ಅಕಾಲಿಕ ಮಳೆಯಿಂದಾಗಿ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ ಮತ್ತು ರಾಗಿ ಬೆಳೆ ನೆಲಕಚ್ಚಿ ಈಗಾಗಲೇ ಹೈರಾಣಾಗಿರುವ ರೈತರಿಗೆ, ಕಟಾವು ಯಂತ್ರ ಬಾಡಿಗೆ ಹೆಸರಿನಲ್ಲಿ ನಡೆಯುತ್ತಿರುವ ಸುಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಎಕ್ಸ್ ತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, “ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರೇ,
ಸ್ವಾಭಿಮಾನಿ ಸಮಾವೇಶ, ಜನಕಲ್ಯಾಣ ಸಮಾವೇಶದ ಸಂಭ್ರಮದಲ್ಲಿ ತಾವು ರಾಜ್ಯದ ಕೃಷಿ ಸಚಿವರು ಅನ್ನೋದನ್ನೇ ಮರೆತಿರುವಂತಿದೆ. ಕಟಾವು ಯಂತ್ರಗಳಿಗೆ ಜಿಲ್ಲಾಡಳಿತಗಳು ನಿಗದಿ ಪಡಿಸಿರುವ ದರವನ್ನ ಮೀರಿ ಹೆಚ್ಚು ದರ ವಸೂಲಿ ಮಾಡುವ ಮೂಲಕ ರೈತರನ್ನು ಸುಲಿಗೆ ಮಾಡಲಾಗುತ್ತಿದೆ. ನಿರರ್ಥಕ ಸಮಾವೇಶಗಳಲ್ಲಿ ತಮ್ಮ ಸಮಯ ವ್ಯರ್ಥ ಮಾಡುವ ಬದಲು ರೈತರಿಗೆ ಉಪಯೋಗ ಆಗುವ ಕೆಲಸ ಮಾಡಿ ಪುಣ್ಯ ಕಟ್ಟಿಕೊಳ್ಳಿ. ಕಟಾವು ಯಂತ್ರಗಳು ಕೈಗೆಟಕುವ ದರದಲ್ಲಿ ರೈತರಿಗೆ ಸಿಗುವಂತೆ ಯಾವುದಾದರೂ ಪರಿಹಾರ ಕಂಡುಕೊಳ್ಳುವ ಮಾರ್ಗ ಹುಡುಕಿ ರೈತರ ಸಂಕಷ್ಟಕ್ಕೆ ಸ್ಪಂದಿಸಿ” ಎಂದು ಆಗ್ರಹಿಸಿದ್ದಾರೆ.
“ಫೆಂಗಲ್ ಚಂಡಮಾರುತದಿಂದಾಗಿ ರಾಮನಗರ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ 70,000 ಎಕರೆ ಪ್ರದೇಶದಲ್ಲಿ ಭತ್ತ, ರಾಗಿ ಬೆಳೆಗಳು ನೆಲಕಚ್ಚಿವೆ. ಹುಲ್ಲು ಕೊಳೆತು ಜಾನುವಾರುಗಳ ಮೇವಿಗೂ ಕೊರತೆಯಾಗಿದೆ. ಸಿಎಂ ಸಿದ್ದರಾಮಯ್ಯ, ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರೇ, ನಿಮ್ಮ ಸ್ವಾಭಿಮಾನಿ, ಅಲ್ಲ ಜನಕಲ್ಯಾಣ ಸಮಾವೇಶದ ಕಿತ್ತಾಟದ ಮಧ್ಯದಲ್ಲಿ ಬಿಡುವು ಮಾಡಿಕೊಂಡು ಒಮ್ಮೆ ರಾಮನಗರ ಜಿಲ್ಲೆಗೆ ಭೇಟಿ ನೀಡಿ ಅಲ್ಲಿನ ರೈತರ ಕಷ್ಟ ಕೇಳಿ. ಬೆಳೆ ನಷ್ಟ ಪರಿಹಾರ ಕೊಡಿಸುವ ಮೂಲಕ ಅನ್ನದಾತರ ನೆರವಿಗೆ ಬನ್ನಿ” ಎಂದು ಒತ್ತಾಯಿಸಿದ್ದಾರೆ.