ಶಾಲೆಗೆ ತೆರಳುವ ದಾರಿಯಲ್ಲಿ ಪುಢಾರಿಗಳ ಕಿರುಕುಳ ತಾಳದೆ ಮನನೊಂದ 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜೆಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ನಡೆದಿದೆ.
ಸಂಗಮೇಶ ಜುಂಜಾವರ ಎಂಬ ಯುವಕ ನಿತ್ಯ ಬಾಲಕಿಗೆ ಕಿರುಕುಳ ನೀಡುತ್ತಿದ್ದ, ಪ್ರೀತಿಸುವಂತೆ ಬೆನ್ನು ಬಿದ್ದಿದ್ದ. ಮದುವೆಗೂ ಒತ್ತಾಯಿಸಿ ಅಸಭ್ಯವಾಗಿ ವರ್ತಿಸಿ, ಮೈಕೈ ಮುಟ್ಟುತ್ತಲೇ ಕಿರುಕುಳ ನೀಡುತ್ತಿದ್ದ. ಈ ಕುರಿತು ಆರೋಪಿ ವಿರುದ್ಧ ಬಾಲಕಿ ಸೆಪ್ಟೆಂಬರ್ 1ರಂದೇ ಮುದ್ದೇಬಿಹಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಎಫ್ಐಆರ್ ಕೂಡಾ ದಾಖಲಾಗಿತ್ತು ಎಂದು ತಿಳಿದುಬಂದಿದೆ.
ಆಷ್ಟಾದರೂ ಯುವಕನಿಂದ ಕಿರುಕುಳ ಮುಂದುವರೆದಿದ್ದು, ಅದನ್ನು ತಾಳದೆ ವಿದ್ಯಾರ್ಥಿನಿ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.
“ಮೌನೇಶ ಮಾದರ, ಸಂಗಮೇಶ ಜುಂಜಾವರ ಹಾಗೂ ಚಿದಾನಂದ ಕಟ್ಟಿಮನಿ ಸೇರಿದಂತೆ 10 ರಿಂದ 12 ಮಂದಿ ಯುವಕರು ಗಾಂಜಾ ಮತ್ತಿನಲ್ಲಿರುತ್ತಿದ್ದು, ಶಾಲೆಗೆ ಹೋಗುತ್ತಿರುವ ಹುಡುಗಿಯರನ್ನು ಪೀಡಿಸುತ್ತ ನಿತ್ಯ ಹುಚ್ಚಾಟ ಪ್ರದರ್ಶಿಸುತ್ತಿದ್ದರು” ಎಂದು ಸ್ಥಳೀಯರು ಆರೋಪಿಸಿದ್ದಾರೆ.

“ಘಟನೆಗೆ ಸಂಬಂಧಿಸಿದಂತೆ ಪುಢಾರಿಗಳು ಇನ್ನೂ ಸಾಕಷ್ಟು ಹೆಣ್ಣುಮಕ್ಕಳಿಗೆ ಕಿರುಕುಳ ನೀಡಿದ್ದಾರೆ. ಇಂತಹ ನೀಚ ಪ್ರವೃತ್ತಿಯ ಪುಢಾರಿಗಳಿಂದ ಇನ್ನಿತರ ಕುಟುಂಬಸ್ಥರು ಭಯದಲ್ಲಿದ್ದಾರೆ. ಆದ್ದರಿಂದ ಆರೋಪಿಯನ್ನು ಗಲ್ಲು ಶಿಕ್ಷೆಗೊಳಪಡಿಸಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪೊಲೀಸರ ಭೇಟಿ ಘಟನಾ ಸ್ಥಳಕ್ಕೆ ಮುದ್ದೇಬಿಹಾಳದ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಹಾಗೂ ಪಿಎಸ್‌ಐ ತಿಪ್ಪಾರೆಡ್ಡಿಯವರು ಭೇಟಿ ಮಾಹಿತಿ ಕಲೆ ಹಾಕಿದ್ದಾರೆ.
ಮುದ್ದೇಬಿಹಾಳ ಪಿಎಸ್‌ಐ ಈ ದಿನ.ಕಾಮ್‌ಗೆ ಮಾತನಾಡಿ, “ಕಿಡಿಗೇಡಿಗಳ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದವರಿಗೆ ಹುಡುಕಾಟ ನಡೆದಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಬಾಲಕಿಯರನ್ನು ಕಟ್ಟಿ ಹಾಕಿ ಕಿರುಕುಳ, ವೇಶ್ಯಾವಾಟಿಕೆಗೆ ಒತ್ತಾಯ; ಬಾಲಮಂದಿರದಲ್ಲಿ ಅಧೀಕ್ಷಕಿಯ ವಿಕೃತಿ
“ಘಟನೆಯಲ್ಲಿ 5 ಮಂದಿ ಯುವಕರಿದ್ದಾರೆ. ಈಗಾಗಲೇ ಘಾಳಪೂಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಗೆ ಬಲವಂತವಾಗಿ ತಾಳಿಕಟ್ಟಿದ್ದ. ಇದೀಗ ಆತ್ಮಹತ್ಯೆ ಮಾಡಿಕೊಂಡ ಬಾಲಕಿಯ ಪ್ರಕರಣದ ಆರೋಪಿ ಸಂಗಮೇಶ ಜುಂಜಾವರ, ಗ್ಯಾಂಗ್‌ನ ಚಿದಾನಂದ ಕಟ್ಟಿಮನಿ ಹಾಗೂ ಮೌನೇಶ ಮಾದರ ಸೇರಿದಂರೆ ಮೂವರನ್ನು ಬಂಧಿಸಲಾಗಿದೆ. ಉಳಿದವರು ತಲೆಮೆರೆಸಿಕೊಂಡಿದ್ದು, ಶೀಘ್ರವೇ ಅವರನ್ನು ವಶಕ್ಕೆ ಪಡೆದು ತನಿಖೆಗೊಳಪಡಿಸುತ್ತೇವೆ” ಎಂದು ಹೇಳಿದರು.
ಮಗಳು ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳುವ ಬದಲು ಪುಢಾರಿಗಳ ಕಿರುಕುಳಕ್ಕೆ ಪ್ರಾಣ ಬಿಟ್ಟಿದ್ದಾಳೆಂದು ಅಳುತ್ತಿರುವ ಘಟನೆಗೆ ಸುತ್ತಲ್ಲಿನ ಜನರ ಕಣ್ಣು ನೀರು ತುಂಬಿಕೊಂಡಿತು. ಮೃತ ಬಾಲಕಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
