ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ, ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಇರುವ ದೌರ್ಜನ್ಯ ಪ್ರತಿಬಂಧ ಸಮಿತಿಗೆ ಶಿವಮೊಗ್ಗ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸದಸ್ಯರ ನೇಮಕಾತಿ ನಡೆದಿದ್ದು, ಐವರನ್ನು ಆಯ್ಕೆ ಮಾಡಲಾಗಿದೆ.
ಇದರ ಸಂಬಂಧ ಡಿಎಸ್‌ಎಸ್ ಹರಮಘಟ್ಟ ರಂಗಪ್ಪನವರ ಬಣದಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಬೆಳಿಗ್ಗೆ 11ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಅಧಿಕಾರೇತರ ನಾಮನಿರ್ದೇಶನ ಸದಸ್ಯರ ನೇಮಕಾತಿ ಪೈಕಿ ಎಸ್‌ಸಿ ಸದಸ್ಯರಾಗಿ ಶಿವಬಸಪ್ಪ, ರುದ್ರಪ್ಪ, ಬೂದಿಗೆರೆ ಬಸವರಾಜ್, ಮಂಜುನಾಥ್ ಅವರು ಆಯ್ಕೆಯಾದರೆ, ಎಸ್‌ಟಿ ವಿಭಾಗದಿಂದ ಅಣ್ಣಪ್ಪನವರನ್ನು ನೇಮಿಸಲಾಗಿದೆ. ಹಿಂದುಳಿದ ವರ್ಗದದಿಂದ ಶಿವಮೊಗ್ಗದ ದಿನೇಶ್, ತೀರ್ಥಹಳ್ಳಿಯಿಂದ ನಾಗರಾಜ್ ಮತ್ತು ಸೊರಬದಿಂದ ಓಂಪ್ರಕಾಶ್ ಸೇರಿದಂತೆ ಮೂವರನ್ನು ನೇಮಿಸಲಾಗಿದೆ.
ಸಮಾಜ ಕಲ್ಯಾಣ ಕಚೇರಿಯಲ್ಲಿ ಅಟ್ರಾಸಿಟಿ ಸಮಿತಿಗೆ ಸದಸ್ಯರ ಆಯ್ಕೆಯ ಪ್ರಕ್ರಿಯೆ ನಡೆದಿದ್ದು, ಕೆಲವರ ಆಯ್ಕೆ ವಿಚಾರದಲ್ಲಿ ಡಿಎಸ್‌ಎಸ್ ಹರಮಘಟ್ಟ ರಂಗಪ್ಪನವರ ಬಣ ಆಕ್ಷೇಪಿಸಿದ್ದು, “ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಆಯ್ಕೆ ವಿಚಾರದಲ್ಲಿ ಕರ್ತವ್ಯ ಲೋಪವೆಸಗಿದ್ದಾರೆ. ಅರ್ಜಿದಾರರ ಪೂರ್ಣ ಪ್ರಮಾಣದಲ್ಲಿ ಪೊಲೀಸ್ ವೆರಿಫಿಕೇಷನ್ ಆಗದೆ ಡಿಸಿಗೆ ತಪ್ಪು ಮಾಹಿತಿ ನೀಡಿ ಸಮಿತಿ ರಚಿಸಲಾಗಿದೆ” ಎಂದು ದೂರಿದರು.
“ಆಯ್ಕೆಯ ವಿಚಾರವಾಗಿ ಡಿಸೆಂಬರ್ 02ರಂದೇ ಗುಪ್ತವಾಗಿ ಸಮಾಜ ಕಲ್ಯಾಣ ಇಲಾಖೆಯ ಡಿಡಿ ಮಲ್ಲೇಶಪ್ಪ ಆಯ್ಕೆ ಮಾಡಿ ಇಟ್ಟಿದ್ದಾರೆ. ದಲಿತ ಹೋರಾಟಗಾರರು, ಹಿರಿಯರು, ಸಮಾಜಕ್ಕೆ ಶ್ರಮಿಸಿದವರು ಮತ್ತು ಶೋಷಿತ ವರ್ಗದವರನ್ನು ಈ ಸಮಿತಿಗೆ ಆಯ್ಕೆ ಮಾಡಬೇಕು. ಕೆಲವರ ಆಯ್ಕೆ ಸೂಕ್ತವಾಗಿದ್ದರೂ ಇನ್ನು ಕೆಲವರ ಆಯ್ಕೆಯ ವಿಚಾರದಲ್ಲಿ ಡಿಡಿಯವರು ರಾಜಕೀಯ ಆಮಿಷಕ್ಕೆ ಬಲಿಯಾಗಿರುವುದಾಗಿ ಕಂಡುಬರುತ್ತಿದೆ. ಹಾಗಾಗಿ ಸಮಿತಿಯನ್ನು ಮತ್ತೊಮ್ಮೆ ಪುನರ್ ಪರಿಶೀಲಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬಿಜೆಪಿ ಪ್ರವಾಸ ಪೋಸ್ಟರ್‌ನಲ್ಲಿ ವಿಜಯೇಂದ್ರ ಫೋಟೋ ನಾಪತ್ತೆ; ಗೊತ್ತೇ ಇಲ್ಲವೆಂದ ಮಾಜಿ ಸಚಿವ
“ಶಿವಮೊಗ್ಗ ಜಿಲ್ಲಾ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ನಿವೃತ್ತ ನೌಕರರ ಸಂಘ, ಆದಿ ಜಾಂಬವ ಸಂಘ, ಲಂಬಾಣಿ ಹಾಗೂ ಹೊಲೆಯ ಮಾದಿಗ ಹೀಗೆ ಎಲ್ಲರನ್ನೂ ಒಳಗೊಂಡು ಸಮಿತಿ ರಚಿಸಬೇಕು. ಈಗ ಆಗಿರುವ ಸಮಿತಿಯಿಂ ಉಳಿದವರಿಗೆ ಅನ್ಯಾಯ ಎಸಗಿದಂತಾಗಿದೆ ಎಂಬ ಕೂಗು ಕೇಳಿಬರುತ್ತಿದೆ” ಎಂದರು.
“ಕರ್ತವ್ಯ ಲೋಪವೆಸಗಿರುವ ಉಪನಿರ್ದೇಶಕರು ಸಮಿತಿ ಆಯ್ಕೆಯನ್ನು ಪುನರ್ ಪರಿಶೀಲನೆ ಮಾಡದಿದ್ದರೆ ಡಿಡಿಯ ವಿರುದ್ಧ ಡಿಎಸ್ಎಸ್ ಹೋರಾಡಲಿದೆ” ಎಂದು ಡಿಎಸ್‌ಎಸ್ ಹರಮಘಟ್ಟ ರಂಗಪ್ಪನವರ ಬಣ ಎಚ್ಚರಿಸಿದೆ.