“ಅಂಗವಿಕಲತೆ ಶಾಪವಲ್ಲ, ಅಂಗವೈಕಲ್ಯವನ್ನು ಮೆಟ್ಟಿನಿಂತ ಅನೇಕ ಮಂದಿ ವಿಶೇಷಚೇತನರು ವಿಶ್ವದಲ್ಲಿ ಬಹಳಷ್ಟು ಸಾಧನೆಗಳನ್ನು ಮಾಡಿದ್ದಾರೆ. ಹಾಗಾಗಿ ಯಾವುದೇ ಕಾರಣಕ್ಕೂ ವಿಶೇಷಚೇತನರು ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬಾರದು” ಎಂದು ಡಾ.ಕೆ ವೈ ಶ್ರೀನಿವಾಸ್ ಹೇಳಿದರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯ ಎನ್ ಸರಸ್ವತಿಯವರ ಮನೆಯಲ್ಲಿ ನಡೆದ ವಿಶ್ವ ವಿಶೇಷಚೇತನರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀರಂಗಪಟ್ಟಣದ ಸಮಾನ ಮನಸ್ಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಆದರ್ಶ ಎಂಬ ವಿಶೇಷಚೇತನ ವ್ಯಕ್ತಿಗೆ ಸನ್ಮಾನಿಸಿದರು.
ಶ್ರೀರಂಗನಾಯಕಿ ಸಮಾಜದ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ ಮಾತನಾಡಿ, “ಆದರ್ಶ ಎಂಬುವವರ ತಾಯಿ ಸರಸ್ವತಿಯವರ ತ್ಯಾಗ ದೊಡ್ಡದು. ವಿಶೇಷಚೇತನ ಮಗುವನ್ನು ಸಾಕಿ, ಸಲಹಿ ದೊಡ್ಡವನನ್ನಾಗಿ ಬೆಳಸುವುದು ಹುಡುಗಾಟದ ಮಾತಲ್ಲ. ಈ ತಾಯಿಯ ತಾಳ್ಮೆ ಹೆಚ್ಚಿನದು. ಅವರಿಗೆ ಮಗನಿಗಿಂತ ಹೆಚ್ಚಿನ ಆಯಸ್ಸು ದೊರೆಯಲೆಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ” ಎಂದರು.
ಇದನ್ನು ಓದಿದ್ದೀರಾ? ನಾಗಮಂಗಲ | ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವೆಂಕಟೇಶ್ ವಿರುದ್ಧ ತನಿಖೆಗೆ ಆದೇಶ
ಶ್ರೀರಂಗನಾಯಕಿ ಸಮಾಜದ ಸಂಚಾಲಕಿ ಗಾಯತ್ರಿ ಮಾತನಾಡಿ, “ವಿಶೇಷಚೇತನರ ದಿನಾಚರಣೆಯನ್ನು ವಿಶ್ವಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ. ಆದರ್ಶ ಸ್ಪಂದಿಸುವ ರೀತಿ ನೋಡಿದರೆ ವಿಶೇಷಚೇತನನೆಂದು ಅನಿಸುವುದೇ ಇಲ್ಲ. ಅವನು ಎಲ್ಲರಿಗೂ ಸಾಮಾನ್ಯರಂತೆ ಗೌರವ ರೀತಿಯಲ್ಲಿ ಸ್ಪಂದಿಸುತ್ತಾನೆ. ಅವನ ಆರೋಗ್ಯ ಚೆನ್ನಾಗಿರಲೆಂದು ಹಾರೈಸುತ್ತೇನೆ” ಎಂದರು.
ಇದನ್ನು ನೋಡಿದ್ದೀರಾ? ಮಂಡ್ಯ | ಕನ್ನಂಬಾಡಿ ಕಟ್ಟಿದ ತಮಿಳರ ಎತ್ತಂಗಡಿ?
ಕಾರ್ಯಕ್ರಮದಲ್ಲಿ ಶ್ರೀರಂಗನಾಯಕಿ ಸಮಾಜದ ದು.ಸರಸ್ವತಿ, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಯೋಗ ಶಿಕ್ಷಕ ಕೆ ಶೆಟ್ಟಹಳ್ಳಿ ಅಪ್ಪಾಜಿ, ಚಿಕ್ಕತಮ್ಮೇಗೌಡ, ಗಾಯಿತ್ರಿ, ಗೋಪಾಲ್, ದೀಪಕ್, ಅನುಶ್ರೀ, ಭಾಗ್ಯಮ್ಮ, ಚರೀಸ್, ಪರೀನ್, ಮುಂತಾದವರು ಇದ್ದರು.