‘ಕರ್ಮಯೋಗಿ ರಂಗಸ್ವಾಮಿ ಬೆಲ್ಲದಮಡು’ ಪುಸ್ತಕ ಬಿಡುಗಡೆ

Date:

Advertisements

ದಲಿತ ಚಳವಳಿಯ ಪ್ರಮುಖ ಸಂಘಟಕರಾಗಿದ್ದ ರoಗಸ್ವಾಮಿ ಬೆಲ್ಲದಮಡು ಅವರ ಬಗ್ಗೆ ವೆಂಕಟಾಚಲ.ಹೆಚ್.ವಿ. ಸಂಪಾದಿಸಿರುವ ‘ಕರ್ಮಯೋಗಿ ರಂಗಸ್ವಾಮಿ ಬೆಲ್ಲದಮಡು’ ನೆನಪಿನ ಸಂಪುಟ ಪುಸ್ತಕ ಡಿಸೆಂಬರ್ 6ರ ಶುಕ್ರವಾರ ಬೆಳಿಗ್ಗೆ 10ಕ್ಕೆ ತುಮಕೂರಿನ ಟೌನ್ ಹಾಲ್ ಸರ್ಕಲ್‌ನ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಬಿಡುಗಡೆಗೊಳ್ಳಲಿದೆ. ಪುಸ್ತಕಕ್ಕೆ ಹಿರಿಯ ಸಾಹಿತಿ ಪ್ರೊ. ಕಾಳೇಗೌಡ ನಾಗವಾರ ಅವರು ಬರೆದ ಮುನ್ನುಡಿ ಇಲ್ಲಿದೆ

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅತ್ಯಂತ ಸಕ್ರಿಯ ಸದಸ್ಯರಾಗಿ ಮನಸಂಪನ್ನ ಆದರ್ಶ ಜೀವಿಗಳಿಗೆ ಮಾದರಿಯಾಗಿ, ಅರ್ಪಣಾ ಮನೋಭಾವದಿಂದ ಇನ್ನಿಲ್ಲದಂತೆ ದುಡಿದು-ಈ ನಾಡಿನ ಸಾಮಾಜಿಕ ನ್ಯಾಯದ ಪರವಾದ ಸಂವೇದನಾಶೀಲರೆಲ್ಲರ ಮೆಚ್ಚುಗೆಗೆ ಪಾತ್ರರಾದ ಬೆಲ್ಲದಮಡು ರಂಗಸ್ವಾಮಿಯವರ ಬದುಕಿನ ಸೂಕ್ಷ್ಮ ಸಂಗತಿಗಳನ್ನು ಗಮನಿಸಿದಾಗ ನಿಜಕ್ಕೂ ಹೃದಯ ತುಂಬಿ ಬರುತ್ತದೆ. ಭಾರತದ ಸಾಂಪ್ರದಾಯಕ ವರ್ಣ, ವರ್ಗ, ಜಾತಿ, ಅಸ್ಪೃಶ್ಯತೆ ಮತ್ತು ಲಿಂಗಭೇದ ನೀತಿ ಸಂಬಂಧದ ಸನಾತನ ಸಂಗತಿಗಳ ಗ್ರಾಮೀಣ ಪರಿಸರದ ಕಾರ್ಯದ ನಡವಳಿಕೆಗಳ ನಡುವೆ ಮಾನವೀಯತೆಯ ಪರವಾದ ನೆಮ್ಮದಿಯ ಕ್ಷಣಗಳಿಗಾಗಿ ಇನ್ನಿಲ್ಲದಂತೆ ಶ್ರಮಿಸಿ, ಆ ದಿಕ್ಕಿನಲ್ಲಿ ಅಕ್ಷರಶಃ ಯಶಸ್ಸು ಕಂಡ ಧುರೀಣರಲ್ಲಿ ಈ ಗೆಳೆಯರು ಅಗ್ರಗಣ್ಯರಾಗಿದ್ದಾರೆ.

ಕಳೆದ ಅರವತ್ತು-ಎಪ್ಪತ್ತು ವರ್ಷಗಳ ಹಿಂದೆ ನಮ್ಮ ಹಳ್ಳಿಗಾಡಿನ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯ ಸಂಬಂಧದ ಭೀಕರ ಚಟುವಟಿಕೆಗಳು ಹೇಗಿದ್ದವೆಂಬುದನ್ನು ನಾವೆಲ್ಲಾ ಚೆನ್ನಾಗಿಯೇ ಮನಗಂಡಿದ್ದೇವೆ. ಪ್ರಜಾಪ್ರಭುತ್ವದ ಚೌಕಟ್ಟಿನ ಹೊಸ ಸಂವಿಧಾನ ಸಮಾನತೆ-ಸ್ವಾತಂತ್ರ್ಯ-ಸೋದರತೆಯ ಆನಂದದಾಯಕ ಕ್ಷಣಗಳನ್ನು ಅನುಭವಿಸುವ ಅವಕಾಶಗಳು ಶಿಕ್ಷಣದ ಜೊತೆಜೊತೆಯಲ್ಲಿಯೇ ನಮಗೆ ದಕ್ಕಿರುವುದು ಹೆಗ್ಗಳಿಕೆಯ ಸಂಗತಿಯಾಗಿದೆ. ಈ ಬಗೆಯ ಸಂಕ್ರಮಣ ಸ್ಥಿತಿಯಲ್ಲಿ ತನ್ನ ಕುಟುಂಬ, ಊರು, ಪಟ್ಟಣ ಮತ್ತು ನಗರಗಳಲ್ಲಿ ನಾವೆಲ್ಲಾ ನಿಜಕ್ಕೂ ಹೃದಯವಂತಿಕೆ ತುಂಬಿದ ಬದ್ಧತೆಯ ಗೆಣೆಕಾರರಾದರೆ-ಎಷ್ಟೆಲ್ಲಾ ಆತ್ಮೀಯ ಅಕ್ಕರೆಯ ಪವಾಡಗಳನ್ನು ನಮ್ಮ ಕಣ್ಣೆದುರೇ ಸಾಕಾರಗೊಳಿಸಲು ಸಾಧ್ಯವೆಂಬುದನ್ನು ಗೆಳೆಯ ರಂಗಸ್ವಾಮಿಯವರು ತಮ್ಮ ಬದುಕಿನುದ್ದಕ್ಕೂ ವಿವರ-ವಿವರಗಳಲ್ಲಿ ಸಾಬೀತು ಮಾಡಿದ್ದಾರೆ.

ತುಮಕೂರು ಜಿಲ್ಲೆಯ ಎಲ್ಲಾ ಪ್ರಗತಿಪರ ಚಿಂತಕರ ಹೃದಯವಂತರ ಒಡನಾಟದಲ್ಲಿ ತಾನು ಗಟ್ಟಿಯಾಗಿ ಬೆಳೆಯುತ್ತಲೇ, ತನ್ನ ತುಂಬು ಕುಟುಂಬದ ಪಾಲನೆ-ಪೋಷಣೆಯನ್ನು ಹೆಂಗರುಳಿನ ಅಕ್ಕರೆಯ ಮೂಲಕ ಆಶ್ಚರ್ಯಕರವಾಗಿ ನಿರಂತರ ನಿರ್ವಹಿಸಿರುವ ಈ ಮಿತ್ರರು ಹೊಸ ಸಮಾಜದ ಕನಸು ಕಾಣುವ ಹೋರಾಟಗಾರರಿಗೆ ಹಿರಿಯಣ್ಣನಂತಿದ್ದಾರೆ.

ಪ್ರೊ.ಬಿ.ಕೃಷ್ಣಪ್ಪ, ದೇವನೂರು ಮಹಾದೇವ, ಸಿದ್ದಲಿಂಗಯ್ಯ, ಕೆ.ಬಿ.ಸಿದ್ದಯ್ಯ, ಕೆ.ದೊರೈರಾಜ್ ಮತ್ತಿತರ ಕ್ರಿಯಾಶೀಲ ಒಡನಾಡಿಗಳ ಸಮಾಜ ಸುಧಾರಣೆಯ ಪ್ರಯತ್ನಗಳ ಜೊತೆಜೊತೆಯಲ್ಲಿಯೇ-ತನ್ನ ಸುತ್ತಲಿನ ಸಕಲೆಂಟು ಸಂಕಟಗಳನ್ನು ಬದಿಗೆ ಸರಿಸುತ್ತಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ಸಮಾಜ ಸುಧಾರಣೆಯ ಕಾಯಕಗಳಲ್ಲಿ ನಿಷ್ಠೆಯಿಂದ ಮುಳುಗಿರುತ್ತಿದ್ದ ರಂಗಸ್ವಾಮಿಯವರ ಸಾಧನೆಗಳು ಜೀವಪರ ಕಾಳಜಿಗಳ ಪ್ರಯತ್ನಶೀಲರಿಗೆ ಸದಾಕಾಲದ ಮಾದರಿಯಾಗಿರುವುದು ಹರ್ಷದ ಸಂಗತಿಯಾಗಿದೆ. ಎಷ್ಟೇ ತ್ರಾಸದಾಯಕ ಕಾರ್ಯವಾದರೂ ಇವರು ತಾಳ್ಮೆಯಿಂದ, ಸಡಗರದಿಂದ ತಲ್ಲೀನರಾಗಿ ನಿರ್ವಹಿಸಿದ್ದಾರೆ. ದಲಿತಲೋಕದ ಎಡ-ಬಲ ಪಂಗಡಗಳ ವಿಂಗಡಣೆಯಾಚೆಗೂ ಕಣ್ಣಾಡಿಸಿರುವ ರಂಗಸ್ವಾಮಿಯವರು ತಮ್ಮೆಲ್ಲರ ಒಗ್ಗಟ್ಟಿನ ಪರಿಣಾಮವಾಗಿ ಈ ಒಳಪಂಗಡಗಳಲ್ಲಿಯೂ ಭೇದಭಾವವಿಲ್ಲದೆ ಸಂತೋಷದ ಮದುವೆಗಳಾಗಲು ಸಹ ನೆರವಾಗಿದ್ದಾರೆ.

ಇವರನ್ನು ಹತ್ತಿರದಿಂದ ಬಲ್ಲವರು, ರಕ್ತಸಂಬಂಧಿಗಳು, ವಿವಿಧ ಫಲಾನುಭವಿಗಳು ಈ ಗ್ರಂಥದಲ್ಲಿ ಬೇರೆ ಬೇರೆ ಸಂಬಂಧಗಳಲ್ಲಿನ ಇವರ ಧೈರ್ಯದ, ಮಾನವೀಯತೆಯ, ಔದಾರ್ಯದ ಘಟನೆಗಳನ್ನು ದಾಖಲಿಸಿರುವುದನ್ನು ಕಂಡು ನಾನು ಬೆರಗಾಗಿದ್ದೇನೆ. ಒಡಹುಟ್ಟಿದವರ, ಸುತ್ತಲಿನವರ, ಅವಕಾಶವಿಹೀನರ ಏಳಿಗೆಗಾಗಿ ಪ್ರತಿಕ್ಷಣವೂ ದುಡಿದು ಹಣ್ಣಾದ ಶ್ರೀಮಂತ ವ್ಯಕ್ತಿತ್ವವೊಂದರ ತಾಜಾತನದ ಒಳವಿವರಗಳು ಇಲ್ಲಿ ಯಥೇಚ್ಛವಾಗಿ ಹೆಜ್ಜೆ ಹೆಜ್ಜೆಗೂ ಕಂಗೊಳಿಸುತ್ತಿವೆ.
ಬೆಲ್ಲದಮಡು ರಂಗಸ್ವಾಮಿಯವರು ಎಲ್ಲರ ಬಯಕೆಯನ್ನೂ ಸಿಹಿ ಸಿಹಿಯಾಗಿಸುವ ಭರದಲ್ಲಿ ತಮ್ಮ ಆರೋಗ್ಯದ ಕಡೆಗೆ ಗಮನ ನೀಡದೆ ಜಾಂಡೀಸ್ ಕಾಯಿಲೆಗೆ ತುತ್ತಾಗಿ ಕಳೆದ ಇಪ್ಪತ್ತು ವರ್ಷಗಳ ಹಿಂದೆಯೇ ನಮ್ಮನ್ನು ಅಗಲಿದ್ದಾರೆ. ಈ ಮನಸಂಪನ್ನ ಸಮಾಜ ಸುಧಾರಕರ ಸುತ್ತಲಿನ ಅತ್ಯಾಪ್ತರು ಮತ್ತು ಸದಭಿರುಚಿಯ ಪರಿಚಿತರು ಒಟ್ಟಾಗಿ ಅಪರಿಮಿತ ಕಾಳಜಿಯಿಂದ ಸಿದ್ದಪಡಿಸಿರುವ “ಕರ್ಮಯೋಗಿ ರಂಗಸ್ವಾಮಿ ಬೆಲ್ಲದಮಡು ನೆನಪಿನ ಸಂಪುಟ”ವು ಆರೋಗ್ಯಕರ ಸಮಾಜದ ನೆಮ್ಮದಿಗೆ ಹಾತೊರೆಯುವ ದೃಢಮನಸ್ಸಿನ ಛಲವಂತ ಸಾಧಕರಿಗೆ ಕೈದೀವಿಯಾಗಿ ನೆರವಾಗುತ್ತದೆಂದು ನಾನು ಬಲವಾಗಿ ನಂಬಿದ್ದೇನೆ.

ಅತ್ಯಂತ ಉಪಯುಕ್ತವೂ, ಸದಭಿರುಚಿದ್ಯೋತಕವೂ ಆಗಿರುವ ಈ ಗ್ರಂಥದ ಸಂಪೂರ್ಣ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನಾಡಿನ ಜನತೆಗೆ ಅರ್ಪಿಸಿರುವ “ಮೈತ್ರಿನ್ಯೂಸ್” ಪತ್ರಿಕೆಯ ಸಂಪಾದಕರಾದ ಗೆಳೆಯ ವೆಂಕಟಾಚಲ.ಹೆಚ್.ವಿ. ಅವರ ಶ್ರಮ ಸಾರ್ಥಕವಾದದ್ದು. ಇಂತಹ ಜನೋಪಯೋಗಿ ಕಾರ್ಯವನ್ನು ತಾಳ್ಮೆಯಿಂದ ನಿರ್ವಹಿಸಿರುವ ಈ ಮಿತ್ರರಿಗೆ ನನ್ನ ಪ್ರೀತಿಪೂರ್ವಕ ಶುಭಾಶಯಗಳು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

Download Eedina App Android / iOS

X