ಕರ್ತವ್ಯದಲ್ಲಿದ್ದ ವೈದ್ಯೆ ಹಾಗೂ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ವ್ಯಕ್ತಿಯ ಮೇಲೆ ಚಿಂತಾಮಣಿ ನಗರ ಠಾಣೆ ಪೊಲೀಸರು ಬುಧವಾರ ಎಫ್‌ಐಆರ್ ದಾಖಲಿಸಿದ್ದಾರೆ.
ಚಿಂತಾಮಣಿ ತಾಲ್ಲೂಕಿನ ಮುರುಗುಮಲ್ಲ ಗ್ರಾಮದ ಸೈಯದ್ ಅಕ್ರಮ್ ಪಾಷ ಎಂಬಾತ ಹೊಟ್ಟೆ ನೋವಿನ ಕಾರಣ ತನ್ನ ಮಗಳನ್ನು ಬುಧವಾರ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು.
ನಂತರ ಆಂಬುಲೆನ್ಸ್ ಲಭ್ಯವಿಲ್ಲದ ಕಾರಣ ಸಿಟ್ಟಿಗೆದ್ದಿರುವ ವ್ಯಕ್ತಿ ಮತ್ತು ಆತನ ಸಹಚರ ಕರ್ತವ್ಯದಲ್ಲಿದ್ದ ವೈದ್ಯಾಧಿಕಾರಿ ಡಾ.ದ್ರಾಕ್ಷಾಯಿಣಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆಗೂ ಯತ್ನಿಸಿದ್ದಾನೆ. ಗಲಾಟೆ ತಡೆಯಲು ಬಂದ ಅಲ್ಲಿನ ಸಿಬ್ಬಂದಿ ಮೇಲೂ ಹರಿಹಾಯ್ದಿರುವ ಅಕ್ರಮ್ ಪಾಷ ಎಲ್ಲರನ್ನೂ ಅವಾಚ್ಯವಾಗಿ ನಿಂದಿಸಿದ್ದಾನೆ.
ಇದನ್ನೂ ಓದಿ : ಬಾಗೇಪಲ್ಲಿ | ಚೌಡೇಶ್ವರಿಯ ದೇವಾಲಯದಲ್ಲಿ ವಸ್ತ್ರಾಭರಣ, ವಿಗ್ರಹಗಳ ಕಳವು
ಘಟನೆ ಕುರಿತು ಡಾ.ದ್ರಾಕ್ಷಾಯಿಣಿ ಅವರು ಚಿಂತಾಮಣಿ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ದೂರಿನ ಹಿನ್ನೆಲೆ ಕ್ರಮಕೈಗೊಂಡಿರುವ ಪೊಲೀಸರು ವೈದ್ಯೆಯನ್ನು ನಿಂದಿಸಿದ ವ್ಯಕ್ತಿಯ ಮೇಲೆ ಎಫ್‌ಐಆರ್ ದಾಖಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.