ಅಂಬೇಡ್ಕರ್ ಅವರು ಸಂವಿಧಾನದ ರೂಪದಲ್ಲಿ ನಮ್ಮೊಂದಿಗಿದ್ದಾರೆ. ಸಂವಿಧಾನವನ್ನು ಕಾಪಾಡುವುದು ನಮ್ಮ ಕರ್ತವ್ಯ. ಸಂವಿಧಾನ ವಿರೋಧಿ ಹೇಳಿಕೆ ನೀಡುವವರಿಗೆ ಭಾರತದಲ್ಲಿ ಬದುಕಲು ಅವಕಾಶವಿಲ್ಲ ಎಂದು ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀನಾಥ್ ಪೂಜಾರ್ ವಿಜಯಪುರದಲ್ಲಿ ಅಂಬೇಡ್ಕರ್ ಪರಿನಿರ್ವಾಣ ಪ್ರಯುಕ್ತ ಹಮ್ಮಿಕೊಂಡ ಬೃಹತ್ ಕ್ಯಾಂಡಲ್ ಮಾರ್ಚ ಕಾರ್ಯಕ್ರಮದಲ್ಲಿ ಗುಡುಗಿದರು.
ನಗರದ ಶಿವಾಜಿ ವೃತ್ತದಿಂದ ಆರಂಭಗೊಂಡ ಕ್ಯಾಂಡಲ್ ಈ ಬೃಹತ್ ಮಾರ್ಚ ಅಂಬೇಡ್ಕರ್ ವೃತ್ತದ ವರೆಗೂ ಸಾಗಿತ್ತು. ಕ್ಯಾಂಡಲ್ ಮಾರ್ಚ’ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿ ಯುವಜನರು ಅಲ್ಲದೇ ಅಂಬೇಡ್ಕರ್ ಅನುಯಾಯಿಗಳು ಭಾಗವಹಿಸಿ, ಜೈ ಭೀಮ್ ಘೋಷಣೆ ಕೂಗುತ್ತಾ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಧುನಿಕ ಭಾರತದಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೋರಾಟ ಮತ್ತು ಅವರು ಬರೆದ ಸಂವಿಧಾನವೇ ಕಾರಣವಾಗಿದೆ. ಅಂಬೇಡ್ಕರ್ ಅವರು ಸಂವಿಧಾನ ರೂಪದಲ್ಲಿ ನಮ್ಮೊಂದಿಗೆ ಇದ್ದಾರೆ. ಆದ್ದರಿಂದ ಸಂವಿಧಾನ ಕಾಪಾಡುವ ನಿಟ್ಟಿನಲ್ಲಿ ನಾವೆಲ್ಲರೂ ಸಾಗಬೇಕು ಮತ್ತು ಸಂವಿಧಾನ ರಕ್ಷಣೆಗೆ ಶಪತ ಮಾಡಬೇಕು. ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಸಮಾನತೆ ತಂದುಕೊಟ್ಟ ಮಹಾ ಮಾನವತವಾದಿ ಅಂಬೇಡ್ಕರ್ ಅವರ ವಿಚಾರ ಇಂದಿನ ವಿದ್ಯಾರ್ಥಿ ಯುವ ಜನರಿಗೆ ಆದರ್ಶ ದೀಪವಾಗಿದೆ ಎಂದರು.
ನಮ್ಮ ದೇಶಕ್ಕೆ ಸಂವಿಧಾನ ಒದಗಿಸದೇ ಇದ್ದಿದ್ದರೆ ಶೋಷಿತ ಸಮುದಾಯಗಳು ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲರಾಗುತ್ತಿರಲಿಲ್ಲ. ಶೋಷಿತ ಸಮುದಾಯಗಳಿಗೆ ಎಲ್ಲಾ ರಂಗದಲ್ಲಿ ಅವಕಾಶಗಳು ಸಿಕ್ಕಿರುವುದು ಸಂವಿಧಾನದಿಂದ ಮಾತ್ರ. ಸಂವಿಧಾನವು ನಮ್ಮ ದೇಶದ ಪವಿತ್ರ ಗ್ರಂಥವಾಗಿದೆ. ಅದನ್ನು ಇಂದಿನ ವಿದ್ಯಾರ್ಥಿ ಮತ್ತು ಯುವಕರು ಅರ್ಥೈಸಿಕೊಂಡು ಮೈಗೂಡಿಸಿಕೊಳ್ಳುವುದು ತುರ್ತು ಹಾಗೂ ಅಗತ್ಯ. ದೇಶದಲ್ಲಿ ಹೊರಬರುತ್ತಿರುವ ಸಂವಿಧಾನ ವಿರೋಧಿ ಹೇಳಿಕೆಯನ್ನು ದಲಿತ ವಿದ್ಯಾರ್ಥಿ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ. ಸಂವಿಧಾನ ವಿರೋಧಿ ಹೇಳಿಕೆ ನೀಡುವವರಿಗೆ ಭಾರತ ದೇಶದಲ್ಲಿ ಬದುಕಲು ಅವಕಾಶವಿಲ್ಲ ಎಂದು ಗುಡುಗಿದರು.
ಈ ವರದಿ ಓದಿದ್ದೀರಾ? ಬೆಳಗಾವಿ | ಗೂಗಲ್ ಮ್ಯಾಪ್ ನಂಬಿ ಮಧ್ಯರಾತ್ರಿ ಕಾಡಿನಲ್ಲಿ ಸಿಲುಕಿಕೊಂಡ ಪ್ರಯಾಣಿಕರು
ಈ ಸಂದರ್ಭದಲ್ಲಿ ಪರಿಷತ್’ನ ರಾಜ್ಯ ಸಂಚಾಲಕ ಬಾಲಾಜಿ ಎಂ ಕಾಂಬಳೆ, ನ್ಯಾಯವಾದಿಗಳಾದ ವಿದ್ಯಾವತಿ ಅಂಕಲಿಗಿ, ಫಾದರ್ ಟಿಯೋಲ್ ಮಾಚದೊ, ಸಂತೋಷ ಪೂಜಾರಿ, ರೈತ ಸಂಘಟನೆ ಜಿಲ್ಲಾ ಮುಖಂಡ ಸಂಗಮೇಶ ಸಗರ, ಜಿಲ್ಲಾ ಮುಖಂಡ ಅಕ್ಷಯ ಅಜಮನಿ, ಮಾದೇಶ ಛಲವಾದಿ ಉಪಸ್ಥಿತರಿದ್ದರು.