ಗೂಗಲ್ ಮ್ಯಾಪ್‌ಗಳನ್ನು ನಂಬಿ ನಡೆಸಲಾಗುತ್ತಿದ್ದ ಕಾರೊಂದು ಈ ಸಲ ಕಾಲುವೆಗೆ ಬಿದ್ದ ಘಟನೆ ಉತ್ತರಪ್ರದೇಶದ ಬರೇಲಿಯಿಂದ ವರದಿಯಾಗಿದೆ. ಕಾರಿನಲ್ಲಿದ್ದ ಎಲ್ಲ ಮೂವರೂ ಬಚವಾಗಿದ್ದಾರೆ.
ಕಳೆದ ಹತ್ತು ದಿನಗಳಲ್ಲಿ ಬರೇಲಿಯಲ್ಲಿ ನಡೆದಿರುವ ಎರಡನೆಯ ಅಪಘಾತವಿದು. ನವೆಂಬರ್ 24ರಂದು ಗೂಗಲ್ ಮ್ಯಾಪ್ ನಂಬಿ ನಡೆಸಲಾಗುತ್ತಿದ್ದ ಕಾರೊಂದು ರಾಮಗಂಗಾ ನದಿಯ ಮೇಲಿನ ‘ಅಪೂರ್ಣ’ ಸೇತುವೆಯಿಂದ ಕೆಳಗೆ ಬಿದ್ದು ಮೂವರು ಮೃತಪಟ್ಟಿದ್ದರು. ಈ ವರ್ಷದ ಆರಂಭದಲ್ಲಿ ಉಂಟಾಗಿದ್ದ ಭಾರೀ ಪ್ರವಾಹದ ಕಾರಣ ಈ ಸೇತುವೆಯು ಭಾಗಶಃ ಕೊಚ್ಚಿ ಹೋಗಿತ್ತು. ಈ ಕುಸಿತ ಗೂಗಲ್‌ನಲ್ಲಿ ‘ಅಪ್ಡೇಟ್’ ಆಗಿರಲಿಲ್ಲ. ಸೇತುವೆ ಕೊಚ್ಚಿ ಹೋಗಿರುವ ಕುರಿತು ಯಾವುದೇ ಎಚ್ಚರಿಕೆಯ ಸಂಕೇತವನ್ನಾಗಲಿ, ತಡೆಗೋಡೆಯನ್ನಾಗಲಿ ನಿರ್ಮಿಸಿರಲಿಲ್ಲ.
ಪೀಲೀಭೀತ್-ಬರೇಲಿ ರಾಜ್ಯ ಹೆದ್ದಾರಿಯಲ್ಲಿ ನಡೆದಿರುವ ಇತ್ತೀಚಿನ ಘಟನೆಯಲ್ಲಿ ಕಾರು ನಾಲೆಗೆ ಬಿದ್ದಿದೆ. ಮಂಜು ದಟ್ಟವಾಗಿ ಮುಸುಕಿ ದಾರಿ ನಿಚ್ಚಳವಾಗಿಲ್ಲದ ಕಾರಣ ದಿವ್ಯಾಂಶು ಸಿಂಗ್ ಮತ್ತು ಆತನ ಗೆಳೆಯರು ಗೂಲ್ ಮ್ಯಾಪ್ ನೆರವು ಪಡೆದಿದ್ದರು. ದಾರಿಯಲ್ಲಿ ಗೂಗಲ್ ಮ್ಯಾಪ್ ಹತ್ತಿರದ ದಾರಿಯನ್ನು (ಶಾರ್ಟ್ ಕಟ್) ತೋರಿಸಿತು. ಕಾರನ್ನು ಈ ಸನಿಹದ ದಾರಿಗೆ ಇಳಿಸಿದ ಮಿತ್ರರು ತುಸುದೂರ ಸಾಗಿದ್ದಾಗ ದಾರಿ ಹಠಾತ್ತನೆ ಅಂತ್ಯಗೊಂಡಿತ್ತು. ಕಾರು ಕಾಲುವೆಗೆ ನೆಗೆದಿತ್ತು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಕ್ರೇನ್ ನೆರವಿನಿಂದ ಕಾರನ್ನು ಕಾಲುವೆಯಿಂದ ಮೇಲೆತ್ತಿದ್ದಾರೆ.