ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಕಾನೂನು ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಬೀದರ್‌ನಲ್ಲಿ ರಾಷ್ಟ್ರೀಯ ಬಸವ ದಳ ಹಾಗೂ ಬಸವಪರ ಸಂಘಟನೆಗಳ ಪ್ರಮುಖರು ಪ್ರತಿಭಟನೆ ನಡೆಸಿದರು.
ನಗರದ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ವಿಧಾನಸಭೆ ಸಭಾಪತಿ ಯು.ಟಿ.ಖಾದರ್ ಅವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿಗೆ ಸಲ್ಲಿಸಿದರು.
ರಾಷ್ಟ್ರೀಯ ಬಸವದಳ ಕೇಂದ್ರ ಸಮಿತಿ ಅಧ್ಯಕ್ಷರಾದ ಡಾ.ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ʼವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಇತ್ತೀಚೆಗೆ ಬೀದರ್‌ನಲ್ಲಿ ವಕ್ಫ್ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬಸವಣ್ಣನವರ ಲಿಂಗೈಕ್ಯರಾದ ವಿಷಯ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿ ಬಸವಣ್ಣನವರಿಗೆ ಅವಮಾನ ಎಸಗಿದ್ದಾರೆ. ಬಸವಣ್ಣನವರು ಹೊಳೆಗೆ ಹಾರಿ ಪ್ರಾಣಬಿಟ್ಟರು ಎಂಬ ಆಧಾರ ರಹಿತ ಸುಳ್ಳು ಹೇಳಿ, ಬಸವಣ್ಣನವರು ಓರ್ವ ಹೇಡಿಯಾಗಿದ್ದರು ಎಂಬರ್ಥದಲ್ಲಿ ಮಾತನಾಡಿ ಬಸವಣ್ಣನವರಿಗೆ ಅಪಮಾನ ಮಾಡಿರುವುದು ಖಂಡನೀಯʼ ಎಂದರು.
ʼಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಲಿಂಗಾಯತ ಎಂದು ಹೇಳಿಕೊಂಡು ಪಕ್ಷದಿಂದ ಟಿಕೆಟ್ ಪಡೆಯುತ್ತಾರೆ. ಪಂಚಮಸಾಲಿ ಲಿಂಗಾಯತರಿಗೆ 2ಎ ಮೀಸಲಾತಿ ಪಡೆಯಲು ಹೋರಾಟ ನಡೆಸುತ್ತಾರೆ. ಚುನಾವಣೆಯಲ್ಲಿ ಗೆದ್ದು ಬಂದ ಬಳಿಕ ಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳಲು ಲಿಂಗಾಯತ ಮೀಸಲಾತಿ ಬಳಸಿಕೊಳ್ಳುತ್ತಾರೆ. ಲಿಂಗಾಯತ ಹೆಸರಿನಲ್ಲಿ ಸರ್ಕಾರದ ಸೌಲಭ್ಯ ಪಡೆಯುತ್ತಾರೆ. ಆದರೆ, ಅದೇ ಲಿಂಗಾಯತ ಧರ್ಮದ ಸ್ಥಾಪಕ ಬಸವಣ್ಣನವರ ಕುರಿತು ಅವಹೇಳನಕಾರಿ ಮಾತನಾಡುವುದು ಎಷ್ಟು ಸರಿ. ಅವಹೇಳಕಾರಿ ಮಾತನಾಡುವ ಶಾಸಕ ಬಸನಗೌಡ ಯತ್ನಾಳ ಲಿಂಗಾಯತ ಧರ್ಮದವರೇ ಅಲ್ಲ, ಇನ್ಮುಂದೆ ಅವರನ್ನು ಲಿಂಗಾಯತ ಧರ್ಮದಿಂದ ಬಹಿಷ್ಕಾರ ಹಾಕುತ್ತೇವೆʼ ಎಂದು ಹೇಳಿದರು.
ʼಬಸವಣ್ಣನವರನ್ನು ಅವಮಾನಿಸಿರುವ ಬಸನಗೌಡ ಪಾಟೀಲ್ ಯತ್ನಾಳರಿಗೆ ಇನ್ಮುಂದೆ ಪಕ್ಷ ಹಾಗೂ ಸರ್ಕಾರದಿಂದ ಲಿಂಗಾಯತ ಮೀಸಲಾತಿ ಕೋಟಾದಲ್ಲಿ ಯಾವುದೇ ಸೌಲಭ್ಯಗಳನ್ನು ನೀಡಬಾರದು. ಯತ್ನಾಳ ವಿರುದ್ಧ ಕಾನೂನು ಶಿಸ್ತು ಕ್ರಮ ಕೈಗೊಂಡು ಇವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕುʼ ಎಂದು ಆಗ್ರಹಿಸಿದರು.
ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ಸಂಚಾಲಕ ಶ್ರೀಕಾಂತ ಸ್ವಾಮಿ ಮಾತನಾಡಿ, ʼಬಸನಗೌಡ ಪಾಟೀಲ್ ಯತ್ನಾಳ ಅವರಲ್ಲಿ ಸಮಾನತೆ, ಪ್ರೀತಿ ಇರಬೇಕು. ದೇಶದ ಬಗ್ಗೆ ಗೌರವ ಇರಬೇಕು. ಆದರೆ, ಯತ್ನಾಳ ಬಾಯ್ತೆರೆದರೆ ಬಚ್ಚಲು ಮೋರಿಯಾಗಿದೆ. ಇಂತಹ ನಾಲಾಯಕ್ ವ್ಯಕ್ತಿ ಲಿಂಗಾಯತ ಧರ್ಮದಲ್ಲಿ ಹುಟ್ಟಲು ಸಾಧ್ಯವೇ ಇಲ್ಲ. ಕೂಡಲೇ ಯತ್ನಾಳ ಅವರನ್ನು ಲಿಂಗಾಯತ ಧರ್ಮದಿಂದ ಉಚ್ಛಾಟನೆ ಮಾಡಬೇಕುʼ ಎಂದು ಒತ್ತಾಯಿಸಿದರು.
ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಕಾನೂನು ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಬೀದರ್‌ನಲ್ಲಿ ರಾಷ್ಟ್ರೀಯ ಬಸವದಳ ಹಾಗೂ ಬಸವಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. pic.twitter.com/SuNTBeuyHV
— eedina.com ಈ ದಿನ.ಕಾಮ್ (@eedinanews) December 3, 2024
ಲಿಂಗಾಯತ ಮಾಹಮಠದ ಪ್ರಭುದೇವರು ಮಾತನಾಡಿ, ʼಬಸನಗೌಡ ಪಾಟೀಲ್ ಅವರು ಜವಾಬ್ದಾರಿ ಸ್ಥಾನದಲ್ಲಿದ್ದರೂ ಸಹ ಏನು ಮಾತನಾಡಬೇಕೆಂಬ ಅರಿವಿಲ್ಲ, ಅವರಿಗೆ ಇತಿಹಾಸದ ಪ್ರಜ್ಞೆ ಇಲ್ಲ. ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಯತ್ನಾಳ ಅವರ ಹೇಳಿಕೆ ಲಿಂಗಾಯತ ಸಮುದಾಯ ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಒಬ್ಬರು ಕರೆ ಕೊಡುವುದು, ಇನ್ನೊಬ್ಬರು ಗೇಲಿ ಮಾಡುವುದು, ಏನಿದು ಮಕ್ಕಳಾಟ?
ಪ್ರತಿಭಟನೆಯಲ್ಲಿ ಬೀದರ್ ಬಸವ ಮಂಟಪದ ಸತ್ಯದೇವಿ ಮಾತಾಜಿ, ಬಸವ ಕೇಂದ್ರ ಜಿಲ್ಲಾಧ್ಯಕ್ಷ ಶರಣಪ್ಪಾ ಮಿಠಾರೆ ಹಾಗೂ ಪ್ರಮುಖರಾದ ಶಿವರಾಜ ಪಾಟೀಲ್ ಅತಿವಾಳ, ಚನ್ನಬಸವ ಹಂಗರಗಿ, ಓಂಪ್ರಕಾಶ ರೊಟ್ಟೆ, ಅಕ್ಕಮಹಾದೇವಿ ಸೇರಿದಂತೆ ರಾಷ್ಟ್ರೀಯ ಬಸವದಳ , ಲಿಂಗಾಯತ ಧರ್ಮ ಮಹಾಸಭಾ, ಕ್ರಾಂತಿಗಂಗೋತ್ರಿ ಅಕ್ಕನಾಗಲಾಂಬಿಕ ಮಹಿಳಾ ಗಣದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.