2019ರಲ್ಲಿ ಮೋದಿಯವರು ಮರು ಆಯ್ಕೆಯಾದ ನಂತರ ಸರ್ಕಾರದ ನೀತಿಗಳು ಮುಸ್ಲಿಮರ ಹಕ್ಕುಗಳನ್ನು ಸ್ಪಷ್ಟವಾಗಿ ನಿರ್ಲಕ್ಷಿಸಿವೆ. ಧಾರ್ಮಿಕ ಸ್ವಾತಂತ್ರ್ಯಗಳನ್ನು ನಿರ್ಬಂಧಿಸಿವೆ ಮತ್ತು ಹಕ್ಕುಗಳನ್ನು ನಿರಾಕರಿಸುವ ಉದ್ದೇಶವನ್ನು ಹೊಂದಿವೆ. ಮೋದಿಯವರ ಆಳ್ವಿಕೆಯಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯ ಸಾಮಾನ್ಯ ಎಂಬಂತಾಗಿದೆ ಇದು ಭಾರತದಲ್ಲಿ ಪ್ರತಿಭಟನೆಯನ್ನು ಹುಟ್ಟುಹಾಕಿದೆ ಮತ್ತು ಅಂತಾರಾಷ್ಟ್ರೀಯ ಖಂಡನೆಗೆ ಕಾರಣವಾಗಿವೆ.
ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ, ಮಂದಿರಗಳ ಧ್ವಂಸ, ಹಿಂದೂ ಮುಖಂಡರ ಬಂಧನ ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. “ಭಾರತ ಸರ್ಕಾರ ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಮುಂದಾಗಬೇಕು” ಎಂದು ಹಿಂದೂ ಸಂಘಟನೆಗಳು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಮುಸ್ಲಿಂ, ಜೈನ, ಕ್ರೈಸ್ತ ಧಾರ್ಮಿಕ ಮುಖಂಡರೂ ಒತ್ತಾಯಿಸಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಪರಿಗಣಿಸುವುದು, ದಬ್ಬಾಳಿಕೆ ನಡೆಸೋದು ಬಹಳಷ್ಟು ದೇಶಗಳಲ್ಲಿ ಸಾಮಾನ್ಯವಾಗಿದೆ. ಕೆಲವು ದೇಶಗಳಲ್ಲಿ ಕಡಿಮೆ ಇರಬಹುದು, ಕೆಲವು ಕಡೆ ವಿಪರೀತ ಇರಬಹುದು.
ಅನೇಕ ರಾಷ್ಟ್ರಗಳಲ್ಲಿ ಜಾತ್ಯತೀತ ಸಂವಿಧಾನವೇ ಇಲ್ಲ. ಸಂವಿಧಾನವಿಲ್ಲದ ರಾಷ್ಟ್ರಗಳಲ್ಲಿ ಮೂಲಭೂತವಾದಿಗಳೇ ಸರ್ಕಾರ ನಡೆಸುತ್ತಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ನಡೆಸಿದ ಅಟ್ಟಹಾಸವನ್ನು ನಾವು ನೋಡಿದ್ದೇವೆ. ಆದರೆ, ಭಾರತದಲ್ಲಿ ಅಲ್ಪಸಂಖ್ಯಾತ, ದಲಿತ, ಮಹಿಳೆಯರ ಹಕ್ಕುಗಳ ರಕ್ಷಣೆಗೆ ಪ್ರಬಲವಾದ ಸಂವಿಧಾನವಿದೆ. ಹಾಗಾಗಿ ಯಾವುದೇ ಪಕ್ಷದ ಸರ್ಕಾರ ಬಂದರೂ ಅಲ್ಪಸಂಖ್ಯಾತರ ಮೇಲೆ ಏನೇ ದಾಳಿಗಳು ನಡೆದರೂ ತಡೆಯಲು, ಅವರ ಹಕ್ಕುಗಳನ್ನು ರಕ್ಷಿಸಲು ಸಂವಿಧಾನವಿದೆ. ಉತ್ತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದವರ ಮನೆಗಳನ್ನು ಉರುಳಿಸುವ ಬುಲ್ಡೋಜರ್ಗೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದೆ. ಒಂದು ಕಡೆ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನವನ್ನು ಬಹುಸಂಖ್ಯಾತ ಮೂಲಭೂತವಾದಿಗಳು ಮಾಡುತ್ತಿದ್ದಾರೆ. ಮತ್ತೊಂದು ಕಡೆ ಹಕ್ಕುಗಳ ರಕ್ಷಣೆಗೆ ಈ ನೆಲದ ಕಾನೂನು ನೆರವಾಗುತ್ತಿದೆ.

ಆದರೆ, ಇಂತಹ ಪ್ರಬಲವಾದ ಸಂವಿಧಾನ ಇರುವ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲೂ ಕೋಮುವಾದಿ, ಹಿಂದೂ ರಾಷ್ಟ್ರವಾದಿ ಬಿಜೆಪಿ ಅಧಿಕಾರ ನಡೆಸುತ್ತಿರುವ ಈ ಒಂದು ದಶಕದಲ್ಲಿ ಅಲ್ಪಸಂಖ್ಯಾತರ ಮೇಲೆ ತೀವ್ರ ದಾಳಿಗಳಾಗಿವೆ. ಅವರ ಹಕ್ಕುಗಳನ್ನು ಮೊಟಕುಗೊಳಿಸುವ ಕಾನೂನುಗಳನ್ನು ತರಲಾಗುತ್ತಿದೆ. ಒಂದು ದಶಕದಲ್ಲಿ ಹೇಗೆಲ್ಲ ಅಲ್ಪಸಂಖ್ಯಾತರ ಮೇಲೆ ದಾಳಿಗಳನ್ನು ನಡೆಸಲಾಗಿದೆ. ಬಹುಸಂಖ್ಯಾತರ ಪರ ಇರುವ ಸಂಘಟನೆಗಳು, ರಾಜಕೀಯ ಪಕ್ಷಗಳು, ಸರ್ಕಾರಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಪೊಲೀಸ್ ಇಲಾಖೆ, ಅಧಿಕಾರಸ್ಥರು ಹೇಗೆ ನಡೆಸಿಕೊಳ್ಳುತ್ತಿದ್ದಾರೆ, ಅವರ ಮೂಲಭೂತ ಹಕ್ಕುಗಳನ್ನು ಹೇಗೆ ಮೊಟಕುಗೊಳಿಸಲಾಗುತ್ತಿದೆ, ಕೋಮುಗಲಭೆಗಳಿಗೆ ಪ್ರೇರಣೆಯಾಗುತ್ತಿವೆ ಎಂಬುದನ್ನು ಅಮೆರಿಕದ ಥಿಂಕ್ಟ್ಯಾಂಕ್ ಎನಿಸಿದ Council on Foreign Relations ವಿಸ್ತೃತವಾಗಿ ವಿವರಿಸಿದೆ. ಬಾಬರಿ ಮಸೀದಿ ಧ್ವಂಸದ ನಂತರ ಭಾರತದಲ್ಲಿ ಮುಸ್ಲಿಮರ ಮೇಲಿನ ಬಹುಸಂಖ್ಯಾತರ ದಾಳಿಗಳು ಹೆಚ್ಚಾದವು ಎಂದು ಅದು ಹೇಳಿದೆ.
ವಿಶ್ವದ ಅತಿದೊಡ್ಡ ಜನಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯವೂ ಒಂದು. ಭಾರತದಲ್ಲಿ ಅವರು ಅಲ್ಪಸಂಖ್ಯಾತರು. ಸ್ವಾತಂತ್ರ್ಯದ ನಂತರ ಮುಸ್ಲಿಮರು ಸಾಂವಿಧಾನಿಕ ರಕ್ಷಣೆಗಳ ಹೊರತಾಗಿಯೂ ತಾರತಮ್ಯ, ಅಪರಾಧೀಕರಣ ಮತ್ತು ಹಿಂಸೆಯನ್ನು ಎದುರಿಸುತ್ತಿದ್ದಾರೆ ಎಂದು ಅದು ಗಮನಿಸಿದೆ.
2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂ ರಾಷ್ಟ್ರೀಯತಾವಾದಿ ಅಜೆಂಡಾವನ್ನು ಅನುಸರಿಸುತ್ತಿರುವ ನರೇಂದ್ರ ಮೋದಿ ಮತ್ತು ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ ನೇತೃತ್ವದಲ್ಲಿ ಮುಸ್ಲಿಂ ವಿರೋಧಿ ಭಾವನೆಗಳು ಹೆಚ್ಚಿವೆ ಎಂದು ತಜ್ಞರು ಹೇಳುತ್ತಾರೆ. 2019ರಲ್ಲಿ ಮೋದಿ ಮರು ಆಯ್ಕೆಯಾದ ನಂತರ ಸರ್ಕಾರದ ವಿವಾದಾತ್ಮಕ ನೀತಿಗಳು ಮುಸ್ಲಿಮರ ಹಕ್ಕುಗಳನ್ನು ಸ್ಪಷ್ಟವಾಗಿ ನಿರ್ಲಕ್ಷಿಸುತ್ತವೆ. ಧಾರ್ಮಿಕ ಸ್ವಾತಂತ್ರ್ಯಗಳನ್ನು ನಿರ್ಬಂಧಿಸಿವೆ ಮತ್ತು ಹಕ್ಕುಗಳನ್ನು ನಿರಾಕರಿಸುವ ಉದ್ದೇಶವನ್ನು ಹೊಂದಿವೆ. ಮುಸ್ಲಿಮರ ಮೇಲಿನ ದೌರ್ಜನ್ಯ ಸಹಜ ಎಂಬಂತಾಗಿದೆ. ಈ ಕ್ರಮಗಳು ಭಾರತದಲ್ಲಿ ಪ್ರತಿಭಟನೆಯನ್ನು ಹುಟ್ಟುಹಾಕಿವೆ ಮತ್ತು ಅಂತಾರಾಷ್ಟ್ರೀಯ ಖಂಡನೆಗೆ ಕಾರಣವಾಗಿವೆ. 2024ರಲ್ಲಿ ಮೋದಿಯವರ ಪುನರಾಯ್ಕೆಯು ದೇಶದಲ್ಲಿ ಮತ್ತಷ್ಟು ಧಾರ್ಮಿಕ ವಿಭಜನೆಯನ್ನು ಬಿತ್ತಬಹುದು ಎಂದು ಕೆಲವು ರಾಜನೀತಿ ತಜ್ಞರು ಹೇಳುತ್ತಾರೆ ಎಂದು ಕೌನ್ಸಿಲ್ ಉಲ್ಲೇಖಿಸಿದೆ. ಆದರೂ ಮೋದಿಯವರು ಮುಸ್ಲಿಂ ರಾಷ್ಟ್ರಗಳ ಜೊತೆಗೆ ವ್ಯಾಪಾರ ಸಂಬಂಧಗಳನ್ನು ಬೆಳೆಸುತ್ತಿದ್ದಾರೆ. ಕಳೆದ ಜನವರಿಯಲ್ಲಿ ಅಬುಧಾಬಿಯಲ್ಲಿ ನಾರಾಯಣಸ್ವಾಮಿ ಮಂದಿರವನ್ನೂ ಉದ್ಘಾಟಿಸಿದ್ದಾರೆ. ಇಲ್ಲಿ ತಮ್ಮ ಸರ್ಕಾರದ ಅಡಿಯಲ್ಲಿ ಮುಸ್ಲಿಮರ ಹಕ್ಕುಗಳನ್ನು ಮೊಟಕುಗೊಳಿಸುವ ಅವರು ಬಂಡವಾಳ ಹೂಡಲು ಮುಸ್ಲಿಂ ರಾಷ್ಟ್ರಗಳನ್ನು ಆಹ್ವಾನಿಸುತ್ತಾರೆ!
ಯಾವ ರೀತಿಯ ತಾರತಮ್ಯ?
ಮುಸ್ಲಿಮರು ಉದ್ಯೋಗ, ಶಿಕ್ಷಣ ಮತ್ತು ವಸತಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಾರತಮ್ಯ ಅನುಭವಿಸಿದ್ದಾರೆ. ರಾಜಕೀಯ, ಆರ್ಥಿಕ ಅಡೆತಡೆಗಳನ್ನು ಎದುರಿಸಿದ್ದಾರೆ. ಆರೋಗ್ಯ, ಮೂಲಭೂತ ಸೇವೆಗಳಿಂದ ದೂರವಿಡಲಾಗುತ್ತಿದೆ. ಸಾಂವಿಧಾನಿಕ ರಕ್ಷಣೆಗಳ ಹೊರತಾಗಿಯೂ ತಾರತಮ್ಯಕ್ಕೆ ಗುರಿಯಾಗುತ್ತಿದ್ದಾರೆ. ನ್ಯಾಯ ಪಡೆಯಲು ಹೆಣಗಾಡುತ್ತಿದ್ದಾರೆ. ಕಳೆದ ಎರಡು ದಶಕಗಳಲ್ಲಿ, ಸಂಸತ್ತಿನಲ್ಲಿ ಮುಸ್ಲಿಮರ ಪ್ರಾತಿನಿಧ್ಯವು ಕುಂಠಿತವಾಗಿದೆ. 2019ರ ಚುನಾವಣೆಯ ನಂತರ, ಮುಸ್ಲಿಮರ ಪ್ರಾತಿನಿಧ್ಯ ಕೇವಲ 5% ರಷ್ಟು ಮಾತ್ರ ಇದೆ. ಮುಸ್ಲಿಂ ಸದಸ್ಯರನ್ನೇ ಹೊಂದಿರದ ಬಿಜೆಪಿಯ ಸ್ಥಾನಗಳ ಹೆಚ್ಚಳದಿಂದಾಗಿ ಮುಸಲ್ಮಾನರ ಪ್ರಾತಿನಿಧ್ಯ ಮತ್ತಷ್ಟು ಕುಸಿದಿದೆ.

ಈ ಮಧ್ಯೆ ಭಾರತ ಮೂಲದ ಸರ್ಕಾರೇತರ ಸಂಸ್ಥೆಯಾದ ಕಾಮನ್ ಕಾಸ್ (Common Cause)ನ 2019ರ ವರದಿ ಸಮೀಕ್ಷೆಯಲ್ಲಿ ಅರ್ಧದಷ್ಟು ಪೊಲೀಸರು ಮುಸ್ಲಿಂವಿರೋಧಿ ಪಕ್ಷಪಾತಿಗಳಾಗಿದ್ದಾರೆ ಎಂಬ ಅಂಶವನ್ನು ಹೊರಹಾಕಿದೆ. ಇದರಿಂದಾಗಿ ಮುಸ್ಲಿಮರ ವಿರುದ್ಧದ ಅಪರಾಧಗಳನ್ನು ತಡೆಯಲು ಪೊಲೀಸರು ಮಧ್ಯಪ್ರವೇಶಿಸುವ ಸಾಧ್ಯತೆ ತಗ್ಗಿದೆ. ಮುಸ್ಲಿಮರ ಮೇಲೆ ದಾಳಿ ಮಾಡುವವರಿಗೆ ಯಾವುದೇ ಭಯವಿಲ್ಲ ಎಂಬುದನ್ನು ಕೂಡ ಗಮನಿಸಿದೆ. ಇತ್ತೀಚಿನ ವರ್ಷಗಳಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್, ತನಿಖಾ ಏಜೆನ್ಸಿಗಳು ಮುಸ್ಲಿಮರ ವಿರುದ್ಧದ ಅಪರಾಧಗಳನ್ನು ರದ್ದುಗೊಳಿಸಿವೆ ಅಥವಾ ಮುಸ್ಲಿಮರ ವಿರುದ್ಧದ ಹಿಂಸಾಚಾರದಲ್ಲಿ ಹಿಂದೂಗಳು ಭಾಗಿಯಾಗಿದ್ದಾರೆಂದು ಆರೋಪಿಸಿದ ಪ್ರಕರಣಗಳನ್ನು ಹಿಂತೆಗೆದುಕೊಂಡಿವೆ. ಮತಾಂತರವಿರೋಧಿ ಕಾನೂನುಗಳು ಮತ್ತು ಶಾಲೆಯಲ್ಲಿ ಹಿಜಾಬ್ ನಿಷೇಧ ಸೇರಿದಂತೆ ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯಗಳನ್ನು ನಿರ್ಬಂಧಿಸುವ ಕಾನೂನುಗಳನ್ನು ಹೆಚ್ಚು ರಾಜ್ಯಗಳು ಅಂಗೀಕರಿಸಿವೆ. ಎರಡು ವರ್ಷಗಳ ಹಿಂದೆ ಕರ್ನಾಟಕದ ಶಾಲೆಗಳಲ್ಲಿ ಹಿಜಾಬ್ ನಿಷೇಧಿಸಿದ ಬಿಜೆಪಿ ಸರ್ಕಾರದ ಕ್ರಮವನ್ನು ದುಬೈ ರಾಜಕುಮಾರಿ ಸಹಿತ ಅನೇಕರು ನೇರವಾಗಿಯೇ ಖಂಡಿಸಿದ್ದರು.
ಅಧಿಕಾರಿಗಳು ಮುಸ್ಲಿಮರನ್ನು ವಿನಾಕಾರಣ ಶಿಕ್ಷಿಸಲು ಕಾನೂನುಬಾಹಿರ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಅದನ್ನು “ಬುಲ್ಡೋಜರ್ ನ್ಯಾಯ” ಎಂದು ಕರೆದಿದ್ದಾರೆ. ಆದರೆ ಅದು ಪರಮ ಅನ್ಯಾಯ. 2022ರಲ್ಲಿ, ಬಿಜೆಪಿ ಅಧಿಕಾರದಲ್ಲಿರುವ ಕೆಲ ರಾಜ್ಯಗಳಲ್ಲಿ ಅಧಿಕಾರಿಗಳು ಜನರ ಮನೆಗಳನ್ನು ಕೆಡವಿದರು. ಕೆಡವಲಾದ ಕಟ್ಟಡಗಳು ಅನಧಿಕೃತ ಎಂದು ಆರೋಪಿಸಿದರು. ಈ ‘ಬುಲ್ಡೋಜರ್ ನ್ಯಾಯ’ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆದಿದೆ ಎಂದು ರಾಜಕೀಯ ವಿಶ್ಲೇಷಕರು ಗುರುತಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತದ ಸರ್ವೋಚ್ಚ ನ್ಯಾಯಾಲಯವು ಈ ಕ್ರಮ ಅಸಾಂವಿಧಾನಿಕ ಎಂದು ಹೇಳಿದೆ ಮತ್ತು ಬುಲ್ಡೋಜರ್ ಕಾರ್ಯಾಚರಣೆ ನಡೆಸದಂತೆ ತಾಕೀತು ಮಾಡಿದೆ.

ಮೋದಿ ಸರ್ಕಾರದ ಮುಸ್ಲಿಂ ವಿರೋಧಿ ಕ್ರಮ
ಡಿಸೆಂಬರ್ 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಗೆ ಮೋದಿ ಸಂಪುಟ ಅನುಮೋದನೆ ನೀಡಿತು. ಇದು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ವಲಸಿಗರಿಗೆ ಪೌರತ್ವ ನೀಡಲು ಅನುವು ಮಾಡಿಕೊಡುತ್ತದೆ. ಆದರೆ ಈ ಕಾನೂನು ತಾರತಮ್ಯದಿಂದ ಕೂಡಿದೆ, ಏಕೆಂದರೆ ಅದು ಮುಸ್ಲಿಮರನ್ನು ಹೊರತುಪಡಿಸುತ್ತದೆ ಮತ್ತು ಪೌರತ್ವದ ಪ್ರಶ್ನೆಗೆ ಮೊದಲ ಬಾರಿಗೆ ಧಾರ್ಮಿಕ ಮಾನದಂಡವನ್ನು ಅನ್ವಯಿಸಲಾಗಿದೆ. ಈ ಮೂರು ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ ಶೋಷಣೆಗೆ ಒಳಗಾದ ದುರ್ಬಲ ಧಾರ್ಮಿಕ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲು ಈ ಕಾನೂನನ್ನು ವಿನ್ಯಾಸಗೊಳಿಸಲಾಗಿದೆ ಎಂದು ಮೋದಿ ಸರ್ಕಾರ ವಾದಿಸುತ್ತದೆ. ಆದರೆ ಈ ವಾದದಲ್ಲಿ ಹುರುಳಿಲ್ಲ.
ಅದೇ ಸಮಯದಲ್ಲಿ, ಬಿಜೆಪಿ ತನ್ನ 2019ರ ಚುನಾವಣಾ ಪ್ರಣಾಳಿಕೆಯಲ್ಲಿ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ಪೂರ್ಣಗೊಳಿಸುವುದಾಗಿ ಭರವಸೆ ನೀಡಿತ್ತು. ಇಲ್ಲಿನ ನಿವಾಸಿಗಳು ಭಾರತೀಯ ನಾಗರಿಕರೇ ಅಥವಾ ನೆರೆಯ ಬಾಂಗ್ಲಾದೇಶದಿಂದ ವಲಸೆ ಬಂದವರೇ ಎಂಬುದನ್ನು ನಿರ್ಧರಿಸಲು ಅಸ್ಸಾಂ ರಾಜ್ಯದ ವಿಶಿಷ್ಟ ಪ್ರಕರಣಕ್ಕಾಗಿ 1950ರ ದಶಕದಲ್ಲಿ NRC ರಚಿಸಲಾಯಿತು. 2019ರಲ್ಲಿ, ಅಸ್ಸಾಂ ಸರ್ಕಾರ ಎನ್.ಆರ್.ಸಿ. ಜಾರಿಗೊಳಿಸಿತು. ಪೌರತ್ವ ರಿಜಿಸ್ಚರಿನಿಂದ ಸುಮಾರು 20 ಲಕ್ಷ ಹಿಂದೂ ಮತ್ತು ಮುಸ್ಲಿಂ ಬಂಗಾಳಿಗರನ್ನು ಹೊರಗಿಟ್ಟಿದೆ.
ಈ ಮಧ್ಯೆ ಮೋದಿ ಸರ್ಕಾರ ಭಾರತದ ಏಕೈಕ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸಾಂವಿಧಾನಿಕ ಸ್ಥಾನಮಾನವನ್ನು ವಾಪಸ್ ಪಡೆಯಿತು. ಆಗಸ್ಟ್ 2019ರಲ್ಲಿ, ಸರ್ಕಾರವು ಪಾಕಿಸ್ತಾನಕ್ಕೆ ಅಂಟಿಕೊಂಡಿರುವ ಪರ್ವತ ಗಡಿ ಪ್ರದೇಶದ ಈ ರಾಜ್ಯವನ್ನು ಎರಡು ಪ್ರದೇಶಗಳಾಗಿ ವಿಭಜಿಸಿತು. ಅದರ ವಿಶೇಷ ಸಾಂವಿಧಾನಿಕ ಸ್ವಾಯತ್ತತೆಯನ್ನು ಕಸಿದುಕೊಂಡಿತು. ಅಂದಿನಿಂದ, ಅಧಿಕಾರಿಗಳು ಈ ಪ್ರದೇಶದಲ್ಲಿನ ಜನರ ಹಕ್ಕುಗಳನ್ನು ಮೊಟಕುಗೊಳಿಸಿದ್ದಾರೆ. ಭದ್ರತೆಯನ್ನು ನಿರ್ವಹಿಸುವ ನೆಪದಲ್ಲಿ 2021ರಲ್ಲಿ 85 ಬಾರಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿದ್ದರು. ವರದಿಗೆ ತೆರಳಿದ್ದ ಪತ್ರಕರ್ತರಿಗೆ ಕಿರುಕುಳ ನೀಡಿದರು, ಬಂಧಿಸಿದರು. ಪ್ರಮುಖ ರಾಜಕೀಯ ಮುಖಂಡರು, ಪಕ್ಷಗಳ ಕಾರ್ಯಕರ್ತರನ್ನು ಬಂಧಿಸಿದರು. ಕಾಶ್ಮೀರದ ಪ್ರಮುಖ ರಾಜಕೀಯ ಮುಖಂಡರಾದ ಒಮರ್ ಅಬ್ದುಲ್ಲಾ, ಫಾರೂಕ್ ಅಬ್ದುಲ್ಲಾ ಅವರನ್ನು ಗೃಹಬಂಧನದಲ್ಲಿಟ್ಟಿದ್ದರು. ಈಗ ಭದ್ರತಾ ಪರಿಸ್ಥಿತಿ ಸುಧಾರಿಸಿದೆ ಎಂದು ಸರ್ಕಾರದ ಹೇಳಿಕೆಗಳ ಹೊರತಾಗಿಯೂ, ವಿಭಜನೆಯ ನಂತರ ಸಶಸ್ತ್ರ ಗುಂಪುಗಳಿಂದ ಹಲವಾರು ನಾಗರಿಕರ ಹತ್ಯೆಯಾಗಿದೆ. ಸುಪ್ರೀಮ್ ಕೋರ್ಟು ಡಿಸೆಂಬರ್ 2023ರಲ್ಲಿ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿಯಿತು. ರಾಜ್ಯತ್ವವನ್ನು ಮರಳಿ ನೀಡಬೇಕು ಎಂದು ತೀರ್ಪು ನೀಡಿತು.
“ಹಿಂದೂ ರಾಷ್ಟ್ರೀಯವಾದಿಗಳು ಹೆಚ್ಚು ಕಾಲ ಅಧಿಕಾರದಲ್ಲಿದ್ದರೆ, ಮುಸ್ಲಿಮರ ಸ್ಥಾನಮಾನ ತೀವ್ರವಾಗಿ ಕುಸಿಯುತ್ತದೆ ಮತ್ತು ಅಂತಹ ಬದಲಾವಣೆಗಳನ್ನು ಹಿಮ್ಮೆಟ್ಟಿಸುವುದು ಕಷ್ಟವಾಗುತ್ತದೆ” ಎಂದು ಬ್ರೌನ್ ವಿಶ್ವವಿದ್ಯಾಲಯದ ಪ್ರೊ. ಆಶುತೋಷ್ ವಾರ್ಷ್ಣೆ ಹೇಳುತ್ತಾರೆ.

ಹಿಂಸಾಚಾರದ ಅತಿದೊಡ್ಡ ಘಟನೆಗಳು ಯಾವುವು?
1992, ಡಿ. 6ರ ಬಾಬರಿ ಮಸೀದಿ ಧ್ವಂಸ: ಅಯೋಧ್ಯೆಯ ವಿವಾದಿತ ಬಾಬರಿ ಮಸೀದಿ ಧ್ವಂಸ ಪ್ರಕರಣ ಮತ್ತು ಅದರ ನಂತರ ನಡೆದ ಹಿಂಸಾಚಾರ ಸ್ವತಂತ್ರ ಭಾರತದ ಅತಿ ಕರಾಳ ಘಟನೆಯಾಗಿದೆ. ಹದಿನಾರನೆಯ ಶತಮಾನದಲ್ಲಿ ರಾಮ ಜನ್ಮಸ್ಥಳದಲ್ಲಿ ಮುಸ್ಲಿಂ ಮೊಘಲ್ ದೊರೆ ಬಾಬರ್ ಮಸೀದಿಯನ್ನು ನಿರ್ಮಿಸಿದನೆಂಬುದು ಹಿಂದೂಗಳ ವಾದ. 1992ರಲ್ಲಿ ಹಿಂದೂ ಕರಸೇವಕರು ಮಸೀದಿಯನ್ನು ಧ್ವಂಸಗೊಳಿಸಿದ್ದರು. ನಂತರ ನಡೆದ ಗಲಭೆಯಲ್ಲಿ ಅಂದಾಜು ಮೂರು ಸಾವಿರ ಮಂದಿ ಮೃತಪಟ್ಟಿದ್ದರು. ಬಾಬರಿ ಮಸೀದಿ ಧ್ವಂಸ ಕ್ರಿಮಿನಲ್ ಅಪರಾಧ ಎಂದು 2020ರಲ್ಲಿ, ಸುಪ್ರೀಂ ಕೋರ್ಟ್ ಸಾರಿತು. ಆದರೆ ಆ ಜಾಗ ರಾಮಲಲ್ಲಾನಿಗೆ ಸೇರಿದ್ದು ಎಂದು ತೀರ್ಪು ಕೊಟ್ಟಿತು. ನಂತರ ಭವ್ಯ ರಾಮಂಂದಿರ ನಿರ್ಮಾಣ ಮಾಡಲಾಯಿತು. ಅಪೂರ್ಣ ಮಂದಿರದೊಳಗೆ 2024ರ ಜನವರಿಯಲ್ಲಿ ಲೋಕಸಭೆ ಚುನಾವಣೆ ಕೆಲವೇ ತಿಂಗಳ ಸನಿಹದಲ್ಲಿದ್ದಾಗ ಮೋದಿಯವರು ರಾಮಲಲ್ಲಾನ ಪ್ರಾಣಪ್ರತಿಷ್ಠೆ ನೆರವೇರಿಸಿದ್ದರು.
ಗುಜರಾತ್ ಗಲಭೆ 2002: ಕರಸೇವಕರು ಪ್ರಯಾಣಿಸುತ್ತಿದ್ದ ರೈಲು, ಗೋಧ್ರಾ ನಿಲ್ದಾಣದಲ್ಲಿ ಬೆಂಕಿಗಾಹುತಿಯಾಗಿ ಸಾವು ನೋವು ಸಂಭವಿಸಿತ್ತು. ಅದರ ನಂತರ ರಾಷ್ಟ್ರವ್ಯಾಪಿ ಕೋಮು ಘರ್ಷಣೆಗಳು ಭುಗಿಲೆದ್ದವು. ಸಾವುನೋವುಗಳಾದವು. ಈ ಘಟನೆಗೆ ಮುಸ್ಲಿಮರನ್ನು ದೂಷಿಸಿ, ಗುಜರಾತ್ನಾದ್ಯಂತ ಹಿಂದೂ ಗುಂಪುಗಳು ನೂರಾರು ಮುಸ್ಲಿಮರನ್ನು ಕೊಂದವು. ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದವು. ಮುಸ್ಲಿಂ ವ್ಯಾಪಾರ ಮತ್ತು ಪೂಜಾ ಸ್ಥಳಗಳನ್ನು ನಾಶಪಡಿಸಿದವು. ಪ್ರತಿಪಕ್ಷದ ನಾಯಕರು, ಮಾನವ ಹಕ್ಕುಗಳ ಸಂಘಟನೆಗಳು ಗುಜರಾತ್ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಹಿಂಸಾಚಾರವನ್ನು ನಿಲ್ಲಿಸುವ ಪ್ರಯತ್ನ ಮಾಡಲಿಲ್ಲ ಬದಲಾಗಿ ಕೆಲವೆಡೆ ಪ್ರೋತ್ಸಾಹಿಸಿದರು ಎಂದು ಟೀಕಿಸಿದ್ದರು. ಆಕಸ್ಮಿಕವಾಗಿ ರೈಲಿಗೆ ಬೆಂಕಿ ತಗುಲಿದೆ ಎಂದು ಕೆಲ ತನಿಖೆಗಳು ಉದ್ದೇಶಪೂರ್ವಕ ಎಂದು ಮತ್ತೊಂದು ತನಿಖೆ ಸಾರಿದವು.

ಮುಜಾಫರ್ನಗರ ಗಲಭೆ 2013: ಮುಜಾಫರ್ನಗರದ ಸಮೀಪವಿರುವ ಪಟ್ಟಣಗಳಲ್ಲಿ, ಮುಸ್ಲಿಂ ಪುರುಷರೊಂದಿಗಿನ ಜಗಳದಲ್ಲಿ ಇಬ್ಬರು ಹಿಂದೂ ಪುರುಷರು ಸತ್ತ ನಂತರ ನಡೆದ ಹಿಂದು-ಮುಸ್ಲಿಂ ಘರ್ಷಣೆಯಲ್ಲಿ ಅರವತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು. ಅಂದಾಜು ಐವತ್ತು ಸಾವಿರ ಜನರು, ಹೆಚ್ಚಿನವರು ಮುಸ್ಲಿಮರು, ಹಿಂಸಾಚಾರಕ್ಕೆ ತುತ್ತಾಗಿ ಮನೆಮಠ ತೊರೆದರು. ಅನೇಕ ತಿಂಗಳುಗಳ ಕಾಲ ಪರಿಹಾರ ಶಿಬಿರಗಳಲ್ಲಿ ಬದುಕು ಸವೆಸಿದರು.
ಗೋರಕ್ಷಣೆ- ಗುಂಪು ದಾಳಿ : ಇತ್ತೀಚಿನ ವರ್ಷಗಳಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಹಿಂದೂ ಗುಂಪುಗಳು ದಾಳಿ ನಡೆಸುವುದು ಎಷ್ಟು ಸರ್ವೇಸಾಧಾರಣವಾಗಿ ಹೋಗಿದೆಯೆಂದರೆ ಭಾರತದ ಸರ್ವೋಚ್ಚ ನ್ಯಾಯಾಲಯವು ಎಚ್ಚರಿಸಬೇಕಾಯ್ತು. ಮುಸ್ಲಿಂ ವಿರೋಧಿ ಹಿಂಸಾಚಾರದ ಅತ್ಯಂತ ಸಾಮಾನ್ಯ ರೂಪವೆಂದರೆ ಹಸುಗಳ ವ್ಯಾಪಾರ ಮಾಡಲು ಅಥವಾ ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆ ಎಂಬ ವದಂತಿ ಹಬ್ಬಿಸಿ ದಾಳಿ ಮಾಡುವುದು. 2019ರ ‘ಹ್ಯೂಮನ್ ರೈಟ್ಸ್ ವಾಚ್’ ವರದಿಯ ಪ್ರಕಾರ ಕನಿಷ್ಠ 44 ಮಂದಿ ಇಂತಹ ಗುಂಪುಹಿಂಸೆಗಳಿಗೆ ಬಲಿಯಾಗಿದ್ದಾರೆ. ಅದರಲ್ಲಿ ಮುಸ್ಲಿಮರೇ ಹೆಚ್ಚು.”ಲವ್ ಜಿಹಾದ್” ಆರೋಪದಲ್ಲಿ ಮುಸ್ಲಿಂ ಯುವಕರ ಮೇಲೆ ದಾಳಿ ಮಾಡಲಾಗಿದೆ. ಹಿಂದೂ ಗುಂಪುಗಳು ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಪುಸಲಾಯಿಸಿ ಮತಾಂತರಿಸುವ ಉದ್ದೇಶದಿಂದ ಮದುವೆಯಾಗುತ್ತಿದ್ದಾರೆ ಎಂಬ ನರೇಟಿವ್ ಬಿತ್ತುತ್ತಾರೆ. ಲವ್ ಜಿಹಾದ್ ತಡೆಗಟ್ಟುವ ಪ್ರಯತ್ನದಲ್ಲಿ ಬಿಜೆಪಿ ನೇತೃತ್ವದ ಹಲವಾರು ರಾಜ್ಯಗಳು ಜಾರಿಗೆ ತಂದ ಮತಾಂತರ ವಿರೋಧಿ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ನೂರಾರು ಮುಸ್ಲಿಂ ಪುರುಷರನ್ನು ಬಂಧಿಸಲಾಗಿದೆ.
ದೆಹಲಿ ಗಲಭೆ 2020: ನವದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮುಸ್ಲಿಮರು ಮತ್ತು ಇತರರು ಪ್ರತಿಭಟನೆ ನಡೆಸುತ್ತಿದ್ದಂತೆ ಹಿಂಸಾಚಾರ ಭುಗಿಲೆದ್ದಿತು. ಹತ್ತು ವರ್ಷಗಳಲ್ಲಿ ರಾಜಧಾನಿಯ ಅತ್ಯಂತ ಭೀಕರ ಕೋಮು ಹಿಂಸಾಚಾರದಲ್ಲಿ ಸುಮಾರು ಐವತ್ತು ಜನರು ಹತ್ಯೆಗೀಡಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಮುಸ್ಲಿಮರು. ಕೆಲವು ಬಿಜೆಪಿ ರಾಜಕಾರಣಿಗಳು ಹಿಂಸಾಚಾರದ ಪ್ರಚೋದನೆಗೆ ಇಳಿದರು. ಹಿಂದೂಪರ ಎಂದು ಹೇಳಿಕೊಳ್ಳುವ ಗುಂಪುಗಳು ಮುಸ್ಲಿಮರ ಮೇಲೆ ದಾಳಿ ಮಾಡುವುದನ್ನು ತಡೆಯಲು ಪೊಲೀಸರು ಮಧ್ಯಪ್ರವೇಶಿಸಲಿಲ್ಲ ಎಂದು ವರದಿಯಾಗಿದೆ. 2021 ರ ಹ್ಯೂಮನ್ ರೈಟ್ಸ್ ವಾಚ್ ವರದಿಯು, ಅಧಿಕಾರಿಗಳು ಪೊಲೀಸರ ವೈಫಲ್ಯವನ್ನು ತನಿಖೆ ಮಾಡಿಲ್ಲ. ಆದರೆ ಅವರು ಹತ್ತಾರು ಪ್ರತಿಭಟನಾಕಾರರ ಮೇಲೆ ಮಿಥ್ಯಾರೋಪ ಹೊರಿಸಿದ್ದಾರೆ ಎಂದು ಹೇಳಿದೆ.

ಇಸ್ಲಾಮೋಫೋಬಿಕ್ ಪ್ರತಿಭಟನೆಗಳು: 2022 ಮೇ ತಿಂಗಳಲ್ಲಿ, ಇಬ್ಬರು ಬಿಜೆಪಿ ವಕ್ತಾರರು ಪ್ರವಾದಿ ಮೊಹಮ್ಮದರ ಬಗ್ಗೆ ಅಶ್ಲೀಲ ಟೀಕೆ ಟಿಪ್ಪಣಿಗಳನ್ನು ಮಾಡಿದರು. ಇದು ಭಾರತದಾದ್ಯಂತ ಉಗ್ರ ಪ್ರತಿಭಟನೆಗಳಿಗೆ ಕಾರಣವಾಯಿತು ಮತ್ತು ಮುಸ್ಲಿಂ ಬಹುಸಂಖ್ಯಾತ ದೇಶಗಳಿಂದ ಖಂಡನೆಗೆ ಕಾರಣವಾಯಿತು. ಬಿಜೆಪಿ ತನ್ನ ವಕ್ತಾರನನ್ನು ಅಮಾನತು ಮಾಡಿದೆ. ಬಿಜೆಪಿ ವಕ್ತಾರನ ಹೇಳಿಕೆಯನ್ನು ಬೆಂಬಲಿಸಿದ ಟೈಲರ್ ಒಬ್ಬನನ್ನು ಮುಸ್ಲಿಂ ಯುವಕರು ಇರಿದು ಕೊಂದರು. ಅವರು ಆ ಕೃತ್ಯವನ್ನು ಚಿತ್ರೀಕರಿಸಿ ಆನ್ಲೈನ್ನಲ್ಲಿ ಹಂಚಿಕೊಂಡು ವಿಕೃತಿ ಮೆರೆದಿದ್ದರು. ಇದನ್ನು ಖಂಡಿಸಿ ಮತ್ತೊಂದು ಸುತ್ತಿನ ಹಿಂಸಾಚಾರಗಳು ನಡೆದವು.
“ಮೋದಿಯವರ ಮೊದಲ ಐದು ವರ್ಷಗಳ ಅವಧಿಯಲ್ಲಿ, ಮುಸ್ಲಿಮರ ಮೇಲೆ ನಿರಂತರ ದಾಳಿಗಳು ನಡೆದವು. ಅದು ಸಮುದಾಯವನ್ನು ಆತಂಕಕ್ಕೆ ನೂಕಿತು; “ನೀವು ಮುಸ್ಲಿಮರಾಗಿದ್ದರೆ, ಎಲ್ಲಿಯಾದರೂ, ಯಾವಾಗ ಬೇಕಾದರೂ ದಾಳಿಗೆ ಗುರಿಯಾಗುತ್ತೀರಿ. ಆನ್ಲೈನ್ನಲ್ಲಿ ಹರಡಿರುವ ದ್ವೇಷದ ಮಾತು ಮತ್ತು ತಪ್ಪು ಮಾಹಿತಿಯು ಮುಸ್ಲಿಮರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುತ್ತಿದೆ” ಎಂದು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಗಜಾಲಾ ಜಮೀಲ್ ಹೇಳಿದ್ದಾರೆ.
ಭಾರತದಲ್ಲಿ ಹೆಚ್ಚುತ್ತಿರುವ ಮುಸ್ಲಿಂ ದ್ವೇಷಕ್ಕೆ ಜಗತ್ತಿನ ಪ್ರತಿಕ್ರಿಯೆ ಹೇಗಿತ್ತು?
ಕಾಶ್ಮೀರದಲ್ಲಿನ ಕ್ರಮಗಳು, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಮುಸ್ಲಿಂ ವಿರೋಧಿ ಹೇಳಿಕೆಯನ್ನು ಉಲ್ಲೇಖಿಸಿ, ಅನೇಕ ವಿದೇಶಿ ಸರ್ಕಾರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಬಿಜೆಪಿಯು ಮುಸ್ಲಿಮರ ವಿರುದ್ಧ ಅನುಸರಿಸಿರುವ ತಾರತಮ್ಯವನ್ನು ಖಂಡಿಸಿವೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತರತಮದಿಂದ ಕೂಡಿದೆ ಎಂದು ಕರೆದಿತ್ತು. ಇರಾನ್, ಕುವೈತ್ ಮತ್ತು ಕತಾರ್ 2022 ರಲ್ಲಿ ಭಾರತದ ಇಸ್ಲಾಮಫೋಬಿಕ್ ಹೇಳಿಕೆಗಳ ವಿರುದ್ಧ ಔಪಚಾರಿಕ ದೂರುಗಳನ್ನು ಸಲ್ಲಿಸಿದ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಲ್ಲಿ ಸೇರಿವೆ. ಐವತ್ತೇಳು ಸದಸ್ಯ ರಾಷ್ಟ್ರಗಳ ಒಂದು ಗುಂಪು ಇಸ್ಲಾಮಿಕ್ ಸಹಕಾರ ಸಂಘಟನೆ (OIC),ಇಸ್ಲಾಂ ಧರ್ಮದ ಬಗ್ಗೆ ಹೆಚ್ಚುತ್ತಿರುವ ದ್ವೇಷ ಮತ್ತು ಅಪಮಾನದ ವಿರುದ್ಧ ಮತ್ತು ಭಾರತೀಯ ಮುಸ್ಲಿಮರ ವಿರುದ್ಧ ವ್ಯವಸ್ಥಿತ ಕೃತ್ಯ ನಿಗ್ರಹಿಸಲು ಭಾರತಕ್ಕೆ ಕರೆ ನೀಡಿತ್ತು.
ಇದನ್ನೂ ಓದಿ ಅಂಬೇಡ್ಕರ್ ವಿಶೇಷ | ಚಿರಂಜೀವಿಯಾಗಿ ಬದುಕಿರುವ ಬಾಬಾಸಾಹೇಬರನ್ನು ‘ಕಾಣುವುದು’ ಯಾವಾಗ?
ವಿಶ್ವಸಂಸ್ಥೆ ಸ್ವತಂತ್ರ ಸರ್ಕಾರಿ ಸಂಸ್ಥೆಯಾದ ʼUS ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಂʼ 2020ರ ವರದಿಯಲ್ಲಿ, ಭಾರತವನ್ನು ʼಧಾರ್ಮಿಕ ಅಸಹಿಷ್ಣುತೆಯ ರಾಷ್ಟ್ರʼ ಎಂದು ಹೇಳಿದೆ. ಧಾರ್ಮಿಕ ಸಹಿಷ್ಣುತೆಯ ಸೂಚ್ಯಂಕದಲ್ಲಿ ಕುಸಿತವನ್ನು ವರದಿ ಗುರುತಿಸಿದೆ. ಈ ಬಗ್ಗೆ ಅಮೆರಿಕದ ಸಂಸತ್ತಿನಲ್ಲಿ ಚರ್ಚೆ ನಡೆಸುವಂತೆಯೂ ಒತ್ತಾಯಿಸಿತ್ತು.
ಈ ಎಲ್ಲ ಘಟನಾವಳಿಗಳನ್ನು ನೋಡಿದಾಗ ಭಾರತ ಸರ್ಕಾರದ ಅಲ್ಪಸಂಖ್ಯಾತರ ವಿರೋಧಿ ಧೋರಣೆ, ನೀತಿಗಳೇ ಇಂದು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತ ಹಿಂದೂಗಳ ಹಕ್ಕುಗಳ ರಕ್ಷಣೆಯ ಬಗ್ಗೆ ಮಾತನಾಡದಂತೆ ತಡೆಯೊಡ್ಡಿದೆಯೇ ಎಂಬ ಅನುಮಾನ ಬರುತ್ತದೆ. ಅಷ್ಟೇ ಅಲ್ಲ 2024ರ ಲೋಕಸಭಾ ಚುನಾವಣೆಯಲ್ಲಿ ಸ್ವತಃ ಮೋದಿಯವರೇ ಚುನಾವಣಾ ಭಾಷಣಗಳಲ್ಲಿ ಮುಸ್ಲಿಂ ವಿರುದ್ಧ ನೇರಾನೇರ ಮಾತಿನ ದಾಳಿ ನಡೆಸಿದ್ದನ್ನು ವಿದೇಶಿ ಮಾಧ್ಯಮಗಳೂ ವರದಿ ಮಾಡಿದ್ದವು. ಇವೆಲ್ಲ ಇಂದು ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಯ ಮೋದಿ ದನಿಯನ್ನು ದುರ್ಬಲಗೊಳಿಸಿದರೂ ಅಶ್ಚರ್ಯವಿಲ್ಲ.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.