ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದಲ್ಲಿ ಪ್ರಗತಿ ಪರಿಶೀಲನಾ ಸಭೆಗಾಗಿ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಅವರಿಗೆ ಚನ್ನರಾಯಪಟ್ಟಣ ಹೋಬಳಿಯ ‘ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ’ಯ ರೈತರು ಘೇರಾವ್ ಹಾಕಿದ್ದಾರೆ. ಭೂಸ್ವಾಧೀನದ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಚಳಿಗಾಲದ ಅಧಿವೇಶನ ಮುಗಿಯುವುದರೊಳಗೆ ನಿರ್ಧರ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಅಂತಿಮ ಗಡುವು ನೀಡಿದ್ದಾರೆ.
ಸುದೀರ್ಘ 975 ದಿನಗಳಿಂದ ಭೂಸ್ವಾಧೀನವನ್ನು ವಿರೋಧಿಸಿ ಚನ್ನರಾಯಪಟ್ಟಣದ ನಾಡಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ರೈತರ ತಾಳ್ಮೆ ಕಟ್ಟೆಯೊಡೆದಿದ್ದು, ಅನ್ನದಾತರನ್ನು ನಿರ್ಲಕ್ಷಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದರು.
“ಇಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದಾಗಿನಿಂದಲೂ ಕೂಡ ಒಂದಲ್ಲೊಂದು ನೆಪ ಹೇಳುತ್ತಿದೆ. ಆ ಮೂಲಕ ದಿನದೊಡುತ್ತಿರುವ ಸಚಿವರು ರೈತ ವಿರೋಧಿಯಾಗಿ ವರ್ತಿಸುತ್ತಿದ್ದಾರೆ. ಇವರಿಗೆ ರೈತರ ಭೂಮಿಯನ್ನು ಕೈಬಿಡುವ ಯಾವುದೇ ಯೋಚನೆ ಇದ್ದಂತೆ ಕಾಣುತ್ತಿಲ್ಲ. ಇವರು ಕೂಡ ಹಿಂದಿನ ಸರ್ಕಾರಗಳ ರೀತಿಯಲ್ಲೇ ಬಂಡವಾಳಶಾಹಿಗಳ ಪರವಾಗಿ ವರ್ತಿಸುತ್ತಿದ್ದಾರೆ” ಸ್ಥಳದಲ್ಲಿದ್ದ ರೈತರು ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ರೈತರಿಗೆ ಸಮಜಾಯಿಷಿ ನೀಡಲು ಮುಂದಾದ ಮಂತ್ರಿಗಳು, “ಬೆಳಗಾವಿ ಅಧಿವೇಶನ ಮುಗಿಯುವುದರೊಳಗಾಗಿ ಈ ಸಮಸ್ಯೆಯನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ಹೇಳಿದರು. ಸಚಿವರ ಉತ್ತರಕ್ಕೆ ಸಮಾಧಾನಗೊಳ್ಳದ ಪ್ರತಿಭಟನಾನಿರತರು, “ನೀವು ಅಧಿಕಾರಕ್ಕೆ ಬಂದಾಗಿನಿಂದ ಇಂತಹ ಹತ್ತಾರು ಗಡುವುಗಳನ್ನು ನೀಡುತ್ತಲೇ ಬಂದಿದ್ದೀರಿ, ಯಾವ ಬಾರಿಯೂ ಕೊಟ್ಟಮಾತಿನಂತೆ ನಡೆದುಕೊಳ್ಳಲೇ ಇಲ್ಲ. ನಾವು ನಿಮ್ಮ ಮನೆಗೆ ಅಲೆಯುತ್ತಲೇ ಇದ್ದೇವೆ, ಇಷ್ಟಾದರೂ ನಮ್ಮ ಸಮಸ್ಯೆ ಬಗ್ಗೆ ಹರಿಸಿಲ್ಲ. ಆದ್ದರಿಂದ ನೀವು ಇಂದು ನೀಡುತ್ತಿರುವ ಗಡುವಿನಲ್ಲಿ ಸಮಸ್ಯೆ ಬಗೆಹರಿಸುತ್ತೀರೆಂಬ ಯಾವ ಭರವಸೆಯೂ ಇಲ್ಲ” ಎಂದು ಮಂತ್ರಿಗಳಿಗೆ ತಿರುಗೇಟು ನೀಡಿದರು.
“ರೈತರನ್ನು ಕಡೆಗಣಿಸುವ ಉದ್ದೇಶ ನನಗಿಲ್ಲ. ನಾನೂ ನಿಮ್ಮವಿಷಯವನ್ನು ಸರ್ಕಾರದ ಮುಂದೆ ಮಾತನಾಡುತ್ತಲೇ ಬಂದಿದ್ದೇನೆ. ಸಮಸ್ಯೆ ಬಗೆಹರಿಸಲು ಸಾದ್ಯವಾಗದಿರುವುದರ ಬಗ್ಗೆ ನನಗೂ ಬೇಸರವಿದೆ. ಇನ್ನು ಮುಂದೆ ನಾವೂ ಕಾಯಿಸಲು ಸಾಧ್ಯವಿಲ್ಲ. ಕೈಗಾರಿಕಾ ಸಚಿವರಾದ ಎಂಬಿ ಪಾಟೀಲ್ ರವರು ಹೊರದೇಶದ ಪ್ರಯಾಣದಲ್ಲಿರುವ ಕಾರಣ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಧಿವೇಶನದ ಸಂದರ್ಭದಲ್ಲಿ ಅವರು ವಾಪಸ್ಸಾಗಲಿದ್ದು, ಅವರೊಂದಿಗೆ ಚರ್ಚಿಸಿ ತುರ್ತಾಗಿ ಕ್ರಮ ಕೈಗೊಳ್ಳುತ್ತೇವೆ” ಎಂದರು.
“ಅದಕ್ಕೂ ಮುಂಚೆ ಕೆಐಎಡಿಬಿ ಅಧಿಕಾರಿಗಳು ಮತ್ತು ರೈತರನ್ನೊಳಗೊಂಡ ಜಿಲ್ಲಾಧಿಕಾರಿಗಳ ಸಭೆ ನಡೆಸಿ, ಆ ಸಭೆಯ ನಿರ್ಣಯಗಳೊಂದಿಗೆ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳ ಸಭೆಗೆ ಬನ್ನಿ. ಅಲ್ಲಿ ರೈತರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರುತ್ತೇವೆ” ಎಂದು ತಿಳಿಸಿದರು.
ಸ್ಥಳದಲ್ಲಿಯೇ ಹಾಜರಿದ್ದ ಜಿಲ್ಲಾಧಿಕಾರಿಗಳು, ರೈತನಿಯೋಗ ಮತ್ತು ಕೆಐಎಡಿಬಿ ಅಧಿಕಾರಿಗಳ ಸಭೆಯನ್ನು ಇದೆ ಶನಿವಾರ ಡಿಸೆಂಬರ್ 7ನೇ ತಾರೀಕಿನಂದು ನಡೆಸುವುದಾಗಿ ತಿಳಿಸಿದರು. ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ರೈತರಲ್ಲಿ ಮನವಿ ಮಾಡಿಕೊಂಡರು.
“ಇದು ಅಂತಿಮ ಗಡುವು, ಸಚಿವರು ಹೇಳಿದಂತೆ ಅಧಿವೇಶನ ಮುಗಿಯುವುದರೊಳಗಾಗಿ ಸರ್ಕಾರ ಭೂಸ್ವಾಧೀನ ಕೈ ಬಿಡುವ ನಿರ್ಣಯವನ್ನು ಪ್ರಕಟಿಸದಿದ್ದರೆ ಮುಂದಿನ ಪ್ರಗತಿ ಪರಿಶೀಲನಾ ಸಭೆ ಸೇರಿದಂತೆ, ಮಂತ್ರಿಗಳು ಹಾಜರಾಗುವ ಎಲ್ಲಾ ಕಾರ್ಯಕ್ರಮಗಳಲ್ಲೂ ರೈತರು ಘೇರಾವ್ ಹಾಕೋಣ, ಅನಿರ್ದಿಷ್ಟ ಅವಧಿ ಹೋರಾಟದ ಸಾವಿರ ದಿನಕ್ಕೆ ಕಾಲಿಡುವ ಸಂಧರ್ಭದಲ್ಲಿ ಉಗ್ರ ಹೋರಾಟವನ್ನು ರೂಪಿಸಿ, ಮಂತ್ರಿಗಳಿಗೆ ಸರಿಯಾದ ಪಾಠ ಕಲಿಸೋಣ” ಎಂದು ತೀರ್ಮಾನಿಸಲಾಗಿದೆ ಎಂದು ಮುಖಂಡರು ಮಾಧ್ಯಮಗಳಿಗೆ ತಿಳಿಸಿದರು.
ಪ್ರತಿಭಟನೆಯಲ್ಲಿ ಹೋರಾಟಗಾರರದ ಕಾರಳ್ಳಿ ಶ್ರೀನಿವಾಸ್, ವಕೀಲರಾದ ಸಿದ್ದಾರ್ಥ್, ರೈತ ಮುಖಂಡರಾದ ನಲ್ಲಪ್ಪನಹಳ್ಳಿ ನಂಜಪ್ಪ, ಅಶ್ವತಪ್ಪ, ಮಾರೇಗೌಡ, ಜಯರಾಮೇಗೌಡ, ಮೋಹನ್, ವೆಂಕಟರಮಣಪ್ಪ, ನಾರಾಯಣಮ್ಮ, ಲಕ್ಷ್ಮಮ್ಮ, ಪ್ರಮೋದ್, ಮುಕುಂದ, ನಂದನ್, ಗೋಪಿನಾಥ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.