ಹೊಸ ಮುಖಗಳೇ ಸೇರಿ ರೂಪಿಸಿರುವ ‘ಧೀರ ಭಗತ್ ರಾಯ್’ ಸಿನಿಮಾ ಮೇಲೆ ಮುಗಿಬಿದ್ದಿರುವ ಸಂಘಪರಿವಾರ ಬೆಂಬಲಿತ ಸೋಷಿಯಲ್ ಮಿಡಿಯಾ ಅಕೌಂಟ್‌ಗಳು ವಿಷಕಾರಿ ಕಮೆಂಟ್‌ಗಳನ್ನು ಮಾಡಿ ಅಸಹನೆಯನ್ನು ಹೊರಹಾಕಿವೆ. ಈ ಬಗ್ಗೆ ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ.
ದಲಿತ ಕೇಂದ್ರಿತ ಕಥೆಯನ್ನು ಒಳಗೊಂಡಿರುವ ‘ಧೀರ ಭಗತ್ ರಾಯ್’ ಸಿನಿಮಾವನ್ನು ದಲಿತ ಸಮುದಾಯದ ಕರ್ಣನ್ ನಿರ್ದೇಶಿಸಿದ್ದು, ಸಮುದಾಯದ ಹಲವು ಹೋರಾಟಗಾರರು ಮೊದಲಿನಿಂದಲೂ ಚಿತ್ರತಂಡದೊಂದಿಗೆ ನಿಂತಿದ್ದರು. ತಮಿಳು ಚಿತ್ರರಂಗದ ಪ.ರಂಜಿತ್, ಮಾರಿ ಸೆಲ್ವರಾಜ್, ವೆಟ್ರಿಮಾರನ್ ಥರದವರು ಮಾಡುವ ಸಿನಿಮಾಗಳು ಕನ್ನಡದಲ್ಲೂ ಮಾಡಬಹುದು ಎಂಬುದನ್ನು ತೋರಿಸಲು ಈ ತಂಡ ಮುಂದಾಯಿತು. ಆ ಪ್ರಯತ್ನದಲ್ಲಿ ಯಶಸ್ವಿಯೂ ಆಗಿ, ಡಿಸೆಂಬರ್ 6ರಂದು (ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣದ ದಿನ) ರಾಜ್ಯಾದ್ಯಂತ ಸಿನಿಮಾ ತೆರೆಕಂಡಿದೆ.
ಇದೇ ಹೊತ್ತಿನಲ್ಲಿ ತೆಲುಗಿನ ‘ಪುಷ್ಪ-2’ ಸಿನಿಮಾ ಕೂಡ ಬಿಡುಗಡೆಯಾಗಿತ್ತು. ಪುಷ್ಪ-2 ಎದುರು ನಾವು ಗೆಲ್ಲಬಲ್ಲೆವು, ನಮ್ಮ ಕಥೆ ಗಟ್ಟಿಯಾಗಿದೆ ಎಂದು ಚಿತ್ರತಂಡ ಹುಮ್ಮಸ್ಸಿನಲ್ಲಿ ಮುನ್ನುಗ್ಗುತ್ತಿದ್ದು, ಇತ್ತ ಸಿನಿಮಾ ಬಗ್ಗೆ ಅಪಪ್ರಚಾರವೂ ಬಿರುಸಾಗಿ ಸಾಗಿದೆ.
‘ಸಿನಿಮಾ ನೋಡದೆಯೇ, ಇದರ ಬಗ್ಗೆ ವಿಷಕಾರಿ ಪ್ರತಿಕ್ರಿಯೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ’ ಎಂದು ಸಿನಿಮಾದೊಂದಿಗೆ ಗುರುತಿಸಿಕೊಂಡ ಹೋರಾಟಗಾರರು ಬೇಸರ ಹೊರಹಾಕಿದ್ದಾರೆ.
“ಜಾತಿ ಜಾತಿಗಳ ನಡುವೆ ವೈಷಮ್ಯ ಬೆಳೆಸುವ ಸಿನಿಮಾ ಇದು” ಎಂದು ಸುಳ್ಳನ್ನು ಹಬ್ಬಿಸುತ್ತಿರುವುದಷ್ಟೇ ಅಲ್ಲ, “ಮೀಸಲಾತಿ ಪಡೆಯೋ ದಲಿತರು ಮಾತ್ರ ನೋಡಿ, ಈ ಸಿನಿಮಾ ಗೆಲ್ಲಿಸಿ, ಸಿನಿಮಾ ನೋಡಲು ರಿಸರ್ವೇಷನ್ ಇದೆಯಾ?” ಎಂಬ ದ್ವೇಷದ ಕಮೆಂಟ್‌ಗಳನ್ನು ಮಾಡಿದ್ದಾರೆ.
“ಪುಷ್ಪ ಸಿನಿಮಾ ನೋಡ್ತೀವಿ, ಆದರೆ ಈ ಸಿನಿಮಾ ನೋಡಲ್ಲ, ನೋಡಲು ಹೋದಾಗ ನೂಕುನುಗ್ಗಲಾದರೆ ನಮ್ಮ ಮೇಲೆ ಅಟ್ರಾಸಿಟಿ ಹಾಕ್ತಾರೆ, ಛೋಟಾ ಭೀಮ್‌ಗಳು ಮಾಡಿರುವ ಸಿನಿಮಾವನ್ನು ಹಿಂದೂಗಳು ನೋಡಬೇಡಿ” ಎಂದು ಬಿಜೆಪಿಯನ್ನು ಬೆಂಬಲಿಸುವ ಸೋಷಿಯಲ್ ಮೀಡಿಯಾ ಖಾತೆಗಳು ಕಮೆಂಟ್‌ಗಳನ್ನು ಮಾಡಿವೆ.
ಚಿಂತಕ ಎ.ಹರಿರಾಮ್ ಪ್ರತಿಕ್ರಿಯಿಸಿ, “ಒಂದು ಅಪ್ಪಟ ಕನ್ನಡ ಸಿನಿಮಾವನ್ನು ಹೇಗಾದರೂ ಮಾಡಿ ತುಳಿಯಬೇಕೆಂಬ ದ್ವೇಷದಿಂದ #Boycottdheerabhagatroy ಎಂದು ಬರೆಯುತ್ತಿರುವುದು ಒಂದು ಅಪ್ಪಟ ಕನ್ನಡದ ಚಿತ್ರವನ್ನು ಸಂಪೂರ್ಣವಾಗಿ ಮುಳುಗಿಸುವ ಹುನ್ನಾರ. ಇದರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತಿದ್ದೇವೆ. ಇಂಥವುಗಳ ಹಿಂದೆ ಯಾರಿದ್ದಾರೆಂದು ಕಂಡು ಹಿಡಿದೇ ಹಿಡಿಯುತ್ತೇವೆ. ಅಪ್ಪಟ ಕನ್ನಡಿಗರು ಮತ್ತು ಹೃದಯವಂತರು ನಮ್ಮೊಂದಿಗೆ ನಿಲ್ಲುತ್ತಿರೆಂಬ ನಂಬಿಕೆ ಇದೆ” ಎಂದು ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ.
ಹೋರಾಟಗಾರ ಬಿ.ಆರ್.ಭಾಸ್ಕರ್ ಪ್ರಸಾದ್ ಪ್ರತಿಕ್ರಿಯಿಸಿ, “ಸಂಘಪರಿವಾರದ ಮಿತ್ರನೊಬ್ಬ ಭಾರೀ ಕಟ್ಟುಕಥೆಯನ್ನೇ ಕಟ್ಟಿಬಿಟ್ಟಿದ್ದಾನೆ. ಇದರಲ್ಲಿ ದನದ ಮಾಂಸವನ್ನು ಹಿರೋ ತಿನ್ನುತ್ತಾನೆ, ಮೇಲ್ಜಾತಿಯ ಹೆಣ್ಣುಮಗಳನ್ನು ಹೊಡೆದುಕೊಂಡು ಹೋಗುತ್ತಾನೆ ಎಂಬಂತಹ ಮಾತುಗಳನ್ನು ಆಡಿದ್ದಾನೆ. ಮೊದಲು ಸಿನಿಮಾ ನೋಡಬೇಕಲ್ಲವೇ? ಇದು ಪ್ರೇಮಕಥೆಯ ಸಿನಿಮಾವಲ್ಲ. ಬಡತನ ಮತ್ತು ಭೂಮಿಯ ಹಕ್ಕಿನ ಕುರಿತು ಧೀರ ಭಗತ್ ರಾಯ್ ಮಾತನಾಡುತ್ತದೆ. ಕಾಟೇರ ಸಿನಿಮಾ ಒಳಗೊಂಡ ಕಥೆಯ ಮತ್ತೊಂದು ಮಗ್ಗುಲನ್ನು ಈ ಸಿನಿಮಾ ಚರ್ಚಿಸಿದೆ” ಎಂದಿದ್ದಾರೆ.
ಚಿತ್ರದ ನಾಯಕ ನಟ ರಾಕೇಶ್ ದಳವಾಯಿ ಅವರು, ‘ಕರ್ನಾಟಕದಲ್ಲಿ ಕನ್ನಡವೇ ರಾಷ್ಟ್ರಭಾಷೆ’ ಎಂದು ಹಿಡಿದಿರುವ ಫಲಕಗಳನ್ನು ತಿರುಚಿ, ‘ಭಾರತದಲ್ಲಿ ಹಿಂದಿಯೇ ರಾಷ್ಟ್ರಭಾಷೆ’ ಎಂದು ಹೇಳಿರುವುದಾಗಿ ಸುಳ್ಳು ಹಬ್ಬಿಸುವ ಕೆಲಸವನ್ನು ಬಲಪಂಥೀಯ ಟ್ವಿಟರ್ ಹ್ಯಾಂಡಲ್ ‘ಯತ್ನಾಳ್ ಹಿಂದು ಸೇನೆ’ ಮಾಡಿದೆ.
ಕನ್ನಡ ಅಂದ್ರೆ ಯಾಕಿಷ್ಟು ಉರಿ ಇವರಿಗೆ ಗೊತ್ತಾಗ್ತಿಲ್ಲ.
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) December 7, 2024
ನೆನ್ನೆ ಬಿಡುಗಡೆ ಆಗಿರೋ ಕನ್ನಡ ಚಿತ್ರ ಧೀರ ಭಗತ್ ರಾಯ್ ಚಿತ್ರದ ನಾಯಕ ಕನ್ನಡ ಪ್ರೇಮಿ ರಾಕೇಶ್ ದಳವಾಯಿ ಅವರು ಈ ಕನ್ನಡ ಜಾಗೃತಿ ಫಲಕ ಹಿಡದಿರೋದು.
ಆದ್ರೆ ಈ ವಾಟ್ಸಪ್ ಮಂಗಗಳು ಎಡಿಟ್ ಮಾಡಿಕೊಂಡು ಸುಳ್ಳು ಸುದ್ದಿ ಹರಡಿ ನಾವು ಹೇಳೋದೆಲ್ಲ ಬರೀ ಸುಳ್ಳು ಅಂತ ಪದೇ ಪದೇ ನಿರೂಪಿಸುತ್ತಿವೆ. https://t.co/pG8KrtDCqY pic.twitter.com/UeISCt6aLW
ಇದನ್ನು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಕಟುವಾಗಿ ಟೀಕಿಸಿದ್ದಾರೆ. “ಕನ್ನಡ ಅಂದ್ರೆ ಯಾಕಿಷ್ಟು ಉರಿ ಇವರಿಗೆ ಗೊತ್ತಾಗ್ತಿಲ್ಲ. ಬಿಡುಗಡೆ ಆಗಿರೋ ಕನ್ನಡ ಚಿತ್ರ ಧೀರ ಭಗತ್ ರಾಯ್‌ನ ನಾಯಕ, ಕನ್ನಡ ಪ್ರೇಮಿ ರಾಕೇಶ್ ದಳವಾಯಿ ಅವರು ಹಿಡಿದಿರೋದು ಈ ಕನ್ನಡ ಜಾಗೃತಿ ಫಲಕ. ಆದರೆ ಈ ವಾಟ್ಸ್ಯಾಪ್ ಮಂಗಗಳು ಎಡಿಟ್ ಮಾಡಿಕೊಂಡು ಸುಳ್ಳು ಸುದ್ದಿ ಹರಡಿ ನಾವು ಹೇಳೋದೆಲ್ಲ ಬರೀ ಸುಳ್ಳು ಅಂತ ಪದೇ ಪದೇ ನಿರೂಪಿಸುತ್ತಿವೆ” ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
‘ಹಿಂದೂ ನಾವೆಲ್ಲ ಒಂದು ಎನ್ನುವ ಬಲಪಂಥೀಯರು ವಾಸ್ತವದಲ್ಲಿಅಂಬೇಡ್ಕರ್ ವಿಚಾರಧಾರೆ ಉಳ್ಳವರನ್ನು, ಸಮಾನತಾವಾದಿಗಳನ್ನು ಸಹಿಸುವುದಿಲ್ಲ’ ಎಂದು ಚಿತ್ರತಂಡವನ್ನು ಅನೇಕರು ಬೆಂಬಲಿಸಿದ್ದಾರೆ.



