ತೆಲುಗು ಚಿತ್ರರಂಗದ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಚಿತ್ರ ‘ಪುಷ್ಪಾ-2: ದ ರೂಲ್’ ಸಿನಿಮಾ ಬಿಡುಗಡೆಯಾಗಿದೆ. ಈಗಾಗಲೇ, ಮುಂಗಡ ಬುಕಿಂಗ್ ಮತ್ತು ಮೊದಲ ದಿನ ಕಲೆಕ್ಷನ್‌ನಿಂದಾಗಿ 250 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ. ಈ ನಡುವೆ, ಚಿತ್ರದಲ್ಲಿ ನಟಿಸಿದ ಕಲಾವಿದರ ಸಂಭಾವನೆ ವಿಚಾರ ಗಮನ ಸೆಳೆಯುತ್ತಿದೆ. ಸಿನಿಮಾದಲ್ಲಿನ ನಟನೆಗಾಗಿ ಅಲ್ಲು ಅರ್ಜುನ್ ಅವರು 300 ಕೋಟಿ ರೂ. ಪಡೆದಿದ್ದಾರೆ. ಅವರೊಂದಿಗೆ ಬಣ್ಣ ಹಚ್ಚಿದ್ದ ನಾಯಕ ನಟಿ ರಶ್ಮಿಕಾ ಮಂದಣ್ಣ ಅವರು 10 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.
ಪುಷ್ಪಾ-2 ಸಿನಿಮಾವನ್ನು 400ರಿಂದ 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ನಿರ್ಮಾಣ ಸಂಸ್ಥೆ ಮೈತ್ರಿ ಮೂವೀಸ್ ಹೇಳಿಕೊಂಡಿದೆ. ಈ ಪೈಕಿ, ಕಲಾವಿದರ ಸಂಭಾವನೆಗಾಗಿಯೇ ಹೆಚ್ಚು ಹಣವನ್ನು ಚಿತ್ರತಂಡ ಖರ್ಚು ಮಾಡಿದೆ. ಅಲ್ಲು ಅರ್ಜುನ್‌ಗೆ 300 ಕೋಟಿ ರೂ., ರಶ್ಮಿಕಾಗೆ 10 ಕೋಟಿ ರೂ. ಕೊಟ್ಟಿದೆ. ಅಲ್ಲದೆ, ಬನ್ವರ್ ಸಿಂಗ್ ಶೆಖಾವತ್ ಪಾತ್ರದಲ್ಲಿ ನಟಿಸಿರುವ ನಟ ಫಹಾದ್ ಫಾಸಿಲ್ ಅವರಿಗೆ 8 ಕೋಟಿ ರೂ. ನೀಡಿದೆ. ‘ಕಿಸಕ್’ ಹಾಡಿನಲ್ಲಿ ಮಾತ್ರವೇ ಕಾಣಿಸಿಕೊಂಡಿರುವ ನಟಿ ಶ್ರೀಲೀಲಾ ಅವರಿಗೆ 2 ಕೋಟಿ ರೂ. ನೀಡಿದೆ. ಈ ಹಿಂದೆ, ಪುಷ್ಪ-1ರಲ್ಲಿ ‘ಊ ಅಂಟಾವ’ ಹಾಡಿನಲ್ಲಿ ಕಾಣಿಸಿಕೊಂಡಿದ್ದ ನಟಿ ಸಮಂತಾ ಅವರು 5 ಕೋಟಿ ರೂ. ಪಡೆದಿದ್ದರು.
ಥಿಯೇಟರ್‌ಗಳಲ್ಲಿ ಅಬ್ಬರಿಸುತ್ತಿರುವ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದಾಗ್ಯೂ, ಸಿನಿಮಾ ಬಿಡುಗಡೆಗೂ ಮುನ್ನವೇ ಮುಂಗಡ ಬುಕಿಂಗ್‌ನಲ್ಲಿಯೇ 100 ಕೋಟಿ ರೂ. ಗಳಿಸಿದೆ. ಮೊದಲ ದಿನದ ಕಲೆಕ್ಷನ್‌ನಲ್ಲಿ 150 ಕೋಟಿ ರೂ. ಬಾಚಿಕೊಂಡಿದೆ. ಅಲ್ಲದೆ, ಮಾಧ್ಯಮಗಳ ವರದಿಗಳ ಪ್ರಕಾರ, OTT ಹಕ್ಕುಗಳು, ಉಪಗ್ರಹ ಹಕ್ಕುಗಳು, ಹಾಡುಗಳ ಹಕ್ಕುಗಳ ಮಾರಾಟದ ಮೂಲಕವೇ ಸುಮಾರು 1,000 ಕೋಟಿ ರೂ. ಗಳಿಸಿದೆ.
ಆಂಧ್ರಪ್ರದೇಶದಲ್ಲಿ ಪುಷ್ಪಾ-2 ಸಿನಿಮಾ ಕಾರಣಕ್ಕಾಗಿಯೇ ಟಿಕೆಟ್ ದರ ಹೆಚ್ಚಿಸಲು ಆಂಧ್ರ ಸರ್ಕಾರ ಅನುಮತಿ ನೀಡಿದ್ದು, ಟಿಕೆಟ್ ದರವನ್ನು ಮೂರು/ನಾಲ್ಕು ಪಟ್ಟು ಹೆಚ್ಚಿಸಲಾಗಿದೆ. ಸಿನಿಮಾ ಭಾರತದಾದ್ಯಂತ ಸುಮಾರು 40,000 ಸ್ಕ್ರೀನ್‌ಗಳಲ್ಲಿ ಪ್ರದರ್ಶನವಾಗುತ್ತಿದೆ.