ಬೆಳಗಾವಿ ರಾಜಕಾರಣ ನಿಂತಿರುವುದೇ ಕಬ್ಬಿನ ಮೇಲೆ. ಪಕ್ಷಭೇದವಿಲ್ಲದೇ ಎಲ್ಲ ಜನಪ್ರತಿನಿಧಿಗಳು ತಾವು ಗೆಲ್ಲಲು, ಚುನಾವಣೆಯ ಸರಕಾಗಿರಲಿ ಎಂದು ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಜೀವಂತವಾಗಿಟ್ಟಿದ್ದಾರೆ. ಚುನಾವಣೆ ಬಂದಾಗ ತಮ್ಮ ಅನುಕೂಲಕ್ಕೆ ತಕ್ಕಂತೆ ರೈತರ ಸಮಸ್ಯೆಗಳನ್ನು ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ಚಳಿಗಾಲ ಅಧಿವೇಶನ ಬಂತೆಂದರೆ ಸಾಕು ನೂರಾರು ಸಂಘಟನೆಗಳು ಟೆಂಟ್‌ಗಳನ್ನು ಹಾಕಿ ಸುವರ್ಣಸೌಧ ಮುಂದೆ ಪ್ರತಿಭಟನೆಗೆ ಕುಳಿತುಕೊಳ್ಳುತ್ತವೆ. ಇದರಲ್ಲಿ ಸಿಂಹಪಾಲು ರೈತರ ಪ್ರತಿಭಟನೆಗಳೇ ಆಗಿರುತ್ತವೆ.
ಉತ್ತರ ಕರ್ನಾಟಕದ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ರೂಪಿಸಬೇಕಾದ ಬೆಳಗಾವಿ ಅಧಿವೇಶನ ಜನಪ್ರತಿನಿಧಿಗಳಿಗೆ ಪ್ರವಾಸವಾಗಿದೆ ಎನ್ನುವ ಗಂಭೀರ ಆರೋಪ ಆ ಭಾಗದ ಜನರಲ್ಲಿದೆ. ಸುವರ್ಣಸೌಧ ನಿರ್ಮಾಣದ ನೈಜ ಆಶಯವೇ ಈಡೇರಿಲ್ಲ ಎನ್ನುವ ನೋವು ಅವರನ್ನು ಕಾಡುತ್ತಿದೆ.
ಬೆಳಗಾವಿಯಲ್ಲಿ ಈವರೆಗೂ ನಡೆದಿರುವ ಚಳಿಗಾಲ ಅಧಿವೇಶನದ ಕಲಾಪಗಳನ್ನು ಗಮನಿಸಿದರೆ ಉತ್ತರ ಕರ್ನಾಟಕದ ರೈತರ ಬಗ್ಗೆ ಗಮನಾರ್ಹ ಚರ್ಚೆಯೇ ನಡೆದಿಲ್ಲ. ಬರೀ ಜಗಳ, ಆರೋಪ, ಪ್ರತ್ಯಾರೋಪ, ಸಮಾಜಕ್ಕೆ ಬೇಡವಾದ ಸಂಗತಿಗಳೇ ಹೆಚ್ಚು ಚರ್ಚೆಯಾಗುತ್ತವೆ. ಅಧಿವೇಶನದ ಕೊನೆಯ ಒಂದು ಅಥವಾ ಎರಡು ದಿನ ರೈತರ ಸಮಸ್ಯೆಗಳ ಬಗ್ಗೆ ಅನಿವಾರ್ಯವಾಗಿ ಚರ್ಚಿಸುವ ಸಂಪ್ರದಾಯ ಇತ್ತೀಚೆಗೆ ರೂಢಿಯಾಗಿದೆ. ಆದರೆ, ಅದು ಕೂಡ ಬಾಯಿ ಚಪಲಕ್ಕೆ ಮಾತ್ರ. ತಿಳಿದಷ್ಟು ಮಾತನಾಡಿ ಜನಪ್ರತಿನಿಧಿಗಳು ಮನೆ ಕಡೆ ತೆರಳುತ್ತಾರೆ. ರೈತರ ಸಮಸ್ಯೆಗಳಿಗೆ ಮತ್ತೆ ಹಾಗೆ ಉಳಿದುಕೊಳ್ಳುತ್ತವೆ. ಮತ್ತೊಂದು ಚಳಿಗಾಲ ಅಧಿವೇಶನ ಬರುತ್ತದೆ. ಯಥಾಪ್ರಕಾರ ಹಳೆಯ ಸಂಪ್ರದಾಯ ಮುಂದುವರಿಯುತ್ತದೆ. ಒಂದು ರೀತಿಯಲ್ಲಿ ಸುವರ್ಣಸೌಧ ಎಂದರೆ ಪ್ರತಿಭಟನೆಗಳ ತಾಣ ಎನ್ನುವಂತಾಗಿದೆ.
ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರವೇ ಸಿಕ್ಕಿಲ್ಲ
ಡಿಸೆಂಬರ್ 9 ರಿಂದ 20ರವರೆಗೆ 11ನೇ ಚಳಿಗಾಲ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದೆ. ಸುವರ್ಣ ವಿಧಾನಸೌಧ ನಿರ್ಮಾಣವಾಗಿ 14 ವರ್ಷ ಕಳೆಯುತ್ತ ಬಂದರೂ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ತಪ್ಪಿಲ್ಲ. ಆ ಭಾಗದ ರೈತರ ಸಮಸ್ಯೆಗಳು ಹಾಗೇ ಉಳಿದಿವೆ. ಕಬ್ಬು ಬೆಳೆಗಾರರ ಸಮಸ್ಯೆಯಂತು ಪ್ರತೀ ಚಳಿಗಾಲ ಅಧಿವೇಶನಕ್ಕೆ ಸರಕಾಗುತ್ತಿದೆ. ಕಬ್ಬಿಗೆ ರೋಗಬಾಧೆ, ಕೀಟಬಾಧೆ, ಕಟಾವು ಸಮಸ್ಯೆ, ಕಾರ್ಮಿಕರ ಕೊರತೆ, ಸಾಲದ ಭಾರ, ಹಂಗಾಮು ವಿಳಂಬ, ಸಂಚಾರ ತೊಂದರೆ, ಕಬ್ಬು ಒಣಗುವ ಚಿಂತೆ, ಕಬ್ಬಿನ ಕಾರ್ಖಾನೆಗಳಿಂದ ಬರದ ಬಾಕಿ ಹಣ… ಹೀಗೆ ವರ್ಷವಿಡೀ ಚಿಂತೆಗಳಲ್ಲೇ ರೈತರು ಮುಳುಗುವುದು ಅನಿವಾರ್ಯವಾಗಿದೆ.
ಕಬ್ಬು ಬೆಳೆಯ ಎಲ್ಲ ಸಮಸ್ಯೆಗಳನ್ನು ಮುಗಿಸಿ ಹೇಗೋ ಬೆಳೆಯನ್ನು ಕಾರ್ಖಾನೆಗಳಿಗೆ ಸಾಗಿಸಿದ ಬಳಿಕವೂ ಸಮಸ್ಯೆ ತೀರುವುದಿಲ್ಲ. ರೈತರಿಗೆ ನ್ಯಾಯಯುತ ಬೆಲೆ ಸಿಗುವುದಿಲ್ಲ. ಬಿಲ್‌ಗಾಗಿ ಮತ್ತೆ ಕಾರ್ಖಾನೆಗಳಿಗೆ ಅಲೆದಾಡಬೇಕು. ಉಪವಾಸ ಬಿದ್ದು ಹೋರಾಡಬೇಕು. ಇಷ್ಟೆಲ್ಲ ಕುಂದು-ಕೊರತೆಗಳ ನಡುವೆಯೂ ಕಬ್ಬಿನ ಹಂಗಾಮು ಮತ್ತೆ ಆರಂಭವಾಗಿದೆ. ಆದರೆ ಮಣ್ಣಿನ ಮಕ್ಕಳ ಬೇಡಿಕೆಗಳು ಮಣ್ಣುಪಾಲಾಗಿವೆ. ಕೇಂದ್ರ ಸರ್ಕಾರ 10.25 ಇಳುವರಿಯ ಪ್ರತಿ ಟನ್ ಕಬ್ಬಿಗೆ ಘೋಷಿಸಿದ ₹3,400 ಎಫ್‌ಆರ್‌ಪಿ ನ್ಯಾಯಸಮ್ಮತವಾಗಿಲ್ಲ ಎಂಬುದು ರೈತರ ಕೊರಗು.

ಮತ್ತೊಂದೆಡೆ ಕಾರ್ಖಾನೆಯಲ್ಲಿ ಕಬ್ಬನ್ನು ಒಣಗಲು ಬಿಟ್ಟು, ತೂಕದಲ್ಲಿ ಮೋಸ ಮಾಡಲಾಗುತ್ತಿದೆ. ಕಬ್ಬಿನ ಉಪ ಉತ್ಪನ್ನಗಳಿಗೂ ಕಾರ್ಖಾನೆಗಳು ಹಣ ಕೊಡುತ್ತಿಲ್ಲ. ಹೀಗಿರುವಾಗ ರೈತರಿಗೆ ನ್ಯಾಯ ಸಿಗೋದು ಯಾವಾಗ ಎಂಬುದು ಬಹುತೇಕ ಕಬ್ಬು ಬೆಳೆಗಾರರ ಮೂಲಪ್ರಶ್ನೆ. ಬೆಳಗಾವಿ ಜಿಲ್ಲೆಯಲ್ಲೇ 29 ಸಕ್ಕರೆ ಕಾರ್ಖಾನೆಗಳಿವೆ. ಬಹುಪಾಲು ಕಾರ್ಖಾನೆಗಳೂ ಶಾಸಕರ, ಸಚಿವರ ಹಾಗೂ ಪಕ್ಷಗಳ ಬೆಂಬಲಿಗರ ಕೈಯಲ್ಲಿವೆ. ಅವರು ಆಡಿದ್ದೇ ಆಟ. ಗೋವಾಕ್ಕಿಂತಲೂ ದೊಡ್ಡದಾದ ಬೆಳಗಾವಿ ಎಂಬ ‘ಮಿನಿ ರಾಜ್ಯ’ದ ರಾಜಕಾರಣ ಹೆಚ್ಚು ಕಡಿಮೆ ಕಬ್ಬಿನ ಮೇಲೆ ನಿಂತಿದೆ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿದರೆ ಮತ್ತೆ ಅನ್ನದಾತರು ತಮ್ಮನ್ನು ಮೂಸಿಯೂ ನೋಡುವುದಿಲ್ಲ ಎನ್ನುವುದು ಜನಪ್ರತಿನಿಧಿಗಳ ಮನಸ್ಸಿನಲ್ಲಿದೆ. ಹೀಗಾಗಿ ರೈತರು ರಾಜಕಾರಣಿಗಳ ಆಟಕ್ಕೆ ದಾಳವಾಗಿದ್ದಾರೆ.
ದಕ್ಷಿಣ ಭಾರತದಲ್ಲಿ ಕಬ್ಬು ಬೆಳೆಯಲ್ಲಿ ಉತ್ತರಕ್ಕೆ ಹೋಲಿಸಿದರೆ ಕಡಿಮೆ ಇಳುವರಿ ಬರುವುದರಿಂದ ಹೆಚ್ಚು ವೆಚ್ಚವಾಗುತ್ತದೆ. ಬೆಂಬಲ ಬೆಲೆಯ ಸಹಾಯ ಅಗತ್ಯವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲೇಬೇಕಾದ ತುರ್ತು ಸನ್ನಿವೇಶವಿದೆ. ರೈತರು ಕೇಳುತ್ತಿರುವುದೇ ನ್ಯಾಯಯುತ ಬೆಲೆ. ಆದರೆ ಸರ್ಕಾರ, ಜಿಲ್ಲಾಡಳಿತಗಳು ನ್ಯಾಯಯುತ ಬೆಲೆ ನೀಡುವಲ್ಲಿ ವಿಫಲವಾಗಿವೆ. ಆಯಾ ಜಿಲ್ಲೆಯ ಎಲ್ಲ ಕಾರ್ಖಾನೆಗಳು ಒಂದೇ ಬೆಲೆ ನೀಡಬೇಕು. ಆದರೆ ಕೆಲವು ಪ್ರಭಾವಿ ರಾಜಕಾರಣಿಗಳ ಒಡೆತನದ ಕಾರ್ಖಾನೆಗಳು ನೂರು, ಇನ್ನೂರು ರೂಪಾಯಿ ಕಡಿಮೆ ನೀಡಿ ಖರೀದಿಸುತ್ತಿವೆ. ಈ ತಾರತಮ್ಯ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿದೆ.
ರೈತರಿಗೆ ಬ್ಯಾಂಕ್ ಸಾಲದ ಮೇಲೆ ಸಿಬಿಲ್ ಸ್ಕೋರ್ ಹೇರಲಾಗುತ್ತಿದೆ. ಇದರಿಂದ ರೈತರಿಗೆ ಸರಿಯಾದ ಸಮಯದಲ್ಲಿ ಸಾಲ ಸಿಗುತ್ತಿಲ್ಲ ಎಂಬ ಸಂಕಷ್ಟವಿದೆ. ರೈತರಿಗೆ ಸಿಬಿಲ್ ಸ್ಕೋರ್ ಲಾಗೂ ಮಾಡಬಾರದು ಎಂಬ ಬೇಡಿಕೆಯನ್ನು ಸರ್ಕಾರ ಪರಿಗಣಿಸಬೇಕು. ಕಬ್ಬು ಬೆಳೆಯುವ ರೈತರು ಘನತೆಯಿಂದ ಜೀವನ ಮಾಡಲು, ತಾವು ಮಾಡುತ್ತಿರುವ ಕೃಷಿಯಲ್ಲಿ ಸುಖ ಕಾಣಬೇಕಿದ್ದರೆ, ನ್ಯಾಯಯುತವಾದ ಬೆಲೆಯನ್ನು ನೀಡಬೇಕು. ಪ್ರತಿ ಟನ್ ಕಬ್ಬಿಗೆ ವೈಜ್ಞಾನಿಕ ದರ ನಿಗದಿಪಡಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು. ಎಥೆನಾಲ್ ಉತ್ಪನ್ನದ ಲಾಭಾಂಶ ನೀಡಲು ಸಕ್ಕರೆ ಕಾರ್ಖಾನೆಗಳು ಒಪ್ಪಬೇಕು. ಈ ಕುರಿತು ಸರ್ಕಾರ ಹೆಚ್ಚಿನ ಗಮನ ಹರಿಸಿದರೆ ಮಾತ್ರ ಕಬ್ಬು ಬೆಳೆಗಾರರು ನಿರಾಳರಾಗಲು ಸಾಧ್ಯ. ಇಲ್ಲವಾದರೆ ವರ್ಷವಿಡೀ ಪ್ರತಿಭಟನೆಯಲ್ಲೇ ರೈತರ ಶ್ರಮ ವ್ಯರ್ಥವಾಗುತ್ತದೆ.
ಉತ್ತರ ಕರ್ನಾಟಕ ಭಾಗದಲ್ಲಿ ಅದೆಷ್ಟೋ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಸಪ್ತನದಿಗಳು ಹರಿದರೂ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿದ್ದರಿಂದ ಇದರ ಸದುಪಯೋಗ ಪಡೆಯಲು ರೈತರಿಗೆ ಆಗುತ್ತಿಲ್ಲ. ಮಹದಾಯಿ, ಕೃಷ್ಣ ಮೇಲ್ದಂಡೆ ಯೋಜನೆ, ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಕರಗಾಂವ ಏತನೀರಾವರಿ ಯೋಜನೆ, ಅಥಣಿಯಲ್ಲಿ ಖಿಳೇಗಾಂವ ಬಸವೇಶ್ವರ ಏತನೀರಾವರಿ ಯೋಜನೆ, ಅಮ್ಮಾಜೇಶ್ವರಿ ಏತನೀರಾವರಿ, ರಾಮದುರ್ಗದಲ್ಲಿ ವೀರಭದ್ರೇಶ್ವರ ಯೋಜನೆ, ಕೆರೆ ಮರುಪೂರಣ ಯೋಜನೆಗಳು ಸೇರಿದಂತೆ ವಿವಿಧ ಲಿಫ್ಟ್ ನೀರಾವರಿ ಯೋಜನೆಗಳು ಶೀಘ್ರ ಮುಗಿದರೆ ರೈತರ ಆದಾಯ ಮತ್ತಷ್ಟು ಹೆಚ್ಚಲಿದೆ.

ದ್ರಾಕ್ಷಿ ಕಹಿ, ಮಹಾರಾಷ್ಟ್ರಕ್ಕೆ ಸಿಹಿ
ಬೆಳಗಾವಿ ಜಿಲ್ಲೆಯ ಜಿಲ್ಲಾ ಕೇಂದ್ರದಿಂದ ಗಡಿ ಗ್ರಾಮಗಳ ಅಂತರವೇ 200 ಕಿ.ಮೀ.ಗೂ ಅಧಿಕವಿದೆ. ಹೀಗಾಗಿ ಗಡಿ ಗ್ರಾಮಗಳಿಗೆ ಸರಕಾರದ ಯೋಜನೆಗಳು ತಲುಪಲು ಸಾಧ್ಯವಾಗುತ್ತಿಲ್ಲ. ಇನ್ನು ವ್ಯಾಪಾರ, ವಹಿವಾಟಿಗೆ ಅನ್ಯ ಜಿಲ್ಲೆ, ನೆರೆ ರಾಜ್ಯವನ್ನೇ ಅವಲಂಬಿಸುವಂತಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ಜಿಲ್ಲೆಗಳಲ್ಲಿ ಬೆಳಗಾವಿ ಒಂದೆನಿಸಿಕೊಂಡಿದ್ದರೂ ದ್ರಾಕ್ಷಿ, ದಾಳಿಂಬೆ ವ್ಯವಹಾರಕ್ಕೆ ಜಿಲ್ಲೆಯ ರೈತರಿಗೆ ಮಹಾರಾಷ್ಟ್ರದ ರಾಜ್ಯದ ತಾಸಗಾಂವ, ಸಾಂಗ್ಲಿ ಪಟ್ಟಣಗಳೇ ಆಸರೆ. ಜಿಲ್ಲೆಯ ಉತ್ತರ ಭಾಗದ ಬಹುತೇಕ ತಾಲೂಕಿನ ಜನರು ಆಹಾರ ಧಾನ್ಯಗಳ ಮಾರಾಟ – ಖರೀದಿಗೆ ಮಹಾರಾಷ್ಟ್ರದ ಜತ್ತ ತಾಲೂಕು ಮತ್ತು ಪಕ್ಕದ ವಿಜಯಪುರ ನಗರಗಳನ್ನು ಅವಲಂಬಿಸಿದ್ದಾರೆ. ಇಂತಹ ಅನೇಕ ಕಾರಣಗಳಿಂದ ಜಿಲ್ಲೆಗೆ ಸೇರಬೇಕಿದ್ದ ವ್ಯಾವಹಾರಿಕ ತೆರಿಗೆ – ಆದಾಯವೂ ಅಕ್ಕ ಪಕ್ಕದ ಜಿಲ್ಲೆ ಮತ್ತು ರಾಜ್ಯಗಳ ಪಾಲಾಗುತ್ತಿದೆ. ಚಿಕ್ಕೋಡಿ ಭಾಗದಲ್ಲಿ ರೈತರು ಹೆಚ್ಚಾಗಿ ದ್ರಾಕ್ಷಿ ಬೆಳೆಯುತ್ತಾರೆ. ಒಣ ದ್ರಾಕ್ಷಿಯನ್ನು ರಕ್ಷಿಸಲು ದ್ರಾಕ್ಷಿ ಸಂಸ್ಕರಣಾ ಘಟಕಗಳು ಸ್ಥಾಪನೆ ಬೇಡಿಕೆ ಇನ್ನೂ ಈಡೇರಿಲ್ಲ.
ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ರೈತರ ಆತ್ಮಹತ್ಯೆ
ರಾಜ್ಯದಲ್ಲಿ ತೀವ್ರ ಬರ, ಬೆಳೆ ಹಾನಿ, ಕೈಗೆ ಸಿಗದ ಫಸಲು, ಸಾಲದ ಹೊರೆ ಹೀಗೆ ನಾನಾ ಕಾರಣಗಳಿಗೆ 2023 ಏಪ್ರಿಲ್ 1ರಿಂದ 2024 ಜುಲೈ 4ರೊಳಗೆ ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಒಟ್ಟು 1,182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣಗಳ ಸಮಗ್ರ ವಿವರಗಳನ್ನು ಕಂದಾಯ ಇಲಾಖೆ ಸಂಗ್ರಹಿಸಿದೆ. ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು 122, ಹಾವೇರಿಯಲ್ಲಿ 120, ಧಾರವಾಡದಲ್ಲಿ 101 ರೈತರು ಸಾವಿನ ಮೊರೆ ಹೋಗಿದ್ದಾರೆ. ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಉಡುಪಿ ಜಿಲ್ಲೆಯಲ್ಲಿ ಮಾತ್ರ ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿಲ್ಲ.
ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕೈಕೊಟ್ಟ ಮಳೆ, ಬೆಳೆ ಹಾನಿಯ ಪರಿಣಾಮ ಬ್ಯಾಂಕ್ ಸಾಲ ಮರು ಪಾವತಿಸಲಾಗದೆ ಬಹುತೇಕ ರೈತರು ನೇಣಿಗೆ ಕೊರಳೊಡ್ಡಿದ್ದಾರೆ. ಕೆಲವರು ತಮ್ಮ ಹೊಲದಲ್ಲಿಯೇ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ. ಅನ್ನದಾತರು ಈ ರೀತಿಯ ಮನನೊಂದು ಆತ್ಮಹತ್ಯೆಯಂಥ ದಾರಿ ತುಳಿಯಲು ಕಾರಣವೇನೆಂಬ ಬಗ್ಗೆ ಸಮರ್ಪಕ ಅಧ್ಯಯನ ಕೂಡ ಅಗತ್ಯವಿದೆ.

ಕಬ್ಬಿನ ಬೆಳೆ ವಿಮೆ ಇಲ್ಲ
“ಪ್ರಾಕೃತಿಕ ವಿಕೋಪಗಳಿಂದ ಬೆಳೆ ನಷ್ಟವಾದರೆ ಬೆಳೆ ವಿಮೆ ಪರಿಹಾರ ನೀಡಲಾಗುತ್ತದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ರೈತರು ಬೆಳೆ ವಿಮೆಗೆ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕಬ್ಬಿಗೆ ಬೆಳೆ ವಿಮೆಯೇ ಇಲ್ಲ. ಬೆಳಗಾವಿ ಜಿಲ್ಲೆಯಲ್ಲೇ ಪ್ರತಿ ವರ್ಷ ಸುಮಾರು 3.75 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ನಾಟಿ ಮಾಡಲಾಗುತ್ತದೆ. ಕಬ್ಬು ವಾರ್ಷಿಕ ಬೆಳೆಯಾಗಿದ್ದರಿಂದ ಬೆಳೆ ವಿಮೆ ಅಗತ್ಯವಿದೆ” ಎನ್ನುತ್ತಾರೆ ಭಾರತೀಯ ಕೃಷಿಕ ಸಮಾಜ (ಸಂ) ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ.
“ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿನ ನಂತರ ಮುಂಗಾರು ಅವಧಿಯಲ್ಲಿ ಸೋಯಾ, ಮೆಕ್ಕೆ ಜೋಳ, ಹೆಸರು, ಉದ್ದು, ಭತ್ತ, ಬೆಳೆಯಲಾಗುತ್ತದೆ. ಹಿಂಗಾರು ಅವಧಿಯಲ್ಲಿ ಬಿಳಿಜೋಳ, ಗೋದಿ ಹೆಚ್ಚು ಬೆಳೆಯುತ್ತಾರೆ. ಈ ನಡುವೆ ತರಕಾರಿ ಬೆಳೆಗಳು ಸಾಮಾನ್ಯ. ಆದರೆ ಈ ಎಲ್ಲ ಬೆಳೆಗಳಿಗೂ ನ್ಯಾಯುಯುತ ಬೆಲೆ ಇಲ್ಲ. ಬೆಳೆ ಬಂದಾಗ ಯಾವಾಗಲೂ ದರ ಕುಸಿಯುತ್ತದೆ. ಗೋವಾ ರಾಜ್ಯದ ಜನತೆಗೆ ಆಹಾರ ವಿಚಾರದಲ್ಲಿ ಬೆಳಗಾವಿಯೇ ಆಧಾರಸ್ತಂಭವಾಗಿದೆ. ಇಲ್ಲಿಂದಲೇ ಹಾಲು, ತರಕಾರಿ, ಮಾಂಸ ಸೇರಿದಂತೆ ಆಹಾರೋತ್ಪನ್ನಗಳು ಹೆಚ್ಚು ಗೋವಾಕ್ಕೆ ರವಾನೆಯಾಗುತ್ತವೆ” ಎಂದು ಹೇಳಿದರು.
“ಬೆಳಗಾವಿಯಲ್ಲಿ ಕಳಪೆ ಬೀಜದ ದಂಧೆ ಹೆಚ್ಚಿದೆ. ಗುಣಮಟ್ಟದ ಗೊಬ್ಬರ ಸಿಗುವುದಿಲ್ಲ. ಕೆಲವೊಮ್ಮೆ ಬೆಳೆಗಳಿಗೆ ಹೊಡೆಯುವ ಔಷಧ ಇಡೀ ಬೆಳೆಯನ್ನೇ ನಾಶಪಡಿಸುತ್ತವೆ. ಹಾವೇರಿಯಲ್ಲಿ ಸೂಕ್ತ ಬೀಜೋತ್ಪಾದನೆ ಮಾಡಲಾಗುತ್ತದೆ. ಇದು ಬೆಳಗಾವಿಯಲ್ಲೂ ಸಾಧ್ಯವಾಗಬೇಕು. ನಮ್ಮ ಜಿಲ್ಲೆಯಲ್ಲಿ 1932ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಹತ್ತಿ ಮಾರುಕಟ್ಟೆ ಬೈಲಹೊಂಗಲದಲ್ಲಿ ಸ್ಥಾಪನೆಯಾಗಿತ್ತು. ಈಗ ಹತ್ತಿ ಬೆಳೆ ಕಡಿಮೆಯಾಗಿದ್ದು, ಆ ಮಾರುಕಟ್ಟೆಗೆ ಕಳೆಯೇ ಇಲ್ಲ” ಎಂದು ಈ ದಿನ.ಕಾಮ್‌ಗೆ ಸಿದಗೌಡ ಮೋದಗಿ ವಿವರಿಸಿದರು.

ಜನಪ್ರತಿನಿಧಿಗಳು ಎಂದಾದರೂ ತಮ್ಮ ವೇತನ ಭತ್ಯೆ, ಟಿ.ಎ, ಡಿ.ಎ ಹೆಚ್ಚಳಕ್ಕೆ ಪ್ರತಿಭಟನೆ ಕುಳಿತಿದ್ದು ಇದೆಯಾ? ತಮಗೇನು ಬೇಕೋ ಅದನ್ನು ಬಹಳ ಸುಲಭವಾಗಿ ಈಡೇರಿಸಿಕೊಂಡು ಬಿಡುತ್ತಾರೆ. ಆದರೆ, ರೈತರು ತಮ್ಮ ಒಂದು ಸಣ್ಣ ಬೇಡಿಕೆ ಈಡೇರಿಸಿಕೊಳ್ಳಬೇಕು ಎಂದರೆ ಪ್ರತಿಭಟನೆಗಳ ಮೊರೆ ಹೋಗಬೇಕಾದ ಸ್ಥಿತಿ ರಾಜ್ಯದಲ್ಲಿದೆ. ಇದಕ್ಕೆ ಆಳುವ ಸರ್ಕಾರಗಳ ನಿರ್ಲಕ್ಷ್ಯವೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.
ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರ ಗದ್ದುಗೆಗೆ ಏರಲಿ. ಅಲ್ಲಿ ಬೆಳಗಾವಿ ಜನಪ್ರತಿನಿಧಿಗಳ ಪ್ರಾತಿನಿಧ್ಯ ಹೆಚ್ಚಿರುತ್ತದೆ. ಪ್ರಮುಖ ಖಾತೆಗಳು ಬೆಳಗಾವಿ ಪಾಲಾಗುತ್ತವೆ. ಬೆಳಗಾವಿಯಲ್ಲಿ ಬಹುಪಾಲು ಕಬ್ಬು ಕಾರ್ಖಾನೆಗಳು ಸಚಿವರ, ಶಾಸಕರ ಕೈಯಲ್ಲಿವೆ. ರಮೇಶ್ ಜಾರಕಿಹೊಳಿ ಅವರ ಹಿರೇನಂದಿ ಕಾರ್ಖಾನೆ, ಸತೀಶ್ ಜಾರಕಿಹೊಳಿ ಅವರ ಸತೀಶ್ ಮತ್ತು ಬೆಳಗಾವಿ ಶುಗರ್ಸ್, ಲಕ್ಷ್ಮಣ ಸವದಿ ಸಹೋದರ ಸಂಗಪ್ಪ ಸವದಿ ಅವರ ಅಥಣಿ ಶುಗರ್ಸ್, ಪ್ರಭಾಕರ್ ಕೋರೆ ಅವರ ಚಿದಾನಂದ ಶುಗರ್ಸ್, ಉಮೇಶ್ ಕತ್ತಿ ಅವರ ವಿಶ್ವನಾಥ್ ಶುಗರ್ಸ್ ಹಾಗೂ ಸಹಕಾರಿ ಸಕ್ಕರೆ ಕಾರ್ಖಾನೆಗಳಾದ ಮಲಪ್ರಭಾ ಸಕ್ಕರೆ ಕಾರ್ಖಾನೆ, ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ, ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ, ಮಾರ್ಖಂಡಯ್ಯ ಸಹಕಾರಿ ಸಕ್ಕರೆ ಕಾರ್ಖಾನೆ, ಸಂಗಮ್ ಕಾರ್ಖಾನೆ, ಸೋಮೇಶ್ವರ್ ಸಹಕಾರಿ ಕಾರ್ಖಾನೆ ಇವೆಲ್ಲವೂ ಕೂಡ ಒಂದೊಂದು ಪಕ್ಷದ ಜನಪ್ರತಿನಿಧಿಗಳ ಕೈಯಲ್ಲಿವೆ. ಆದರೂ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಈಡೇರಿಸಬೇಕು, ರೈತರಿಗೆ ನ್ಯಾಯಯುತ ಬೆಲೆ ಕಲ್ಪಿಸಬೇಕು ಎಂಬ ಬಗ್ಗೆ ಯಾರಿಗೂ ಕಾಳಜಿ ಇಲ್ಲ.
ಬೆಳಗಾವಿ ರಾಜಕಾರಣ ನಿಂತಿರುವುದೇ ಕಬ್ಬಿನ ಮೇಲೆ. ತಾವು ಗೆಲ್ಲಲು, ಚುನಾವಣೆಯ ಸರಕಾಗಿರಲಿ ಎಂದು ಜನಪ್ರತಿನಿಧಿಗಳು ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಜೀವಂತವಾಗಿಟ್ಟಿದ್ದಾರೆ. ಚುನಾವಣೆ ಬಂದಾಗ ತಮ್ಮ ಅನುಕೂಲಕ್ಕೆ ತಕ್ಕಂತೆ ರೈತರ ಸಮಸ್ಯೆಗಳನ್ನು ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ರೈತರು ಇದರಿಂದ ಎಚ್ಚೆತ್ತುಕೊಂಡರಷ್ಟೇ ಪರಿಹಾರ ಸಾಧ್ಯ. ರೈತರಿಗೆ ಮೂಗುದಾರ ಹಿಡಿಯುವುದು ಹೇಳಿಕೊಡಬೇಕಾ? ಚುನಾವಣೆ ಎಂಬ ಮೂಗುದಾರ ಅವರ ಕೈಯಲ್ಲೇ ಇದೆ!

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.