ಬಾರ್ಡರ್ – ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ಸಂಪೂರ್ಣ ವಿಫಲರಾದರು. ಟಾಸ್ ಗೆದ್ದು ಮೊದಲು ಬ್ಯಾಟ್ ಆರಂಭಿಸಿದ ಭಾರತಕ್ಕೆ ಉತ್ತಮ ಜೊತೆಯಾಟವನ್ನು ನೀಡುವಲ್ಲಿ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು.
ಅಡಿಲೇಡ್‌ನ ಓವಲ್‌ನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 44.1 ಓವರ್‌ಗಳಲ್ಲಿ 180 ರನ್‌ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ತಂಡಕ್ಕೆ ಸೇರಿದರೂ, ಇನಿಂಗ್ಸ್ ಆರಂಭಿಸುವ ಹೊಣೆಯನ್ನು ಕೆ ಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಅವರಿಗೆ ನೀಡಿದರು. ಈ ವೇಳೆ ಯಶಸ್ವಿ ಜೈಸ್ವಾಲ್ ತಾವು ಎದುರಿಸಿದ ಮೊದಲ ಚೆಂಡಿನಲ್ಲಿ ವಿಕೆಟ್ ಒಪ್ಪಿಸಿದರು. ಆ ಮೂಲಕ ಪಿಂಕ್ ಮೊದಲ ಎಸೆತದಲ್ಲಿ ಔಟ್ ಆದ ಮೊದಲ ಆಟಗಾರ ಎಂಬ ಕುಖ್ಯಾತಿ ಯಶಸ್ವಿ ಪಾಲಾಯಿತು.
ಎರಡನೇ ವಿಕೆಟ್‌ಗೆ ಕೆ ಎಲ್ ರಾಹುಲ್ ಅವರೊಂದಿಗೆ ಆಟವಾಡಿದ ಶುಭಮನ್ ಗಿಲ್ ಒಂದಿಷ್ಟು ರನ್‌ಗಳನ್ನು ಕಲೆ ಹಾಕಿದರು. ಈ ಜೋಡಿ ಎರಡನೇ ವಿಕೆಟ್‌ಗೆ 113 ಎಸೆತಗಳನ್ನು ಎದುರಿಸಿ 69 ರನ್ ಸೇರಿಸಿತು. ರಾಹುಲ್ 64 ಎಸೆತಗಳಲ್ಲಿ 37 ರನ್ ಸಿಡಿಸಿ ಔಟ್ ಆದರೆ, ಭರವಸೆಯ ಆಟಗಾರ ಶುಭಮನ್ ಗಿಲ್ 51 ಎಸೆತಗಳಲ್ಲಿ 31 ಬಾರಿಸಿ ಪೆವಿಲಿಯನ್‌ಗೆ ತೆರಳಿದರು.
ಈ ಸುದ್ದಿ ಓದಿದ್ದೀರಾ? ಇಂಡಿಯಾ-ಆಸ್ಟ್ರೇಲಿಯಾ ಕ್ರಿಕೆಟ್ | ರಾಹುಲ್ ಆಟಕ್ಕೆ ಹತ್ತು ವರ್ಷ ಮತ್ತು ಪಿಂಕ್ ಬಾಲ್ ಟೆಸ್ಟ್
ವಿರಾಟ್ ಕೊಹ್ಲಿ 7, ರಿಷಭ್ ಪಂತ್ 21, ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ 3 ರನ್ ಬಾರಿಸಿ ಔಟ್ ಆದರು. ವಾಷಿಂಗ್ಟನ್ ಸುಂದರ್ ಅವರ ಸ್ಥಾನದಲ್ಲಿ ಕಾಣಿಸಿಕೊಂಡಿರುವ ಅಶ್ವಿನ್ 22 ರನ್ ಬಾರಿಸಿದರು. ಟೀಮ್ ಇಂಡಿಯಾದ ಪರ ಗರಿಷ್ಠ ರನ್ ಕಲೆ ಹಾಕಿದ್ದು ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ. ನಿತೀಶ್ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 42 ರನ್ ಸಿಡಿಸಿ ಔಟ್ ಆದರು.
ಆಸ್ಟ್ರೇಲಿಯಾ ತಂಡದ ಪರ ಅಮೋಘ ದಾಳಿಯನ್ನು ಸಂಘಟಿಸಿದ ವೇಗಿ ಮಿಚೆಲ್ ಸ್ಟಾರ್ಕ್ ಅಬ್ಬರಿಸಿದರು. ಇವರು 14.1 ಓವರ್‌ಗಳಲ್ಲಿ 48 ರನ್ ನೀಡಿ 6 ವಿಕೆಟ್ ಪಡೆದರು. ಉಳಿದಂತೆ ಪ್ಯಾಟ್ ಕಮಿನ್ಸ್ ಹಾಗೂ ಸ್ಕಾಟ್ ಬೋಲ್ಯಾಂಡ್ ತಲಾ ಎರಡು ವಿಕೆಟ್ ಕಬಳಿಸಿದರು.