ತುಮಕೂರು | “ಕರ್ಮಯೋಗಿ ರಂಗಸ್ವಾಮಿ ಬೆಲ್ಲದಮಡು” ಪುಸ್ತಕ ಜನಾರ್ಪಣೆ

Date:

Advertisements

ದಲಿತ ಮತ್ತು ಪ್ರಗತಿಪರ ಚಳವಳಿಯಲ್ಲಿ ಗುರುತಿಸಿಕೊಂಡಿರುವ ಪ್ರಾಮಾಣಿಕ ಹೋರಾಟಗಾರರ ಜೀವನ ಚರಿತ್ರೆಗಳನ್ನು ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರಕಟಿಸುವ ಮೂಲಕ,ಭವಿಷ್ಯದ ಚಳವಳಿಗಾರರಿಗೆ ಮಾರ್ಗದರ್ಶನ ಮಾಡುವ ಅಗತ್ಯವಿದೆ ಎಂದು ಪ್ರೊ.ಕಾಳೇಗೌಡ ನಾಗವಾರ ತಿಳಿಸಿದರು

ತುಮಕೂರು ನಗರದ ಗ್ರಂಥಾಲಯ ಸಭಾಂಗಣದಲ್ಲಿ ದಲಿತ ಹೋರಾಟಗಾರರಾದ ಬೆಲ್ಲದಮಡು ರಂಗಸ್ವಾಮಿ ಅವರ ಕುರಿತ “ಕರ್ಮಯೋಗಿ ರಂಗಸ್ವಾಮಿ ಬೆಲ್ಲದಮಡು” ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಸಂಸ ಹೋರಾಟಗಾರರಾದ ಬೆಲ್ಲದಮಡು ರಂಗಸ್ವಾಮಿಯವರ ಬದ್ದತೆ ಮತ್ತು ಪ್ರಾಮಾಣಿಕತೆ ಇತರರಿಗೆ ಮಾದರಿ ಯಾಗಿವೆ. ಹಾಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಈ ರೀತಿ ಪ್ರಾಮಾಣಿಕತೆ ಮತ್ತು ಬದ್ದತೆಯಿಂದ ಕೆಲಸ ಮಾಡಿದ ವರನ್ನು ಯುವಜನತೆಗೆ ಪರಿಚಯಿಸುವ ಮೂಲಕ ವಾಸ್ತವಕ್ಕೆ ಹತ್ತಿರವಾದ ಹೋರಾಟವನ್ನು ರೂಪಿಸಲು ಸಾಧ್ಯ ಎಂದರು.

ಲೋಹಿಯಾ ಮತ್ತು ಅಂಬೇಡ್ಕರ್ ಈ ಭರತ ಖಂಡದ ಇಂಚಿಂಚು ಬಲ್ಲವರಾಗಿದ್ದರೂ,ಆದರೂ ದಲಿತರ ಬದುಕು ಕುರಿತು ಲೋಹಿಯಾಗಿಂತ ಅಂಬೇಡ್ಕರ್ ಹೆಚ್ಚು ಅರಿತಿದ್ದರು.ಜ್ಞಾನಕ್ಕಿಂತಲೂ ಮಿಗಿಲು ಬೇರಿಲ್ಲ ಎಂಬುದ ಅರಿತಿದ್ದ ಅಂಬೇಡ್ಕರ್, ಜ್ಞಾನ ಸಂಪಾದನೆಯ ಜೊತೆಗೆ,ಸಮುದಾಯದ ಸಾಮಾಜಿಕ ಸಮಾನತೆಗಾಗಿ ಸಂಸಾರವನ್ನು ಮರೆತರು, ಆದರೆ ರಂಗಸ್ವಾಮಿ ಬೆಲ್ಲದಮಡು ಅವರು, ಚಳವಳಿಯ ಜೊತೆಗೆ,ಮನೆಯ ಹಿರಿಯನಾಗಿ ತಮ್ಮಂದಿರು, ತಂಗಿಯನ್ನು ಓದಿಸಿ, ಮದುವೆ ಮಾಡಿ ಹಿರಿಯರ ಜವಾಬ್ದಾರಿ ನಿರ್ವಹಿಸಿದರು ಎಂದು ಪ್ರೊ.ಕಾಳೇಗೌಡ ನಾಗಾವರ ತಿಳಿಸಿದರು.

Advertisements

ಸಂಬಂಧವೆಂಬುದು ಕೇವಲ ರಕ್ತ ಹಂಚಿಕೊಂಡು ಹುಟ್ಟಿದವರಿಗೆ ಸಿಮೀತವಲ್ಲ. ಸಕಲ ಮನುಕುಲಕ್ಕೂ ಸೇರಿದ್ದು, ಅದಿ ದೇವ ಎಂದು ಕರೆಯುವ ಶಿವ ಅರ್ಧನಾರೀಶ್ವರನಾಗುವ ಮೂಲಕ ಹೆಣ್ಣು, ಗಂಡು ಎರಡು ಮುಖ್ಯ ಎಂಬುದನ್ನು ತೋರಿಸಿದ್ದಾನೆ.ನಂದಿಯನ್ನು ವಾಹನವಾಗಿಸಿಕೊಂಡು ಸಕಲ ಜೀವರಾಶಿಗಳು ಅಗತ್ಯ ಎಂಬುದನ್ನು ಸಾರಿದ್ದಾನೆ.ಹಾಗಾಗಿಯೇ ಎಲ್ಲರದಲ್ಲಿಯೂ ಒಳ್ಳೆಯದನ್ನು ಬಯಸುವ ರೀತಿ ನಡೆದುಕೊಳ್ಳುವ ಮಾದರಿ ಬದುಕು ನಮ್ಮದಾಗಲಿ ಎಂದು ಪ್ರೊ.ಕಾಳೇಗೌಡ ನಾಗಾವರ ನುಡಿದರು.

ಕರ್ಮಯೋಗಿ ರಂಗಸ್ವಾಮಿ ಬೆಲ್ಲದಮಡು ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ನಾಡೋಜ ಬರಗೂರು ರಾಮಚಂದ್ರಪ್ಪ, ಪಾವಗಡ ತಾಲೂಕಿನ ಕೊಂಡೇತಿಮ್ಮನಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಅಧ್ಯಾಪಕನಾಗಿದ್ದ ದಿನಗಳಿಂದಲೂ ನನಗೆ ರಂಗಸ್ವಾಮಿ ಬೆಲ್ಲದಮಡು ಪರಿಚಿತರು. ನಾನು ಕಷ್ಟಕಾಲದಲ್ಲಿದ್ದಾಗ ಅನ್ನ ನೀಡಿದವರು. ಅವರ ಹೆಸರಿನ ಈ ಪುಸ್ತಕ ಅವರ ಬದುಕಿನ ಬಾವುಕ ರೂಪಕವಾಗಿದೆ.ಬಹುತೇಕ ಲೇಖಕರು ತಮ್ಮ ಹೃದಯದ ಮಾತುಗಳನ್ನಾಡಿದ್ದಾರೆ.ಎಲ್ಲಿಯೂ ಕೃತಕತೆ ಇಲ್ಲ.ಆದರ್ಶ ಹೋರಾಟಗಾರನ ಸಾರ್ಥಕ ಮಾದರಿಯಾಗಿದೆ.ರಂಗಸ್ವಾಮಿ ಬೆಲ್ಲದಮಡು ಅವರು ತಮ್ಮ ಬದುಕಿನುದ್ದಕ್ಕೂ ಸಿದ್ದಾಂತಗಳ ಜೊತೆಗೆ,ಮನುಷ್ಯ ಸಂಬಂಧಗಳನ್ನು ಉಳಿಸಿಕೊಂಡು ಬಂದವರು.ಓರ್ವ ಹೋರಾಟಗಾರನಿಗೆ ಪ್ರಾಮಾಣಿಕತೆ ಮತ್ತು ಬದ್ದತೆ ಅತಿ ಮುಖ್ಯ. ಆತ ಮಾತ್ರ ಜನನಾಯಕನಾಗಿ ಜನರ ನಡುವೆ ಉಳಿಯಲು ಸಾಧ್ಯ ಎಂಬುದಕ್ಕೆ ತೋರಿಸಿದವರು.ಸಂಸಾರ ಮತ್ತು ಸಮಾಜ ಎರಡನ್ನು ಸರಿದೂಗಿಸಿದವರು.ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಹಿಳಾ ಸಂಚಾಲಕಿಯನ್ನು ನೇಮಿಸಿದ ಕೀರ್ತಿ ಅವರದ್ದು ಎಂದರು.

1000742950

ತಲೆಯ ಮೇಲೆ ಮಲಹೊರುವುದು ನಿಷೇಧದಲ್ಲಿದ್ದರೂ ಇಂದಿಗೂ ದೇಶದಲ್ಲಿ 1.86 ಕೋಟಿ ಜನರ ಮ್ಯಾನುವೆಲ್ ಸ್ಕ್ಯಾವೆಂಜರ್‌ಗಳಿದ್ದಾರೆ. 8ಕೋಟಿ ಜನ ತಳ್ಳುವ ಗಾಡಿಯಲ್ಲಿ ಮಲವನ್ನು ಊರಿನಿಂದ ಹೊರ ಸಾಗಿಸುತಿದ್ದಾರೆ. ಇಂದಿಗೂ ಈ ಅಮಾನವೀಯ ಪದ್ದತಿ ಜಾರಿಯಲ್ಲಿದೆ. ಇದಕ್ಕೆ ನಿರಾಶೆ ಹೊಂದದೆ ಹೋರಾಟದ ಹೊಸದಾರಿಯನ್ನು ಚಳವಳಿಗಾರರು ಕಂಡುಕೊಳ್ಳಬೇಕಿದೆ.ಪ್ರಗತಿಪರರು ಇಂದು ಹತ್ತಾರು ಬಣಗಳಾಗಿ ಒಡೆದು ಹೋಗಿದ್ದಾರೆ.ಪ್ರತಿಗಾಮಿಗಳು ಒಂದಾಗುತ್ತಿರುವ ಈ ಕಾಲದಲ್ಲಿ, ಪ್ರಗತಿಪರರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.ತಳಮಟ್ಟದಲ್ಲಿ ಐಕ್ಯತೆ ಸಾಧಿಸುವ ನಾಯಕದ ಅವಶ್ಯಕತೆ ಇದೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ನುಡಿದರು.

ರಾಜ್ಯ ಸಭೆಯ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ,ದಸಂಸ ಹುಟ್ಟಿದಾಗ ಇದ್ದ ಬದ್ದತೆ ಇಂದು ಕಾಣದಾಗಿದೆ.ದಸಂಸ ಕಾರ್ಯಕರ್ತರೆಲ್ಲರೂ ಪ್ರಗತಿಪರರಾಗಿರಬೇಕು ಎಂಬ ನಿಯಮವಿತ್ತು.ಉದ್ಯೋಗದಲ್ಲಿ ಇದ್ದವರೆ ದಸಂಸವನ್ನು ಕಟ್ಟಿ ಪ್ರಾಮಾಣಿಕವಾಗಿ ಕೆಲಸ ಆರಂಭಿಸಿದ್ದರು.ಬೆಲ್ಲದಮಡು ರಂಗಸ್ವಾಮಿ ಅವರು ಉದ್ಯೋಗಸ್ಥರಾಗಿ, ಚಳವಳಿಗಾರರಾಗಿ,ಪಂಚಮ ಪತ್ರಿಕೆಯ ಹಂಚಿಕೆದಾರರಾಗಿ ಕೆಲಸ ಮಾಡುತ್ತಲೇ,ಸಂಘಟನೆಯ ಕಾರ್ಯಕರ್ತರ ಕಷ್ಟ, ಸುಖಗಳನ್ನು ಅರ್ಥ ಮಾಡಿಕೊಳ್ಳುವ ತಾಯ್ತನ ಹೃದಯ ಹೊಂದಿದ್ದರು.ಡಿಎಸ್‌ಎಸ್‌ನಿಂದ ಅನೇಕರಿಗೆ ಗೌರವ ಲಭಿಸಿತ್ತು. ಜಾತಿ ವಿನಾಶಕ್ಕೆ ಅಂತರಜಾತಿ ವಿವಾಹಕ್ಕೆ ಮೊರೆ ಹೋದರೆ ರಂಗಸ್ವಾಮಿ ಅವರು ಪರಿಶಿಷ್ಟರಲ್ಲಿಯೆ ಇರುವ ಎಡ, ಬಲ ಗುಂಪುಗಳ ನಡುವೆ ಮದುವೆ ಮಾಡಿಸಿ,ಇಬ್ಬರ ನಡುವೆ ಇರುವ ಕಂದಕ ಕಡಿಮೆ ಮಾಡುವ ವಿಶಿಷ್ಟ ಆಲೋಚನೆ ಮಾಡಿದ್ದರು.ಎಡ-ಬಲಗಳ ನಡುವೆ ಇರುವ ವೈಮನಸ್ಸು ಹೋಗಬೇಕೆಂದರೆ ಒಳಮೀಸಲಾತಿ ಜಾರಿಯಾಗಬೇಕು ಎಂಬ ಕಸನನ್ನು ಕಂಡಿದ್ದರು.ಅದು ಇಂದು ನನಸಾಗುತ್ತಿದೆ.ಇದೇ ರಂಗಸ್ವಾಮಿ ಅವರಿಗೆ ನೀಡುವ ನಿಜವಾದ ಗೌರವ ಎಂದರು.

1000742916

ದಸಂಸ ಹೋರಾಟಗಾರರಾದ ಕೋಲಾರ ವೆಂಕಟೇಶ್ ಮಾತನಾಡಿ, ದಸಂಸ ಮುಂದೆ ಇಂದು ಬ್ರಾಹ್ಮೀಣಿಕರಣ ಮತ್ತು ಬಂಡವಾಳಶಾಹಿ ವಿರುದ್ದ ಹೋರಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.ಒಳಮೀಸಲಾತಿಗಾಗಿ ಸೈದ್ದಾಂತಿಕ ನೆಲೆಗಟ್ಟಿನಲ್ಲಿ ಹೋರಾಟ ಅಗತ್ಯವೆಂದರು.

ಕರ್ಮಯೋಗಿ ರಂಗಸ್ವಾಮಿ ಬೆಲ್ಲದ ಮಡು ನೆನಪಿನ ಸಂಪುಟದ ಸಂಪಾದಕ ಹೆಚ್.ವಿ.ವೆಂಕಟಾಚಲ ಮಾತನಾಡಿ, ಸತತ ಒಂದು ವರೆ ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ, ಬಿಡಿ ಬಿಡಿಯಾಗಿದ್ದ ಬೆಲ್ಲದಮಡು ರಂಗಸ್ವಾಮಿ ಅವರ ಕುರಿತು ಲೇಖನಗಳನ್ನು ಒಗ್ಗೂಡಿಸಿ,ತಿದ್ದಿ,ತೀಡಿ ಪುಸ್ತಕ ರೂಪಕ್ಕೆ ತರಲಾಗಿದೆ.ಇದಕ್ಕಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ.ಮತ್ತೊಂದು ಸಂಪುಟ ಶೀಘ್ರದಲ್ಲಿಯೇ ಬರಲಿದೆ ಎಂದರು.

1000742913

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಕೆ.ದೊರೆರಾಜು ಮಾತನಾಡಿ,ಬಹಳ ಜನರಿಗೆ ಹೋರಾಟಗಾರರ ಬಗ್ಗೆ ಸರಿಯಾದ ತಿಳುವಳಿಕೆ ಇರುವುದಿಲ್ಲ.ಮುಂದಿನ ಪೀಳಿಗೆಗೆ ಹೋರಾಟದ ಕಿಚ್ಚು ಹಚ್ಚುವ ನಿಟ್ಟಿನಲ್ಲಿ ಈ ಪುಸ್ತಕ ಬಹಳ ಸಹಕಾರಿ ಯಾಗಿದೆ.ಸಮಾಜಕ್ಕೆ ಅವರ ವ್ಯಕ್ತಿತ್ವವನ್ನು ಸಮಾಜಕ್ಕೆ ತೋರಿಸುವ ಕೆಲಸ ಇದಾಗಿದೆ.ಎಲ್ಲರೂ ಪುಸ್ತಕ ಕೊಂಡು ಓದಿ, ಓರ್ವ ಚಳವಳಿಗಾರ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಿ,ಅಂಬೇಡ್ಕರ್ ಪರಿನಿಬ್ಬಾಣ ದಿನದಂದು,ಇಂಡಿಯಾ ದೇಶಕ್ಕೆ ಮಾದರಿ ಯಾದ ದಸಂಸ ಚಳವಳಿಯನ್ನು ಬೆಳೆಸಿದ ಬಿ.ಕೃಷ್ಣಪ್ಪನವರ ಅನುಯಾಯಿಗಳು ಒಗ್ಗೂಡಿ ಮುನ್ನೆಡೆಯುವ ಕೆಲಸ ಆಗಬೇಕು.ಸವಕಾಲಿನ ಸವಾಲುಗಳ ಎದುರಿಸಿ,ಹೇಗೆ ಅದನ್ನು ಮೀರಿ ನಡೆಯಬೇಕು. ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿ ವಿರುದ್ದ ಹೋರಾಟ ಮುನ್ನೆಡಬೇಕಿದೆ ಎಂದರು.

1000742922

ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ.ಮುರುಳೀಧರ ಬೆಲ್ಲದಮಡು, ಬಹುಜನ ನಾಯಕ ಬೆಲ್ಲದಮಡು ರಂಗಸ್ವಾಮಿ ಅವರ ಸಾವಿನ 20 ವರ್ಷಗಳ ನಂತರ ಅವರ ಕುರಿತು ಪುಸ್ತಕ ಹೊರತರುವ ಕೆಲಸ ಮಾಡಿದ್ದೇವೆ.ಒಂದು ರೀತಿಯಲ್ಲಿಯೇ ಪಾಪಪ್ರಜ್ಞೆಯಿಂದಲೇ ಈ ಕೆಲಸವನ್ನು ಮಾಡಿದ್ದೇವೆ.ಹಲವಾರು ಲೇಖಕರು,ಹೋರಾಟಗಾರರು,ಹಿತೈಷಿಗಳು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.ಕೆಲವನ್ನು ಮಾತ್ರ ಈ ಸಂಪುಟದಲ್ಲಿ ಮುದ್ರಿಸಲಾಗಿದೆ. 2ನೇ ಸಂಪುಟದಲ್ಲಿ ಮತ್ತಷ್ಟು ಲೇಖಕರ ಅಭಿಪ್ರಾಯಗಳು ಮೂಡಿಬರಲಿವೆ ಎಂದರು.

ವೇದಿಕೆಯಲ್ಲಿ ಡಾ.ಪಾವನ, ಡಾ.ಶಿವಣ್ಣ ತಿಮ್ಮಲಾಪುರ, ದಸಂಸದ ಮುಖಂಡರಾದ ನರಸಿಂಹಯ್ಯ,ನರಸಿಂಹಮೂರ್ತಿ,ಕೃಷ್ಣಪ್ಪ ಬೆಲ್ಲದಮಡು ಸೇರಿದಂತೆ ಹಲವರು ಉಪಸ್ಥಿತರಿದ್ದರು.ಜಾನಪದ ಹಾಡುಗಾರ ಪಿಚ್ಚಳ್ಳಿ ಶ್ರೀನಿವಾಸ್ ಹಾಡುಗಳನ್ನು ಹಾಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

Download Eedina App Android / iOS

X