- ಬಡತನ ಮುಕ್ತ ಮತ್ತು ಜೀವನೋಪಾಯ ಅಭಿವೃದ್ಧಿ ವಿಷಯದಲ್ಲಿ ದೇಶಕ್ಕೆ ‘ಗಾಳಿಬೀಡು’ ಗ್ರಾ.ಪಂ. ಪ್ರಥಮ ಸ್ಥಾನ
- 9 ವಿಷಯಗಳನ್ನು ಗ್ರಾ.ಪಂ ಮಟ್ಟದಲ್ಲಿ ಅನುಷ್ಠಾನ ಮಾಡಿದ್ದಕ್ಕೆ ಉಡುಪಿ ಜಿಲ್ಲಾ ಪಂಚಾಯಿತಿಗೆ ಮೂರನೇ ಸ್ಥಾನ
ಬಡತನ ಮುಕ್ತ ಮತ್ತು ಜೀವನೋಪಾಯ ಅಭಿವೃದ್ಧಿ ವಿಷಯದಲ್ಲಿ ಇಡೀ ದೇಶಕ್ಕೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ‘ಗಾಳಿಬೀಡು’ ಗ್ರಾಮ ಪಂಚಾಯಿತಿ ಪ್ರಥಮ ಸ್ಥಾನ ಪಡೆದಿದ್ದು, ‘ದೀನ್ ದಯಾಳ್ ಉಪಾಧ್ಯಾಯ್ ಪಂಚಾಯತ್ ಸತತ ವಿಕಾಸ ಪುರಸ್ಕಾರ’ಕ್ಕೆ ಭಾಜನವಾಗಿದೆ.
ಹಾಗೆಯೇ ಕೇಂದ್ರ ಸರ್ಕಾರವು ರಾಷ್ಟ್ರದಲ್ಲಿ 17 ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗಾಗಿ 9 ವಿಷಯಾಧಾರಿತಗಳನ್ನು ತನ್ನ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನ ಮಾಡಿದ್ದಕ್ಕಾಗಿ ಉಡುಪಿ ಜಿಲ್ಲಾ ಪಂಚಾಯಿತಿಗೆ ರಾಷ್ಟ್ರ ಮಟ್ಟದ ‘ನಾನಾಜೀ ದೇಶಮುಖ್ ಸರ್ವೋತ್ತಮ ಪಂಚಾಯತ್ ಸತತ ವಿಕಾಸ ಪುರಸ್ಕಾರ’ದಡಿ ತೃತೀಯ ಸ್ಥಾನಗಳಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, “ರಾಜ್ಯ ಮಟ್ಟದ ಸಮಿತಿಯು ಪ್ರಥಮ ಮೂರು ಗ್ರಾಮ ಪಂಚಾಯಿತಿಗಳನ್ನು ಪರಶೀಲಿಸಿ ರಾಜ್ಯ ಮಟ್ಟದಿಂದ ವಿಷಯವಾರು ಪ್ರಥಮ ಸ್ಥಾನ ಪಡೆದ ಗ್ರಾಮ ಪಂಚಾಯಿತಿಯನ್ನು ರಾಷ್ಟ್ರ ಮಟ್ಟಕ್ಕೆ ಶಿಫಾರಸ್ಸು ಮಾಡಲಾಗುತ್ತದೆ. ರಾಷ್ಟ್ರ ಮಟ್ಟದಲ್ಲಿ ವಿಷಯವಾರು ಪಂಚಾಯಿತಿಗಳು ರಾಷ್ಟ್ರ ಮಟ್ಟದ ಸಮಿತಿಯು ಆಯ್ಕೆ ಮಾಡುತ್ತದೆ. ಸರಿ ಸುಮಾರು 2.5 ಲಕ್ಷ ಗ್ರಾಮ ಪಂಚಾಯಿತಿಗಳ ಪೈಕಿ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿಯು ಬಡತನ ಮುಕ್ತ ಮತ್ತು ಜೀವನೋಪಾಯ ಅಭಿವೃದ್ಧಿ ವಿಷಯದಲ್ಲಿ ‘ದೀನ್ ದಯಾಳ್ ಉಪಾಧ್ಯಾಯ್ ಪಂಚಾಯತ್ ಸತತ ವಿಕಾಸ ಪುರಸ್ಕಾರ’ ಪ್ರಥಮ ಸ್ಥಾನಗಳಿಸಿರುತ್ತದೆ. ಅಲ್ಲದೇ 9 ವಿಷಯಗಳಲ್ಲಿ ತನ್ನ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಸರ್ವೋತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪಂಚಾಯಿತಿ ರಾಷ್ಟ್ರ ಮಟ್ಟದಲ್ಲಿ ‘ನಾನಾಜೀ ದೇಶಮುಖ್ ಸರ್ವೋತ್ತಮ ಪಂಚಾಯತ್ ಸತತ ವಿಕಾಸ ಪುರಸ್ಕಾರ’ದಡಿ ತೃತೀಯ ಸ್ಥಾನಗಳಿಸಿರುತ್ತದೆ” ಎಂದು ಪ್ರಕಟಣೆಯಲ್ಲಿ ತಿಳಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರವು ದೇಶದಲ್ಲಿ 17 ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗಾಗಿ 9 ವಿಷಯಾಧಾರಿತಗಳನ್ನು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಅನುಷ್ಠಾನ ಮಾಡಿದ ಗ್ರಾಮ ಪಂಚಾಯಿತಿಗಳಿಗೆ ಪ್ರಶಸ್ತಿಗಳನ್ನು ನೀಡುತ್ತಿದೆ. (9 ವಿಷಯಗಳು – ಬಡತನ ಮುಕ್ತ ಮತ್ತು ಜೀವನೋಪಾಯ ಅಭಿವೃದ್ಧಿ ಪಂಚಾಯತ್, ಆರೋಗ್ಯಕರ ಪಂಚಾಯತ್, ಮಕ್ಕಳ ಸ್ನೇಹಿ ಪಂಚಾಯತ್, ಸಾಕಷ್ಟು ನೀರು ಹೊಂದಿರುವ ಪಂಚಾಯತ್, ಸ್ವಚ್ಛ ಮತ್ತು ಹಸಿರು ಪಂಚಾಯತ್, ಸ್ವಾವಲಂಬಿ ಮೂಲ ಸೌಕರ್ಯ ಹೊಂದಿರುವ ಪಂಚಾಯತ್, ಸಾಮಾಜಿಕ ಸುರಕ್ಷಿತ ಪಂಚಾಯತ್, ಉತ್ತಮ ಆಡಳಿತ ಹೊಂದಿರುವ ಪಂಚಾಯತ್ ಹಾಗೂ ಮಹಿಳಾ ಸ್ನೇಹಿ ಪಂಚಾಯತ್)
ತಾಲ್ಲೂಕು, ಜಿಲ್ಲಾ, ರಾಜ್ಯ ಮತ್ತು ಕೇಂದ್ರದ ಮಟ್ಟದ ಸಮಿತಿಗಳು ಮೌಲ್ಯಮಾಪನ ಮಾಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ ಪ್ರಥಮ ಮೂರು ಸ್ಥಾನಗೊಳಿಸಿದ ಪಂಚಾಯಿತಿಗಳನ್ನು ಆಯ್ಕೆ ಮಾಡಿ ‘ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸತತ ವಿಕಾಸ ರಾಷ್ಟ್ರೀಯ ಪಂಚಾಯತ್ ಪುರಸ್ಕಾರ’ವನ್ನು ನೀಡಲಾಗುತ್ತದೆ. ಹಾಗೆಯೇ 9 ವಿಷಯಾಧಾರಿತ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಎಲ್ಲ ವಿಷಯಗಳ ಒಟ್ಟಾರೆ ಸರಾಸರಿ ಸಾಧನೆ ಮಾಡಿದ ಪಂಚಾಯಿತಿಗಳಿಗೆ ‘ನಾನಾಜೀ ದೇಶಮುಖ್ ಸರ್ವೋತ್ತಮ ಪಂಚಾಯತ್ ಸತತ ವಿಕಾಸ ಪುರಸ್ಕಾರ’ ನೀಡಲಾಗುತ್ತದೆ.