ರಾಜಕೀಯದಲ್ಲಿ ತೊಡಗಿಸಿಕೊಂಡಾಗಿನಿಂದ ಮೂರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ, ಮೂರು ಬಾರಿಯೂ ಸೋಲುಂಡು ಹ್ಯಾಟ್ರಿಕ್ ಸೋಲನುಭವಿಸಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಮೊಮ್ಮಗ, ಮಾಜಿ ಮುಖ್ಯಮಂತ್ರಿ – ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಪುತ್ರ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಇತ್ತೀಚೆಗೆ ನಡೆದ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದಾರೆ. ಅದಕ್ಕೂ ಮುನ್ನ, 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ನಂತರ, 2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿ ಸೋತಿದ್ದರು. ನಿರಂತರವಾಗಿ ಸೋಲುತ್ತಲೇ ಇರುವ ನಿಖಿಲ್‌ಗೆ ಈಗ ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆ ದಯಪಾಲಿಸಲು ಅವರ ತಂದೆ ಎಚ್.ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ, ಕುಮಾರಸ್ವಾಮಿ ಅವರೇ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದಾರೆ. ಆ ಹುದ್ದೆಗೆ ತಮ್ಮ ಮಗನನ್ನು ಪ್ರತಿಷ್ಠಾಪಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆ. ನಿಖಿಲ್‌ರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿ, 2025ರಲ್ಲಿ ನಡೆಯಲಿರುವ ಜಿಲ್ಲಾ ಪಂಚಾಯತಿ ಮತ್ತು ತಾಲೂಕಿ ಪಂಚಾಯತಿ ಚುನಾವಣೆಯಲ್ಲಿ ನಿಖಿಲ್ ಸಾರಥ್ಯದಲ್ಲೇ ಎದುರಿಸಲು ಕುಮಾರಸ್ವಾಮಿ ಯೋಜಿಸುತ್ತಿದ್ದಾರೆ ಎಂದು ‘ದಿ ನ್ಯೂ ಸಂಡೇ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಎಚ್.ಡಿ ದೇವೇಗೌಡ, “ಶಾಸಕನಾಗುವುದು ಮಾತ್ರವೇ ಸಾಧನೆಯಲ್ಲ. ನಿಖಿಲ್ ಮುಂದಿನ ದಿನಗಳಲ್ಲಿ ಪಕ್ಷದ ಜವಾವ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ರಾಜ್ಯದಲ್ಲಿ ಪಕ್ಷ ಸಂಘಟಿಸುವ ಜವಾಬ್ದಾರಿ ಹೊತ್ತಿದ್ದಾರೆ. ಅವರ ಬೆನ್ನಿಗೆ ಅನುಭವ ಮತ್ತು ಕುಟುಂಬದ ಹಿನ್ನೆಲೆಯೂ ಇದೆ” ಎಂದು ಹೇಳಿದ್ದಾರೆ.
ದೇವೇಗೌಡರ ಈ ಹೇಳಿಕೆ, ನಿಖಿಲ್ ಜೆಡಿಎಸ್ ರಾಜ್ಯಾಧ್ಯಕ್ಷರಾಗುವುದು ಖಚಿತ ಎಂಬ ಚರ್ಚೆಯನ್ನು ಮುನ್ನೆಲೆಗೆ ತಂದಿದೆ. ಆದರೆ, ಚುನಾವಣೆಯಲ್ಲಿ ಮೂರು ಬಾರಿ ಸ್ಪರ್ಧಿಸಿ, ಒಮ್ಮೆಯೂ ಗೆಲ್ಲಲಾಗದ ನಿಖಿಲ್ ಪಕ್ಷದ ಜವಾಬ್ದಾರಿ ಹೊತ್ತು, ಪಕ್ಷವನ್ನು ಗೆಲ್ಲಿಸುವರೇ ಎಂದು ವಿರೋಧಿಗಳು ವ್ಯಂಗ್ಯವಾಡುತ್ತಿದ್ದಾರೆ.
ಎರಡು ಸಿನಿಮಾ ಮಾಡುವ ಮೂಲಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ನಿಖಿಲ್ 2019ರಲ್ಲಿ ಚುನಾವಣಾ ಕಣಕ್ಕೆ ಇಳಿದಿದ್ದರು. ಆ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಸಮಯದಲ್ಲಿ ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಶಾಸಕರೇ ಇದ್ದರೂ ನಿಖಿಲ್ ಹೀನಾಯವಾಗಿ ಸೋತಿದ್ದರು. ಅವರ ಸೋಲಿಗೆ ಜೆಡಿಎಸ್ ಮುಖಂಡರ ಸಿಟ್ಟು, ಕಾಂಗ್ರೆಸ್‌ನ ಅಸಹಾಕಾರ ಕಾರಣವೆಂದು ಹೇಳಲಾಗಿತ್ತು.
ಈ ವರದಿ ಓದಿದ್ದೀರಾ?: ಬಾಣಂತಿಯರ ಸಾವು | ವ್ಯವಸ್ಥೆಯೇ ಮಾಡಿದ ಕೊಲೆ; ಸರ್ಕಾರ ಹೊರುವುದೇ ಹೊಣೆ?
2023ರ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ತಮ್ಮ ಮಗನಿಗಾಗಿ ರಾಮನಗರವನ್ನು ತ್ಯಜಿಸಿ ಚನ್ನಪಟ್ಟಣಕ್ಕೆ ಹೋದರು. ನಿಖಿಲ್‌ರನ್ನು ರಾಮನಗರದಲ್ಲಿ ಕಣಕ್ಕಿಳಿಸಿದರು. ಆದರೆ, ಕಾಂಗ್ರೆಸ್‌ನ ಅಬ್ಬರದ ಅಲೆಯಲ್ಲಿ ನಿಖಿಲ್ ಕೊಚ್ಚಿಹೋದರು. ಎರಡನೇ ಬಾರಿಗೆ ಸೋಲುಂಡರು. ಇನ್ನು, 2024ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ, ಗೆದ್ದು, ಸಂಸದರಾಗಿ ಕೇಂದ್ರ ಸಚಿವರೂ ಆದ ಕುಮಾರಸ್ವಾಮಿ, ಚನ್ನಪಟಣ್ಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತಮ್ಮಿಂದ ತೆರವಾದ ಸ್ಥಾನಕ್ಕೆ ನಿಖಿಲ್‌ರನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರು. ಆದರೆ, ಡಿ.ಕೆ ಸಹೋದರರ ತಂತ್ರ, ಯೋಗೇಶ್ವರ್ ಅಬ್ಬರದ ಮುಂದೆ ನಿಖಿಲ್ ಮತ್ತೆ ಸೋಲುಂಡರು.
ನಿರಂತರ ಮೂರು ಸೋಲುಗಳನ್ನು ಕಂಡಿರುವ ನಿಖಿಲ್‌ರನ್ನು ನೆಟ್ಟಿಗರು ಮತ್ತು ವಿರೋಧಿಗಳು ಸೋಲುಗಳ ಸರದಾರ, ಹ್ಯಾಟ್ರಿಕ್ ಹೀರೋ ಎಂದೆಲ್ಲ ವ್ಯಂಗ್ಯವಾಡುತ್ತಿದ್ದಾರೆ. ಟ್ರೋಲ್ ಮಾಡುತ್ತಿದ್ದಾರೆ. ಆದಾಗ್ಯೂ, ಸೋಲಿನಿಂದ ಕಂಗೆಡದ ನಿಖಿಲ್ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಪಕ್ಷದ ನಾಯಕರು, ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ.
ಅಲ್ಲದೆ, ಸದ್ಯಕ್ಕೆ ದೆಹಲಿಗೆ ಹಾರಿರುವ ನಿಖಿಲ್, ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಅವರನ್ನು ಭೇಟಿ ಮಾಡಿದ್ದಾರೆ. ಸೋಮವಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.