ರಾಜ್ಯದಲ್ಲಿ ಚಿತ್ರಮಂದಿರಗಳನ್ನು ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಪ್ರದರ್ಶನಕ್ಕೆ ನೀಡಿ ಕನ್ನಡದ ʼಧೀರ ಭಗತ್ ರಾಯ್ʼ ಚಲನಚಿತ್ರ ನಿರ್ಲಕ್ಷಿಸುತ್ತಿದ್ದಾರೆ ಎಂದು ಕರುನಾಡ ವಿಜಯಸೇನೆ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು.
“ಅಲ್ಲು ಅರ್ಜುನ್, ರಶ್ಮಿಕ ಮಂದಣ್ಣ ಅಭಿನಯದ ʼಪುಷ್ಪ 2ʼ ರಾಜ್ಯ ಮತ್ತು ರಾಷ್ಟ್ರಾದ್ಯಂತ ತೆರೆಕಂಡಿದ್ದು, ಜಿಲ್ಲಾ ಕೇಂದ್ರಗಳಲ್ಲಿಯೂ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ನೈಜ ಕನ್ನಡ ಚಿತ್ರವಾದ ಧೀರ ಭಗತ್ ರಾಯ್ ಚಲನಚಿತ್ರಕ್ಕೆ ಚಿತ್ರಮಂದಿರ ನೀಡದೆ ಕನ್ನಡ ಚಿತ್ರಗಳಿಗೆ ಅವಮಾನಿಸುತ್ತಿದ್ದಾರೆ. ಕನ್ನಡ ಚಿತ್ರರಂಗವನ್ನು ಕಡೆಗಣಿಸುತ್ತಿದ್ದಾರೆ. ಇದರಿಂದ ಕನ್ನಡ ಚಿತ್ರಗಳಿಗೆ ಸೋಲಾಗುತ್ತಿದೆ” ಎಂದು ಚಿತ್ರಮಂದಿರ ಮಾಲೀಕರು ಮತ್ತು ವಿತರಕರ ವಿರುದ್ಧ ಪ್ರತಿಭಟನೆ ನಡೆಸಿದರು.
“ಚಿತ್ರದುರ್ಗದಲ್ಲಿ ಧೀರ ಭಗತ್ ರಾಯ್ ಕನ್ನಡ ಚಲನಚಿತ್ರಕ್ಕೆ ಕೂಡಲೇ ಚಿತ್ರಮಂದಿರ ಒದಗಿಸಬೇಕು, ಇದಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು” ಎಂದು ಆಹ್ರಹಿಸಿ ನಗರದ ಪ್ರಸನ್ನ ಮತ್ತು ವೆಂಕಟೇಶ್ವರ ಚಿತ್ರಮಂದಿರಗಳ ಪುಷ್ಪ 2 ಚಲನಚಿತ್ರದ ಪೋಸ್ಟರ್‌ಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಶೋಷಿತ ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಅಗತ್ಯ : ಸಂಸದ ಸಾಗರ್ ಖಂಡ್ರೆ
ಈ ವೇಳೆ ಕರುನಾಡ ವಿಜಯ ಸೇನೆಯ ಮುಖಂಡ ಕೆ ಟಿ ಶಿವಕುಮಾರ್ ಮಾತನಾಡಿ, “ಕರ್ನಾಟಕ ರಾಜ್ಯದಲ್ಲಿ 50ನೇ ಸುವರ್ಣ ಮಹೋತ್ಸವ, 69ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಇಂತಹ ಸಮಯದಲ್ಲಿ ಕನ್ನಡದ ಮೂಲ ಚಿತ್ರಗಳಿಗೆ ಪ್ರದರ್ಶನಕ್ಕೆ ಅವಕಾಶ ನೀಡದೆ, ತೆಲುಗು ಚಿತ್ರಗಳಿಗೆ ಅವಕಾಶ ನೀಡಿರುವುದು ಖಂಡನೀಯ. ಕನ್ನಡ ಚಿತ್ರಗಳು ಬಿಡುಗಡೆಯಾಗಿದ್ದರೂ ಪ್ರದರ್ಶನಕ್ಕೆ ಅವಕಾಶ ನೀಡದೆ ತೆಲುಗು ಚಿತ್ರಗಳನ್ನು ಪ್ರದರ್ಶಿಸುತ್ತಿರುವುದು ಕನ್ನಡಕ್ಕೆ ಮಾಡಿದ ಅವಮಾನ. ಕೇವಲ ಹಣ ಮಾಡುವ ಉದ್ದೇಶದಿಂದ ಚಿತ್ರಮಂದಿರಗಳ ಮಾಲೀಕರು ಅನ್ಯ ಭಾಷೆಯ ಚಿತ್ರಗಳಿಗೆ ಅವಕಾಶ ನೀಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ನಿಸಾರ್ ಅಹಮದ್, ಹರೀಶ್ ಅಖಿಲೇಶ್, ತಿಪ್ಪೇಸ್ವಾಮಿ, ಕರಿಯಪ್ಪ, ಸೈಯದ್ ಖುದ್ದುಸ್, ದೇವರಾಜ್ ಮತ್ತು ಕನ್ನಡಾಭಿಮಾನಿಗಳು ಇದ್ದರು.