ಫೆಂಗಲ್ ಚಂಡಮಾರುತ ರಾತ್ರಿ ವೇಳೆಗೆ ಪಶ್ಚಿಮ ಭಾಗದಲ್ಲಿ ಕಾಣಿಸಿಕೊಂಡಿದ್ದು, ದ.ಕ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ.
ಫೆಂಗಲ್ ಚಂಡಮಾರುತ ಸದ್ಯ ಪಶ್ಚಿಮ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ಇದ್ದು, ಬಳಿಕ ಇದು ಸಮುದ್ರ ಮಧ್ಯೆಗೆ ತೆರಳಿ ಕೊನೆಗೊಳ್ಳಲಿದೆ. ಫೆಂಗಲ್ ಚಂಡಮಾರುತದ ಪ್ರಭಾವದಿಂದ ಮಂಗಳವಾರ ಸಂಜೆಯವರೆಗೆ ಮಳೆಯ ಅಬ್ಬರ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ ಸುರಿದ ಮಳೆಗೆ ಪಂಪ್‌ವೆಲ್, ಬಜ್ಜೊಡಿ, ಬಜಾಲ್ ಅಂಡರ್ ಪಾಸ್, ಪಡೀಲ್ ಮೊದಲಾದ ಕಡೆ ಹೆದ್ದಾರಿಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಫೆಂಗಲ್ ಸೈಕ್ಲೋನ್ ನಿನ್ನೆಯಿಂದ ಭಾರೀ ಅನಾಹುತಗಳನ್ನೇ ಸೃಷ್ಟಿಮಾಡಿದೆ. ಸೋಮವಾರ ಸಂಜೆ ಪ್ರಾರಂಭಗೊಂಡ ಮಳೆ ಉಡುಪಿ ಜಿಲ್ಲೆಯಲ್ಲಿ ಈಗಲೂ ಮುಂದುವರೆದಿದೆ.

ನಿನ್ನೆಯ ಅಬ್ಬರದ ಮಳೆಗೆ ಸಿಡಿಲು ಬಡಿದು ಮನೆಗೆ ಹಾನಿಯುಂಟಾದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನೀಲಾವರ ಸಮೀಪದ ಸೊಣಗಾರ ಬೆಟ್ಟು ಎಂಬಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ನೀಲಾವರ ಸಮೀಪದ ಸೊಣಗಾರಬೆಟ್ಟು ರಾಧು ಶೆಡ್ತಿಯವರ ಮನೆಗೆ ಸಿಡಿಲು ಬಡಿದು ಮನೆಯ ವಿದ್ಯುತ್‌ಉಪಕರಣಗಳಿಗೆ ಹಾನಿಯುಂಟಾಗಿದ್ದು, ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿವೆ. ಇನ್ನು ರಾತ್ರಿಯಿಂದ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದ್ದು ಜನರು ಪರದಾಡುವಂತಾಗಿದೆ.
