ಕಲಬುರಗಿ ಜಿಲ್ಲೆಯ ಯಡ್ರಾಮಿನಲ್ಲಿ ದಲಿತ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಶಿಕ್ಷಕನನಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಭಾರತೀಯ ಮಹಿಳಾ ಒಕ್ಕೂಟದಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಬಸ್ ನಿಲ್ದಾಣ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಬಳಿಕ ತಹಶೀಲ್ದಾರ್ ಅವರಿಗೆ ಹಕ್ಕೊತ್ತಾಯ ಸಲ್ಲಿಸಿ ಮಾತನಾಡಿ, “ಹನ್ನೊಂದು ವರ್ಷದ ಬಾಲಕಿ ಮೇಲೆ ಬೋಧಕ ಹಾಜಿಮಲಂಗ ಗಿಣಿಯಾರ ಎಂಬಾತ ಅತ್ಯಾಚಾರ ಎಸಗಿದ್ದಾನೆ. ಪುಂಡ ಕಾಮುಕನಿಗೆ ತೀವ್ರವಾದ ಶಿಕ್ಷೆ ವಿಧಿಸಿ, ಆತನನ್ನು ಗಲ್ಲಿಗೇರಿಸಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
“ಇತ್ತೀಚಿಗೆ ಕರ್ನಾಟಕದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ, ಕಿರುಕುಳ, ಹಿಂಸೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಅತ್ಯಾಚಾರ ಎಸಗಿದ ಕಾಮುಕರನ್ನು ಸರ್ಕಾರ ಕಠಿಣ ಶಿಕ್ಷೆಗೆ ಗುರಿಪಡಿಸುತ್ತಿಲ್ಲ. ಶೋಷಿತ ಸಮುದಾಯಗಳ ಮಹಿಳೆಯರಿಗೆ ಮತ್ತು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ದೇಶದ ಪ್ರಧಾನಿ ʼಭೇಟಿ ಬಚಾವೋ, ಭೇಟಿ ಪಡಾವೋʼ ಎಂದು ಎದೆಯುಬ್ಬಿಸಿಕೊಂಡು ಬೀಗಿ ಭಾಷಣ ಬಿಗಿಯುತ್ತಾರೆ. ಈವರೆಗೂ ಯಾವುದೇ ಭೇಟಿಯನ್ನು ಬಚಾವ್ ಮಾಡಿಲ್ಲ, ಯಾವುದೇ ಭೇಟಿಗಳಿಗೆ ಉನ್ನತ ಪಡಾವ್ ಕೂಡಾ ಸಿಗದಂತಾಗಿದೆ. ಘೋಷಣೆ ಮಾತ್ರ ಕೇವಲ ಭಾಷಣಕ್ಕೆ ಸೀಮಿತವಾಗಿದೆ” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಾಲಕಿ ಮೇಲೆ ಅತ್ಯಾಚಾರ; ಶಾಲಾ ಶಿಕ್ಷಕ ಹಾಜಿಮಲಂಗ ಗಿಣಿಯಾರ ಬಂಧನ
“ಅತ್ಯಾರವೆಸಗಿದ ಆರೋಪಿಗೆ ಶಿಕ್ಷೆ ವಿಧಿಸಬೇಕು ಮತ್ತು ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ರಕ್ಷಣೆ ಹಾಗೂ ಪರಿಹಾರ ಕೊಡಬೇಕು. ಬಾಲಕಿಯ ವ್ಯಾಸಂಗದ ಖರ್ಚನ್ನು ಸರಕಾರವೇ ಭರಿಸಬೇಕು. ಸಂತ್ರಸ್ತೆ ಬಾಲಕಿಯ ವ್ಯಾಸಂಗ ಮುಗಿದ ಸರ್ಕಾರಿ ಉದ್ಯೋಗ ಒದಗಿಸಬೇಕು” ಎಂದು ಸರರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಭಾರತ ಮಹಿಳಾ ಒಕ್ಕೂಟ ತಾಲೂಕು ಅಧ್ಯಕ್ಷೆ ಶೇಖಮ್ಮ ಹೊಸಳ್ಳಿ, ಹಂಪಸದುರ್ಗ, ತಾರಾ ಬೇಗಂ, ಗಂಗಮ್ಮ ಹೊಸಳ್ಳಿ, ಸೋಮಮ್ಮ, ಜರೀನಾ ಬೇಗಂ, ಎಐಆರ್‌ಡಿಎಂ ಅಧ್ಯಕ್ಷ ಎ ಹುಲಪ್ಪ, ಮಂಜುನಾಥ, ಎ ಎಲ್ ತಿಪ್ಪಣ್ಣ ಸೇರಿದಂತೆ ಇತರರು ಇದ್ದರು.
