ಆಶಾ ಕಾರ್ಯಕತೆಯರು ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಎಐಯುಟಿಯುಸಿಗೆ ಸಂಯೋಜಿತಗೊಂಡ ಕರ್ನಾಟಕ ರಾಜ್ಯ ಸಂಯುಕ್ತ ಆಶಾಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು.
ವಿಜಯಪುರ ಜಿಲ್ಲಾ ಪಂಚಾಯತ್ ವೃತ್ತದಿಂದ ಜಿಲ್ಲಾ ಪಂಚಾಯತ್‌ವರೆಗೆ ಮೆರವಣಿಗೆ ತೆರಳಿ ಮುಖ್ಯ ಕಾರ್ಯನಿವಾಹಕಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು.
ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಹೆಚ್ ಟಿ ಮಾತನಾಡಿ, “ಈ ಅಸಹಾಯಕ ಬಡ ಮಹಿಳೆಯರು, ವಿಧವೆಯರು, ವಿಚ್ಛೇದಿತರನ್ನು ‘ಆಶಾ’ಗಳನ್ನಾಗಿ ನೇಮಕ ಮಾಡಿಕೊಂಡು ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತದೆ ಎಂಬುದು ಸರ್ಕಾರದ ಘೋಷಣೆ. ಆದರೆ ಆಶಾಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕುತ್ತಿಲ್ಲವೆಂಬುದು ವಾಸ್ತವ. ರಾಜ್ಯದಲ್ಲಿ ಪ್ರೋತ್ಸಾಹಧನ ನೀಡಲು ಆಶಾನಿಧಿ ಪೋರ್ಟನಲ್ಲಿ ಆನ್‌ಲೈನ್ ದಾಖಲು ಮಾಡಬೇಕಿದ್ದು, ಆಶಾಗಳು ಮಾಡಿದ ಕೆಲಸಗಳು ದಾಖಲಾಗದೆ ಕಳೆದ 8 ವರ್ಷಗಳಿಂದ ಮಾಡಿದ ಕೆಲಸಕ್ಕೆ ಪ್ರೋತ್ಸಾಹಧನ ಸಿಗುತ್ತಿಲ್ಲ” ಎಂದರು.

“ಹಲವಾರು ಸಮಸ್ಯೆಯಿಂದ ಆಶಾ ಕಾರ್ಯಕರ್ತೆಯರಿಗೆ ಬಹು ದೊಡ್ಡ ಪ್ರಮಾಣದ ಅನ್ಯಾಯವಾಗುತ್ತಿದೆ. ಸಮಸ್ಯೆಗಳ ಕುರಿತು ಆರೋಗ್ಯ ಇಲಾಖೆ ಮತ್ತು ಸರ್ಕಾರಕ್ಕೆ ಕಳೆದ 8 ವರ್ಷಗಳಿಂದ ಲೆಕ್ಕವಿಲ್ಲದಷ್ಟು ದೂರುಗಳನ್ನು ಸಲ್ಲಿಸಲಾಗಿದೆ. ಲೆಕ್ಕವಿಲ್ಲದಷ್ಟು ಸಭೆಗಳು, ಚರ್ಚೆಗಳು, ನಡೆದಿವೆ. ಇಲಾಖೆಯಿಂದ ಮತ್ತು ಸರ್ಕಾರದಿಂದ ಕೈಗೊಂಡ ಯಾವುದೇ ಕ್ರಮದಿಂದ ಸಮಸ್ಯೆಗಳು ಪರಿಹಾರವಾಗದೆ ಹಾಗೆಯೇ ಉಳಿದಿವೆ. ಆದರಿಂದಾಗಿ ಎಲ್ಲ ʼಆಶಾʼ ಕಾರ್ಯಕರ್ತೆಯರು ಸಾವಿರಾರು ರೂಪಾಯಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ” ಎಂದರು.

ಮನವಿ ಪತ್ರ ಸ್ವೀಕರಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಕಾಧಿಕಾರಿ ಮಾತನಾಡಿ, “ಒಂದುವಾರದೊಳಗೆ ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿಗಳೊಂದಿಗೆ ಮತ್ತು ಆಶಾ ಯೂನಿಯನ್ ಮುಖಂಡರೊಂದಿಗೆ ಸಭೆ ಕರೆದು ಸ್ಥಳೀಯ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಗ್ರಾ.ಪಂ. ಸದಸ್ಯರಿಗೆ ಕೇರಳ ಮಾದರಿಯಲ್ಲಿ ಅನುದಾನ ನೀಡಬೇಕು: ಎಂಎಲ್‌ಸಿ ಸುನಿಲ್ ಗೌಡ ಪಾಟೀಲ್
ಆಶಾ ಸಂಘದ ಜಿಲ್ಲಾ ಮುಖಾಂಡಾರದ ಭಾರತಿ ದೇವಕತೆ, ನಿರ್ಮಲಾ ಕಲಕೇರಿ, ರೇಣುಕಾ ಸವಿತಾ ವಾಲಿಕಾರ, ಸಿಂದಗಿ ತಾಲೂಕು ಅಧ್ಯಕ್ಷೆ ಜ್ಯೋತಿ ಶಾಬಾದಿ, ಕಾರ್ಯದರ್ಶಿಗಳಾದ ಮೈರುನ್ನಿಸಾ ಬಾಗೇವಾಡಿ, ಜಯಶ್ರೀ ಬಿರಾದಾರ, ರೇಣುಕಾ ಕಂಬಾರ, ಶೈಲಾ ಪಠಾಣ, ಸಾವಿತ್ರಿ, ಭಾರತಿ ಸಿಂಗೆ, ರೇಣುಕಾ ಚಲವಾದಿ, ಸಿದ್ದಮ್ಮ, ಸುಮಂಗಲಾ ಪಡಸಲಗಿ, ವಿಜಯಲಕ್ಷ್ಮೀ, ದೀಪಾ ಕಂಬಾಗಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.