ದೇಶಾದ್ಯಂತ ಕೋಮುವಾದ ಹರಿಬಿಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ, ಎನ್‌ಡಿಎ ಸರ್ಕಾರ, ಆರ್‌ಎಸ್‌ಎಸ್ ಕೋಮು ವಿಭಜನಕಾರಿ ನೀತಿಗಳನ್ನು ಜಾರಿಗೆ ತರಲು ಹೊರಟಿವೆ ಎಂದು ಸಿಪಿಐ(ಎಂ ) ಜಿಲ್ಲಾ ಕಾರ್ಯದರ್ಶಿ ಅಣ್ಣಾರಾಯ ಈಳಗೇರ ಆರೋಪಿಸಿದರು.
ವಿಜಯಪುರ ಜಿಲ್ಲೆ ಸಿಂದಗಿಯ ಅಂಬೇಡ್ಕರ್ ಸಭಾಭವನದಲ್ಲಿ ಶನಿವಾರ ಜರುಗಿದ ತಾಲೂಕು ಸಿಪಿಐ(ಎಂ) 4ನೇ ಸಮ್ಮೇಳನವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಣಿಪುರ, ಉತ್ತರ ಪ್ರದೇಶದಂತ ರಾಜ್ಯಗಳಲ್ಲಿ ಜನಾಂಗೀಯ ಘರ್ಷಣೆಗಳು ನಡೆಯುತ್ತಿದ್ದರೂ ಅವರನ್ನು ಹತ್ತಿಕ್ಕದೇ ಇನ್ನಷ್ಟು ಉಲ್ಬಣಗೊಳ್ಳುವಂತಹ ಕೋಮು ಪ್ರಚೋದಕ ಮಾತುಗಳನ್ನು ಆಡುತ್ತಿದ್ದಾರೆ.
ರಾಜ್ಯದಲ್ಲಿ ಹವಾಮಾನ ವೈಪರಿತ್ಯದಿಂದ ತೊಗರಿ ಬೆಳೆಗಾರರ ಬೆಳೆ ನಷ್ಟವಾಗಿದೆ. ಇನ್ನೊಂದೆಡೆ ಕಬ್ಬು ಬೆಳೆಗಾರರಿಗೆ ರೊ 2,700 ಬೆಲೆ ನಿಗದಿ ಮಾಡಿ ಸಕ್ಕರೆ ಕಾರ್ಖಾನೆಗಳು ರೈತರ ಸುಲಿಗೆ ನಡೆಸುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಕೂಡ ತಲೆಕೆಡಿಸಿಕೊಳ್ಳುತ್ತಿಲ್ಲ. ಉತ್ತರದ ರಾಜ್ಯಗಳಾದ ಪಂಜಾಬ, ಹರಿಯಾಣ ರಾಜ್ಯಗಳಲ್ಲಿ ಟನ್ ಕಬ್ಬಿಗೆ ₹ 3500 ನಿಗದಿ ಮಾಡಿದೆ. ಅದರ ಜೊತೆಗೆ ಎಸ್‌ಎಡಿ ₹ 900 ಸೇರಿಸಿ ₹ 4,400 ರೈತರಿಗೆ ಸಿಗುವಂತೆ ಮಾಡಲಾಗಿದೆ. ಅದು ಕರ್ನಾಟಕದಲ್ಲಿ ಯಾಕೆ ಸಾಧ್ಯವಿಲ್ಲ? ಎಂದು ಪ್ರಶ್ನಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರಾಯ ಪೂಜಾರಿ, ಸಿಪಿಐ ಯು ಕಾರ್ಮಿಕ ಸಂಘಟನೆಯ ಜಿಲ್ಲಾ ಪ್ರದಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ ಮಾತನಾಡಿದರು. ಇದೇ ಸಂದರ್ಭದಲ್ಲಿ ಭಾರತದ ಕಮ್ಯುನಿಸ್ಟ್ ಪಕ್ಷ (ಮಾಕ್ಸ್ವಾದಿ) ಸಿಂದಗಿ ತಾಲೂಕು ಸಮಿತಿ 12 ನಿರ್ಣಯಗಳನ್ನು ತೆಗೆದುಕೊಂಡಿತು.
ಈ ವರದಿ ಓದಿದ್ದೀರಾ? ಹುಬ್ಬಳ್ಳಿ | ಪ್ರೀತಿಗೆ ಒಪ್ಪದ ಯುವತಿ: ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ
ಸಮ್ಮೇಳನದ ಪ್ರಾರಂಭಕ್ಕೂ ಮುನ್ನ ಇತ್ತೀಚಿಗೆ ನಿಧನರಾದ ಭಾರತದ ಕಮ್ಯುನಿಸ್ಟ್ ಪಕ್ಷ (ಮಾಕ್ಸ್‌ವಾದಿ) ಅಖಿಲ ಭಾರತದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ, ಪ.ಬಂಗಾಳ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ, ಕೇರಳದ ಮಾಜಿಸಚಿವ ಕೋಡಿಯೋರಿ ಬಾಲಚಂದ್ರನ, ವಿಜಯಪುರ ಜಿಲ್ಲೆಯ ಜನಪ್ರೀಯ ಹೋರಾಟಗಾರ ಭೀಮಶೀ ಕಲಾದಗಿ ಸಹಿತ ಹುತಾತ್ಮರಾದ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸರಸ್ವತಿ ಮಠ ಸಮ್ಮೇಳನದ ಧ್ವಜಾರೋಹಣ ಮಾಡಿದರು. ಬಿಮ್ಮಿಲ್ಲಾ ಇನಾಮದಾರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಿಂಟೂ ಕೊಂಡಗೂಳಿ ಸ್ವಾಗತಿಸಿದರು.