ಚಳಿಗಾಲದ ಋತುವಿನಲ್ಲಿಯೂ ಬಿಸಿಲು ಹೆಚ್ಚಲಿದ್ದು, ಬಿಸಿ ಗಾಳಿ ಬೀಸಲಿದೆ. ಶೀತದ ಅಲೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಸದ್ಯ, ಫೆಂಗಲ್ ಚಂಡಮಾರುತದಿಂದಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಚಳಿಯೂ ಹೆಚ್ಚಾಗಿದೆ. ಆದರೆ, ಚಂಡಮಾರುತದ ಅಬ್ಬರ ಮುಗಿದ ಬಳಿಕ, ವಾತಾವರಣ ಬಿಸಿಯಾಗಲಿದೆ. ಬಿಸಿಲು ಹೆಚ್ಚಲಿದೆ.
ಈ ಬಾರಿ ಚಳಿಗಾಲದಲ್ಲಿ ಹಗಲು ಹೊತ್ತಿನಲ್ಲಿ ಬಿಸಿಲು ಹೆಚ್ಚಿರಲಿದೆ. ಭಾರತದ ವಾಯವ್ಯ, ಮಧ್ಯ, ಪೂರ್ವ ಹಾಗೂ ಈಶಾನ್ಯ ಭಾಗಗಳಲ್ಲಿ ಶೀತ ಅಲೆಗಳ ಸಂಭವವು ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ. ಎಲ್-ನಿನೋ ವಿದ್ಯಮಾನದಿಂದಾಗಿ ವಾತಾವರಣದಲ್ಲಿ ಇಂತಹ ಬದಲಾವಣೆಗಳು ಎದುರಾಗುತ್ತಿವೆ ಎಂದು ಇಲಾಖೆ ಹೇಳಿದೆ.
ಬಂಗಾಳಕೊಲ್ಲಿಯಲ್ಲಿ ಫೆಂಗಲ್ ಚಂಡಮಾರುತ ಬೀಸುತ್ತಿದ್ದು, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಆಂಧ್ರ ಮತ್ತು ತಮಿಳುನಾಡಿನಲ್ಲಿ ಪ್ರವಾಹ ಉಂಟಾಗಿದೆ. ಕರ್ನಾಟಕದಲ್ಲಿಯೂ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಮೈಸೂರು, ಮಂಡ್ಯ, ಚಾಮರಾಜನಗರ, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿವೆ ರಜೆ ಘೋಷಿಸಲಾಗಿದೆ.