ಕೇವಲ 65ನೆಯ ವಯಸ್ಸಿನಲ್ಲಿಯೇ ಬಾಬಾಸಾಹೇಬರು ಕೊನೆಯುಸಿರೆಳೆಯುತ್ತಾರೆ. 1956ರಲ್ಲಿ ಮರೆಯಾದದ್ದು ಬಾಬಾಸಾಹೇಬರ ನಶ್ವರ ದೇಹವೇ ವಿನಾ ಅವರ ಪ್ರಖರ ಜೀವಪರ ವಿಚಾರಗಳಲ್ಲ ಎಂಬ ಕಠೋರ ಸತ್ಯವನ್ನು ಆಳುವವರ ಕಣ್ಣುಗಳು ಕಾಣದಾಗಿವೆ. ಬಾಬಾಸಾಹೇಬರೆಂದರೆ ತುಳಿದಿಟ್ಟ ಸಮುದಾಯಗಳು ಎದೆಯೊಳಗೆ ಧರಿಸಿರುವ ನಂದಾದೀಪ
ನೂರಾರು ವರ್ಷ ತುಳಿಸಿಕೊಂಡು ತಲೆಯೆತ್ತಲಾಗದೆ ಮನುಸ್ಮೃತಿಯ ಸಂಕೋಲೆಗಳಲ್ಲಿ ಸಿಲುಕಿರುವ ದಲಿತರು-ಆದಿವಾಸಿಗಳು ಹಾಗೂ ಹೆಣ್ಣುಮಕ್ಕಳಿಗೆ ವಿಮೋಚನೆಯ ಹಾದಿ ತೋರಿದವರು ಬಾಬಾಸಾಹೇಬ ಭೀಮರಾವ್ ಅಂಬೇಡ್ಕರ್. ಅವರ ಪ್ರತಿಮೆಗಳು ಈಗಲೂ ದೇಶದ ನಾನಾ ಭಾಗಗಳಲ್ಲಿ ಚಪ್ಪಲಿ ಹಾರಗಳನ್ನು ತೊಡಿಸಿಕೊಳ್ಳುತ್ತಿವೆ, ಕೈ ಕಡಿಸಿಕೊಳ್ಳುತ್ತಿವೆ, ರುಂಡ ಹಾರಿಸಿಕೊಳ್ಳುತ್ತಿವೆ, ಮಸಿ ಬಳಿಸಿಕೊಳ್ಳುತ್ತಿವೆ. ಬಲಿಷ್ಠ ಜಾತಿಗಳ ದಾಳಿಗಳಿಂದ ರಕ್ಷಿಸಲು ಬಾಬಾಸಾಹೇಬರ ಪ್ರತಿಮೆಗಳನ್ನು ದಲಿತದಮನಿತರು ಲೋಹದ ಸರಳುಗಳ ಪಂಜರದಲ್ಲಿ ಇಟ್ಟಿರುವ ವಿಪರ್ಯಾಸವನ್ನು ಕಾಣಬಹುದು.
ದಲಿತ ಅಸ್ಮಿತೆಯ ಪ್ರತೀಕವೇ ಆದ ಈ ಅರಿವಿನ ಸೂರ್ಯನ ಚಾರಿತ್ರ್ಯಹನನದ ಪ್ರಯತ್ನಗಳು ನಿರಂತರ ನಡೆಯುತ್ತಲೇ ಇರುತ್ತವೆ. ದಶಕದ ಹಿಂದಿನ ತನಕ ಬಲಪಂಥದ ‘ಬುದ್ಧಿಜೀವಿ’ ಎನಿಸಿಕೊಂಡಿದ್ದವರು ಹಿರಿಯ ಪತ್ರಕರ್ತ ಅರುಣ್ ಶೌರಿ. ವಾಜಪೇಯಿ ಮಂತ್ರಿಮಂಡಲದಲ್ಲಿದ್ದವರು. ‘Worshipping False Gods : Ambedkar and the Facts which have been Erased” ಎಂಬ ಪುಸ್ತಕ ಬರೆದು ‘ಸುಳ್ಳು ದೇವರು’ಗಳಲ್ಲಿ ಒಬ್ಬರೆಂದು ಬಾಬಾಸಾಹೇಬರನ್ನು ಚಿತ್ರಿಸಿದ್ದರು. ಡಾ.ಅಂಬೇಡ್ಕರ್ ಅವರನ್ನು ಇಂದು ಹಾಡಿ ಹೊಗಳುತ್ತಿರುವ ಕಟ್ಟರ್ ಬಲಪಂಥೀಯ ಶಕ್ತಿಗಳು ಅಂದು ತುಟಿ ಬಿಚ್ಚಲಿಲ್ಲ. ತಪ್ಪೆಂದು ಖಂಡಿಸಲಿಲ್ಲ. ಬಾಬಾ ಸಾಹೇಬರ ಪ್ರತಿಮೆಗಳನ್ನು ಭಗ್ನಗೊಳಿಸಿ ಅವಮಾನಿಸುವ ದ್ವೇಷವನ್ನು ತಡೆಯುವುದು ಈ ಶಕ್ತಿಗಳಿಗೆ ಅಸಾಧ್ಯವೇನಲ್ಲ. ಆದರೆ ಹಾಗೆ ಮಾಡುವ ಮನಸ್ಸಿಲ್ಲ. ಸವರ್ಣೀಯರ ಕಾಯಂ ಆಕ್ರಮಣ- ಅತ್ಯಾಚಾರ- ಅಭದ್ರತೆಗಳಲ್ಲಿ ದಿನ ದೂಡುತ್ತಿರುವ ದಲಿತ-ಆದಿವಾಸಿ ಸಮುದಾಯಗಳು ಹಿಂದೆಂದಿಗಿಂತ ಹೆಚ್ಚು ತಬ್ಬಲಿಯಾಗಿವೆ. ದುಗುಡ ಅಸಹಾಯಕತೆಗಳು ಅವುಗಳನ್ನು ದಟ್ಟೈಸಿವೆ.

ಕೇವಲ 65ನೆಯ ವಯಸ್ಸಿನಲ್ಲಿಯೇ ಬಾಬಾಸಾಹೇಬರು ಕೊನೆಯುಸಿರೆಳೆಯುತ್ತಾರೆ. 1956ರಲ್ಲಿ ಮರೆಯಾದದ್ದು ಬಾಬಾಸಾಹೇಬರ ನಶ್ವರ ದೇಹವೇ ವಿನಾ ಅವರ ಪ್ರಖರ ಜೀವಪರ ವಿಚಾರಗಳಲ್ಲ ಎಂಬ ಕಠೋರ ಸತ್ಯವನ್ನು ಆಳುವವರ ಕಣ್ಣುಗಳು ಕಾಣದಾಗಿವೆ. ಬಾಬಾಸಾಹೇಬರು ತುಳಿದಿಟ್ಟ ಸಮುದಾಯಗಳು ಎದೆಯೊಳಗೆ ಧರಿಸಿರುವ ನಂದಾದೀಪ. ಸಮಸಮಾಜವನ್ನು ಅರಸುವ ಆಂದೋಲನಗಳಲ್ಲಿ, ಸ್ವಾತಂತ್ರ್ಯ ಸಮಾನತೆ ಸೋದರಭಾವ ಸಾರುವ ಸಂವಿಧಾನದಲ್ಲಿ ಅವರು ಜೀವಂತ. ಬದುಕಿರುವ ಈ ಅಂಬೇಡ್ಕರರನ್ನು ಕಣ್ಣು ತೆರೆದು ಕಾಣಬೇಕಿದೆ. ಹಾಗೆ ಕಣ್ಣು ತೆರೆಯುವುದನ್ನು ಒಲ್ಲರು ಯಥಾಸ್ಥಿತಿಯ ಪೋಷಕರು ಮತ್ತು ಫಲಾನುಭವಿಗಳು. ಹಾಗೆ ಸತ್ಯವನ್ನು ಕಣ್ಣಲ್ಲಿ ಕಟ್ಟಿಟ್ಟು ನೋಡಿದ್ದೇ ಆದರೆ ಅಸಮಾನತೆಯ ತಳಪಾಯದ ಮೇಲೆ ಅವರು ಕಟ್ಟಿಕೊಂಡು ಬಂದಿರುವ ಶೋಷಣೆಯ ಸೌಧಗಳು ಬುಡಮೇಲಾಗಲಿವೆ.
ಅದಕ್ಕೆ ಬದಲಾಗಿ ನಶ್ವರ ದೇಹಕ್ಕೆ ಮತ್ತು ನಾಮಧೇಯಕ್ಕೆ ಪ್ರತಿಮೆಗಳು, ಮಹಲುಗಳು, ಭವನಗಳು, ಭವ್ಯ ಸ್ಮಾರಕಗಳನ್ನು ಕಟ್ಟಿಸಿ ನಿಲ್ಲಿಸಿ ಅಂಬೇಡ್ಕರ್ ಅವರನ್ನು ಗೌರವಿಸುವವರು ನಾವು ಎಂದು ಎದೆಬಡಿದು ಹೇಳಿಕೊಳ್ಳುವ ಸಲೀಸು ದಾರಿಯನ್ನು ಹುಡುಕಿಕೊಳ್ಳಲಾಗಿದೆ.
ಏಣಿ ಶ್ರೇಣಿಗಳು, ಭೇದ ಭಾವಗಳ ಸಾಮಾಜಿಕ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತಾರದೆ ಆರ್ಥಿಕ ಸುಧಾರಣೆಯಾದರೂ ಹೇಗೆ ಸಾಧ್ಯ ಎಂಬ ಅಂಬೇಡ್ಕರ್ ಪ್ರಶ್ನೆ ಇಂದಿಗೂ ಪ್ರಸ್ತುತ. ಬಹುತೇಕ ರಾಜಕೀಯ ಪಕ್ಷಗಳಿಗೆ ಅಂಬೇಡ್ಕರ್ ರೂಪವಾಗಿ ಬೇಕೇ ವಿನಾ ಸಾರವಾಗಿ ಅಲ್ಲ. ”ಕಲ್ಲ ನಾಗರಕೆ ಹಾಲೆರೆವ” ಮತ್ತು ”ಉಣ್ಣದ ಲಿಂಗಕ್ಕೆ ಬೋನವ ಹಿಡಿವ” ಡಾಂಭಿಕತನವನ್ನು ನಮ್ಮ ರಾಜಕೀಯ ಪಕ್ಷಗಳು ಅಂಬೇಡ್ಕರರ ಕುರಿತು ಪ್ರದರ್ಶಿಸಿವೆ. ಜಾತಿ ವ್ಯವಸ್ಥೆಯ ವಿರುದ್ಧ ಅಂಬೇಡ್ಕರ್ ಸಿಡಿಸಿದ ವಿಚಾರಗಳು ಈ ಪಕ್ಷಗಳಿಗೆ ಬೇಕಿಲ್ಲ
ಅಸ್ಪೃಶ್ಯತೆಯು ಮೊದಲು ಅಸ್ಪೃಶ್ಯರನ್ನು ಸರ್ವನಾಶ ಮಾಡಿದೆ. ನಂತರ ಹಿಂದೂ ಸವರ್ಣೀಯರನ್ನು ಸರ್ವನಾಶ ಮಾಡಿದೆ. ಅಂತಿಮವಾಗಿ ಅದು ಇಡೀ ದೇಶವನ್ನೇ ನಾಶ ಮಾಡಿದೆ. ಹಿಂದೂ ಧರ್ಮದಲ್ಲಿ ನಿಮ್ನ ವರ್ಗಗಳಿಗೆ ಗೌರವ, ಸಮಾನತೆ, ನ್ಯಾಯ ಸಿಗದೆ ಹೋದರೆ ಇವುಗಳು ಎಲ್ಲಿ ಸಿಗುತ್ತವೆಯೇ ಅಲ್ಲಿಗೆ ಅವರು ಹೋಗುವುದು ಹೇಗೆ ತಾನೆ ತಪ್ಪಾಗುತ್ತದೆ ಎಂಬ ಅಂಬೇಡ್ಕರ್ ಪ್ರಶ್ನೆಗೆ ಪಕ್ಷ ಪರಿವಾರಗಳಿಂದ ಈಗಲೂ ಉತ್ತರ ಸಿಕ್ಕಿಲ್ಲ. ಆದರೆ ಮತಾಂತರ ಹೊಂದಿದವರನ್ನು ಹಿಂದೂ ಧರ್ಮಕ್ಕೆ ಮರಳಿ ತರುವ ಮತ್ತು ಮತಾಂತರದ ಧಾರ್ಮಿಕ ಸ್ವಾತಂತ್ರ್ಯವನ್ನು ಹೊಸಕಿ ಹಾಕುವ ಕೃತ್ಯ ರಭಸ ಗಳಿಸಿದೆ. ಈ ಕೃತ್ಯವು ಅಂಬೇಡ್ಕರ್ ದಲಿತರಿಗೆ ತೋರಿದ ಮತಾಂತರದ ಬಿಡುಗಡೆಯ ದಾರಿಯ ನೇರ ತಿರಸ್ಕಾರ. ದಲಿತರನ್ನು ಮೇಲುಕೀಳಿನ ಗಾಣಕ್ಕೇ ಕಾಯಮ್ಮಾಗಿ ಕಟ್ಟಿ ಹಾಕುವ ಹುನ್ನಾರ.
”ಮತಾಂತರವೊಂದೇ ದಲಿತರ ಬಿಡುಗಡೆಯ ದಾರಿ ಈ ಸಮಾಜ ನಿಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳಬೇಕೆಂದು ನೀವು ಬಯಸುವುದೇ ಆದರೆ ಮತಾಂತರಗೊಳ್ಳಿ, ಸಂಘಟಿತರಾಗಲು, ಶಕ್ತಿವಂತರಾಗಲು ಮತಾಂತರ ಹೊಂದಿರಿ. ಸಮಾನತೆ, ಸ್ವಾತಂತ್ರ್ಯಕ್ಕಾಗಿ ಮತಾಂತರವಾಗಿರಿ. ನಿಮ್ಮ ಕೌಟುಂಬಿಕ ಬದುಕು ಸುಖಮಯವಾಗಲು ಮತಾಂತರಗೊಳ್ಳಿ” ಎಂದಿದ್ದರು ಅಂಬೇಡ್ಕರ್. ಕಾಲ ಸರಿದ ನಂತರ ತಾವು ಆಡಿದ ಮಾತನ್ನು ಖುದ್ದು ನಡೆಸಿ ತೋರಿದರು.
ಆಚರಣೆಯಲ್ಲಿ ಅಂಬೇಡ್ಕರ್ ಸಿದ್ಧಾಂತವನ್ನು ಇಡಿಯಾಗಿ ವಿರೋಧಿಸಿ, ನಿತ್ಯದ ಬದುಕಿನಲ್ಲಿ ದಲಿತ ದ್ವೇಷವನ್ನು ಕಾರುವ ಜಾತಿ ವರ್ಗಗಳ ಜೊತೆ ನಿಲ್ಲುವವರು ಬಾಬಾಸಾಹೇಬರಿಗೆ ತೋರುವ ಆದರವು ಅಪ್ಪಟ ಕಪಟ. ದಲಿತರ ಮತಗಳನ್ನು ಸೆಳೆಯುವ ಕೇವಲ ಪ್ರತಿಮೆ- ಪ್ರತೀಕ- ಸ್ಮಾರಕ ರೂಪಕಗಳಾಗಿ ಮಾತ್ರವೇ ಪಕ್ಷ ಪರಿವಾರಗಳು ಅಂಬೇಡ್ಕರ್ ವರ್ಚಸ್ಸನ್ನು ದೋಚತೊಡಗಿವೆ. ನಿಜದ ಬಾಬಾಸಾಹೇಬರನ್ನೂ ಅವರ ಪ್ರಖರ ವಿಚಾರಗಳನ್ನು ದಿನನಿತ್ಯ ಬಗೆ ಬಗೆಯಲ್ಲಿ ವಧಿಸಲಾಗುತ್ತಿದೆ.
ಮನುಸ್ಮೃತಿಯನ್ನು ಆದರಿಸಿ ಗೌರವಿಸುವ ಯಾವುದೇ ವ್ಯಕ್ತಿ ನಿಜವಾಗಿಯೂ ಅಸ್ಪೃಶ್ಯರ ಒಳಿತನ್ನು ಬಯಸುತ್ತಾನೆಂದು ನಂಬುವುದಾದರೂ ಹೇಗೆ ಎಂಬುದಾಗಿ ಬಾಬಾಸಾಹೇಬರು 1928ರಲ್ಲಿ ಕೇಳಿದ್ದ ಪ್ರಶ್ನೆ ಇಂದಿಗೂ ಪ್ರಸ್ತುತ. 1927ರಲ್ಲಿ ಅಂಬೇಡ್ಕರ್ ಮತ್ತು ಸಂಗಾತಿಗಳು ಮನುಸ್ಮೃತಿಯನ್ನು ಸುಟ್ಟಿದ್ದು ಅಳಿಸಲಾಗದ ಚರಿತ್ರೆ ನಾಗರಿಕರಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಪಸರಿಸಲು ನವೆಂಬರ್ 26ರ ದಿನವನ್ನು ಸಂವಿಧಾನ ದಿವಸವೆಂದು ಆಚರಿಸುವುದಾಗಿ ಪ್ರಧಾನಿಯವರು 2015ರಲ್ಲಿ ಘೋಷಿಸಿದರು. ಸಂವಿಧಾನ ನಿರ್ಮಾಪಕರಿಗೆ ಕೃತಜ್ಞತೆ ಸಲ್ಲಿಸುವ ದಿನವಿದು. ಅವರ ಕನಸಿನ ಭಾರತವನ್ನು ಕಟ್ಟುವ ಕುರಿತ ನಮ್ಮ ಪ್ರತಿಬದ್ಧತೆಯನ್ನು ಪುನರುಚ್ಚರಿಸುವ ತೇದಿಯೂ ಹೌದು ಎಂದು ಸಾರಿದರು. 197ಕೋಟಿ ರುಪಾಯಿ ವೆಚ್ಚದಲ್ಲಿ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವೂ ತಲೆಯೆತ್ತಿದೆ. ಒಳ್ಳೆಯ ನಡೆಗಳೇ ಹೌದು.

ದಲಿತರ ಮತಗಳನ್ನು ಸೆಳೆಯುವ ಪ್ರತಿಮೆ- ಪ್ರತೀಕ- ಸ್ಮಾರಕ ರೂಪಕಗಳಾಗಿ ಮಾತ್ರವೇ ಪಕ್ಷಗಳು ಪರಿವಾರಗಳು ಅಂಬೇಡ್ಕರ್ ಮತ್ತು ಸಂವಿಧಾನವನ್ನು ನೋಡುತ್ತಿವೆ. ನಿಜದ ಬಾಬಾಸಾಹೇಬರು, ಅವರ ಪ್ರಖರ ವಿಚಾರಗಳು, ಅವರು ಕೊಡಮಾಡಿದ ಸಂವಿಧಾನದ ಮೌಲ್ಯಗಳ ನಿತ್ಯ ನಿರಂತರ ಹತ್ಯೆ ನಡೆಯುತ್ತಿದೆ. ಸಂವಿಧಾನ ಶಿಲ್ಪಿಗೆ ಮಹಲುಗಳು, ಭವನಗಳು, ಭವ್ಯ ಸ್ಮಾರಕಗಳನ್ನು ನಿರ್ಮಿಸಿ, ಬಾಬಾಸಾಹೇಬರು ಪ್ರತಿಪಾದಿಸಿದ ವಿಚಾರಗಳನ್ನು ಹೂತು ಹಾಕುವ ಪ್ರಯತ್ನ ನಿರಂತರ ಜರುಗಿದೆ. ಸಂವಿಧಾನ ದಿನಾಚರಣೆಯನ್ನು ಜಾರಿಗೆ ತಂದರೆ ಸಾಲದು, ಅದು ಎತ್ತಿ ಹಿಡಿದಿರುವ ಮೌಲ್ಯಗಳನ್ನು ಗೌರವಿಸಬೇಕು.
”ಸಾಮಾಜಿಕ ಜನತಂತ್ರದ ಆಧಾರದ ವಿನಾ ರಾಜಕೀಯ ಜನತಂತ್ರ ಉಳಿದು ಬಾಳಲಾರದು. ಸಾಮಾಜಿಕ ಜನತಂತ್ರವೆಂದರೇನು? ಸ್ವಾತಂತ್ರ್ಯ ಸಮಾನತೆ ಹಾಗೂ ಸೋದರತೆಯ ತತ್ವಗಳು ಜೀವನಮೌಲ್ಯಗಳೇ ಆಗುವ ಬದುಕಿನ ವಿಧಾನವೇ ಸಾಮಾಜಿಕ ಜನತಂತ್ರ” ಎಂಬ ಬಾಬಾಸಾಹೇಬರ ನೀತಿ ಕಳೆದೇ ಹೋಗಿದೆ. ಕಾನೂನಿನ ಆಳ್ವಿಕೆಯೇ ಪರಮ. ಅದುವೇ ನಾಗರಿಕ ಪ್ರಭುತ್ವದ ಹೆಗ್ಗುರುತು. ಸಂವಿಧಾನದ ಅಡಿಪಾಯ. ತನ್ನ ಎಲ್ಲ ನಾಗರಿಕರ ಉಸಿರನ್ನೂ ಸ್ವಾತಂತ್ರ್ಯವನ್ನು ಕಾಪಾಡುವುದು ಪ್ರತಿಯೊಂದು ಪ್ರಭುತ್ವದ ಸಾಂವಿಧಾನಿಕ ಜವಾಬ್ದಾರಿ. ಕಾನೂನಿನ ಆಡಳಿತದ ಪರಿಕಲ್ಪನೆಯನ್ನು ಗಟ್ಟಿಯಾಗಿ ನೆಲೆ ನಿಲ್ಲಿಸುವ ಕೆಲಸ ನ್ಯಾಯಾಲಯಗಳದು. ಆದರೆ ನ್ಯಾಯಾಂಗದಂತಹ ಪವಿತ್ರ ಸಂಸ್ಥೆಯ ತಿಳಿ ಜಲವನ್ನೂ ಕದಡಲಾಗಿದೆ.
ಧರ್ಮ, ಜಾತಿ, ಲಿಂಗ, ಹುಟ್ಟಿದ ಸ್ಥಳದ ಆಧಾರದ ಮೇಲೆ ನಾಗರಿಕರನ ನಡುವೆ ತಾರತಮ್ಯ ಬಗೆಯಲಾಗುತ್ತಿದೆ. ಪ್ರತಿಪಕ್ಷಗಳು, ಅಲ್ಪಸಂಖ್ಯಾತರು, ಚಳವಳಿಕಾರರು, ಭಿನ್ನಮತ ಹೊಂದಿದವರನ್ನು ಮಾತ್ರವೇ ಕಾನೂನು ಬೇಟೆಯಾಡುತ್ತಿದೆ. ಸಾಕ್ಷ್ಯಾಧಾರಗಳೇ ಇಲ್ಲದೆ ನಡೆಯುವ ಈ ಬೇಟೆಗೆ ಸಿಕ್ಕಿದ ಅಮಾಯಕ ಮಿಕಗಳು ವರ್ಷಗಳ ಕಾಲ ಬಂಧನದಲ್ಲಿದ್ದು, ಬದುಕಿ ಉಳಿದರೆ ಖುಲಾಸೆಯಾಗಿ ಹೊರಬರುತ್ತವೆ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಬಿಜೆಪಿ ಬೀದಿ ಬಡಿದಾಟದ ಬಗ್ಗೆ ಆರ್‌ಎಸ್‌ಎಸ್ ಏಕೆ ಮಾತನಾಡುತ್ತಿಲ್ಲ?
ಬಾಬಾಸಾಹೇಬರನ್ನು ಭೀಮಾಸುರ ಎಂದು ಕರೆದಿದ್ದ ಶಕ್ತಿಗಳು ಇಂದು ರಾಜ್ಯಾಧಿಕಾರವನ್ನು ಕೈವಶ ಮಾಡಿಕೊಂಡಿವೆ. ತಮ್ಮ ಕೋಮುವಾದಿ ಕಾರ್ಯಸೂಚಿಯನ್ನು ಕೃತಿಗಳಿಸಿಬೇಕಿದ್ದರೆ ಈ ಅಧಿಕಾರ ಕೈ ತಪ್ಪುವಂತಿಲ್ಲ. ಉಳಿಸಿಕೊಳ್ಳಬೇಕಿದ್ದರೆ ದಲಿತ ಸಮುದಾಯದ ಬೆಂಬಲ ನಿರ್ಣಾಯಕ ಎಂಬ ಅರಿವು ಈ ಶಕ್ತಿಗಳಿಗೆ ಆಗಿದೆ. ಹೀಗಾಗಿಯೇ ಅಂದು ವಿರೋಧಿಸಿ ಅವಮಾನಿಸಿದ್ದ ಅಂಬೇಡ್ಕರ್ ಅವರನ್ನು ಇಂದು ಕೊಂಡಾಡತೊಡಗಿವೆ. ದಲಿತ ಬದುಕುಗಳನ್ನು ಭುಗಿಲೆದ್ದಿರುವ ಮೇಲುಕೀಳಿನ ಉರಿಯು ಮತ್ತಷ್ಟು ಕ್ರೂರವಾಗಿ ಬೇಯಿಸತೊಡಗಿದೆ. ಏಕಕಾಲಕ್ಕೆ ಬೇಟೆನಾಯಿಯಾಗಿ ಬೆನ್ನಟ್ಟುವ ಮತ್ತು ಬೇಟೆಯ ಮಿಕವಾದ ಮೊಲದೊಂದಿಗೆ ಕೂಡಿ ಓಡುವ ಮೋಸ ನಿಲ್ಲಬೇಕಿದೆ

ಡಿ ಉಮಾಪತಿ
ಹಿರಿಯ ಪತ್ರಕರ್ತರು