ಕನ್ನಡ ಸಿನೆಮಾ ರಂಗದ ಲೈಂಗಿಕ ಕಿರುಕುಳ ದೂರುಗಳ ಪರಿಶೀಲನಾ ಸಮಿತಿ (ಆಂತರಿಕ ದೂರುಗಳ ಸಮಿತಿ) ರಚನೆಯ ಆದೇಶವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಹೊರಡಿಸಿದ ಕೆಲವೇ ತಾಸುಗಳಲ್ಲಿ ವಾಪಸು ಪಡೆದಿದೆ. ಈ ವಾಪಸಾತಿಯನ್ನು ‘ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವ್ಯಾಲಿಟಿ’ (ಫೈರ್) ತೀವ್ರವಾಗಿ ಖಂಡಿಸಿದೆ. ಈ ಆದೇಶವನ್ನು ವಾಪಸು ಪಡೆಯಲು ಮಂಡಳಿಯಲ್ಲಿನ ಆಂತರಿಕ ವಿರೋಧ ಕಾರಣವೇ ವಿನಾ ಚುನಾವಣಾ ನೀತಿ ಸಂಹಿತೆ ಅಲ್ಲವೆಂದು ಆಪಾದಿಸಿದೆ.
ಆಂತರಿಕ ದೂರುಗಳ ಸಮಿತಿಯನ್ನು ಜಾರಿಗೆ ತರಲು ಬಯಸದಿರುವ ಈ ನಡೆಯು ಕಾನೂನಿನ ಕಡೆಗಣನೆ. ಅಷ್ಟೇ ಅಲ್ಲದೆ ಮಾನವಘನತೆಯ ಮೇಲಿನ ದಾಳಿಯನ್ನು (ಲೈಂಗಿಕ ಕಿರುಕುಳ) ಮುಂದುವರೆಸಲು ನೀಡಲಾಗುತ್ತಿರುವ ಅನುಮತಿ ಎಂದು ‘ಫೈರ್’ ಆರೋಪಿಸಿದೆ.
ಮಂಡಳಿಯ ಚುನಾವಣೆಗಳು ಮುಗಿಯುವ ತನಕ (ಡಿ.15) ಕಾದು ನೋಡುತ್ತೇವೆ. ಆನಂತರವೂ ಆಂತರಿಕ ದೂರು ಸಮಿತಿ ರಚನೆಯಾಗದಿದ್ದರೆ ಕಾನೂನು ಹೋರಾಟವನ್ನು ಕೈಗೆತ್ತಿಕೊಳ್ಳುವುದಾಗಿ ‘ಫೈರ್’ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಅಧ್ಯಕ್ಷತೆಯಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು. ಇದೇ ತಿಂಗಳ 12ರಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆಗಳು ನಡೆಯಲಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಆದೇಶವನ್ನು ವಾಪಸು ಪಡೆಯಲಾಗಿದೆ ಎಂದು ವಾಣಿಜ್ಯ ಮಂಡಳಿ ಸಮಜಾಯಿಷಿ ನೀಡಿದೆ. ಸಮಿತಿ ರಚನೆಯ ಈ ಸಂಗತಿಯನ್ನು ಚುನಾವಣೆಯ ನಂತರ ಮರುಪರಿಶೀಲಿಸಲಾಗುವುದು ಎಂದು ಮಂಡಳಿಯ ಅಧ್ಯಕ್ಷ ಎನ್.ಎಂ ಸುರೇಶ್ ತಿಳಿಸಿದ್ದಾರೆ.
ಆದರೆ, ತನ್ನ ಸದಸ್ಯರ ವಿರೋಧದ ಕಾರಣ ಮಂಡಳಿ ಈ ಆದೇಶವನ್ನು ವಾಪಸು ಪಡೆದಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಮಲೆಯಾಳಂ ಸಿನೆಮಾ ಉದ್ಯಮದಲ್ಲಿ ಲೈಂಗಿಕ ಕಿರುಕುಳ ಕುರಿತು ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯ ನಂತರ ಎದ್ದ ಬಿರುಗಾಳಿಯ ಸಂದರ್ಭದಲ್ಲಿ ಕನ್ನಡ ಸಿನೆಮಾ ರಂಗದಲ್ಲಿಯೂ ಅಂತಹ ಸಮಿತಿಯನ್ನು ನೇಮಕ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಯೋಗವೊಂದು ಆಗ್ರಹಪಡಿಸಿತ್ತು. ಈ ಒತ್ತಡದಲ್ಲಿ ಕೆ.ಎಫ್.ಸಿ.ಸಿ. ಕವಿತಾ ಲಂಕೇಶ್ ಸಮಿತಿಯನ್ನು ನೇಮಕ ಮಾಡಿತ್ತು.