ಕಳೆದ ಬೊಮ್ಮಾಯಿ ಸರ್ಕಾರದಲ್ಲಿ ಎಷ್ಟೆಲ್ಲ ರಂಪ-ರಾದ್ಧಾಂತ ಮಾಡಿದ ಆರ್‌ಎಸ್‌ಎಸ್‌ನವರು, ಆಗಲೂ ಮುಂಚೂಣಿಗೆ ಬರಲಿಲ್ಲ. ಸೋಲಿನ ಹೊಣೆ ಹೊರಲಿಲ್ಲ. ಈಗ ಬಿಜೆಪಿಯಲ್ಲಿ ಇಷ್ಟೆಲ್ಲ ಬೀದಿ ಬಡಿದಾಟವಾಗುತ್ತಿದೆ, ಈಗಲೂ ಮುನ್ನೆಲೆಗೆ ಬರುತ್ತಿಲ್ಲ. ಮಾತನಾಡುತ್ತಿಲ್ಲ. ಹಾಗಾದರೆ ಅವರಿಗೆ ಬೇಕಾಗಿರುವುದು ಏನು?
‘ಎಲ್ಲಾ ಸಂತೋಷದಾಟ. ಪಕ್ಷ ಹೀನಾಯವಾಗಿ ಸೋತಿದೆ. ಆ ಸೋಲನ್ನು ಯಡಿಯೂರಪ್ಪನವರ ತಲೆಗೆ ಕಟ್ಟಲು ಎಳಸು ನಾಯಕರನ್ನು ಛೂ ಬಿಟ್ಟಿದ್ದಾರೆ. ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಯಾರಿಗೆ ಯಾರ ಮೇಲೂ ಹಿಡಿತವಿಲ್ಲದಂತಾಗಿದೆ. ಹೈಕಮಾಂಡಿಗೆ ಇಲ್ಲಿನ ನಾಯಕರ ಬಗ್ಗೆ ನಂಬಿಕೆಯೇ ಹೋಗಿದೆ. ರಾಜ್ಯ ರಾಜಕಾರಣವೂ ಬೇಡವಾಗಿದೆ.’
-ಇದು, ಕಳೆದ 2023ರ ವಿಧಾನಸಭಾ ಚುನಾವಣೆಯ ನಂತರ, ಭಾರತೀಯ ಜನತಾ ಪಕ್ಷ ಹೀನಾಯವಾಗಿ ಸೋಲು ಕಂಡ ಬಳಿಕ, ವಿಪಕ್ಷ ನಾಯಕ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಯಾರು ಎನ್ನುವುದು ಆರು ತಿಂಗಳಾದರೂ ಬಗೆಹರಿಯದೆ ಕಗ್ಗಂಟಾಗಿದ್ದಾಗ ಬಿಜೆಪಿಯ ಹಿರಿಯ ನಾಯಕರೊಬ್ಬರು, ಬಹಳ ಬೇಸರದಿಂದ ಹೇಳಿದ ಮಾತು.
ಇದಾಗಿ ಇಲ್ಲಿಗೆ ಒಂದೂವರೆ ವರ್ಷಗಳೇ ಕಳೆದುಹೋಗಿವೆ. ಆಗ ವಿಧಾನಸಭಾ ಚುನಾವಣೆಯ ಫಲಿತಾಂಶವಾದರೆ, ಈಗ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಮೂರಕ್ಕೆ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದೆ. ಈಗಲೂ ಅದೇ ಆಟ- ಉಪಚುನಾವಣೆಯ ಸೋಲನ್ನು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರ ತಲೆಗೆ ಕಟ್ಟುವ, ಕುರ್ಚಿಯಿಂದ ಕೆಳಗಿಳಿಸುವ ಆಟ ನಡೆಯುತ್ತಿದೆ.
ಆಗ ಯಡಿಯೂರಪ್ಪನವರು ಪಕ್ಷದಲ್ಲಿ ಹೊಂದಿದ್ದ ಹಿಡಿತದಿಂದ ಮುಕ್ತ ಮಾಡಲು, ವಯಸ್ಸು ಮತ್ತು ಆರೋಗ್ಯದ ನೆಪವೊಡ್ಡಿ ಅವರನ್ನು ಪರ್ಮನೆಂಟಾಗಿ ಮನೆಯಲ್ಲಿ ಕೂರಿಸುವ ಷಡ್ಯಂತ್ರ ನಡೆದಿತ್ತು. ಅದಕ್ಕೆ ಸಾವ್ರರ್ತಿಕ ಚುನಾವಣೆಯ ಸೋಲನ್ನು ಹಿರಿಯ ನಾಯಕನ ತಲೆಗೆ ಕಟ್ಟಲಾಗಿತ್ತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಾರ್ಕಡವಾಡಿ ಎಂಬ ಪುಟ್ಟ ಹಳ್ಳಿಯ ಅಣಕು ಮತದಾನಕ್ಕೆ ಈ ಪರಿ ಬೆಚ್ಚಿಬೀಳುವುದೇಕೆ?
ಅಸಲಿಗೆ, ಆ ಸೋಲಿಗೆ ಸಂಪೂರ್ಣ ಜವಾಬ್ದಾರರು ಯಡಿಯೂರಪ್ಪನವರಲ್ಲದಿದ್ದರೂ, ಅವರ ಮೇಲೆ ಗೂಬೆ ಕೂರಿಸಲಾಗಿತ್ತು. ಏಕೆಂದರೆ, ಚುನಾವಣೆಗೂ ಮುಂಚೆ, 2021ರಿಂದ 2023ರವರೆಗೆ, ಮುಖ್ಯಮಂತ್ರಿಯಾಗಿದ್ದು ಬಸವರಾಜ ಬೊಮ್ಮಾಯಿ. ಅವರನ್ನು ಕೀಲು ಕೊಟ್ಟಾಗೆಲ್ಲ ಕುಣಿಯುವ ಬೊಂಬೆಯನ್ನಾಗಿ ಮಾಡಿಕೊಂಡ ಸಂಘಜೀವಿ ಸಂತೋಷ್ ಮತ್ತು ಜೋಶಿಗಳು- ಇನ್ನು ಮುಂದೆ ನಮ್ಮದೇ ದರ್ಬಾರು ಎಂದು ಬೀಗಿದ್ದರು. ಬೀಗುತ್ತಲೇ ಹಿಜಾಬ್, ಅಜಾನ್, ಹಲಾಲ್, ಪಠ್ಯಪುಸ್ತಕ, ಮತಾಂತರ ಕಾಯ್ದೆ, ಗೋ ಹತ್ಯೆ ನಿಷೇಧ- ಸಂಘದ ಹಿತಾಸಕ್ತಿಗೆ ತಕ್ಕಂತೆ ಬೊಂಬೆಯ ಸರ್ಕಾರವನ್ನೇ ಬಗ್ಗಿಸಿಕೊಂಡಿದ್ದರು. ಸನಾತನ ಸಂತಾನಕ್ಕೆ ಸ್ಥಾನ-ಮಾನ ಕಲ್ಪಿಸಿದ್ದರು. ಲಿಂಗಾಯತರಾದ ಯತ್ನಾಳ್, ಸೋಮಣ್ಣರಿಂದ ದಿನನಿತ್ಯ ಯಡಿಯೂರಪ್ಪನವರ ಎದೆಗೆ ಭ್ರಷ್ಟಾಚಾರದ ಬಾಣ ಬಿಡಿಸುತ್ತಿದ್ದರು. ಅಶ್ವತ್ಥನಾರಾಯಣ, ಅಶೋಕರಿಂದ ಉರಿ-ನಂಜು ಕಾರಿಕೊಳ್ಳುವ ಒಕ್ಕಲಿಗರನ್ನು ಒಕ್ಕಲಿಗರ ಮೇಲೆ ಎತ್ತಿಕಟ್ಟಿ ಕೇಕೆ ಹಾಕಿದ್ದರು. ಫಾರ್ಟಿ ಪರ್ಸೆಂಟ್ ಕಮಿಷನ್ ಆರೋಪ ಹೊರಿಸಿ ಮತ್ತೊಬ್ಬ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪನವರನ್ನು ಮನೆಗಟ್ಟಿದ್ದರು.
ಇದೆಲ್ಲದರ ಒಟ್ಟು ಪರಿಣಾಮವಾಗಿ, ದುರಾಡಳಿತ, ಭ್ರಷ್ಟಾಚಾರ, ಅಧಿಕಾರಕ್ಕಾಗಿ ಕಿತ್ತಾಟದಿಂದಾಗಿ ರಾಜ್ಯದ ಜನತೆಗೆ ಬಿಜೆಪಿ ಬೇಡವೆನಿಸಿತು, ಸೋಲಿಸಿದರು. ಆದರೆ ಸಂಘದ ‘ಸೇನಾನಿ’ಗಳು ಆ ಸೋಲಿನ ಹೊಣೆಯನ್ನು ಯಡಿಯೂರಪ್ಪನವರ ತಲೆಗೆ ಕಟ್ಟಿದರು. ಆಗಲೂ ಆರ್‌ಎಸ್‌ಎಸ್ ಮುನ್ನೆಲೆಗೆ ಬರಲಿಲ್ಲ, ಮಾತನಾಡಲಿಲ್ಲ.
ಈಗ, ಭಾರತೀಯ ಜನತಾ ಪಕ್ಷದೊಳಗೆ ಮತ್ತದೇ ಭಿನ್ನಮತ, ಗುಂಪುಗಾರಿಕೆ, ಬಹಿರಂಗ ಬಡಿದಾಟ ತಾರಕಕ್ಕೇರಿದೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಹರೀಶ್, ಪ್ರತಾಪ್ ಸಿಂಹ, ಜಿಎಂ ಸಿದ್ದೇಶ್ವರ, ಅಣ್ಣಾಸಾಹೇಬ ಜೊಲ್ಲೆ ಮತ್ತವರ ಗುಂಪು ಬಹಿರಂಗವಾಗಿಯೇ, ಯಡಿಯೂರಪ್ಪನವರ ಪುತ್ರ ವಿಜಯೇಂದ್ರರ ನೇತೃತ್ವದಲ್ಲಿ ನಡೆದ ಉಪಚುನಾವಣೆಯ ಸೋಲನ್ನು ಮುಂದಿಟ್ಟುಕೊಂಡು, ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಪಟ್ಟು ಹಿಡಿದಿದೆ.
ಅದಕ್ಕೆ ಅವರು ಕೊಡುತ್ತಿರುವ ಕಾರಣ- ರಾಜ್ಯ ಸರ್ಕಾರದೊಂದಿಗೆ ಅಪ್ಪ-ಮಕ್ಕಳ ಹೊಂದಾಣಿಕೆ ರಾಜಕಾರಣ. ‘ನಾವು ಮುಡಾ ವಿರುದ್ಧ ದನಿ ಎತ್ತುವುದಿಲ್ಲ, ನೀವು ಯಡಿಯೂರಪ್ಪನವರ ಮೇಲಿರುವ ಪೋಕ್ಸೊ ಕೇಸನ್ನು ಕೆದಕದಿರಿ ಎಂದು ರಾಜ್ಯ ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆ ಕಾರಣಕ್ಕಾಗಿಯೇ ನಾವು ವಕ್ಫ್ ಬೋರ್ಡ್ ವಿರುದ್ಧದ ಹೋರಾಟವನ್ನು ಕೈಗೆತ್ತಿಕೊಂಡೆವು. ಪ್ರತಿಭಟನೆ ಮತ್ತು ಸತ್ಯಾಗ್ರಹ ಹಮ್ಮಿಕೊಂಡೆವು. ಅದು ರಾಜ್ಯ ಸರ್ಕಾರದ ವಿರುದ್ಧವಲ್ಲವೇ, ಅದಕ್ಕೆ ವಿಜಯೇಂದ್ರ ಬರಲೇ ಇಲ್ಲ. ಜೊತೆಗೆ ಉಪಚುನಾವಣೆಯಲ್ಲೂ ಹೊಂದಾಣಿಕೆ ಮಾಡಿಕೊಂಡ ಕಾರಣಕ್ಕಾಗಿಯೇ ಪಕ್ಷ ಹೀನಾಯವಾಗಿ ಸೋತಿತು’ ಎಂದು ವಿಜಯೇಂದ್ರ ವಿರುದ್ಧ ಭಾರೀ ದೊಡ್ಡ ಮಟ್ಟದಲ್ಲಿ ಸಮರ ಸಾರಿದ್ದಾರೆ. ಪಕ್ಷದ ರೀತಿ-ನೀತಿಗಳನ್ನು ಬದಿಗೊತ್ತಿದ್ದಾರೆ. ಪಕ್ಷದ ಹೈಕಮಾಂಡಿಗೂ ಸೆಡ್ಡು ಹೊಡೆದಿದ್ದಾರೆ. ಬಿಜೆಪಿ ಬಂಡಾಯ ನಾಯಕರೊಂದಿಗೆ ಈಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಸೇರಿಕೊಂಡಿದ್ದಾರೆ.
ಏತನ್ಮಧ್ಯೆ, ದಿಲ್ಲಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ. ಆ ಸಭೆಯಲ್ಲಿ ಸಂಸದರಾದ ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಡಾ. ಸುಧಾಕರ್ ಮತ್ತು ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ದಾರೆ. ಅಲ್ಲಿ ‘ಯಡಿಯೂರಪ್ಪನವರ ಪುತ್ರ ವಿಜಯೇಂದ್ರರಿಂದಲೇ ನನ್ನ ಮಗ ಸೋತಿದ್ದು’ ಎಂದು ಬೊಮ್ಮಾಯಿಯವರು ಕೂಗಾಡಿದ್ದಾರೆ. ಆದರೆ, ಹೈಕಮಾಂಡಿಗೆ ದೂರು ನೀಡಿಲ್ಲ. ತಮ್ಮ ದೂರನ್ನು, ಅಸಮಾಧಾನವನ್ನು, ಆಕ್ರೋಶವನ್ನು ಬೀದಿಯಲ್ಲಿ ನಿಂತು ಬಡಿದಾಡುತ್ತಿರುವ ಯತ್ನಾಳ್ ಮತ್ತವರ ತಂಡಕ್ಕೆ ಕುಮ್ಮಕ್ಕು ಕೊಡುವ ಮೂಲಕ ಪೂರೈಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕವಾಗಿಯೇ ಭಿನ್ನಮತದ ನಾಯಕರೆಲ್ಲರೂ ಸಂಘದ ಸೇನಾನಿಗಳ ಆಣತಿಯಂತೆಯೇ ವರ್ತಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಒಬ್ಬರು ಕರೆ ಕೊಡುವುದು, ಇನ್ನೊಬ್ಬರು ಗೇಲಿ ಮಾಡುವುದು, ಏನಿದು ಮಕ್ಕಳಾಟ?
ಮೊನ್ನೆ ಮುಗಿದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲೂ ಆರ್‌ಎಸ್‌ಎಸ್ ಸಕ್ರಿಯವಾಗಿ ಪಾಲ್ಗೊಂಡಿದ್ದನ್ನು, ಗೆಲುವಿನ ರೂವಾರಿಗಳೆಂದು ಪ್ರಚಾರ ಪಡೆದಿದ್ದನ್ನು, ಫಡ್ನವೀಸ್‌ರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದನ್ನು- ಸಂಘ ಎದೆಯುಬ್ಬಿಸಿ ಹೇಳಿಕೊಂಡಿದೆ. ಅಂದರೆ, ಬಿಜೆಪಿ ಮತ್ತು ಸಂಘಪರಿವಾರ- ಎರಡೂ ಒಂದೇ. ಅದು ಅವರಿಗೆ ಬೇಕಾದಾಗ ಮಾತ್ರ.
ಹಾಗೆಯೇ ಪಕ್ಷ ಅಧಿಕಾರಕ್ಕೆ ಬಂದಾಗ ಆಯಕಟ್ಟಿನ ಜಾಗಕ್ಕೆ ವಕ್ಕರಿಸುವ ಸಂಘಿಗಳು, ತಮಗೆ ಬೇಕಾದಂತೆ ಆಡಳಿತಯಂತ್ರವನ್ನೇ ಬದಲಿಸುತ್ತಾರೆ. ಸಂಘದ ಅಜೆಂಡಾವನ್ನು ಕಾರ್ಯರೂಪಕ್ಕಿಳಿಸುತ್ತಾರೆ. ಹಿಂದು, ಹಿಂದುತ್ವ, ಹಿಂದೂಸ್ಥಾನ ಎಂಬುದನ್ನು ಜಾರಿಗೆ ತರಲು ತವಕಿಸುತ್ತಾರೆ.
ಸೋಜಿಗದ ಸಂಗತಿ ಎಂದರೆ, ರಾಜ್ಯ ಬಿಜೆಪಿ ಎಂಬ ಮನೆಗೆ ಬೆಂಕಿ ಬಿದ್ದಿರುವಾಗ ಆರ್‌ಎಸ್‌ಎಸ್ ಮಾತನಾಡುವುದಿಲ್ಲ. ಕಳೆದ ಬೊಮ್ಮಾಯಿ ಸರ್ಕಾರದಲ್ಲಿ ಎಷ್ಟೆಲ್ಲ ರಂಪ-ರಾದ್ಧಾಂತ ಮಾಡಿದ ಸಂಘಿಗಳು, ಆಗಲೂ ಮುಂಚೂಣಿಗೆ ಬರಲಿಲ್ಲ. ಸೋಲಿನ ಹೊಣೆ ಹೊರಲಿಲ್ಲ. ಈಗ ಇಷ್ಟೆಲ್ಲ ಬೀದಿ ಬಡಿದಾಟವಾಗುತ್ತಿದೆ, ಈಗಲೂ ಮುನ್ನೆಲೆಗೆ ಬರುತ್ತಿಲ್ಲ. ಮಾತನಾಡುತ್ತಿಲ್ಲ.
ಸಂಘದ ಸೇನಾನಿಗಳ ಈ ಮೌನವನ್ನು ಏನೆಂದು ಅರ್ಥ ಮಾಡಿಕೊಳ್ಳಬೇಕು? ಇವರಿಗೆ ಅಧಿಕಾರ ಬೇಕು, ಪಕ್ಷವನ್ನು ಅಧಿಕಾರಕ್ಕೆ ತರುವ ನಾಯಕರು ಬೇಡ. ಬೀದಿಯಲ್ಲಿ ಬಡಿದಾಡಲು ಶೂದ್ರ ನಾಯಕರು ಬೇಕು, ಆ ಬಡಿದಾಟಕ್ಕೆ ಕಾರಣಕರ್ತರಾದವರು ಬಯಲಾಗುವುದು ಬೇಡ. ಬಹುಸಂಖ್ಯಾತರಾದ ಲಿಂಗಾಯತ ಸಮುದಾಯ ಬೇಕು, ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಮತ್ತವರ ಪುತ್ರರು ಬೇಡ.
ಕಷ್ಟ ಬಂದಾಗ ಕಣ್ಮರೆಯಾಗುವ, ಅಧಿಕಾರ ಬಂದಾಗ ಆಕ್ರಮಿಸಿಕೊಳ್ಳುವ ಆರ್‌ಎಸ್‌ಎಸ್‌ನ ಕುಟಿಲತೆಯನ್ನು ಶೂದ್ರ ಸಮುದಾಯದ ಬಿಜೆಪಿ ನಾಯಕರು ಮತ್ತು ಜನತೆ ಅರ್ಥ ಮಾಡಿಕೊಳ್ಳಬೇಕಿದೆ.
