ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 68ನೇ ಪರಿನಿರ್ವಾಣ ದಿನ ಅಂಗವಾಗಿ ಶೋಷಿತ ಸಮುದಾಯಗಳ ಐಕ್ಯತಾ ದಿನ ಮತ್ತು ಸಂಗೀತ ನುಡಿ ನಮನ ಕಾರ್ಯಕ್ರಮ ಶುಕ್ರವಾರ ಅರ್ಥಪೂರ್ಣವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಮಹಾಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಬೆಲ್ದಾರ್ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದಲಿತ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಂಗೀತ ನುಡಿ ನಮನ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ನುಡಿನಮನ ಸಲ್ಲಿಸಲಾಗುವುದು. ಕಾರ್ಯಕ್ರಮಕ್ಕೆ ಜಿಲ್ಲೆಯ 15ಕ್ಕೂ ಅಧಿಕ ಭಜನಾ ತಂಡಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ವರ್ಷ ಚಳಿ ಅಧಿಕ ಇರುವುದರಿಂದ ರಾತ್ರಿ ಬದಲು ಬೆಳಗ್ಗೆ 10ಕ್ಕೆ ಜಿಲ್ಲಾಡಳಿತದಿಂದ ಅಂಬೇಡ್ಕರ್ ವೃತ್ತದ ಸಮೀಪ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. ಪೌರಾಡಳಿತ ಸಚಿವ ರಹೀಮ್ ಖಾನ್, ಸಂಸದ ಸಾಗರ್ ಖಂಡ್ರೆ, ಶಾಸಕರಾದ ಪ್ರಭು ಚವ್ಹಾಣ್, ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಎಂ.ಜಿ. ಮುಳೆ, ಡಾ.ಚಂದ್ರಶೇಖರ ಪಾಟೀಲ್ ಇತರರು ಪಾಲ್ಗೊಳ್ಳುವರು ಎಂದರು.
ಅಂಬೇಡ್ಕರ್ ಅನುಯಾಯಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಸವಣ್ಣನವರ ಕುರಿತು ಅವಹೇಳನ : ಶಾಸಕ ಯತ್ನಾಳ್ ಕ್ಷಮೆಗೆ ಜಾಗತಿಕ ಲಿಂಗಾಯತ ಮಹಾಸಭಾ ಆಗ್ರಹ
ದಸಂಸ ರಾಜ್ಯ ಸಂಘಟನಾ ಸಂಚಾಲಕ (ಅಂಬೇಡ್ಕರ್ ವಾದ) ರಮೇಶ ಡಾಕುಳಗಿ, ಪ್ರಮುಖರಾದ ಬಾಬು ಪಾಸ್ವಾನ್, ಶಿವಕುಮಾರ ನೀಲಿಕಟ್ಟಿ, ಶ್ರೀಪತರಾವ ದೀನೆ, ಸಂದೀಪ ಕಾಂಟೆ, ಮಾರುತಿ ಕಂಟಿ, ಪ್ರದೀಪ ನಾಟೇಕರ್, ಶಾಲಿವಾನ ಬಡಿಗೇರ, ಸುನೀಲ ಸಂಗಮ, ಬಾಬು ಮಿಠಾರೆ, ಗೌತಮ ಪ್ರಸಾದ ಪತ್ರಿಕಾಗೋಷ್ಠಿಯಲ್ಲಿ ಇದ್ದರು.