ವಿಪಕ್ಷ ಮೈತ್ರಿಕೂಟ ‘ಇಂಡಿಯಾ ಒಕ್ಕೂಟ’ದ ಕಾರ್ಯ ವೈಖರಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, “ಅವಕಾಶ ಸಿಕ್ಕರೆ ‘ಇಂಡಿಯಾ’ ಒಕ್ಕೂಟವನ್ನು ಮುನ್ನಡೆಸಲು ಸಿದ್ಧ” ಎಂದಿದ್ದಾರೆ.
ಶುಕ್ರವಾರ ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ “ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದುಕೊಂಡೇ ನಾನು ವಿಪಕ್ಷ ಮೈತ್ರಿಕೂಟ ಇಂಡಿಯಾ ಒಕ್ಕೂಟವನ್ನು ಮುನ್ನಡೆಸು ಉಭಯ ಜವಾಬ್ದಾರಿಯನ್ನು ನಿರ್ವಹಿಸಬಹುದು” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ನಾನು ಇಂಡಿಯಾ ಒಕ್ಕೂಟವನ್ನು ರಚಿಸಿದ್ದೇನೆ. ಆದರೆ ಈಗ ಅದನ್ನು ಯಾರು ನಿರ್ವಹಿಸುತ್ತಿದ್ದರೋ ಅವರಿಗೆ ಬಿಟ್ಟದ್ದು. ಅವರಿಗೆ ಪ್ರದರ್ಶನವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದಿದ್ದರೆ ನಾನು ಏನು ಮಾಡುವುದು? ನನ್ನ ಪ್ರಕಾರ ಎಲ್ಲರೂ ಜೊತೆಯಲ್ಲಿ ಸಾಗಬೇಕು” ಎಂದು ಅಭಿಪ್ರಾಯಿಸಿದರು.
ಇದನ್ನು ಓದಿದ್ದೀರಾ? ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಮಸೂದೆ ಮಂಡಿಸುತ್ತೇವೆ: ಮಮತಾ ಬ್ಯಾನರ್ಜಿ
ಇನ್ನು ಅವರು ಪ್ರಬಲವಾದ ಬಿಜೆಪಿ ವಿರೋಧಿ ಶಕ್ತಿ ಎಂಬುದು ಸಾಬೀತಾದರೂ ಇಂಡಿಯಾ ಒಕ್ಕೂಟದ ಜವಾಬ್ದಾರಿಯನ್ನು ಏಕೆ ತೆಗೆದುಕೊಳ್ಳುತ್ತಿಲ್ಲ ಎಂದು ಸಂದರ್ಶಕರು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿ ಪಶ್ಚಿಮ ಬಂಗಾಳ ಸಿಎಂ, “ಅವಕಾಶವನ್ನು ನೀಡಿದರೆ ನಾನು ಇಂಡಿಯಾ ಒಕ್ಕೂಟದ ಕಾರ್ಯ ನಿರ್ವಹಣೆಯು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತೇನೆ. ನಾನು ಪಶ್ಚಿಮ ಬಂಗಾಳದ ಹೊರಗೆ ಹೋಗಲು ಬಯಸುವುದಿಲ್ಲ. ಆದರೆ ನಾನು ಇಲ್ಲಿದ್ದೆ ಇಂಡಿಯಾ ಒಕ್ಕೂಟದ ನಿರ್ವಹಣೆ ಮಾಡಬಲ್ಲೆ” ಎಂದರು.
ಮಮತಾ ಬ್ಯಾನರ್ಜಿ ಅವರನ್ನು ಇಂಡಿಯಾ ಒಕ್ಕೂಟದ ನಾಯಕಿಯನ್ನಾಗಿಸುವಂತೆ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಹೇಳಿದ ಕೆಲವು ದಿನಗಳ ನಂತರ ಮಮತಾ ಬ್ಯಾನರ್ಜಿ ಇಂಡಿಯಾ ಒಕ್ಕೂಟದ ಜವಾಬ್ದಾರಿ ಬಗ್ಗೆ ಹೇಳಿಕೆ ನೀಡಿದ್ದಾರೆ.
