ಆಶಾ ಕಾರ್ಯಕರ್ತೆಯರಿಗೆ 3000 ಗೌರವಧನವನ್ನು ಹೆಚ್ಚಿಗೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ರಾಯಚೂರು ನಗರ ಶಾಸಕ ಶಿವರಾಜ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಈಗಿರುವ ಆಶಾ ಕಾರ್ಯಕರ್ತೆಯರಿಗೆ ಇರುವ ಗೌರವಧನ ಮತ್ತು ಪ್ರೋತ್ಸಾಹಧನ ಸೇರಿಸಿ ಒಟ್ಟು ರೂ.12000 ಮತ್ತು ತಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ರೂ 3000 ಹೆಚ್ಚಳ ಸೇರಿಸಿ, ಒಟ್ಟು ರೂ.15000 ಮಾಸಿಕ ಗೌರವಧನ ನಿಗದಿಯಾಗಬೇಕು ಎಂದು ಆಗ್ರಹಿಸಿದರು.
ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಠ ರೂ.3000 ರಷ್ಟು ಗೌರವಧನವನ್ನು ಹೆಚ್ಚಿಗೆ ಮಾಡಬೇಕು. ಮೊಬೈಲ್ ಕೆಲಸಗಳನ್ನು ಒತ್ತಾಯ ಪೂರ್ವಕವಾಗಿ ಮಾಡಿಸಿಕೊಳ್ಳುತ್ತಿರುವುದನ್ನು ಕೈಬಿಡಬೇಕು ಅಥವಾ ಮೊಬೈಲ್ ಡಾಟಾ ಒದಗಿಸಿ, ಮೊಬೈಲ್ ಕೆಲಸಗಳಿಗೆ ಪ್ರೋತ್ಸಾಹಧನ ನಿಗದಿ ಮಾಡಬೇಕು ಹಾಗೂ ಯಾರಿಗೆ ಮೊಬೈಲ್ ಬಳಸಲು ಆಗುವುದಿಲ್ಲವೊ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಹೇಳಿದರು.
ಮುಖ್ಯಮಂತ್ರಿಗಳು ಹಿಂದೆ ಆಶಾ ಕಾರ್ಯಕರ್ತೆಯರು ಫೆಬ್ರುವರಿ ತಿಂಗಳಲ್ಲಿ ಹೋರಾಟ ಮಾಡಿದಾಗ ಮುಖ್ಯಮಂತ್ರಿಗಳು ನನ್ನ ಮೇಲೆ ಭರವಸೆ ಇಡಿ ನನ್ನನ್ನು ನಂಬಿ ನಿಮ್ಮ ಸಮಸ್ಯೆ ಬಗೆಹರಿಸುವೆ ಎಂದಿದ್ದರು. ಆದರೆ ಇಲ್ಲಿಯವರೆಗೂ ಆಶಾ ಕಾರ್ಯಕರ್ತೆಯರ ಸಮಸ್ಯೆ ಬಗೆಹರಿಸಿಲ್ಲ. ಮುಂದೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ವೇತನದ ಬಗ್ಗೆ ನಿಲುವು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ ಅನಿರ್ದಿಷ್ಟ ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಕೇರಳ | ಸಾರ್ವಜನಿಕ ಸ್ಥಳದಲ್ಲೇ ಪತ್ನಿಯನ್ನು ವಾಹನ ಸಮೇತ ಪೆಟ್ರೋಲ್ ಹಾಕಿ ಸುಟ್ಟು ಕೊಂದ ಪತಿ!
ಬೆಳಗಾವಿ ಸುವರ್ಣ ಸೌಧದಲ್ಲಿ ಜರುಗುವ ಅಧಿವೇಶನದಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ವೇತನ ನಿಗದಿಪಡಿಸುವಂತೆ ಧ್ವನಿ ಎತ್ತಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು. ಕೂಡಲೇ ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯುವೆ ಹಾಗೂ ಅಧಿವೇಶನದಲ್ಲಿ ನಿಮ್ಮ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವೆ ಎಂದು ಶಾಸಕರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆ ಅಧ್ಯಕ್ಷರಾದ ಲಕ್ಷ್ಮಿ, ಕಾರ್ಯದರ್ಶಿ ಚೈತ್ರಾ, ಜುಲೇಖಾ, ನಸೀಮಾ, ರಾದಾ, ಮಹಾದೇವಿ, ಸಂಧ್ಯಾ,ಇನ್ನಿತರರು ಹಾಜರಿದ್ದರು.
