‘ಮೋದಿ-ಅದಾನಿ ಭಾಯಿ ಭಾಯಿ..’, ‘ಮೋದಿ ಅದಾನಿ ಏಕ್ ಹೈ’, ‘ಅದಾನಿ ಸೇಫ್ ಹೈ’ ಎಂಬ ಸ್ಟಿಕ್ಕರ್‌ಗಳು ಇರುವ ಕಪ್ಪು ಮಾಸ್ಕ್ ಮತ್ತು ಜಾಕೆಟ್‌ಗಳನ್ನು ಧರಿಸಿ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಸಂಸದರು ಶುಕ್ರವಾರ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳ ಸಂಸದರು ಸಂವಿಧಾನದ ಪ್ರತಿ ಹಿಡಿದು ಸಂಸತ್ ಬಳಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಮೋದಿ ಅವರ ಅತ್ಯಾಪ್ತ, ಅಮೆರಿಕದಲ್ಲಿ ವಂಚನೆ ಪ್ರಕರಣದ ಆರೋಪ ಎದುರಿಸುತ್ತಿರುವ ಗೌತಮ್ ಅದಾನಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
“ಅದಾನಿ ವಿಷಯದ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಹೆದರುತ್ತಿದೆ” ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
‘ಇಂಡಿಯಾ’ ಮೈತ್ರಿಕೂಟದ ಪ್ರತಿಭಟನೆಯಿಂದ ಟಿಎಂಸಿ ಮತ್ತು ಎಸ್‌ಪಿ ದೂರ ಉಳಿದಿವೆ. ಇದನ್ನೇ ಮುನ್ನೆಲೆಗೆ ತಂದಿರುವ ಆಡಳಿತಾರೂಢ ಬಿಜೆಪಿ, ವಿಪಕ್ಷಗಳ ವಿಭಜನೆ ಎಂದು ಹೇಳಲಾರಂಭಿಸಿದೆ.
ಅಮೆರಿಕದ ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಅದಾನಿ ಮತ್ತು ಇತರ ಏಳು ಮಂದಿಯ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಭಾರತದಲ್ಲಿ ವಿದ್ಯುತ್ ಒಪ್ಪಂದಗಳನ್ನು ಪಡೆದುಕೊಳ್ಳಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಅದಾನಿ 2,029 ಕೋಟಿ ರೂ. ಲಂಚ ಕೊಟ್ಟಿದ್ದಾರೆ. ಅದಕ್ಕಾಗಿ, ಹಣ ಸಂಗ್ರಹಿಸಲು ಅಮೆರಿಕ ಉದ್ಯಮಿಗಳಿಗೆ ಸುಳ್ಳು ಹೇಳಿ ಹಣ ಪಡೆದುಕೊಂಡಿದ್ದಾರೆ. ಉದ್ಯಮಿಗಳಿಗೆ ಅದಾನಿ ವಂಚಿಸಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ.
ಈ ವರದಿ ಓದಿದ್ದೀರಾ?: ಏನಿದು ಅದಾನಿ ಲಂಚದ ಹಗರಣ: ಇಲ್ಲಿದೆ ಸಂಪೂರ್ಣ ಮಾಹಿತಿ
ಚಾರ್ಜ್‌ಶೀಟ್ ಸಲ್ಲಿಕೆಯಾದ ಬಳಿಕ, ಅದಾನಿಯ ಬಂಧನಕ್ಕೆ ವಾರೆಂಟ್‌ಅನ್ನೂ ಹೊರಡಿಸಲಾಗಿದೆ. ಆದರೆ, ಅದಾನಿಯನ್ನು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅದಾನಿ ಭ್ರಷ್ಟಾಚಾರ ಮತ್ತು ಮೋದಿ-ಅದಾನಿ ನಡುವಿನ ಸ್ನೇಹ ಸಂಬಂಧದ ಬಗ್ಗೆ ಸಂಸತ್‌ನಲ್ಲಿ ಚರ್ಚೆ ಮಾಡಲು ವಿಪಕ್ಷಗಳು ಆಗ್ರಹಿಸಿವೆ. ಆದರೆ, ಸರ್ಕಾರ ಚರ್ಚೆಗೆ ಅವಕಾಶ ಕೊಡುತ್ತಿಲ್ಲ. ಹೀಗಾಗಿ, ಶುಕ್ರವಾರ ವಿಪಕ್ಷಗಳ ಸಂಸದರು ಪ್ರತಿಭಟನೆ ನಡೆಸಿದ್ದಾರೆ.