ಮೇಲನಹಳ್ಳಿ ಕಾಲೋನಿಯಲ್ಲಿ ಜನರು ಗುಡಿಸಲು ನಿರ್ಮಿಸಿಕೊಂಡಿದ್ದ ಆ ಜಾಗವನ್ನು ಗ್ರಾಮಸ್ಥರಿಗೆ ಸರ್ವೇ ಮಾಡಿ ಕೊಡುವಂತೆ ಎಸಿ ಮುಖಾಂತರ ಡಿಸಿ ಅವರಿಗೆ ಮಾಹಿತಿ ಕಳಿಸಿಕೊಟ್ಟಿದ್ದು, ಯಾರಿಗೆ ನಿವೇಶನ ಇಲ್ಲ ಅಂಥವರಿಗೆ ಒಂದು ತಿಂಗಳಲ್ಲಿ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂದು ತಹಶೀಲ್ದಾರ್ ಭರವಸೆ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮೇಲನಹಳ್ಳಿ ಕಾಲೋನಿಯ ಗ್ರಾಮಸ್ಥರು ನಿರ್ಮಿಸಿದ್ದ ಗುಡಿಸಲನ್ನು ತೆರವುಗೊಳಿಸಿದ್ದ ಜಾಗಕ್ಕೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ನಿವೇಶನ ಹಂಚಿಕೆಗೆ ಉಪ ನಿರ್ದೇಶಕರ ಕಚೇರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.

ಮೇಲನಹಳ್ಳಿ ಕಾಲೋನಿಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಸುಮಾರು 80 ಕುಟುಂಬದ ಮೂಲ ನಿವಾಸಿಗಳು ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಇವು ಅನಧಿಕೃತ ಗುಡಿಸಿಲುಗಳೆಂಬ ದೂರು ಆಧರಿಸಿ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರ ನೆರವಿನೊಂದಿಗೆ ಕಂದಾಯ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿ ಗುಡಿಸಲುಗಳನ್ನು ನಾಶಗೊಳಿಸಿದ್ದರು.
ಗುಡಿಸಲುಗಳನ್ನು ನಾಶಗೊಳಿಸಿದ ಹಿನ್ನೆಲೆಯಲ್ಲಿ ʼಚಿಕ್ಕಮಗಳೂರು | ಪ್ರಾಣ ಬಿಟ್ಟೇವು, ಭೂಮಿ ಬಿಡಲ್ಲ: ದಲಿತ ನಿವಾಸಿಗಳ ಅಳಲುʼ ಎಂಬ ಶೀರ್ಷಿಕೆಯಡಿ ಈ ದಿನ.ಕಾಮ್ ನವೆಂಬರ್ 19ರಂದು ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಕಡೂರು ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನವೆಂಬರ್ 21ರಂದು ಮೇಲನಹಳ್ಳಿ ಕಾಲೋನಿಯ ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದಾರೆ.
ಘಟನೆ ಹಿನ್ನೆಲೆ
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮೇಲನಹಳ್ಳಿ ಕಾಲೋನಿಯ ಸರ್ವೇ ನಂ.22ರಲ್ಲಿ 20 ಎಕ್ಕರೆ 16 ಗುಂಟೆ ಸರ್ಕಾರದ ಬೀಳು ಬಿದ್ಧ ಜಾಗದಲ್ಲಿ ವಸತಿರಹಿತ 58 ಕುಟುಂಬಸ್ಥರು 5 ಎಕರೆಗೆ ಸೀಮಿತವಾಗಿ ಗುಡಿಸಲು ನಿರ್ಮಿಸಿಕೊಂಡು ಒಂದು ವರ್ಷದಿಂದ ಬದುಕು ನಡೆಸುತ್ತಿದ್ದರು. ಇವು ಅನಧಿಕೃತ ಗುಡಿಸಿಲುಗಳೆಂದು ಬಂದ ದೂರು ಆಧರಿಸಿ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರ ನೆರವಿನೊಂದಿಗೆ ಕಂದಾಯ ಅಧಿಕಾರಿಗಳು ತೆರವುಗೊಳಿಸಿದ್ದರು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ದಲಿತರ ಗುಡಿಸಲನ್ನು ನೆಲಸಮ ಮಾಡಿದ ತಾಲೂಕು ಅಧಿಕಾರಿಗಳು
“ಈ ಜಾಗದಲ್ಲಿ ಬೇರೆ ಬೇರೆ ತಾಲೂಕಿನಿಂದ ಜನರು ಬಂದು ಬೆಳೆ ಹಾಗೂ ತೋಟ ಮಾಡಿಕೊಂಡಿದ್ದಾರೆ. ನಾವು ಅಂಗೈಯಷ್ಟು ಜಾಗದಲ್ಲಿ ತಮಗೆ ಬದುಕು ಕಟ್ಟಿಕೊಳ್ಳಲು ಗುಡಿಸಲು ನಿರ್ಮಾಣ ಮಾಡಿಕೊಂಡಿರುವುದನ್ನು ದ್ವಂಸಗೊಳಿಸಿದರು. ನಾವು ಕೂಲಿ ಮಾಡಿ ಹೊಟ್ಟೆಬಟ್ಟೆ ಕಟ್ಟಿ ಮಕ್ಕಳನ್ನು ಸಾಕುತ್ತ ಜೀವನ ನಡೆಸುತ್ತಿದ್ದೇವೆ. ನಮ್ಮ ಕಷ್ಟ ಮುಗಿಲು ಮುಟ್ಟಿದೆ. ಒಂದು ಚಿಕ್ಕ ಮನೆಯಲ್ಲಿ 3ರಿಂದ 4 ಕುಟುಂಬದವರು ವಾಸ ಮಾಡುತ್ತಿದ್ದೀವಿ. ನಾವು ಗುಡಿಸಲು ನಿರ್ಮಿಸಿಕೊಂಡು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೆವು. ನಾವೆಲ್ಲ ಕೂಲಿ ಕೆಲಸಕ್ಕೆ ಹೋಗಿರುವ ಸಮಯದಲ್ಲಿ ಅಧಿಕಾರಿಗಳು ಜೆಸಿಬಿಯಿಂದ ಗುಡಿಸಲು ಕೆಡವಿದ್ದಾರೆ. ಗುಡಿಸಲಲ್ಲಿದ್ದ ಆಹಾರ ಪದಾರ್ಥಗಳು, ಅಡುಗೆ ಪಾತ್ರೆಗಳು, ಹಾಸಿಗೆ ಹಾಗೂ ನಮ್ಮ ವಸ್ತುಗಳ ಸಮೇತ ಗುಡಿಸಲುಗಳನ್ನು ನಾಶಪಡಿಸಿದ್ದಾರೆ” ಎಂದು ಈ ದಿನ.ಕಾಮ್ ಸ್ಥಳಕ್ಕೆ ಭೇಟಿ ನೀಡಿದಾಗ ಮೇಲನಹಳ್ಳಿ ಗ್ರಾಮಸ್ಥರು ತಮ್ಮ ನೋವನ್ನು ಹೇಳಿಕೊಂಡಿದ್ದರು.