ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಂದಿನ ಶ್ರಮದ ಫಲವಾಗಿ ಇಂದಿಗೂ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಾಗಿದೆ ಎಂದು ಸಂಸದ ಸಾಗರ ಖಂಡ್ರೆ ಹೇಳಿದರು.
ಬೀದರ್ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ದಲಿತ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣದ ಪ್ರಯುಕ್ತ ಹಮ್ಮಿಕೊಂಡ ಶೋಷಿತ ಸಮುದಾಯಗಳ ಐಕ್ಯತಾ ದಿನ ಹಾಗೂ ಸಂಗೀತ ನುಡಿನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ಚಿಕ್ಕ ವಯಸ್ಸಿನಲ್ಲಿ ಸಂಸದನಾಗಲು ಅರ್ಹತೆ ಗಿಟ್ಟಿಸಿಕೊಂಡಿದ್ದು ಡಾ.ಅಂಬೇಡ್ಕರ್ ಅವರ ಅತ್ಯುತ್ತಮ ಸಂವಿಧಾನದ ಆಶಯಗಳಿಂದಾಗಿ, ಶಿಕ್ಷಣ, ಸಂಘಟನೆ ಹಾಗೂ ಹೋರಾಟಕ್ಕೆ ಮಹತ್ವ ನೀಡಿದ್ದ ಅವರ ಆಶಯದಂತೆ ಶಿಕ್ಷಣಕ್ಕೆ ಇಂದು ಮಹತ್ವ ನೀಡಿದ್ದರೆ ಶೋಷಿತ ಸಮುದಾಯ ಸಮಗ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಎಲ್ಲರಿಗೂ ಗೌರವ ಕೊಡುವಂಥ ವ್ಯಕ್ತಿಯಾಗೋಣ. ಸಮಾನತೆಯಿಂದ ಸರ್ವರೊಂದಿಗೆ ನಡೆ-ನುಡಿ ಹೊಂದಿರಬೇಕು. ಸಮಾಜದಲ್ಲಿ ಉತ್ತಮವಾಗಿ ಕೆಲಸ ಮಾಡಬೇಕು ಆಗ ಮಾತ್ರ ನಮಗೆ ಸಮಾಜದ ಗೌರವ ಸಿಗುತ್ತದೆ. ಅನ್ಯಾಯಗಳ ವಿರುದ್ಧ ಹೋರಾಟ ಮಾಡಿ ನ್ಯಾಯದ ಪರವಾಗಿ ನಿಲ್ಲಬೇಕು ಎಂದು ಸಂಸದ ಖಂಡ್ರೆ ಹೇಳಿದರು.

ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್ ಮಾತನಾಡಿ, ʼಡಾ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾವಿಂದು ಈ ಮಟ್ಟಕ್ಕೆ ಬೆಳೆದಿದ್ದೇವೆ. ಅವರಿಗೆ ದೇಶದ ಪ್ರತಿಯೊಬ್ಬರೂ ಸದಾ ಆಭಾರಿ ಆಗಿರಬೇಕು ಎಂದರು. ಶ್ರೀಮಂತರನ್ನು ಪ್ರಶ್ನಿಸುವ ವ್ಯವಸ್ಥೆ ಕಡಿಮೆಯಾಗಿದೆ. ಬಡವರ ಮೇಲೆ ಹದ್ದಿನ ಕಣ್ಣು ಇಡಲಾಗುತ್ತಿದೆ. ಕೆಲವು ಅಧಿಕಾರಿಗಳು ಮತ್ತು ರಾಜಕಾರಣಿಗಳಿಂದ ದೇಶದಲ್ಲಿ ಸಂಪೂರ್ಣವಾಗಿ ಸಂವಿಧಾನ ಜಾರಿಯಾಗದಂತೆ ತಡೆಯುತ್ತಿದ್ದಾರೆ. ದೇಶವನ್ನು ಗುಲಾಮಗಿರಿ ಪದ್ದತಿಗೆ ದೂಡುವ ಹುನ್ನಾರ ಹೊಂದಿದ್ದವರಿಂದ ಇಂತಹ ಕೆಲಸ ನಡೆಯುತ್ತಿದೆʼ ಎಂದು ಕಳವಳ ವ್ಯಕ್ತಪಡಿಸಿದರು.
ಮುಖಂಡ ಅನೀಲಕುಮಾರ ಬೆಲ್ದಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ʼಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಗಲಿ 68 ವರ್ಷ ಗತಿಸಿದರೂ ನಾವು ದೀನ ದಲಿತರು ಒಂದಾಗಿಲ್ಲ ಎಂಬುದು ಬೇಸರದ ಸಂಗತಿ. ನಾವು ಈಗಲಾದರೂ ಒಂದಾಗಿ ಅವರ ಋಣ ತೀರಿಸಬೇಕೆಂದರು. ದಲಿತ ಸಂಘಟನೆಗಳು ಒಗ್ಗೂಡಿಸುವ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆʼ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಜಿ.ಮೂಳೆ ಮಾತನಾಡಿ, ʼದೇಶದಲ್ಲಿ ನದಿ ಜೋಡಣೆಗಳು, ಗಡಿ ಜೋಡಣೆಗಳು, ಆರ್‌ಬಿಐ ಸ್ಥಾಪನೆ ಸೇರಿದಂತೆ ಅನೇಕ ಯೋಜನೆಗಳನ್ನು ದೇಶಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ್ದು ಎಲ್ಲರೂ ಸ್ಮರಿಸಬೇಕುʼ ಎಂದರು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ʼಬಾಬಾ ಸಾಹೇಬ್ ಅವರ ಲಂಡನ್ ಮನೆ, ದಿಲ್ಲಿ ಮನೆ ಹೀಗೆ ಪಂಚತೀರ್ಥಗಳ ಅಭಿವೃದ್ಧಿಗೆ ಪ್ರಧಾನಿ ಮೋದಿ ಮುಂದಾಗಿದ್ದಾರೆ. ಈ ಪಂಚ ತೀರ್ಥಗಳಿಗೆ ಪ್ರತಿಯೊಬ್ಬರೂ ಭೇಟಿ ನೀಡಬೇಕುʼ ಎಂದರು.
ಮಾಜಿ ಶಾಸಕ ಬಂಡೆಪ್ಪ ಖಾಶೆಂಪೂರ್ ಮಾತನಾಡಿ, ʼಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಂತೆ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಬಾಬಾಸಾಹೇಬರ ಕನಸುಗಳನ್ನು ನನಸಾಗಿಸಲು ಪ್ರತಿಯೊಬ್ಬ ಶೋಷಿತ ಸಮುದಾಯದ ವ್ಯಕ್ತಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು, ಒಗ್ಗಟ್ಟಾಗಿರಬೇಕುʼ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಗೀತ ನುಡಿ ನಮನಕ್ಕೆ ಸುಮಾರು 25ಕ್ಕೂ ಹೆಚ್ಚು ತಂಡಗಳು ಆಗಮಿಸಿದ್ದವು. ಡಾ. ಬಾಬಾ ಸಾಹೇಬ್ ಅವರ ಕುರಿತಾದ ಹಾಡುಗಳನ್ನು ಹಾಡುವ ಮೂಲಕ ಎಲ್ಲರಲ್ಲಿ ಜಾಗೃತಿ ಮೂಡಿಸುವದಲ್ಲದೆ ಗೌರವ ನಮನ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಹಸಿದ ಹೊಟ್ಟೆ ತಣಿಸುವ ʼರಿಶೈನ್ʼ ಯುವಕರು
ಸಮಾರಂಭದಲ್ಲಿ ಭಂತೆ ಧಮ್ಮಪಾಲ್ ಮತ್ತು ಬಿಕ್ಕು ಸಂಘದವರ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಮೀನುಗಾರಿಕೆ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡೆ, ನಗರಸಭೆ ಅಧ್ಯಕ್ಷ ಮಹ್ಮದ್ ಗೌಸೋದ್ದೀನ್ ಹಾಗೂ ಮುಖಂಡರಾದ ಡಾ. ರಾಜಶೇಖರ ಸೇಡಂಕರ್, ಬಸವರಾಜ ಮಾಳಗೆ, ಅಬ್ದುಲ್ ಮನಾನ್ ಸೇಠ್, ಇರ್ಷಾದ್ ಪೈಲ್ವಾನ್, ರಮೇಶ ಡಾಕುಳಗಿ, ಜಾನ್‌ವೆಸ್ಲಿ, ದಶರಥ ಚಲುವಾ, ಶ್ರೀಪತರಾವ್ ದೀನೆ, ಶಿವಕುಮಾರ ನೀಲಿಕಟ್ಟಿ, ಅಂಬಾದಾಸ್ ಗಾಯಕವಾಡ, ಸತೀಶ ಲಕ್ಕಿ, ಡಾ.ಕಾಶಿನಾಥ ಚಲುವಾ, ಅವಿನಾಶ ದೀನೆ, ಗೋವರ್ಧನ್ ರಾಠೋಡ್, ಸುಮಂತ ಕಟ್ಟಿಮನಿ, ರಮೇಶ ಕಟ್ಟಿತೂಗಾಂವ್, ಪತ್ರಕರ್ತ ಸದಾ ಜೋಶಿ, ಬಾಬು ಪಾಸ್ವಾನ್ ಸ್ವಾಗತಿಸಿದರು, ಪ್ರದೀಪ ನಾಟೇಕರ್ ನಿರೂಪಿಸಿದರು. ಸಂದೀಪ ಕಾಂಟೆ ವಂದಿಸಿದರು.