ರಸ್ತೆ ಮಧ್ಯದಲ್ಲೇ ಓಡಾಟ | ಅಪಘಾತ ಭೀತಿ
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಡಿವಿಜಿ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಪಾದಚಾರಿ ಮಾರ್ಗಗಳಿಲ್ಲದೆ ಸಾರ್ವಜನಿಕರು ಹೈರಾಣಾಗಿದ್ದಾರೆ. ವಾಹನ ದಟ್ಟಣೆಯಿಂದ ನಡು ರಸ್ತೆಯಲ್ಲೇ ಜನ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಬದಿ ಇರುವ ಪಾದಚಾರಿ ಮಾರ್ಗವೂ ಒತ್ತುವರಿಯಾಗಿದ್ದು, ಪಟ್ಟಣದ ಮುಖ್ಯರಸ್ತೆಗೆ ಶೀಘ್ರ ಕಾಯಕಲ್ಪ ಬೇಕಿದೆ.
ಹೌದು, ಮಾಜಿ ಶಾಸಕ ಜಿ.ವಿ ಶ್ರೀರಾಮರೆಡ್ಡಿಯವರ ಅವಧಿಯಲ್ಲಿ ವಾಹನ ಸವಾರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸುಮಾರು ಒಂದೂವರೆ ದಶಕದ ಹಿಂದೆಯೇ ರಸ್ತೆ ಅಗಲೀಕರಣಗೊಳಿಸಿ ಸುಸಜ್ಜಿತ ರಸ್ತೆ ನಿರ್ಮಿಸಲಾಗಿತ್ತು. ಆದರೆ ಇತ್ತೀಚೆಗೆ ಜನದಟ್ಟಣೆ ಮತ್ತು ವಾಹನಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು, ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ : ಬಾಗೇಪಲ್ಲಿ | ಸುಸ್ಥಿರ ಭವಿಷ್ಯಕ್ಕಾಗಿ ಮಣ್ಣಿನ ಸಂರಕ್ಷಣೆ ಅತ್ಯಗತ್ಯ; ಸಹಾಯಕ ಕೃಷಿ ನಿರ್ದೇಶಕಿ ಲಕ್ಷ್ಮೀ
ಇರುವ ಪಾದಚಾರಿ ಮಾರ್ಗವೂ ಒತ್ತುವರಿ :
ಪಟ್ಟಣದಲ್ಲಿ ಪಾದಚಾರಿಗಳು ನಡೆದುಕೊಂಡು ಹೋಗಲು ಅನುಕೂಲವಾಗುವಂತೆ ಜೂನಿಯರ್ ಕಾಲೇಜು, ಪುರಸಭೆ ಕಚೇರಿ ಬದಿಯಲ್ಲಿ ಮಾತ್ರ ಪಾದಚಾರಿ ಮಾರ್ಗವನ್ನು ನಿರ್ಮಿಸಲಾಗಿದೆ. ಆದರೆ, ಆ ಮಾರ್ಗವು ಬಹುತೇಕ ರಸ್ತೆಬದಿಯ ಅಂಗಡಿ ಮಾಲೀಕರಿಂದ ಒತ್ತುವರಿಯಾಗಿದ್ದು, ತಮ್ಮ ಸರಕು ಸರಂಜಾಮ ಇಡುವ ವೈಯಕ್ತಿಕ ಜಾಗವಾಗಿ ಮಾರ್ಪಟ್ಟಿದೆ. ಇದರಿಂದಾಗಿ ಯಾರೊಬ್ಬರೂ ಪಾದಾಚಾರಿ ಮಾರ್ಗದಲ್ಲಿ ಸಂಚರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಪಾರ್ಕಿಂಗ್ ಜಾಗದ್ದೇ ದೊಡ್ಡ ಸವಾಲು:
ಬಾಗೇಪಲ್ಲಿ ಪಟ್ಟಣಕ್ಕೆ ಗ್ರಾಮೀಣ ಭಾಗಗಳಿಂದ ನಿತ್ಯ ಸಾವಿರಾರು ಜನ ಬಂದೋಗುತ್ತಾರೆ. ಆದರೆ, ಪಟ್ಟಣಕ್ಕೆ ಬರುವ ವಾಹನ ಸವಾರರಿಗೆ ನಿಗದಿತ ಪಾರ್ಕಿಂಗ್ ವ್ಯವಸ್ಥೆಯಿಲ್ಲ. ಸಾರ್ವಜನಿಕರು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಹಾಗೂ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ದಿನಪೂರ್ತಿ ವಾಹನ ನಿಲುಗಡೆ ಮಾಡಿ ತಮ್ಮ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದಾರೆ. ಇದರಿಂದಾಗಿ ಪಾದಾಚಾರಿಗಳು ನಡುರಸ್ತೆಯಲ್ಲಿ ಓಡಾಡುವಂತಾಗಿದೆ.

ಶಾಲಾ-ಕಾಲೇಜುಗಳು ಬೆಳಗ್ಗೆ ಆರಂಭಕ್ಕೂ ಮುನ್ನ ಮತ್ತು ಮುಕ್ತಾಯದ ನಂತರ ವಿದ್ಯಾರ್ಥಿಗಳು ಒಮ್ಮೆಲೆ ರಸ್ತೆಗಿಳಿಯುತ್ತಾರೆ. ಇದರಿಂದ ಟ್ರಾಫಿಕ್ ಉಂಟಾಗುತ್ತಿದೆ. ವಿದ್ಯಾರ್ಥಿಗಳು ರಸ್ತೆ ಮಧ್ಯದವರೆಗೆ ಬರುವುದರಿಂದ ಅಪಘಾತಗಳಾಗುವ ಸಾಧ್ಯತೆಗಳೇ ಹೆಚ್ಚು. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಶಾಸಕರಿಗೆ ಸರ್ಕಾರಿ ಶಾಲೆಗಳ ಉಸ್ತುವಾರಿ ಕೂಡದು; ಶಾಲೆಗಳನ್ನು ಏನು ಮಾಡಲು ಹೊರಟಿದೆ ಸರ್ಕಾರ?
ನಾನು ನಿತ್ಯವೂ ಪಟ್ಟಣದ ಮುಖ್ಯ ರಸ್ತೆಯಲ್ಲಿ ಓಡಾಡುತ್ತಿರುತ್ತೇನೆ. ಒಮ್ಮೊಮ್ಮೆ ವಿಪರೀತ ವಾಹನ ದಟ್ಟಣೆ ಮತ್ತು ಶಾಲಾ ಮಕ್ಕಳು ಒಮ್ಮೆಲೆ ರಸ್ತೆಗೆ ಬಂದಾಗ ನುಸುಳಿಕೊಂಡು ಬರಬೇಕಾದ ದುಸ್ಥಿತಿ ಎದುರಾಗುತ್ತದೆ. ಸುರಕ್ಷಿತ ಪಾದಚಾರಿ ಮಾರ್ಗ ಇದ್ದರೆ ಅದರ ಮೂಲಕ ಸಲೀಸಾಗಿ ಮನೆ ಸೇರಬಹುದು ಎನ್ನುತ್ತಾರೆ ಬಾಗೇಪಲ್ಲಿ ನಗರವಾಸಿ ಶಂಕರ ರೆಡ್ಡಿ.
ಈ ಕುರಿತು ವಿದ್ಯಾರ್ಥಿನಿ ಹರ್ಷಿಯಾ ಈದಿನ.ಕಾಂ ಜತೆಗೆ ಮಾತನಾಡಿ, ನಮ್ಮ ಮನೆಯಿಂದ ಶಾಲೆಗೆ ನಡುರಸ್ತೆಯಲ್ಲೇ ನಡೆದು ಹೋಗಬೇಕು. ಒಮ್ಮೊಮ್ಮೆ ವಾಹನಗಳು ದಿಢೀರನೆ ಪಕ್ಕದಲ್ಲೇ ಹೋಗುವುದರಿಂದ ಭಯದಲ್ಲಿ ಶಾಲೆಗೆ ತೆರಳುತ್ತೇವೆ. ಪಾದಚಾರಿ ಮಾರ್ಗಗಳಿದ್ದರೆ ನಿತ್ಯ ತಿರುಗಾಡುವವರಿಗೆ ಅನುಕೂಲವಾಗುತ್ತದೆ.
ಒಟ್ಟಾರೆಯಾಗಿ, ಸಾವಿರಾರು ಮಂದಿ ಸಾರ್ವಜನಿಕರು ತಿರುಗಾಡುವ ಮುಖ್ಯರಸ್ತೆಗಳೂ ಸರಿಯಾಗಿಲ್ಲದಿರುವುದು ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಸಂಬಂಧಪಟ್ಟವರು ಈಗಲಾದರೂ ಎಚ್ಚೆತ್ತು ಸೂಕ್ತ ಸೌಲಭ್ಯ ಕಲ್ಪಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.
– ರಾ.ನ.ಗೋಪಾಲ ರೆಡ್ಡಿ, ಬಾಗೇಪಲ್ಲಿ