ಬ್ಯಾಂಕ್ ಸಿಬ್ಬಂದಿಯೊಬ್ಬ ಎಟಿಎಂಗೆ ಹಣ ತುಂಬಿಸಿ, ಬಳಿಕ ಆ ಹಣವನ್ನು ತಾನೇ ಕದ್ದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಎಟಿಎಂ ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದ ಕೃಷ್ಣಾ ಸುರೇಶ್ ದೇಸಾಯಿ ಬಂಧಿತ ಆರೋಪಿ. ಈತ ಎಟಿಎಂನಲ್ಲಿ ಹಣ ಕದ್ದಿದ್ದು, ಕದ್ದ ಹಣದಲ್ಲಿ ತನ್ನ ತಾಯಿಗೆ ಚಿನ್ನದ ಸರ ಮಾಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಕೃಷ್ಣ ನಿತ್ಯ ಬ್ಯಾಂಕ್‌ನಿಂದ ಹಣ ತಂದು ನಗರದ ಎಲ್ಲ ಹೆಚ್‌ಡಿಎಫ್‌ಸಿ ಎಟಿಎಂಗಳಿಗೆ ಹಣ ತುಂಬಿಸುತ್ತಿದ್ದರು. ನವೆಂಬರ್ 26ರಂದು ಬೆಳಗಾವಿಯ ಕೋರ್ಟ್ ಎದುರಿನ ಹೆಚ್‌ಡಿಎಫ್‌ಸಿ ಎಟಿಎಂಗೆ ಎಂದಿನಂತೆ ಹಣ ಹಾಕಿ ಹೋಗಿದ್ದಾರೆ. ಅದಾದ, 2 ಗಂಟೆಗೆ ಬಳಿಕ ಮತ್ತೆ ಎಟಿಎಂಗೆ ಬಂದ ಕೃಷ್ಣಾ, ಎಟಿಎಂನ ಲಾಕ್ ಓಪನ್ ಮಾಡಿ 8.65 ಲಕ್ಷ ರೂ. ಹಣ ಕದ್ದು ಪರಾರಿಯಾಗಿದ್ದಾರೆ. ಘಟನೆಯ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಎಟಿಎಂನಲ್ಲಿ ಹಣ ಕಳ್ಳತನವಾಗಿರುವ ಬಗ್ಗೆ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಅಧಿಕಾರಿಗಳು ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಕ್ಯಾಮೆರಾದ ವಿಡಿಯೋಗಳನ್ನು ಪರಿಶೀಲಿಸಿದ್ದು, ಆರೋಪಿ ಕೃಷ್ಣಾನನ್ನು ಬಂಧಿಸಿದ್ದಾರೆ.
“ಆರೋಪಿ ಕೃಷ್ಣಾ ಬಳಿ ಎಟಿಎಂ ಕೀಲಿ ಇತ್ತು. ಆ ಕೀಲಿ ಬಳಸಿ ಎಟಿಎಂನಿಂದ 8.65 ಲಕ್ಷ ರೂ. ಹಣ ಕದ್ದಿದ್ದಾನೆ. ಕದ್ದ ಹಣದಲ್ಲಿ ತನ್ನ ತಾಯಿಗಾಗಿ 1.54 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಖರೀದಿಸಿದ್ದಾನೆ. ಮೋಜು-ಮಸ್ತಿಗೂ ಹಣ ಬಳಸಿಕೊಂಡಿದ್ದಾನೆ. ಚಿನ್ನದ ಸರ ಮತ್ತು 5.74 ಲಕ್ಷ ರೂ. ಹಣವನ್ನು ಕೃಷ್ಣಾನಿಂದ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ” ಎಂದು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ.