ಬಳ್ಳಾರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಒಳಗಾಗಿದ್ದ ಐವರು ತಾಯಂದಿರು ಪ್ರಸವಾ ನಂತರ ಸಾವನ್ನಪ್ಪಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯ, ಆರೈಕೆ ದೊರೆಯುತ್ತಿಲ್ಲವೆಂಬ ಆರೋಪಗಳು ಮತ್ತೆ ಮುನ್ನೆಲೆಗೆ ಬಂದಿವೆ. ಪ್ರಕರಣ ಸಂಬಂಧ ಔಷಧ ನಿಯಂತ್ರಕ ಅಧಿಕಾರಿಯನ್ನು ಸರ್ಕಾರ ಅಮಾನತು ಮಾಡಿದೆ. ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ತಾಯಂದಿರ ಸಾವು ಪ್ರಕರಣವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಸಮಸ್ಯೆಗೆ ನನ್ನ ರಾಜೀನಾಮೆ ಪರಿಹಾರವೆಂದರೆ, ಅದಕ್ಕೂ ಸಿದ್ದನಿದ್ದೇನೆ’ ಎಂದಿದ್ದಾರೆ.
ನವೆಂಬರ್ 9ರಂದು ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ 7 ಮಂದಿ ಗರ್ಭಿಣಿಯರಿಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಅವರಲ್ಲಿ, ಇಬ್ಬರು ನವೆಂಬರ್ 10ರಂದು ಸಾವನ್ನಪ್ಪಿದ್ದಾರೆ. ಬಳಿಕ, ಉಳಿದ 5 ಮಂದಿ ಬಾಣಂತಿಯರನ್ನು ವಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದಾಗ್ಯೂ, ಓರ್ವ ಬಾಣಂತಿ ಮೂರು ದಿನಗಳ ಬಳಿಕ ಸಾವನ್ನಪ್ಪಿದ್ದಾರೆ. ಇದೀಗ, ಗುರುವಾರ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಬಳ್ಳಾರಿ ಜಿಲ್ಲೆಯ ತಾಯಂದಿರ ಸಾವಿನ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ದಿನೇಶ್, “ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂತಹ ಪ್ರಕರಣಗಳಲ್ಲಿ ತಪ್ಪತಸ್ಥರಿಗೆ ಶಿಕ್ಷೆ ಆಗಲೇಬೇಕು. ಈ ರೀತಿಯ ಸಮಸ್ಯೆಗಳನ್ನು ನಿಭಾಯಿಸಲು ವಿರೋಧ ಪಕ್ಷಗಳ ಸಹಕಾರವೂ ಅಗತ್ಯ. ನನ್ನ ರಾಜೀನಾಮೆಯಿಂದ ಸಮಸ್ಯೆ ಸರಿಯಾಗುತ್ತದೆ ಎಂದಾದರೆ, ಅದಕ್ಕೂ ಸಿದ್ದನಿದ್ದೇನೆ” ಎಂದಿದ್ದಾರೆ.
ನವೆಂಬರ್ 9ರಂದು ಸಿಜೇರಿಯನ್ ಹೆರಿಗೆಗೆ ಒಳಗಾಗಿದ್ದವರಿಗೆ ರಿಂಗರ್ ಲ್ಯಾಕ್ಟೇಟ್ ದ್ರಾವಣ ಕೊಡಲಾಗಿತ್ತು. ಹೀಗಾಗಿ, ಔಷಧ ನಿಯಂತ್ರಕರನ್ನು ಅಮಾನತು ಮಾಡಲಾಗಿದೆ. ಔಷಧ ಪೂರೈಕೆ ಕಂಪನಿಯ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಮೃತ ತಾಯಂದಿರ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವು; ಡ್ರಗ್ ಕಂಟ್ರೋಲರ್ ಸಸ್ಪೆಂಡ್: ಸಿ.ಎಂ.ಸಿದ್ದರಾಮಯ್ಯ
“ಈ ವರ್ಷ (2024) ರಾಜ್ಯದಲ್ಲಿ ಹೆರಿಗೆಗೆ ಸಂಬಂಧಿಸಿದಂತೆ 327 ಸಾವುಗಳು ಸಂಭವಿಸಿವೆ. ಎಲ್ಲ ಪ್ರಕರಣಗಳನ್ನೂ ಪರಿಶೀಲಿಸಲು ಸೂಚನೆ ನೀಡಿದ್ದೇವೆ. ಈ ಪ್ರಕರಣಗಳಲ್ಲಿ ಯಾರೇ ತಪ್ಪು ಮಾಡಿದ್ದರೂ ಕಠಿಣ ಕ್ರಮ ಕೈಗೊಳ್ಳಬೇಕು. ಔಷಧ ಕಂಪನಿಗಳ ವಿರುದ್ಧವೂ ಕಾನೂನಾತ್ಮಕ ಕ್ರಮ ಜರುಗಿಸಬೇಕು” ಎಂದು ಹೇಳಿದ್ದಾರೆ.
ಇದನ್ನೂ ಓದಿ ಬಾಣಂತಿಯರ ಸಾವು | ವ್ಯವಸ್ಥೆಯೇ ಮಾಡಿದ ಕೊಲೆ; ಸರ್ಕಾರ ಹೊರುವುದೇ ಹೊಣೆ?