ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಪುರಸಭೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಶನಿವಾರ ಏಕಾಏಕಿ ದಾಳಿ ಮಾಡಿದ್ದು, ಪ್ಲಾಸ್ಟಿಕ್ ಬಳಸುತ್ತಿರುವ ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸಿದ್ದಾರೆ.
ತರೀಕೆರೆ ತಾಲೂಕಿನ ಪುರಸಭಾ ಸಿಬ್ಬಂದಿ ಅಂಗಡಿ, ಹೋಟೆಲ್, ಮದ್ಯದ ಅಂಗಡಿಗಳ ಮೇಲೆ ಏಕಾಏಕಿ ದಾಳಿ ಮಾಡಿದ್ದು, ತಪಾಸಣೆ ಮಾಡಿದಾಗ ಸುಮಾರು 40 ಕೆಜಿ ಪ್ಲಾಸ್ಟಿಕ್ ಚೀಲಗಳು, ಉತ್ಪನ್ನಗಳನ್ನು ಅಮಾನತು ಮಾಡಿ, ಸುಮಾರು ₹32,000 ದಂಡ ವಸೂಲಿ ಮಾಡಿರುವುದಾಗಿ ಪುರಸಭೆ ಅಧ್ಯಕ್ಷ ವಸಂತ ಕುಮಾರ್ ಕವಾಲಿ ತಿಳಿಸಿದರು.
“ಪ್ಲಾಸ್ಟಿಕ್ ಬಳಸುವುದರಿಂದ ಪರಿಸರ ಹಾಳಾಗುತ್ತಿದೆ ಪ್ರಾಣಿ ಸಂಕುಲಗಳು ಸಂಕಷ್ಟದಲ್ಲಿ ಸಿಲುಕುತ್ತಿವೆ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಹಾಗಾಗಿ ತರೀಕೆರೆ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಮಾಡುತ್ತೇವೆ. ಹಾಗೆಯೇ ಸರ್ಕಾರದ ಆದೇಶದಂತೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು, ಅಂಗಡಿ ಮುಗ್ಗಟ್ಟುಗಳು ಮತ್ತು ಹೋಟೆಲ್ ಮಾಲೀಕರು ಹಾಗೂ ಮದ್ಯದ ಅಂಗಡಿಗಳ ಮಾಲೀಕರು ಸಹಕರಿಸಬೇಕು” ಎಂದು ಪುರಸಭೆ ನಾಮ ನಿರ್ದೇಶನ ಸದಸ್ಯ ಆದಿಲ್ ಪಾಷ ತಿಳಿಸಿದರು.

ಪುರಸಭೆ ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ್ ಮಾತನಾಡಿ, “ಸರ್ಕಾರದ ಆದೇಶದಂತೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಅಂಗಡಿ ಮುಗ್ಗಟ್ಟುಗಳು ಮತ್ತು ಹೋಟೆಲ್ ಮಾಲೀಕರು ಹಾಗೂ ಮದ್ಯದ ಅಂಗಡಿಗಳ ಮಾಲೀಕರು ಸಹಕರಿಸಬೇಕು ತಪ್ಪಿದಲ್ಲಿ ನಿಮಗೆ ನೀಡಿರುವ ಪರವಾನಗಿಗಳನ್ನು ರದ್ದು ಮಾಡಲಾಗುವುದು” ಎಂದು ಎಚ್ಚರಿಸಿದರು.
ಪುರಸಭಾ ಪರಿಸರ ಅಭಿಯಂತರ ತಸ್ಲೀಮ್ ಮಾತನಾಡಿ, “ಸ್ವಚ್ಛತೆ ಮತ್ತು ಪರಿಸರದ ಬಗ್ಗೆ ಗಮನ ನೀಡುತ್ತಿದ್ದೇವೆ” ಎಂದು ಹೇಳಿದರು.
ಇದನ್ನೂ ಓದಿದ್ದೀರಾ? ಚಿಕ್ಕಮಗಳೂರು | ಮಕ್ಕಳ ಎದುರೇ ಗೃಹಿಣಿ ಹತ್ಯೆ; ಆರೋಪಿ ಪ್ರಿಯಕರನಿಗಾಗಿ ಹುಡುಕಾಟ
“ಪ್ಲಾಸ್ಟಿಕ್ ವಸ್ತುಗಳು ಸಾವಿರಾರು ವರ್ಷಗಳ ಕಾಲ ಕೊಳೆಯುವುದಿಲ್ಲ. ಭೂಮಿಯಲ್ಲಿ ಹಾಗೇ ಉಳಿದು ಭೂಮಿಯ ಫಲವತ್ತತೆಯನ್ನು ಹಾಳುಮಾಡುತ್ತದೆ. ಇದರಿಂದ ಭೂಮಿಯ ಮೇಲೆ ವ್ಯತಿರಿಕ್ತವಾದ ಪರಿಣಾಮಗಳು ಬೀರುತ್ತಿವೆ” ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮುಖಂಡ ಇಮ್ರಾನ್ ಅಹಮದ್ ಬೇಗ್ ತಿಳಿಸಿದರು.
ಈ ವೇಳೆ ಪುರಸಭೆ ಅಧ್ಯಕ್ಷರು, ಸದಸ್ಯರು, ಅಂಗಡಿ ಮಾಲೀಕರು, ಸ್ಥಳೀಯರು ಸೇರಿದಂತೆ ಇತರರು ಇದ್ದರು.
