ಇವತ್ತಿನ ಯುವ ಪೀಳಿಗೆ ಮೊಬೈಲ್ ಜಗತ್ತಿನಲ್ಲಿ ಓಡಾಡುತ್ತ, ವೈಚಾರಿಕತೆ ಮತ್ತು ಅಂಬೇಡ್ಕರ್ ವಿಚಾರದಿಂದ ದೂರ ಉಳಿಯುತ್ತಿದ್ದು, ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಧ್ವನಿಯೆತ್ತುವ ಕೆಲಸಕ್ಕೆ ಮುಖಮಾಡಲಿ ಎಂದು ಮನುಗೊಳಿ ವಿರಕ್ತ ಮಠದ ವಿರಾತಿಶಾನಂದ ಸ್ವಾಮೀಜಿ ತಿಳಿಸಿದರು.
ನಗರದ ಬೌದ್ಧ ವಿಹಾರದಲ್ಲಿ ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನಾಚರಣೆಯ ನಿಮಿತ್ಯ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಾವೆಲ್ಲರೂ ಗಟ್ಟಿಯಾಗಿ ಸಂವಿಧಾನ ವಿರೋಧ ಮಾಡುವವರ ವಿರುದ್ಧ ವೈಚಾರಿಕ ಧ್ವನಿ ಎತ್ತಬೇಕಿದೆ. ಬುದ್ಧ, ಬಸವ, ಅಂಬೇಡ್ಕರ್ ವಿಚಾರ ಅರ್ಥೈಸಿಕೊಂಡು, ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಿದೆ. ಆದರೆ ಇವತ್ತಿನ ಯುವಪೀಳಿಗೆ ಮೊಬೈಲ್ ಜಗತ್ತಿನಲ್ಲಿ ಓಡಾಡುತ್ತ, ವೈಚಾರಿಕತೆ ಮತ್ತು ಅಂಬೇಡ್ಕರ್ ವಿಚಾರದಿಂದ ದೂರ ಉಳಿಯುತ್ತಿದ್ದಾರೆ” ಎಂದು ಬೇಸರಪಟ್ಟರು.
“ಶಿಕ್ಷಣ ಸಂಘಟನೆ ಹೋರಾಟದ ಮೂಲಕ ಮತ್ತೆ ಗಟ್ಟಿಯಾದ ವೈಚಾರಿಕ ಪಡೆಯನ್ನು ಕಟ್ಟಬೇಕಿದೆ ಹಾಗೂ ಅಂಬೇಡ್ಕರ್ ದಾರಿಯಲ್ಲಿ ನಡೆಯಬೇಕಿದೆ. ಜತೆಗೆ ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಧ್ವನಿಯೆತ್ತುವ ಕೆಲಸವಾಗಬೇಕು” ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಧಿಕಾರ ಸದಸ್ಯೆ ದಾಕ್ಷಾಯಿಣಿ ಹುಡೆದ ಮಾತನಾಡಿ, “ದೇಶಕ್ಕೆ ಸಂವಿಧಾನ ಕೊಟ್ಟ ಮಹಾನ್ ಮಾನವತಾವಾದಿ ಡಾ. ಬಿ ಆರ್ ಅಂಬೇಡ್ಕರ್ ವಿಚಾರ ಇಂದು ಅತ್ಯವಶ್ಯಕವಾಗಿ ಬೇಕಾಗಿದೆ. ಅಂಬೇಡ್ಕರ್ ಪರಿನಿರ್ವಾಣವು ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗದೆ ನಿರಂತರವಾಗಿ ಸಮುದಾಯಗಳ ಮಧ್ಯೆ ಬೆಳಕು ಚೆಲ್ಲುವ ಕೆಲಸವಾಗಬೇಕು” ಎಂದರು.
ಫಾದರ್ ಟಿಯೋಲ್ ಮಾಚಾದೊ ಮಾತನಾಡಿ, “ಅತ್ಯುತ್ತಮವಾಗಿ ದೊರೆತ ಅಂಬೇಡ್ಕರ್ ಸಂವಿಧಾನವನ್ನು ಸದ್ಭಳಕೆ ಮಾಡಿಕೊಂಡು ಶೋಷಿತ ಸಮುದಾಯಗಳನ್ನು ಮುಂಚೂಣಿಗೆ ತರುವ ಕೆಲಸ ಅಗತ್ಯವಾಗಿದೆ” ಎಂದರು.
ಈ ವರದಿ ಓದಿದ್ದೀರಾ? ವಿಜಯಪುರ | ಕಾರು-ಕಬ್ಬು ಕಟಾವು ಮಷಿನ್ ನಡುವೆ ಭೀಕರ ಅಪಘಾತ; ಐವರ ಸಾವು
ರಾಜಶೇಖರ ಯಡಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅನಿಲ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚನ್ನು ಕಟ್ಟಿಮನಿ ಸ್ವಾಗತಿಸಿದರು. ಸಂಜು ಕಾಂಬೋಗಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಪ್ರಭುಗೌಡ ಪಾಟೀಲ, ವಿದ್ಯಾವತಿ ಅಂಕಲಿಗಿ, ಜೆ ಎಸ್ ಪಾಟೀಲ, ಬಿ ಎಸ್ ಗಸ್ತಿ, ಅಶೋಕ ಛಲವಾದಿ, ಎಂ ಬಿ ಕಟ್ಟಿಮನಿ, ಸಿದ್ದಲಿಂಗ ಬಾಗೇವಾಡಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಇದ್ದರು.