ಗುರುವಾರ ಬೆಳಗ್ಗೆ ಬಿಡುಗಡೆಯಾದ ‘ಪುಷ್ಪಾ-2: ದ ರೂಲ್’ ಸಿನಿಮಾ ವೀಕ್ಷಣೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಉಂಟಾಗಿದ್ದು, ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಆಕೆಯ ಮಗನ ಸ್ಥಿತಿ ಗಂಭೀರವಾಗಿದೆ. ಮೃತ ಮಹಿಳೆಯ ಕುಟುಂಬಕ್ಕೆ ನೆರವು ನೀಡುವುದಾಗಿ ಸಿನಿಮಾದ ನಾಯಕ ನಟ ಅಲ್ಲು ಅರ್ಜುನ್ ಅವರ ತಂಡ ಘೋಷಿಸಿದೆ.
ಸಂಧ್ಯಾ ಥಿಯೇಟರ್‌ಗೆ ನಟ ಅಲ್ಲು ಅರ್ಜುನ್ ಸೇರಿದಂತೆ ಚಿತ್ರತಂಡವು ಭೇಟಿ ನೀಡುತ್ತಿದೆ ಎಂಬ ಸುದ್ದಿ ತಿಳಿದು ಹೆಚ್ಚಿನ ಅಭಿಮಾನಿಗಳು ಥಿಯೇಟರ್‌ನಲ್ಲಿ ಜಮಾಯಿಸಿದ್ದರು. ಈ ವೇಳೆ, ಕಾಲ್ತುಳಿತ ಉಂಟಾಗಿದೆ. ಕಾಲ್ತುಳಿತದಲ್ಲಿ ರೇವತಿ (39) ಸಾವನ್ನಪ್ಪಿದ್ದಾರೆ. ಅವರ ಮಗ ಶ್ರೀತೇಜ್ (9) ಸ್ಥಿತಿಯೂ ಗಂಭೀರವಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ದುರಂತ ಘಟನೆಯ ಬಗ್ಗೆ ನಟ ಅಲ್ಲು ಅರ್ಜುನ್ ತಂಡ ಪ್ರತಿಕ್ರಿಯೆ ನೀಡಿದೆ. ”ದುರಂತವು ದುರದೃಷ್ಟಕರ. ಸದ್ಯ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅವರ ಕುಟುಂಬಕ್ಕೆ ಅಗತ್ಯ ನೆರವು ನೀಡುತ್ತೇವೆ” ಎಂದು ಹೇಳಿದೆ.
ಬಾಲಕನ ಸ್ಥಿತಿ ಗಂಭೀರವಾಗಿದ್ದು, 78 ಗಂಟೆಗಳ ಕಾಲ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೆಲ ಯೂಟ್ಯೂಬ್ ಚಾನೆಲ್‌ಗಳು ಬಾಲಕ ಕೂಡ ಮೃತಪಟ್ಟಿದ್ದಾನೆಂದು ಸುದ್ದಿ ಬಿತ್ತರಿಸುತ್ತಿವೆ. ಇಂತಹ ಸುಳ್ಳು ಸುದ್ದಿಗಳನ್ನು ಬಿತ್ತರಿಸದಂತೆ ಅಲ್ಲು ಅರ್ಜುನ್ ತಂಡ ಮನವಿ ಮಾಡಿದೆ.
‘ಪುಷ್ಪಾ-2’ ಸಿನಿಮಾ ನಿರ್ಮಿಸಿರುವ ಸಂಸ್ಥೆ ಮೈತ್ರಿ ಮೂವೀಸ್ ಕೂಡ ಪ್ರತಿಕ್ರಿಯಿಸಿದ್ದು, ”ದುರಂತ ಘಟನೆಯಿಂದ ನಮಗೆ ತೀವ್ರ ದುಃಖವಾಗಿದೆ. ಆ ಕುಟುಂಬ ಮತ್ತು ಚಿಕಿತ್ಸೆಗೊಳಗಾಗಿರುವ ಚಿಕ್ಕ ಮಗುವಿಗಾಗಿ ನಾವು ಪ್ರಾರ್ಥಿಸುತ್ತೇವೆ. ಈ ಕಠಿಣ ಸಂದರ್ಭ ಅವರೊಂದಿಗೆ ನಿಲ್ಲುತ್ತೇವೆ. ಸಾಧ್ಯವಿರುವ ಎಲ್ಲ ಬೆಂಬಲ ಒದಗಿಸುತ್ತೇವೆ” ಎಂದು ಹೇಳಿದೆ.