ಬೆದರಿಕೆಯೊಡ್ಡಿ ತಮ್ಮ ರಾಜಕೀಯ ಪಕ್ಷಕ್ಕೆ (ಬಿಜೆಪಿ) ಹಣ ವಸೂಲಿ ಮಾಡಲಾಗಿದೆ ಎಂಬ ಆರೋಪದ ಮೇಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ದದ ಎಫ್‌ಐಆರ್‌ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಹೈಕೋರ್ಟ್‌ನ ಈ ತೀರ್ಪು ಹೊರಬಂದ ಬಳಿಕ, ಚುನಾವಣಾ ಬಾಂಡ್‌ನ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಚುನಾವಣಾ ಬಾಂಡ್‌ನಂತಹ ಅಸಾಂವಿಧಾನಿಕ, ಭಾರೀ ಹಗರಣದಲ್ಲಿ ಯಾರು ದೋಷಿಗಳಿಲ್ಲವೇ? ಯಾರೂ ತಪ್ಪಿತಸ್ಥರಿಲ್ಲವೇ? ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಅಂದಹಾಗೆ, ಲೋಕಸಭಾ ಚುನಾವಣೆಯ ಸಮಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದ್ದ ಚುನಾವಣಾ ಬಾಂಡ್ ಹಗರಣ, ಸಾರ್ವಜನಿಕ ವಲಯದಲ್ಲಿ ಹೆಚ್ಚು ಗಮನ ಸೆಳೆಯಲಿಲ್ಲ. ಅದರಲ್ಲಿ, ಮುಖ್ಯವಾಹಿನಿಯ ಮಾಧ್ಯಮಗಳ ಪಾತ್ರ ಗಣನೀಯವಾದದ್ದು. ಸಾವಿರಾರು ಕೋಟಿ ರೂ.ಗಳ ಅವ್ಯವಹಾರದ ಬಗ್ಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದರೂ, ಬಾಂಡ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಕೊಡುವಂತೆ ಎಸ್‌ಬಿಐಗೆ ತಾಕೀತು ಮಾಡಿ, ತರಾಟೆಗೆ ತೆಗೆದುಕೊಂಡರೂ ಮಾಧ್ಯಮಗಳು ಈ ಚುನಾವಣಾ ಬಾಂಡ್‌ಗಳ ಬಗ್ಗೆ ಹೆಚ್ಚು ಮಾತನಾಡಲಿಲ್ಲ. ಆದಾಗ್ಯೂ, ಕೆಲವು ಡಿಜಿಟಲ್ ಮಾಧ್ಯಮಗಳು ಚುನಾವಣಾ ಬಾಂಡ್ ಹಗರಣವನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟವು.
ಮೋದಿ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಚುನಾವಣಾ ಬಾಂಡ್‌ಗಳನ್ನು ಜಾರಿಗೆ ತಂದಿದ್ದರಿಂದ, ಕೇಂದ್ರ ಸರ್ಕಾರದಲ್ಲಿ ಆಗಲೂ ಮತ್ತು ಈಗಲೂ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್, ಬಾಂಡ್‌ಗಳ ಮೂಲಕ ಹಲವು ಕಂಪನಿಗಳಿಂದ ಹೆಚ್ಚು ಹಣ ಪಡೆದಿದ್ದ ಬಿಜೆಪಿಯ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ, ಕರ್ನಾಟಕ ಬಿಜೆಪಿಯ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಹಾಲಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಆದರ್ಶ್ ಅಯ್ಯರ್ ಅವರು ಪ್ರಕರಣ ದಾಖಲಿಸಿದ್ದರು. ಆದರೆ, ಆ ಎಫ್‌ಐಆರ್‌ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಬಿಜೆಪಿಯ ಪ್ರಮುಖರನ್ನು ಆರೋಪ ಮುಕ್ತರನ್ನಾಗಿಸಿದೆ.
ಪ್ರಕರಣ ರದ್ದಾದ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಆದರ್ಶ್ ಅಯ್ಯರ್, “ಇದು ನಮಗೆ ಚಿಕ್ಕ ಹಿನ್ನಡೆ ಅಷ್ಟೇ. ಇದನ್ನ ನಾವು ಸೋಲು ಅಂತ ನೋಡೋದಿಲ್ಲ. ನಾವು ಸುಪ್ರೀಂ ಕೋರ್ಟ್‌ಗೆ ಅಪೀಲು ಹೋಗುತ್ತೇವೆ. ಸಾರ್ವಜನಿಕರ ಹಿತದೃಷ್ಟಿಯಿಂದ ಹೋರಾಟ ಮಾಡುತ್ತೇವೆ” ಎಂದಿದ್ದಾರೆ.
ಈ ಚುನಾವಣಾ ಬಾಂಡ್ ಯೋಜನೆಯನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2018ರ ಜನವರಿ 2ರಂದು ಜಾರಿಗೊಳಿಸಿತು. ಈ ಬಾಂಡ್‌ಗಳನ್ನು 1,000, 10,000, 1 ಲಕ್ಷ, 10 ಲಕ್ಷ ಮತ್ತು 1 ಕೋಟಿ ರೂ. ಮೊತ್ತಗಳಲ್ಲಿ ಕಂಪನಿಗಳು ಮತ್ತು ವ್ಯಕ್ತಿಗಳು ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ದ ಅಧಿಕೃತ ಶಾಖೆಗಳಿಂದ ಖರೀದಿಸಿ, ತಮ್ಮಿಚ್ಛೆಯ ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಡಬಹುದು. ನಂತರ, ಪಕ್ಷಗಳು ಅವುಗಳನ್ನು ನಗದೀಕರಿಸಿಕೊಳ್ಳುತ್ತವೆ. ದಾನಿಗಳ ಹೆಸರು ಮತ್ತು ಇತರ ವಿವರಗಳನ್ನು ಬಾಂಡ್‌ಗಳಲ್ಲಿ ಉಲ್ಲೇಖಿಸುವುದಿಲ್ಲ. ತಮಗೆ ಬಾಂಡ್‌ಗಳ ಮೂಲಕ ದೇಣಿಗೆ ನೀಡಿದವರ ಹೆಸರನ್ನೂ ಪಕ್ಷಗಳು ಬಹಿರಂಗಪಡಿಸುವುದಿಲ್ಲ. ಎಲ್ಲವೂ ಗೌಪ್ಯವಾಗಿರುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.
ಚುನಾವಣಾ ಬಾಂಡ್‌ಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದು, ಅಂತಿಮವಾಗಿ ಚುನಾವಣಾ ಬಾಂಡ್‌ಗಳು ಅಸಾಂವಿಧಾನಿಕವೆಂದು ಸುಪ್ರೀಂ ಕೋರ್ಟ್ ಘೋಷಿಸಿತು. ಚುನಾವಣಾ ಬಾಂಡ್ ಖರೀದಿಸಿದವರು ಮತ್ತು ಅವುಗಳನ್ನು ನಗದೀಕರಿಸಿದ ಪಕ್ಷಗಳ ಹೆಸರನ್ನು ಬಹಿರಂಗಪಡಿಸುವಂತೆ ಎಸ್‌ಬಿಐಗೆ ಕೋರ್ಟ್ ತಾಕೀತು ಮಾಡಿತು.
ಆದರೆ, ಈ ಯೋಜನೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡ ಮೋದಿ ಸರ್ಕಾರ, ‘ಚುನಾವಣಾ ಬಾಂಡ್‌ಗಳ ಮೂಲವನ್ನು ತಿಳಿಯುವ ಹಕ್ಕು ನಾಗರಿಕರಿಗೆ ಇಲ್ಲ’ ಎಂದು ವಾದಿಸಿತು. ಆದಾಗ್ಯೂ, ಅಂತಿಮವಾಗಿ ಸುಪ್ರೀಂ ಕೋರ್ಟ್ ಚಾಟಿಗೆ ಬಗ್ಗಿ, ಎಸ್‌ಬಿಐ ಎಲ್ಲ ಮಾಹಿತಿಯನ್ನು ಒದಗಿಸಿತು. ಆ ಮಾಹಿತಿಯಂತೆ ಚುನಾವಣಾ ಬಾಂಡ್‌ಗಳ ಮೂಲಕ ಹೆಚ್ಚು ಹಣ ಪಡೆದ ಪಕ್ಷ ಬಿಜೆಪಿಯೇ ಆಗಿದೆ. ಈ ಬಾಂಡ್‌ಗಳನ್ನು ಪರಿಚಯಿಸಿದ ಐದು ವರ್ಷಗಳಲ್ಲಿ ಅವುಗಳ ಮೂಲಕ ನೀಡಲಾದ ಒಟ್ಟು ಹಣದಲ್ಲಿ (9,188 ಕೋಟಿ ರೂ.) ಅರ್ಧಕ್ಕಿಂತ ಹೆಚ್ಚು ಅಥವಾ 57% ಬಿಜೆಪಿಗೆ ಹೋಗಿದೆ. ಬಿಜೆಪಿ 6,060 ಕೋಟಿ ರೂ. ದೇಣಿಗೆ ಪಡೆದಿದ್ದರೆ, ಕಾಂಗ್ರೆಸ್ 952 ಕೋಟಿ ರೂ. ದೇಣಿಗೆ ಪಡೆದಿದೆ. ಉಳಿದೆಲ್ಲ ಪಕ್ಷಗಳು ಒಂದಷ್ಟು ದೇಣಿಗೆಗಳನ್ನು ಪಡೆದಿವೆ.
ಆದರೆ, ಮೋದಿ ಸರ್ಕಾರ ಚುನಾವಣಾ ಬಾಂಡ್‌ಗಳ ಮೂಲ, ದೇಣಿಗೆದಾರರ ಮಾಹಿತಿಯನ್ನು ಮುಚ್ಚಿಡಲು ಯತ್ನಿಸುತ್ತಿದ್ದು ಯಾಕೆ? ಉತ್ತರ ಇಷ್ಟೇ: ಚುನಾವಣಾ ಬಾಂಡ್‌ಗಳು ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಮಾಡುವ ಮತ್ತು ಆ ಹಣವನ್ನು ರಾಜಕೀಯಕ್ಕಾಗಿ ಪಕ್ಷಗಳು ಬಳಸಿಕೊಳ್ಳುವ ಒಂದು ವಾಮಮಾರ್ಗ.
ಮೋದಿ-ಶಾ ನೇತೃತ್ವದ ಬಿಜೆಪಿ ಮತ್ತು ಕೇಂದ್ರ ಸರ್ಕಾರವು ಅಂಬಾನಿ, ಅದಾನಿ ಹಾಗೂ ಇನ್ನಿತರ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಜಗಜ್ಜಾಹೀರಾಗಿರುವ ವಿಚಾರ. ಮೋದಿ-ಶಾ ಜೋಡಿ ಅದನ್ನು ಮತ್ತೆ-ಮತ್ತೆ ಸಾಬೀತು ಮಾಡಿದೆ. ಅದರಲ್ಲೂ ಅಂಬಾನಿ-ಅದಾನಿಗಾಗಿ ಭಾರೀ ಕೆಲಸ ಮಾಡಿದೆ. ಅದಕ್ಕಾಗಿಯೇ, ಪ್ರತಿಪಕ್ಷಗಳು ಮೋದಿ-ಶಾ ಮತ್ತು ಅದಾನಿ-ಅಂಬಾನಿಯನ್ನು ‘ನಾವಿಬ್ಬರು ನಮಗಿಬ್ಬರು’ ಎಂದು ಟೀಕಿಸುತ್ತಿವೆ. ತನ್ನ ನೀತಿನಿಯಮಗಳಲ್ಲಿ ದೊಡ್ಡ ಬಂಡವಾಳಿಗರ ಪರವಾದ ನಿಲುವು ತೆಗೆದುಕೊಳ್ಳುತ್ತಿರುವ ಮೋದಿ ಸರ್ಕಾರ, ಅದಕ್ಕೆ ಪ್ರತಿಯಾಗಿ ಚುನಾವಣಾ ಬಾಂಡ್‌ಗಳ ರೂಪದಲ್ಲಿ ದೊಡ್ಡ ಮಟ್ಟದಲ್ಲಿ ದೇಣಿಗೆ ಪಡೆದಿದೆ.
ಈ ಚುನಾವಣಾ ಬಾಂಡ್‌ಗಳ ಮೂಲಕ ಪಕ್ಷಗಳಿಗೆ ದೇಣಿಗೆ ಕೊಟ್ಟಿರುವವರು, ಅದರಲ್ಲೂ ಬಿಜೆಪಿ ಹೆಚ್ಚು ದೇಣಿಗೆ ಕೊಟ್ಟಿರುವವರು ಕೇಂದ್ರ ಸರ್ಕಾರದಿಂದ ನಾನಾ ರೀತಿಯ ಪ್ರಯೋಜನ ಪಡೆದುಕೊಂಡಿರುವವರು. ಕೆಲವು ಕಂಪನಿಗಳು ದೇಣಿಗೆ ಕೊಟ್ಟು ಸರ್ಕಾರದಿಂದ ಬೃಹತ್ ಮೊತ್ತದ ಗುತ್ತಿಗೆಗಳನ್ನು ಪಡೆದುಕೊಂಡಿವೆ. ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಕಂಪನಿಗಳು ಬಿಜೆಪಿಗೆ ದೇಣಿಗೆ ನೀಡಿವೆ. ಇಡಿ, ಸಿಬಿಐನಂತಹ ತನಿಖಾ ಸಂಸ್ಥೆಗಳ ದಾಳಿಗಳಿಂದ ತಪ್ಪಿಸಿಕೊಳ್ಳಲು ಕೆಲವು ಕಂಪನಿಗಳು ಬಿಜೆಪಿಗೆ ದೇಣಿಗೆ ನೀಡಿವೆ. ಗಮನಾರ್ಹವೆಂದರೆ, ಕೆಲವು ಕಂಪನಿಗಳು ತಮ್ಮ ಆದಾಯವನ್ನೂ ಮೀರಿ ಅಧಿಕ ದೇಣಿಗೆ ನೀಡಿವೆ. ಅಂದರೆ, ಇದು ದೇಣಿಗೆಯಲ್ಲ, ಬದಲಾಗಿ ಲಂಚ. ಅರ್ಥಾತ್ ಭ್ರಷ್ಟಾಚಾರ.
ಈ ವರದಿ ಓದಿದ್ದೀರಾ?: ಸಂಸತ್ ಪ್ರವೇಶಿಸಿದ ಪ್ರಿಯಾಂಕಾ ಎಂಬ ಕೋಲ್ಮಿಂಚು: ಬದಲಾಗುವುದೇ ಭಾರತ ರಾಜಕಾರಣ?
ಬಿಜೆಪಿ ಪಡೆದ ಬರೋಬ್ಬರು 6,060 ಕೋಟಿ ರೂ.ಗಳಲ್ಲಿ ಬಹುಪಾಲು ಹಣವು ಪ್ರತಿಫಲ, ಭಯ, ತನಿಖೆ-ದಾಳಿಯಿಂದ ಬಜಾವಾಗಲೆಂದೇ ಕಂಪನಿಗಳು ಕೊಟ್ಟಿರುವ ದೇಣಿಗೆ. ಅದು ಕಪ್ಪುಹಣವೂ ಹೌದು ಎಂಬ ಅಭಿಪ್ರಾಯ-ಆರೋಪಗಳು ಇವೆ.
ಅದಕ್ಕೆ ಪುಷ್ಟಿ ನೀಡುವಂತೆ, ಯಾವುದೇ ಕಂಪನಿಯು ತನ್ನ ಘೋಷಿತ ಲಾಭದ 7.5%ಕ್ಕಿಂತ ಹೆಚ್ಚು ರಾಜಕೀಯ ದೇಣಿಗೆ ನೀಡುವಂತಿಲ್ಲ. ವಿದೇಶಿ ಕಂಪನಿಯು ನಮ್ಮ ದೇಶದ ಯಾವುದೇ ರಾಜಕೀಯ ಪಕ್ಷಕ್ಕೆ ದೇಣಿಗೆ ಕೊಡುವಂತಿಲ್ಲ ಎಂಬ ನಿರ್ಬಂಧವನ್ನು ಮೋದಿ ಸರ್ಕಾರ ತೆಗೆದುಹಾಕಿದೆ. ರಾಜಕೀಯದಲ್ಲಿ ಕಪ್ಪು ಹಣವನ್ನು ಹೂಡಿಕೆ ಮಾಡುವ ಉದ್ದೇಶದಿಂದ ನಕಲಿ ಕಂಪನಿಗಳನ್ನು ತೆರೆಯಲು ದಾರಿ ಮಾಡಿಕೊಟ್ಟಿದೆ.
ಜೊತೆಗೆ, ಈ ಹಿಂದೆ, ಯಾವುದೇ ಕಂಪನಿ ತನ್ನ ಬ್ಯಾಲೆನ್ಸ್ ಶೀಟ್‌ನಲ್ಲಿ ಯಾವುದೇ ಪಕ್ಷಕ್ಕೆ ನೀಡಿದ ದೇಣಿಗೆಯನ್ನು ಘೋಷಿಸಬಹುದೆಂಬ ನಿಯಮವಿತ್ತು. ಅದೇ ರೀತಿ, ಪಕ್ಷಗಳೂ ಕೂಡ ತಾವು ದೇಣಿಗೆ ಪಡೆದ ಮೂಲಗಳ ಮಾಹಿತಿಯನ್ನು ಚುನಾವಣಾ ಆಯೋಗದ ಎದುರು ಘೋಷಿಸಬೇಕಿತ್ತು. ಆದರೆ, ಚುನಾವಣಾ ಬಾಂಡ್‌ಗಳನ್ನು ಜಾರಿಗೆ ತಂದ ಮೋದಿ ಸರ್ಕಾರ, ಆ ಎಲ್ಲ ನಿರ್ಬಂಧಗಳನ್ನು ತೊಡೆದುಹಾಕಿತು. ಯಾರು ಯಾರಿಗೆ ಬೇಕಾದರೂ, ಎಷ್ಟು ಬೇಕಾದರೂ ದೇಣಿಗೆ ಕೊಡಬಹುದೆಂದು ಹೇಳಿತು. ಕೊಟ್ಟವರು-ಪಡೆದುಕೊಂಡವರ ಮಾಹಿತಿಯನ್ನೂ ಗೌಪ್ಯವಾಗಿರಿಸಿತು.
ಇದ್ದ ನಿಯಮ-ನಿರ್ಬಂಧಗಳನ್ನೆಲ್ಲ ಗಾಳಿಗೆ ತೂರಿ, ತೊಡೆದು ಹಾಕಿ ಅಸಂವಿಧಾನಿಕವಾಗಿ, ವಾಮಮಾರ್ಗದಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆಯುವುದು ಅಪರಾಧ. ಅದನ್ನೇ ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ. ಅಂದಮೇಲೆ, ಚುನಾವಣಾ ಬಾಂಡ್‌ಗಳ ಮೂಲಕ ಹಗರಣ ನಡೆದಿಲ್ಲವೇ? ಹಲವಾರು ಕಂಪನಿಗಳು ಬಿಜೆಪಿ ಸಾವಿರಾರು ಕೋಟಿ ರೂ. ದೇಣಿಗೆ ವಸೂಲಿ ಮಾಡಿರುವುದು ತಪ್ಪಲ್ಲವೇ? ಬಾಂಡ್‌ಗಳ ಮೂಲಕ ದೇಣಿಗೆ ಕೊಟ್ಟವರ ಮಾಹಿತಿಯನ್ನು ಗೌಪ್ಯವಾಗಿಟ್ಟಿದ್ದು ಪ್ರಜಾಪ್ರಭುತ್ವ ವಿರೋಧಿಯಲ್ಲವೇ?
ಈ ಬೃಹತ್ ಹಗರಣ ಅಥವಾ ಹಗರಣದ ಭಂಡಾರದಲ್ಲಿ ಆರೋಪಿಗಳು, ತಪ್ಪಿತಸ್ಥರು ಇರಲೇಬೇಕಲ್ಲವೇ? ಆ ಅಪರಾಧಿಗಳು – ಹಣಕಾಸು ಮಸೂದೆಯಲ್ಲಿ ಮಂಡಿಸಿ ಚುನಾವಣಾ ಬಾಂಡ್ ಎಂಬ ಭ್ರಷ್ಟಾಚಾರವನ್ನು ಜಾರಿಗೆ ತಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹೆದರಿಸಿ, ಬೆದರಿಸಿ, ಪ್ರತ್ಯುಪಕಾರ ನೀಡಿ ಕಾನೂನು ಬಾಹಿರವಾಗಿ ಚಂದಾ ವಸೂಲಿ ಮಾಡಿದ್ದು ಬಿಜೆಪಿ ರಾಷ್ಟ್ರ ಮತ್ತು ರಾಜ್ಯಾಧ್ಯಕ್ಷರೇ ಅಲ್ಲವೇ? ಅವರ ವಿರುದ್ದದ ಎಫ್‌ಐಆರ್‌ಅನ್ನು ನ್ಯಾಯಾಲಯ ರದ್ದುಗೊಳಿಸಿದರೆ, ಈ ಹಗರಣದಲ್ಲಿ ಆರೋಪಿಗಳು ಯಾರು? ಈ ಹಗರಣದಲ್ಲಿ ಶಿಕ್ಷೆ ಯಾರಿಗೆ? ಅಥವಾ ಇದು ಆರೋಪಿ-ಅಪರಾಧಿಗಳೇ ಇಲ್ಲದ ಹಗರಣವೇ?