್ಲ.
ಇನ್ನು, ಪ್ರಮುಖ ವಿರೋಧ ಪಕ್ಷವಾದ ಬಿಜೆಪಿಯಿಂದ ಸಿದ್ರಾಮುಲ್ಲಾ ಖಾನ್ ಎಂದು ಲೇವಡಿಗೊಳಗಾಗಿರುವ ಸಿದ್ದರಾಮಯ್ಯ ಕೂಡಾ ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯ ಹೆಚ್ಚಿಸಲು ಯಾವುದೇ ಆದ್ಯತೆ ನೀಡಿಲ್ಲ. ಬದಲಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಾಗಲೆಲ್ಲ ಅವರ ಸಚಿವ ಸಂಪುಟದಲ್ಲಿ ಮುಸ್ಲಿಂ ಸಮುದಾಯದ ಪ್ರಾತಿನಿಧ್ಯ ಗಣನೀಯವಾಗಿ ಕುಗ್ಗಿದೆ. 2013ರಲ್ಲಿನ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಕೇವಲ ಇಬ್ಬರು ಮುಸ್ಲಿಂ ಶಾಸಕರು ಸಚಿವರಾಗಿದ್ದರು. ಆದರೆ, 2023ರಲ್ಲಿನ ಸಚಿವ ಸಂಪುಟದಲ್ಲಿ ಈ ಸಂಖ್ಯೆಯಲ್ಲಿ ಮತ್ತಷ್ಟು ಏರಿಸಬಹುದಿತ್ತು, ಏರಿಸಲಿಲ್ಲ.
ಶಾದಿ ಭಾಗ್ಯ, ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ಜಾರಿಗೆ ತಂದ ಕಾರಣಕ್ಕೆ ಸಿದ್ದರಾಮಯ್ಯನವರನ್ನು ಸಿದ್ರಾಮುಲ್ಲಾ ಖಾನ್ ಎಂದು ಮೂದಲಿಸುವವರಿದ್ದಾರೆ. ಆದರೆ, ಇಂತಹ ತಾತ್ಕಾಲಿಕ ಕಲ್ಯಾಣ ಕಾರ್ಯಕ್ರಮಗಳಿಂದ ಯಾವುದೇ ಸಮುದಾಯ ಸಮಗ್ರ ಸಾಮಾಜಿಕ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಬದಲಿಗೆ, ರಾಜಕೀಯ, ಶಿಕ್ಷಣ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ಸೂಕ್ತ ಪ್ರಾತಿನಿಧ್ಯ ದೊರೆತಾಗ ಮಾತ್ರ ಅಂತಹ ಸಮುದಾಯದಲ್ಲಿ ಆತ್ಮವಿಶ್ವಾಸ ಮೂಡಿ, ಸಾಮಾಜಿಕ ಸಂಚಲನ ಸೃಷ್ಟಿಯಾಗಲು ಸಾಧ್ಯ.
ದಲಿತರು ಹಾಗೂ ಮುಸ್ಲಿಮರನ್ನು ಕಾಂಗ್ರೆಸ್ ಮತ ಬ್ಯಾಂಕ್‌ನಂತೆ ನಡೆಸಿಕೊಂಡು ಬರುತ್ತಿದೆ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿ ಬರುತ್ತಿವೆ. ಈ ಮಾತಿಗೆ ಪೂರಕವೆಂಬಂತೆ, ದಲಿತರು ಮತ್ತು ಮುಸ್ಲಿಮರು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಾಂಗ್ರೆಸ್ ಪಕ್ಷಕ್ಕೇ ಹೆಚ್ಚು ನಿಷ್ಠೆ ಪ್ರದರ್ಶಿಸುತ್ತಾ ಬರುತ್ತಿದ್ದಾರೆ. ಹೀಗಿದ್ದೂ, ದಲಿತ ಮತ್ತು ಮುಸ್ಲಿಂ ಸಮುದಾಯಗಳೆರಡೂ ಸಾಮಾಜಿಕ ಪ್ರಗತಿಯಲ್ಲಿ ಇಂದಿಗೂ ಹಿಂದುಳಿದಿವೆ. ವಸ್ತುಸ್ಥಿತಿ ಹೀಗಿರುವಾಗ, ಕಾಂಗ್ರೆಸ್ ದಲಿತ, ಮುಸ್ಲಿಮರ ಪಕ್ಷಪಾತಿ ಎಂಬುದರಲ್ಲಿ ಹುರುಳಾದರೂ ಹೇಗಿರಲು ಸಾಧ್ಯ?
ಯಾವುದೇ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಿದ್ದರೆ, ಅವುಗಳ ಜನಸಂಖ್ಯೆಗೆ ತಕ್ಕಂತೆ ರಾಜಕೀಯ, ಶೈಕ್ಷಣಿಕ ಹಾಗೂ ಔದ್ಯೋಗಿಕ ಪ್ರಾತಿನಿಧ್ಯ ನೀಡಬೇಕಾದುದು ಅನಿವಾರ್ಯ. ಆದರೆ, ಪ್ರಾತಿನಿಧ್ಯದ ಪ್ರಶ್ನೆ ಬಂದಾಗಲೆಲ್ಲ ಮುಸ್ಲಿಮರು ದಲಿತರಿಗಿಂತ ಹಿಂದೆ ಬೀಳುತ್ತಿದ್ದಾರೆ. ದಲಿತರಿಗೆ ರಾಜಕೀಯ ಮತ್ತು ಉದ್ಯೋಗಗಳಲ್ಲಿ ಶಾಸನಾತ್ಮಕ ಪ್ರಾತಿನಿಧ್ಯದ ಅವಕಾಶವಿರುವುದರಿಂದ, ಅವರ ಅವಕಾಶಗಳಿಗೆ ಯಾವುದೇ ಚ್ಯುತಿಯುಂಟಾಗಿಲ್ಲ. ಆದರೆ, ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದರೂ, ಅತ್ತ ಶಾಸನಾತ್ಮಕ ಪ್ರಾತಿನಿಧ್ಯವೂ ಇಲ್ಲದೆ, ಇತ್ತ ಜನಸಂಖ್ಯೆಗೆ ತಕ್ಕಷ್ಟು ಪ್ರಾತಿನಿಧ್ಯವನ್ನೂ ಪಡೆಯದೆ ಮುಸ್ಲಿಂ ಸಮುದಾಯ ಅತಂತ್ರಗೊಂಡಿದೆ.

ಹೀಗಾಗಿ, ಮುಸ್ಲಿಮರ ಬೇಷರತ್ ಬೆಂಬಲವನ್ನು ದಶಕಗಳಿಂದ ಅನುಭವಿಸುತ್ತಾ ಬರುತ್ತಿರುವ ಕಾಂಗ್ರೆಸ್, ಅಧಿಕಾರದಲ್ಲಿರುವ ಈ ಹೊತ್ತಿನಲ್ಲಾದರೂ, ಸಾಚಾರ್ ಸಮಿತಿಯ ಕಾರ್ಯಸಾಧ್ಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಮುಂದಾಗಬೇಕಿದೆ. ಆಗ ಮಾತ್ರ ಮುಸ್ಲಿಮರ ಬೇಷರತ್ ಬೆಂಬಲಕ್ಕೆ ತನ್ನ ಕೃತಜ್ಞತೆ ಸಲ್ಲಿಸಿದಂತಾಗಲಿದೆ.
ದೇಶಾದ್ಯಂತ ಬಲಿಷ್ಠ ಜಾತಿಗಳ ಬೆಂಬಲ ಮತ್ತು ಅನುಕಂಪ ಕಳೆದುಕೊಂಡು, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ (ಮುಖ್ಯವಾಗಿ ಮುಸ್ಲಿಮರು) ಬೇಷರತ್ ಬೆಂಬಲದಿಂದ ಉಸಿರಾಡುತ್ತಿರುವ ಕಾಂಗ್ರೆಸ್, ಈ ದಿಕ್ಕಿನತ್ತ ಗಂಭೀರವಾಗಿ ಆಲೋಚಿಸಬೇಕಿದೆ.

ಸದಾನಂದ ಗಂಗನಬೀಡು
ಪತ್ರಕರ್ತ, ಲೇಖಕ
ಉತ್ತಮ ಬರಹ, ಸ್ವವಿಸ್ತಾರವಾಗಿ ಹಾಗೂ ಪಕ್ಷಕ್ಕೆ ಮನಮುಟ್ಟುವ ರೀತಿಯಲ್ಲಿ ವಿವರಿಸಿದ್ದೀರಿ.ಈಗ ಸಾಚಾರ್ ವರದಿ ಜಾರಿ ಮಾಡಲು ಆಗುವುದಿಲ್ಲ ಕೇಂದ್ರ ಸರ್ಕಾರ ಮಾಡಲ್ಲ. ಆದರೂ ಕನಿಷ್ಟವೆಂದರೂ ಬಜೆಟ್ನಲ್ಲಿ 10 ಸಾವಿರ ಕೋಟಿ ಅನುದಾನ ನೀಡಲೇಬೇಕು ಅದರಲ್ಲಿ 70 ಶೇಕಡ ಶಿಕ್ಷಣಕ್ಕೆ ಮೀಸಲಿಡಿ .ಈ ಮೂಲಕವಾದರೂ ಬದಲಾವಣೆ ಮಾಡಲು ಸರ್ಕಾರ ಚಿಂತನೆ ಮಾಡಲಿ .
Best article.