ದೇಶದಲ್ಲಿ ಧರ್ಮ, ದೇವರ ಹೆಸರಲ್ಲಿ ದಿಕ್ಕು ತಪ್ಪಿಸುತ್ತಿರುವ ಈ ಹೊತ್ತಿನಲ್ಲಿ ನಾವು ಗಟ್ಟಿಯಾಗಿ ಅಂಬೇಡ್ಕರ್ ತತ್ವ ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಬಸವರಾಜ ಸೂಳಿಬಾವಿ ಹೇಳಿದರು.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜನದನಿ ಸಾಹಿತ್ಯ ವೇದಿಕೆ ಸಹಯೋಗದಲ್ಲಿ ಆಯೋಜಿಸಲಾದ ಡಾ.ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ಅವರ 68ನೇ ಮಹಾ ಪರಿನಿಬ್ಬಾಣ ದಿನ-ಅಂಬೇಡ್ಕರ್ ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ದೇಶದಲ್ಲಿ ರಾಮನ ಹೆಸರಿನಿಂದ ಯುವಕರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ರಾಮನ ಹೆಸರು ಹೇಳಿಕೊಂಡರೆ ಗೌರವ ಸಿಗುತ್ತಿಲ್ಲ ಬಾಬಾ ಸಾಹೇಬ ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ ಗೌರವ ಸಿಗುತ್ತಿದೆ. ದೇಶಕ್ಕೆ ಮಠ, ಮಂದಿರ, ಮಸೀದಿಗಳ ಅಗತ್ಯವಿಲ್ಲ. ಈ ದೇಶಕ್ಕೆ ಶಿಕ್ಷಣ, ಶಾಲೆಗಳು ಅಗತ್ಯವಾಗಿ ಬೇಕಾಗಿವೆ” ಎಂದರು.
“ಹೆಣ್ಣುಮಕ್ಕಳಿಗೆ ಶಿಕ್ಷಣದಲ್ಲಿ ಸಮಾನತೆ ಸಿಗದಿದ್ದಾಗ, ಶಿಕ್ಷಣದಿಂದ ದೂರವಾದಾಗ ಬದುಕು ಕಟ್ಟಿಕೊಡಲು ಹೋರಾಟ ಮಾಡಿದ ಏಕೈಕ ನಾಯಕ ಅಂಬೇಡ್ಕರ್. ಅವರು ರಚಿಸಿದ ಸಂವಿಧಾನದಲ್ಲಿ ಎಲ್ಲರೂ ಸಮಾನವಾಗಿ ಬದುಕು ಕಟ್ಟಿಕೊಳ್ಳುವಂತಹ ಮಾಹಿತಿ ಕಾನೂನುಗಳು ಅಡಕವಾಗಿವೆ” ಎಂದು ಹೇಳಿದರು.
“ಪ್ರಸ್ತುತ ದಿನಗಳಲ್ಲಿ ಪ್ರಾಣಿ, ಪಕ್ಷಿಗಳು ಮನೆಯಲ್ಲಿ ಬಂದರೆ ತಕರಾರು ಇಲ್ಲ. ಆದರೆ ಒಬ್ಬ ಮನುಷ್ಯ ಮನೆಯೊಳಗೆ ಬಂದರೆ ತಕರಾರು, ಸಮಸ್ಯೆಗಳು ಉದ್ಭವಾಗುತ್ತವೆ. ಅಸಮಾನತೆ ಆಚರಿಸಲು ಬೇರೆ ಬೇರೆ ಭಾಷೆ ಕಲಿಯುತ್ತಿದ್ದಾರೆ. ಇದನ್ನು ಹೋಗಲಾಡಿಸುವುದಕ್ಕೆ ಬಾಬಾ ಸಾಹೇಬರು ಮನುಷ್ಯರನ್ನು ಮನುಷ್ಯರನ್ನಾಗಿ ಕಾಣಬೇಕು ಎಂಬ ಸಂದೇಶ ನೀಡಿದರು” ಎಂದು ಹೇಳಿದರು.
“ದೇಶದಲ್ಲಿ ಏಕಮುಖವಾಗಿ ಮಾತನಾಡುವ ಪದ್ದತಿ ಬೆಳೆದುಬಂದಿದೆ. ಹಕ್ಕು ಕಳೆದುಕೊಂಡವರು, ಧ್ವನಿ ಕಳೆದುಕೊಂಡವರು, ಸಂವಿಧಾನ ರಕ್ಷಣೆಗಾಗಿ, ಪ್ರಜಾಪ್ರಭುತ್ವ ಉಳಿವಿಗಾಗಿ ಪ್ರತಿಯೊಬ್ಬರೂ ಎದ್ದುನಿಂತು ಮಾತನಾಡುವ ಅಗತ್ಯವಿದೆ. ಅಂಬೇಡ್ಕರ್ ಅವರ ಮಾರ್ಗದಲ್ಲಿ ದೇಶ ನಡೆದದ್ದೇ ಆದರೆ ಉಜ್ವಲ ಭವಿಷ್ಯ ರೂಪಿಸಲು ಸಾಧ್ಯ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕಪ್ಪುಗುಡ್ಡೆ ಹೋರಿ ಹಬ್ಬದಲ್ಲಿ ಧೂಳೆಬ್ಬಿಸಿದ ಕರ್ನಾಟಕ ನಂದಿ!
ಸಾಮಾಜಿಕ ಹೋರಾಟಗಾರ ಎ ವಿ ಆಂಜನೆಪ್ಪ ಮಾತನಾಡಿ, “ಅಂಬೇಡ್ಕರ್ ಅವರ ಬದುಕು ನಮಗೆ ಆದರ್ಶವಾಗಿದೆ. ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿರಬಹುದು. ಆದರೆ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗಿರುವುದಾದರೆ ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ ಮಾತ್ರ” ಎಂದರು.
ಹರಪನಹಳ್ಳಿ ಸಪಪೂ ಕಾಲೇಜು ಪ್ರಾಚಾರ್ಯ ವೆಂಕಟೇಶ ಸಿ ಬಿ, ಪಂಚಾಯತ್ ರಾಜ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಕ ಎಲ್ ಕುಬೇಂದ್ರನಾಯಕ್, ಸಾಹಿತಿಗಳಾದ ಇಸ್ಮಾಯಿಲ್ ಎಲಿಗಾರ್, ಸುಭದ್ರಮ್ಮ ಮಾಡಲಗೇರಿ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಇದ್ದರು.
