ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯರ ಸರಣಿ ಸಾವಿನ ಪ್ರಕರಣಗಳ ಕುರಿತಂತೆ ಕಠಿಣ ಕ್ರಮಕ್ಕೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ.
“ನಗರದ ಸಾರ್ವಜನಿಕ ಆಸ್ಪತ್ರೆ ಸಾವಿನ ಮನೆಯಂತಾಗಿದ್ದು, ಹೆರಿಗೆಯ ನಂತರ ಅಸ್ವಸ್ಥಗೊಂಡ ಮೂವರು ಅಮಾಯಕ ಮಹಿಳೆಯರು, ವೈದ್ಯರು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಗಳು ಈ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿವೆ” ಎಂದು ಪ್ರತಿಭಟನಾಕಾರರು ಆರೋಪಿಸಿದರು.
“ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದ ರೇಣುಕಮ್ಮ, ತಾಲೂಕಿನ ಆರ್ ಎಚ್ ಕ್ಯಾಂಪ್-3ರ ಮಹಿಳೆ ಮೌಸುಂಬಿ ಮಹೇಶ್ವರ, ಉದ್ದಾಳಜಿ ಗ್ರಾಮದ ಚಂದ್ರಕಲಾ ಸೇರಿದಂತೆ ಮೂವರು ಮಹಿಳೆಯರು ಹೆರಿಗೆ ನಂತರ ಸಾವನ್ನಪ್ಪಿದ್ದಾರೆ” ಎಂದು ಆಗ್ರಹಿಸಿದರು.
“ಮಹಿಳೆಯರು ಮೃತಪಟ್ಟು, ನವಜಾತ ಶಿಶುಗಳು ತಾಯಿಯನ್ನು ಕಳೆದುಕೊಂಡು ಅನಾಥವಾಗಿವೆ. ಇದರಿಂದಾಗಿ ಈ ಮಹಿಳೆಯರ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ. ಆದರೂ ಅಧಿಕಾರಿಗಳು ತಮಗೆ ಸಂಬಂಧವಿಲ್ಲದಂತೆ ಇದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಬಹುತೇಕ ವೈದ್ಯರು ಕರ್ತವ್ಯದ ವೇಳೆಯಲ್ಲಿಯೂ ಖಾಸಗಿ ಆಸ್ಪತ್ರೆ ನಡೆಸುತ್ತಿರುವುದು, ಹಲವು ಸೌಲಭ್ಯಗಳ ಕೊರತೆಯೇ ಕಾರಣವಾಗಿದೆ. ಹಣ ಮಾಡುವ ದುರುದ್ದೇಶದಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳು, ಗರ್ಭಿಣಿಯರು ಹಾಗೂ ಬಾಣಂತಿಯರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ ವೈದ್ಯರು ಸದಾ ತಮ್ಮ ಖಾಸಗಿ ಆಸ್ಪತ್ರೆಯಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾರೆ” ಎಂದರು.
“ವೈದ್ಯರು ಒಬ್ಬೊಬ್ಬರು ಎರಡು ಖಾಸಗಿ ಆಸ್ಪತ್ರೆಗಳನ್ನು ನಡೆಸುವ ಮೂಲಕ, ಸರ್ಕಾರಿ ಆಸ್ಪತ್ರೆಗೆ ಬಂದ ರೋಗಿಗಳನ್ನು ತಮ್ಮದೇ ಕಡೆಯವರ ಸ್ಕ್ಯಾನಿಂಗ್, ಲ್ಯಾಬೊರೇಟರಿ, ರಕ್ತ ಪರೀಕ್ಷಾ ಕೇಂದ್ರಗಳಿಗೆ ರೋಗಿಗಳನ್ನು ಕಳುಹಿಸುವ ಹಣ ಮಾಡುತ್ತಿದ್ದು, ಸರ್ಕಾರಿ ಆಸ್ಪತ್ರೆ ಎಂಬುದು ಖಾಸಗಿ ಆಸ್ಪತ್ರೆ ನಡೆಸುವ ಸರ್ಕಾರಿ ವೈದ್ಯರ ಆಡೋಂಬಲವಾಗಿದೆ. ಸಾರ್ವಜನಿಕರಿಗೆ ಸಮರ್ಪಕ ಚಿಕಿತ್ಸೆ ದೊರೆಯದೆ ಹೆಜ್ಜೆ ಹೆಜ್ಜೆಗೂ ತೊಂದರೆ ಅನುಭವಿಸುತ್ತಿದ್ದಾರೆ” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಪ್ರತಿಭಟನೆಯಲ್ಲಿ ಸಂಘಪರಿವಾರ ಕಾರ್ಯಕರ್ತರ ಪುಂಡಾಟ; ಪತ್ರಕರ್ತರ ಮೇಲೆ ಹಲ್ಲೆ
“ಸಾವಿನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆಗೆ ಆದೇಶಿಸಿ ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಕಠಿಣ ಕ್ರಮ ಜರುಗಿಸಬೇಕು. ಹೀಗೆ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ತಾಲೂಕಧ್ಯಕ್ಷ ಮಂಜುನಾಥ ಗಾಣಿಗೇರ, ರಾಜ್ಯ ಕಾರ್ಯಾಧ್ಯಕ್ಷ ಉಮೇಶ್ ಗೌಡ್ ಅರಳಹಳ್ಳಿ, ಜಿಲ್ಲಾ ಸಂಚಾಲಕ ಹುಸೇನ್ ಬಾಷಾ, ಬುದೇಶ್ ಮರಾಠ, ರಾಘವೇಂದ್ರ ಸೇರಿದಂತೆ ಇತರರು ಇದ್ದರು.
